ನಂಬಿದ್ರೆ ನಂಬಿ, ಬಿಟ್ರೆ ಬಿಡಿ.. ಈತ ಬರೋಬ್ಬರಿ 175 ಮಕ್ಕಳ ಅಪ್ಪ!

masthmagaa.com:

ಒಬ್ಬ ಗಂಡಸು.. ಆತನಿಗೆ ಊರ್​ ತುಂಬಾ ನೂರಾರು ಮಕ್ಕಳು.. ಪರಿಣಾಮ ಆ ಮಕ್ಕಳಿಗೂ ಊರ್ ತುಂಬಾ ಅಣ್ಣ-ತಮ್ಮ, ಅಕ್ಕ- ತಂಗಿಯರು! ಈ ಥರದ ಒಂದು ಸಿಚುಯೇಶನ್ ಇಮ್ಯಾಜಿನ್ ಮಾಡಿ… ಇದು ರಿಯಲ್ ಆಗಿ ನಡೆದಿದೆ. ನಿಮಗೆ ‘ವಿಕಿ ಡೋನರ್’ ಅನ್ನೋ ಬಾಲಿವುಡ್ ಸಿನೆಮಾ ನೆನಪಿರಬಹುದು. ಅದರಲ್ಲಿ ಹೀರೋಗೆ ವೀರ್ಯ ದಾನವೇ ಬ್ಯುಸಿನೆಸ್ಸು. ಸಿನೆಮಾದ ಆ ಕಥೆ ಈಗ ನಿಜ ಆಗಿರೋದು ನೆದರ್​​ಲ್ಯಾಂಡ್​ ಹಾಗೂ ಅದರ ಅಕ್ಕಪಕ್ಕದ ಯುರೋಪಿನ ಇತರ ದೇಶಗಳಲ್ಲಿ.

ಸ್ನೇಹಿತರೆ, ಪುರುಷ ಬಂಜೆತನ ಪರಿಣಾಮ ಮಕ್ಕಳಾಗದೆ ಕೊರಗುತ್ತಿರೋರು, ಅಥವಾ ಜೀವನದಲ್ಲಿ ಮದುವೆಯೇ ಆಗದೆ ಒಂಟಿಯಾಗಿ ಕೊರಗುವ ಅನೇಕ ಹೆಂಗಸರು 35 ದಾಟಿದ ಬಳಿಕ ಮಕ್ಕಳಿಗೋಸ್ಕರ ಈಗ ಹೊಸ ದಾರಿ ಹಿಡೀತಿದ್ದಾರೆ. ಅದೇ ವೀರ್ಯ ದಾನಿಗಳಿಂದ ವೀರ್ಯ ದಾನ ಪಡೆದು ಮಕ್ಕಳನ್ನ ಪಡೆಯೋದು..

ನೆದರ್ಲಾಂಡ್​​ನಲ್ಲಿ ಕಾರ್ಪೆಂಟರ್​​ ಕೆಲಸ ಮಾಡೋ ವ್ಯಾನೆಸ್ಸಾ ಏವ್​ಜಿಕ್ ವಯಸ್ಸು 34… ಅವ್ರು ಸಿಂಗಲ್​​ ಲೇಡಿ… ಮದುವೆ ಮಾಡಿಕೊಳ್ಳೋ ಯಾವ ಪ್ರಯತ್ನವೂ ಫಲ ಕೊಟ್ಟಿರಲಿಲ್ಲ. ಹೀಗಾಗಿ ಮದುವೆ ಮನೆ ಹಾಳಾಗಿ ಹೋಗ್ಲಿ, ತೀರಾ ವಯಸ್ಸಾಗೋ ಮೊದಲು ಒಂದು ಮಗು ಮಾಡಿಕೊಳ್ಳೋಣ ಅಂತಾ ಪ್ಲಾನ್ ಮಾಡಿದ್ರು. ಮದುವೆಯೇ ಆಗದೆ ಮಗು ಹೇಗೆ? ಸೋ ವೀರ್ಯ ದಾನಿಗಾಗಿ ಹುಡುಕಾಟ ಶುರು ಮಾಡಿದ್ರು…

ವೀರ್ಯ ದಾನಿಗಳ ಪಟ್ಟಿ ಹಿಡಿದುಕೊಂಡು ಕೂತಿರೋ ಅನೇಕ ಫರ್ಟಿಲಿಟಿ ಕ್ಲಿನಿಕ್​ಗಳಿವೆ. ಅಲ್ಲಿಗೆ ಹೋದ್ರು ವ್ಯಾನೆಸ್ಸಾ.. ಆದ್ರೆ ಅಲ್ಲಿನ ರೇಟು ಭಾರೀ ಜಾಸ್ತಿ ಅಂತಾ ವಾಪಾಸ್​ ಬಂದ್ರು. ಆಮೇಲೆ ಗೂಗಲ್​ನಲ್ಲಿ ಹುಡುಕಾಟ ಶುರು ಮಾಡಿದ್ರು. ಯಾರಾದ್ರೂ ಮಹಾದಾನಿಗಳು ಆನ್​ಲೈನ್​​ನಲ್ಲಿ ಸಿಗ್ತಾರಾ ಅಂತಾ ಚೆಕ್​ ಮಾಡಿದ್ರು. ಆಗ ಅಲ್ಲೊಬ್ಬ ಅತ್ಯಂತ ಸ್ಪುರದ್ರೂಪಿ, ನೀಲಿಗಣ್ಣಿನ, ಬಂಗಾರ ಬಣ್ಣದ ಕೂದಲಿನ ಸುರಸುಂದರಾಂಗ ಕಾಣಿಸಿದ. ಆತ 30 ವರ್ಷದ ಸಂಗೀತಗಾರ ಅಂತ ಗೊತ್ತಾಯ್ತು. ಆತನ ಹೆಸ್ರು ಜೋನಾಥನ್ ಜೇಕಬ್​​ ಮೇಯ್ಜೆರ್​​. ಹೇಗೂ ಸಂಗೀತಗಾರ… ಇವರಿಗೆ ಒಳ್ಳೆ ಸ್ವಭಾವ ಇರುತ್ತೆ.. ನೋಡೋಕು ಸುಂದರ… ಈತನಿಂದ ವೀರ್ಯ ದಾನ ಪಡೆದು ಮಗು ಹುಟ್ಟಿದರೆ ಅದುನೂ ಬಾಳ ಬಾಳ ಕ್ಯೂಟಾಗಿರುತ್ತೆ ಅಂತಾ ಲೆಕ್ಕಹಾಕಿದ ವ್ಯಾನೆಸ್ಸಾ ಆತನನ್ನ ಕಾಂಟ್ಯಾಕ್ಟ್ ಮಾಡಿದ್ಲು. ಜೆಂಟಲ್​ಮ್ಯಾನ್​ ಥರ ಮಾತಾಡಿದ ಮೇಯ್ಜೆರ್​​, 200 ಡಾಲರ್​​ ರೇಟ್ ಫಿಕ್ಸ್​ ಮಾಡಿದ.. ಅಂದ್ರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 14 ರಿಂದ 15 ಸಾವಿರ ಅನ್ಕೊಳಿ ಈಗಿನ ಕರೆನ್ಸಿ ಕನ್ವರ್ಶನ್ ರೇಟ್ ಪ್ರಕಾರ. ಅವನಿಗೆ ಅಷ್ಟು ದುಡ್ಡುಕೊಟ್ಟು ಆತ ಡಬ್ಬಿಗೆ ಹಾಕಿಕೊಟ್ಟ ಆ ಫ್ಯೂಚರ್​ ಫಾರ್ಮುಲಾವನ್ನ ಅಣುಬಾಂಬಿನಷ್ಟೇ ಸೇಫಾಗಿ ತಂದ ಈಕೆ ಅದರ ಮೂಲಕ ಗರ್ಭ ಧರಿಸಿದ್ಳು. ಹೆಣ್ಣು ಮಗು ಆಯ್ತು. ಆಗ ಈಕೆ ಮಹಾದಾನಿಗೂ ಈ ವಿಚಾರ ತಿಳಿಸೋಣ ಅಂತಾ ಫೋನ್ ಮಾಡಿ ನನಗೆ ಮೊದಲು ಮಗು ಆಯ್ತು ಅಂತಾ ಹೇಳಿದ್ದಾಳೆ. ಹೌದಾ.. ಕಂಗ್ರಾಜುಲೇಶನ್ಸ್.. ನಿನಗಿದು ಮೊದಲನೇದು.. ನನಗಿದು ಎಂಟನೇದು ಅಂತಾ ಜಂಬದಿಂದಲೇ ಹೇಳಿದ್ದಾನೆ ಮೇಯ್ಜೆರ್​..

ಇದಾಗಿ ಕೆಲ ಸಮಯದ ಬಳಿಕ ವ್ಯಾನೆಸ್ಸಾಗೆ ಮತ್ತೊಂದು ಮಗು ಪಡೆಯೋ ಮನಸ್ಸಾಗಿದೆ. ಮತ್ತೆ ಮೇಯ್ಜೆರ್​ಗೆ ಫೋನ್ ಮಾಡಿದ್ದಾಳೆ. ಮತ್ತೆ 15 ಸಾವಿರ ರೂಪಾಯಿ, ಒಂದು ಡಬ್ಬಿಯಲ್ಲಿ ಫಾರ್ಮುಲಾ.. ಮತ್ತೆ ಪ್ರೆಗ್ನಂಟ್.. ಆದ್ರೆ ಈ ಸಲ ಬೇಬಿ ಬಾಯ್.. ಗಂಡು ಮಗು… ವ್ಯಾನೆಸ್ಸಾ ಫುಲ್ ಹ್ಯಾಪಿ.. ಯಾರೂ ತನ್ನನ್ನ ಮದುವೆಯಾಗಲು ಮುಂದೆ ಬರದಿದ್ದರೂ ತನ್ನ ಜೀವನ ಸಂಪೂರ್ಣ ಆಯ್ತು ಅಂತಾ ನೆಮ್ಮದಿಯಾದ್ಲು.

ಆದ್ರೆ ಕೆಲವೇ ದಿನಗಳಲ್ಲಿ ಆಕೆಗೆ ಆಘಾತ ಕಾದಿತ್ತು. ಆನ್​ಲೈನ್​​ನಲ್ಲಿ ಈಕೆ ಬಗ್ಗೆ ತಿಳಿದುಕೊಂಡ ಅನೇಕ ಇಂಥ ಒಂಟಿ ತಾಯಂದಿರು ಈಕೆಯ ಸಂಪರ್ಕಕ್ಕೆ ಬಂದ್ರು. ಅವರವರೇ ಮಾತಾಡಿಕೊಂಡ್ರು… ನಿಮಗೆ ಯಾರ್​ ದಾನ ಮಾಡಿದ್ದು.. ನಿಮಗೆ ಯಾರ್ ದಾನ ಮಾಡಿದ್ದು ಅಂತಾ… ಅಲ್ಲಿ ನೊಡಿದ್ರೆ ಅಷ್ಟೂ ಜನಕ್ಕೆ ಈ ಮಹಾದಾನಿ ಮೇಯ್ಜೆರನೇ ‘ದಾನ’ ಮಾಡಿದ್ದ. ಈ ರೀತಿ ಈತ ಯುರೋಪ್​ನಾದ್ಯಂತ ಜೀವ ಸಂಕುಲ ವೃದ್ಧಿಗೆ ತನ್ನ ‘ಅಪಾರ ಕೊಡುಗೆ’ ಕೊಟ್ಟಿದ್ದ.

ಈ ಬಗ್ಗೆ ವಿಚಾರ ತಿಳಿದ ನೆದರ್ಲಾಂಡ್​​ನ ಆರೋಗ್ಯ ಇಲಾಖೆ ತನಿಖೆಗೆ ಆದೇಶ ನೀಡ್ತು. ಈತನ ಖತರ್ನಾಕ್ ಲೋಕ ಕಲ್ಯಾಣ ಕಾರ್ಯದ ಜಾತಕ ಬಿಚ್ಚಿದಾಗ ಈತ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾನೆ ಅನ್ನೋದು ಗೊತ್ತಾಯ್ತು. ಒಟ್ಟು 102 ಮಕ್ಕಳಿಗೆ ಈತನೇ ಬಯಾಲಾಜಿಕಲ್ ಫಾದರ್​​ ಅಂತಾ ಬಯಲಾಯ್ತು. ಇದರಿಂದ ರೊಚ್ಚಿಗೆದ್ದ ವ್ಯಾನೆಸ್ಸಾ ಆತನನ್ನ ಹಿಡಿದು ಗಲಾಟೆ ಮಾಡಿದ್ಲು. ಕೇವಲ 1 ಕೊಟಿ 70 ಲಕ್ಚ ಜನಸಂಖ್ಯೆಯ ಈ ನೆದರ್ಲಾಂಡ್​ನಲ್ಲಿ ನೀನ್ ಈ ಥರ ಊರ್ ತುಂಬಾ ಅಪ್ಪ ಆಗ್ತಾ ಹೋದ್ರೆ ಎಂಥಾ ಅಪಾಯ ಗೊತ್ತಾ ನಿನಗೆ ಅಂತಾ ಕೇಳಿದ್ಲು… ಈ ಮಕ್ಕಳು ಮುಂದೆ ದೊಡ್ಡವರಾದಾಗ ತಮ್ಮ ವಂಶವಾಹಿ ಇತಿಹಾಸ ಗೊತ್ತಿಲ್ಲದೆ ಪ್ರೀತಿಸಿ ಮದುವೆ ಆಗಿಬಿಟ್ರೆ ಗತಿಯೇನು… ಹತ್ತಿರದ ಸಂಬಂಧದಲ್ಲೇ ಮದುವೆ ಆಗೋಹಾಗಿಲ್ಲ.. ವಿಕಲಾಂಗ ಮಕ್ಕಳು ಹುಟ್ಟೋ ಅಪಾಯ ಇರುತ್ತೆ. ಅಂಥಾದ್ರಲ್ಲಿ ನಿನ್ನಿಂದಾಗಿ ಈ ಮಕ್ಕಳೇ ಒಂದಾಗಿಬಿಟ್ಟರೆ ಗತಿಯೇನು ಅಂತಾ ಗಲಾಟೆ ಮಾಡಿದ್ದಾಳೆ. ಆಗ ಮೇಯ್ಜೆರ್​ ಕೂಡಾ ಮಾತನಾಡಿ, ಯಾವ 102… ನನ್ನ ಲೆಕ್ಕದ ಪ್ರಕಾರ ಆಲ್ರೆಡಿ 175 ದಾಟಿದೆ ಅಂತಾ ಹೇಳಿದ್ದಾನೆ.. ಅವಳಿಗೆ ಮಕ್ಕಳ ಭವಿಷ್ಯದ ಚಿಂತೆ ಆದ್ರೆ ಇವನಿಗೆ ತನ್ನ ಸ್ಕೋರ್​ ಚಿಂತೆ.

ಸ್ನೇಹಿತರೆ 1978ರಲ್ಲಿ ಪ್ರಪಂಚದ ಮೊದಲ ಇನ್​ ವಿಟ್ರೋ ಫರ್ಟಿಲೈಸೇಷನ್​​ ಅಂದ್ರೆ ಐವಿಎಫ್​​ ಮೂಲಕ ಮೊದಲು ಮಗು ಜನಿಸ್ತು. ಅಲ್ಲಿಂದ ಈ ವೀರ್ಯ ದಾನ ಮಾಡೋದು ಒಳ್ಳೆ ಬ್ಯುಸಿನೆಸ್ ಥರಾ ಆಗೋಗಿದೆ. ವೀರ್ಯ ಬ್ಯಾಂಕುಗಳೂ ಸ್ಥಾಪನೆ ಆಗಿವೆ. ನಮ್ಮ ದೇಶದಲ್ಲೂ ಇದು ತುಂಬಾ ಜೋರಾಗಿ ನಡೀತಿದೆ. ನಿಮಗೆ ನೆನಪಿರಬಹುದು. 2019ರಲ್ಲಿ ತಮಿಳು ಟಿವಿ ಆಂಕರ್ ಭಾವನಾ ಬಾಲಕೃಷ್ಣನ್​ ಕೊಟ್ಟ ಹೇಳಿಕೆ ಈ ಸಂಪ್ರದಾಯಸ್ತ ದೇಶದಲ್ಲಿ ಕೋಲಾಹಲ ಉಂಟುಮಾಡಿತ್ತು. ಹೃಥಿಕ್​-ಟೈಗರ್​ ಶ್ರಾಫ್ ನಟನೆಯ ವಾರ್ ಸಿನೆಮಾ ನೋಡಿ ಬಂದ ಭಾವನಾ, ‘ಈ ಸಿನೆಮಾದಲ್ಲಿ ಗಂಡಸರಿಗೆ ಖುಷಿಕೊಡುವ ಆಕ್ಷನ್ ಸೀನ್​ಗಳಿವೆ.. ಆದ್ರೆ ಲೇಡೀಸ್​ ಈ ಸಿನೆಮಾ ನೋಡಲು ಹೃಥಿಕ್ ಹಾಗೂ ಟೈಗರ್​ ಶ್ರಾಫ್ ಕಾರಣ… ಇವರ ಸೌಂದರ್ಯ ಜೊಲ್ಲು ಸುರಿಸುವಂಥದ್ದು… ಅದರಲ್ಲೂ ಹೃಥಿಕ್ ಅಂತೂ ವೀರ್ಯ ದಾನ ಮಾಡಬೇಕು’ ಅಂತಾ ಟ್ವೀಟ್ ಮಾಡಿದ್ದರು. ಇದು ಬಹಳ ದೊಡ್ಡ ವಿವಾದವಾಗಿತ್ತು. ಅಯ್ಯೋ ಶಿವನೇ ಇನ್ನು ಏನೇನು ಕೇಳಬೇಕೋ ಈ ಕಿವಿಯಲ್ಲಿ ಅಂತಾ ಸಂಪ್ರದಾಯಸ್ಥರು ಕಣ್ಣು, ಕಿವಿ ಮುಚ್ಚಿಕೊಂಡಿದ್ದರು.

-masthmagaa.com

Contact Us for Advertisement

Leave a Reply