ಮನುಷ್ಯ+ ಚಿಂಪಾಜಿ: ಚೀನಾದಿಂದ ಹೈಬ್ರಿಡ್ ಮಾನವನ ಸೃಷ್ಟಿ!

masthmagaa.com:

ತುಂಬಾ ಹಿಂದಿನಿಂದಲೂ ಮನುಷ್ಯರು ಮತ್ತು ಬೇರೆ ಪ್ರಾಣಿಗಳ ನಡುವಿನ ಹೈಬ್ರಿಡ್​ ಜೀವಿ ಸೃಷ್ಟಿಗೆ ಪ್ರಯತ್ನ ನಡೀತಾನೇ ಇದೆ. ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಕಲ್ಪನೆಗಳನ್ನು ನೋಡಿರಲೂಬಹುದು.. ಹೈಬ್ರಿಡ್ ಸೃಷ್ಟಿಸೋಕೆ ಹೋಗಿ, ಅದು ಅವರ ಮೇಲೆಯೆ ತಿರುಗಿ ಬರುವಂತೆ ಹಲವಾರು ಸಿನಿಮಾಗಳಲ್ಲಿ ಬಿಂಬಿಸಲಾಗಿದೆ. ಈಗ ಚೀನಾ ಕೂಡ ಅದೇ ರೀತಿಯ ಪ್ರಯೋಗ ನಡೆಸ್ತಾ ಇದೆ ಅಂತ ಗೊತ್ತಾಗಿದೆ.. 1967ರಲ್ಲೇ ಈ ಸಂಬಂಧ ಚೀನಾ ಪ್ರಯೋಗ ಶುರು ಮಾಡಿರೋದಕ್ಕೆ ಸಂಬಂಧಿಸಿದಂತೆ ವರದಿಯೊಂದು ಬಿಡುಗಡೆಯಾಗಿತ್ತು. ಚೀನಾ ಮನುಷ್ಯ ಮತ್ತು ಚಿಂಪಾಂಜಿಯ ಕ್ರಾಸ್​ ಬ್ರಿಡ್ಡಿಂಗ್ ಮಾಡ್ತಿದೆ ಅಂತ ಕೂಡ ಹೇಳಲಾಗಿತ್ತು. ಈ ಯೋಜನೆಯ ತಜ್ಞರಾಗಿದ್ದ ಡಾಕ್ಟರ್ ಜಿ ಯೋಂಗ್​​ಶಿಯಾಂಗ್​​​​ 1980ರ ದಶಕದಲ್ಲಿ ಪತ್ರಿಕೆಯೊಂದಕ್ಕೆ ಈ ಬಗ್ಗೆ ಸಂದರ್ಶನ ನೀಡಿದ್ರು. ಇದ್ರಲ್ಲಿ ಮನುಷ್ಯ ಮತ್ತು ಚಿಂಪಾಂಜಿಯ ಹೈಬ್ರಿಡ್ ಹ್ಯುಮಾಂಝೀ ಬಗ್ಗೆ ಮಾತಾಡಿದ್ರು. ಈ ಹ್ಯುಮಾಂಝೀ ಮನುಷ್ಯರೊಂದಿಗೆ ಮಾತಾಡೋ ಸಾಮರ್ಥ್ಯ ಹೊಂದಿರುತ್ತೆ. ಉಳಿದ ಪ್ರಾಣಿಗಳಿಗಿಂತ ಬುದ್ಧಿವಂತಿಕೆಯನ್ನು ಹೊಂದಿರುತ್ತೆ. ಈ ಹ್ಯುಮಾಂಝೀಗಳನ್ನು ಕೃಷಿ, ಡ್ರೈವಿಂಗ್ ಕಾರ್ಟ್ಸ್​​, ಬಾಹ್ಯಾಕಾಶ ಮತ್ತು ಸಮುದ್ರದಾಳದಲ್ಲಿ ಸಂಶೋಧನೆಗೆ ಬಳಸಬಹುದು ಅಂತ ಹೇಳಿದ್ರು. ಆದ್ರೆ 1967ರಲ್ಲಿ ಈ ಪ್ರಯೋಗ ನಡೆಸ್ತಿದ್ದ ಲ್ಯಾಬ್​ ಮೇಲೆ ದಾಳಿ ನಡೆಸಿ, ಸಂಶೋಧಕರ ಮೇಲೆ ದಾಳಿ ನಡೆಸಲಾಯ್ತು. ಈ ವೇಳೆ ಗರ್ಭಿಣಿಯಾಗಿದ್ದ ಚಿಂಪಾಂಜಿ ಕೂಡ ಪ್ರಾಣ ಬಿಡ್ತು.. ಈ ಮೂಲಕ ಈ ಪ್ರಯೋಗವನ್ನು ಅಲ್ಲಿಗೇ ಬಿಡಲಾಯ್ತು ಅಂತ ಡಾಕ್ಟರ್ ಜಿ ಯೋಂಗ್​ಶಿಯಾಂಗ್ ಹೇಳಿದ್ರು. ಇದೀಗ ಮತ್ತೆ ಚೀನೀ ಸರ್ಕಾರ ಈ ಸಂಬಂಧ ಲ್ಯಾಬ್ ಒಂದರಲ್ಲಿ ಪ್ರಯೋಗ ಶುರು ಮಾಡಿದೆ. ಆರ್ಗನ್ ಟ್ರಾನ್ಸ್​ಪ್ಲಾಂಟ್​ನಲ್ಲೂ ಇದನ್ನು ಬಳಸಿಕೊಳ್ಳಬಹುದು ಅನ್ನೋದು ಚೀನಾದ ಉದ್ದೇಶವಾಗಿದೆ.

ಅಂದಹಾಗೆ ಈ ಬಗ್ಗೆ ಪ್ರಯೋಗದ ಹಿಂದೆ ಬಿದ್ದಿರೋದು ಚೀನಾ ಮಾತ್ರವಲ್ಲ.. ಈ ಹಿಂದೆ ಅಮೆರಿಕ, ಸೋವಿಯತ್ ಒಕ್ಕೂಟ ಕೂಡ ಈ ಪ್ರಯೋಗ ನಡೆಸಿವೆ. ಸೋವಿಯತ್ ಒಕ್ಕೂಟದ ಸರ್ವಾಧಿಕಾರಿಯಾಗಿದ್ದ ಸ್ಟಾಲಿನ್​​​​ 1920ರಿಂದ 30ರ ನಡುವೆ ಏಪ್​ ಮ್ಯಾನ್​ ಸೂಪರ್ ಸೋಲ್ಜರ್​​ ಪಡೆಯನ್ನು ನಿರ್ಮಿಸುವಂತೆ ಆದೇಶಿಸಿದ್ರು. ಮನುಷ್ಯರು ಜೀವಂತವಾಗಿರಲು ಎಲ್ಲೆಲ್ಲಿ ಕಷ್ಟವಿದ್ಯೋ ಅಂಥಾ ಜಾಗದಲ್ಲೆಲ್ಲಾ, ಹಸಿವೇ ಇಲ್ಲದೇ ಆರಾಮಾಗಿ ಬದುಕಬಲ್ಲ, ಕಡಿಮೆ ಬುದ್ಧಿಯ ಜೀವಿಗಳ ಸೃಷ್ಟಿಗೆ ಸೂಚಿಸಿದ್ರು. ಅವುಗಳ ಕೈಲಿ ರೈಲ್ವೆ ಕೆಲಸ ಮಾಡಿಸಬೇಕು ಅಂತ ಕೂಡ ಸ್ಟಾಲಿನ್ ಅಂದುಕೊಂಡಿದ್ರು. 1990ರಲ್ಲಿ ಬಿಡುಗಡೆಯಾದ ಸೋವಿಯತ್ ಒಕ್ಕೂಟದ ದಾಖಲೆಗಳಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಸ್ಟಾಲಿನ್ ಆದೇಶದಂತೆ ಈ ಯೋಜನೆಯ ನೇತೃತ್ವವನ್ನು ಇಲ್ಯಾ ಇವಾನೋವಿಚ್ ಇವಾನೋವ್​ ವಹಿಸಿಕೊಂಡಿದ್ರು. ಆದ್ರೆ ಈ ಯೋಜನೆ ಯಶಸ್ವಿಯಾಗಿತ್ತು ಅಂತ ಕೂಡ ಹೇಳಲಾಗುತ್ತೆ. ಯಾಕಂದ್ರೆ 1930ರ ದಶಕದ ಆರಂಭದಲ್ಲಿ ಇವಾನೋವ್​​, ಸೋವಿಯತ್ ಕ್ಯಾಂಪ್​​ನ ಲ್ಯಾಬ್ ಒಂದರಲ್ಲೇ ಪ್ರಾಣ ಬಿಟ್ಟಿದ್ರು.

ಇಷ್ಟೇ ಅಲ್ಲ.. ಇದಾದ ಬಳಿಕ 1970ರ ದಶಕದಲ್ಲಿ ಸರ್ಕಸ್ ಚಿಂಪಾಂಜಿಯೊಂದು ಈ ಚಿಂತನೆಯನ್ನು ಮತ್ತೆ ಹುಟ್ಟು ಹಾಕಿತು. ಅಪಾರ ಬುದ್ಧಿವಂತಿಕೆ ಹೊಂದಿದ್ದ ಒಲಿವರ್​ ಮೈಯಲ್ಲಿ ಕೂದಲು ಕೂದಲು ಕೂಡ ಕಡಿಮೆ ಇತ್ತು. ಇದು ಮನುಷ್ಯ ಮತ್ತು ಚಿಂಪಾಂಜಿಯ ಹೈಬ್ರಿಡ್ ಇರಬಹುದು ಅಂತೆಲ್ಲಾ ಚರ್ಚೆ ನಡೆದಿತ್ತು. ಆದ್ರೆ ಇದು ಸಾವನ್ನಪ್ಪಿದ ಬಳಿಕ ಪೋಸ್ಟ್​ಮಾರ್ಟಮ್ ಮಾಡಿದಾಗ ಹಾಗೇನೂ ಇಲ್ಲ ಅನ್ನೋದು ಗೊತ್ತಾಯ್ತು.

ಇನ್ನು 2019ರಲ್ಲಿ ಯುಎಸ್ ಸಾಲ್ಕ್​ ಇನ್​​ಸ್ಟಿಟ್ಯೂಟ್​ ಫಾರ್ ಬಯೋಲಾಜಿಕಲ್ ಸ್ಟಡೀಸ್​ನ ಪ್ರೊಫೆಸರ್ ಜುವಾನ್ ಕಾರ್ಲೋಸ್​ ಇಜ್​​​ಪಿಸುವಾ ಬೆಲ್​ಮೋಂಟೆಯ ನೇತೃತ್ವದಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದರು. ಮನುಷ್ಯ ಮತ್ತು ಮಂಗನ ಹೈಬ್ರಿಡ್ ಜೀವಿಯನ್ನು ಸೃಷ್ಟಿಸಿದ್ರು. ಇದು 19 ದಿನಗಳವರೆಗೆ ಜೀವಂತವಾಗಿತ್ತು. ಇದಾದ ಬಳಿಕ ಮತ್ತೊಂದು ಹ್ಯುಮಾಂಝಿಯನ್ನು ಸೃಷ್ಟಿಸಿ, ನಂತರ ಲ್ಯಾಬ್ ಸಿಬ್ಬಂದಿಯೇ ಕೊಂದು ಹಾಕಿದ್ದರು ಅಂತ ಕೂಡ ದಿ ಸನ್ ಪತ್ರಿಕೆ ವರದಿ ಮಾಡಿತ್ತು.

-masthmagaa.com

Contact Us for Advertisement

Leave a Reply