ತೈವಾನ್‌ನಲ್ಲಿ ಭಾರೀ ಭೂಕಂಪ! 4 ಮಂದಿ ಸಾವು, 26 ಕಟ್ಟಡಗಳ ಕುಸಿತ!

masthmagaa.com:

ಪುಟಾಣಿ ಸೂಪರ್‌ ಪವರ್‌ ಅಂತ ಕರೆಸಿಕೊಳ್ಳೋ ತೈವಾನ್‌ನಲ್ಲಿ ಭಾರೀ ಭೂಕಂಪ ಸಂಭವಿಸಿದೆ. 7.4 ತೀವ್ರತೆಯ ಭೂಕಂಪ ಸಂಭವಿಸಿ ಕನಿಷ್ಠ 4 ಮಂದಿ ಮೃತಪಟ್ಟಿದ್ದಾರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಭೀಕರ ಭೂಕಂಪನಕ್ಕೆ ಅಲ್ಲಿನ ಸುಮಾರು 26 ಬಿಲ್ಡಿಂಗ್‌ಗಳು ಕುಸಿದು ನೆಲಕ್ಕುರುಳಿವೆ. ಇದ್ರಲ್ಲಿ ಸದ್ಯ ಹಲವರು ಸಿಲುಕಿಕೊಂಡಿದ್ದು…ರಕ್ಷಣಾ ಕಾರ್ಯಚರಣೆ ನಡೀತಿದೆ. ಭೂಕಂಪದ ಬೆನ್ನಲ್ಲೇ ತೈವಾನ್‌ನ ಎಲ್ಲಾ ರೈಲು ಸೇವೆಗಳನ್ನ ಕೂಡ ಸ್ಥಗಿತಗೊಳಿಸಲಾಗಿದೆ. ಶಾಲೆಗಳ ಕ್ಲಾಸಸ್‌ ಕ್ಯಾನ್ಸಲ್‌ ಮಾಡಿ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಭೂಕಂಪದ ಸಂಭವಿಸಿರೋ ಹುವಾಲಿಯನ್‌ ಕೌಂಟಿಯಲ್ಲಿ ಹೆಚ್ಚಿನ ಸಾವು ನೋವು ಆಗಿರೋ ಶಂಕೆ ವ್ಯಕ್ತಪಡಿಸಲಾಗಿದೆ. ಇದೇ ಪ್ರದೇಶದಲ್ಲಿ 5 ಅಂತಸ್ತಿನ ಬೃಹತ್‌ ಕಟ್ಟಡ ಭೂಕಂಪನಕ್ಕೆ ಭಾಗಶಃ ಕುಸಿದು…ನಂತ್ರ ಅಲ್ಲೆ ವಾಲಿದ ಪೊಸಿಷನ್‌ನಲ್ಲಿ ನಿಂತ್ಕೊಂಡಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿದೆ. ಇನ್ನು ಭೂಕಂಪದಿಂದ ಭೂಕುಸಿತ ಕೂಡ ಉಂಟಾಗಿದ್ದು…ಗುಡ್ಡದ ಒಂದಿಷ್ಟು ಭಾಗ ಕುಸಿತಿರೋ ವಿಡಿಯೋ ಕೂಡ ವೈರಲ್‌ ಆಗಿದೆ. ಇನ್ನು ತೈವಾನ್‌ನಲ್ಲಿ ಉಂಟಾಗಿರೋ ಈ ಭೂಕಂಪದ ಪರಿಣಾಮ ಅತ್ತ ಜಪಾನ್‌ ಮೇಲೂ ಆಗಿದೆ. ಜಪಾನ್‌ನಲ್ಲಿ ಸುನಾಮಿ ಅಲರ್ಟ್‌ ನೀಡಲಾಗಿದೆ. ಸುಮಾರು 3 ಮೀಟರ್‌ ಎತ್ತರದ ಅಲೆಗಳು ಜಪಾನ್‌ ನೈಋತ್ಯ ಕರಾವಳಿ ಭಾಗದಲ್ಲಿ ಅಪ್ಪಳಿಸೋ ಸಾಧ್ಯತೆಯಿದೆ ಅಂತ ಅಲ್ಲಿನ ಸರ್ಕಾರ ವಾರ್ನಿಂಗ್‌ ಕೊಟ್ಟಿದೆ. ಇತ್ತ ಓಕಿನಾವಾ ಮತ್ತು ಕಾಗೋಶಿಮಾ ಪ್ರದೇಶಗಳಿಗೆ ಹಾರಾಟ ಮಾಡೋ ಫೈಟ್‌ಗಳನ್ನ ಜಪಾನ್‌ ಏರ್‌ಲೈನ್ಸ್‌ ಸ್ಥಗಿತಗೊಳಿಸಿದೆ. ಅಂದ್ಹಾಗೆ ಈ ಓಕಿನಾವಾ ಪ್ರದೇಶಕ್ಕೆ 1998ರಲ್ಲಿ ಸುನಾಮಿ ವಾರ್ನಿಂಗ್‌ ನೀಡಲಾಗಿತ್ತು. ಇದಾದ ನಂತ್ರ ಇದೇ ಮೊದಲ ಬಾರಿಗೆ ಈ ಪ್ರದೇಶಕ್ಕೆ ಸುನಾಮಿ ಅಲರ್ಟ್‌ ಘೋಷಿಸಲಾಗಿದೆ. ಇನ್ನು ತೈವಾನ್‌ನ ಭೂಕಂಪ ವಿಚಾರಕ್ಕೆ ಬಂದ್ರೆ, 25 ವರ್ಷಗಳ ನಂತ್ರ ಇದೇ ಮೊದಲ ಬಾರಿಗೆ ತೈವಾನ್‌ನಲ್ಲಿ ಇಷ್ಟೊಂದು ಪ್ರಬಲವಾದ ಭೂಕಂಪ ಸಂಭವಿಸಿದೆ.. 1999ರಲ್ಲಿ ಅಲ್ಲಿನ ನಾಂಟೌ ಕೌಂಟಿಯಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ 2,500ಕ್ಕೂ ಅಧಿಕ ಜನರ ಜೀವ ಹೋಗಿತ್ತು..1,300ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ವು. ಈಗ ಮತ್ತೆ ಪ್ರಬಲ ಭೂಕಂಪವಾಗಿದೆ.

-masthmagaa.com

Contact Us for Advertisement

Leave a Reply