ಈ ದೇಶದಲ್ಲಿ ವಿಶ್ವಸಂಸ್ಥೆಯ 16 ಅಧಿಕಾರಿಗಳೇ ಅರೆಸ್ಟ್!

masthmagaa.com:

ಆಫ್ರಿಕಾ ಖಂಡದಲ್ಲಿ ಬರುವ ಇತಿಯೋಪಿಯಾ ದೇಶದ ರಾಜಧಾನಿ ಆಡಿಸ್​ ಅಬಾಬಾದಲ್ಲಿ ವಿಶ್ವಸಂಸ್ಥೆಯ 16 ಮಂದಿ ಸಿಬ್ಬಂದಿಯನ್ನ ವಶಕ್ಕೆ ಪಡೆಯಲಾಗಿದೆ ಅಂತ ವಿಶ್ವಸಂಸ್ಥೆಯ ವಕ್ತಾರರು ಹೇಳಿದ್ದಾರೆ. ಜೊತೆಗೆ ವಶಕ್ಕೆ ಪಡೆದವರನ್ನ ಆದಷ್ಟು ಬೇಗ ರಿಲೀಸ್​ ಮಾಡುವ ಸಂಬಂಧ ಇತಿಯೋಪಿಯಾ ಸರ್ಕಾರದ ಜೊತೆ ಮಾತುಕತೆ ನಡೆಸ್ತಿದ್ದೀವಿ ಅಂತಾನೂ ಹೇಳಿದ್ದಾರೆ. ಅಂದ್ಹಾಗೆ ಕಳೆದ ಕೆಲ ದಿನಗಳಿಂದ ಇತಿಯೋಪಿಯಾ ಸರ್ಕಾರವು ಟಿಗ್ರೆ ಜನಾಂಗಕ್ಕೆ ಸೇರಿದವರನ್ನ ಅರೆಸ್ಟ್ ಮಾಡ್ತಿದೆ. ಇದರ ಬೆನ್ನಲ್ಲೇ ವಿಶ್ವಸಂಸ್ಥೆಯ 16 ಸಿಬ್ಬಂದಿಯನ್ನ ವಶಕ್ಕೆ ಪಡೆದಿರೋದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ 16 ಮಂದಿ ಕೂಡ ಹಾಗಿದ್ರೆ ಟಿಗ್ರೆ ಜನಾಂಗಕ್ಕೆ ಸೇರಿದವರಾ ಅನ್ನೋದು ಇನ್ನೂ ಗೊತ್ತಾಗಿಲ್ಲ. ಅವರು ಇತಿಯೋಪಿಯಾದವರು, ಅವರ ಐಡಿ ಕಾರ್ಡ್​​ನಲ್ಲಿ ಯಾವ ಜನಾಂಗ ಇದ್ರೂ ಅವರು ಬಿಡುಗಡೆ ಆಗೋದನ್ನ ನೋಡಲು ನಾವು ಬಯಸ್ತೀವಿ ಅಂತ ವಿಶ್ವಸಂಸ್ಥೆ ವಕ್ತಾರರು ಹೇಳಿದ್ದಾರೆ. ಈ ಟಿಗ್ರೆ ಜನಾಂಗದವರನ್ನ ಕಂಡ್ರೆ ಇತಿಯೋಪಿಯಾಗೆ ಯಾಕೆ ಆಗಿಬರಲ್ಲ? ಅನ್ನೋ ಪ್ರಶ್ನೆ ಮೂಡಬಹುದು. ಅದಕ್ಕೆ ದೊಡ್ಡ ಇತಿಹಾಸನೇ ಇದೆ. ಶಾರ್ಟಾಗಿ ಹೇಳ್ಬೇಕು ಅಂದ್ರೆ. ಟಿಗ್ರೆ ಅನ್ನೋದು ಇತಿಯೋಪಿಯಾದ ಉತ್ತರ ಭಾಗದಲ್ಲಿರೋ ಒಂದು ರಾಜ್ಯ. ಇಲ್ಲಿನ ಟಿಗ್ರೆ ಪೀಪಲ್ಸ್ ಲಿಬರೇಷನ್ ಫ್ರಂಟ್ ಅನ್ನೋ ಗುಂಪು​ 1991ರಿಂದ 2018ರವರೆಗೆ ಇತಿಯೋಪಿಯಾದಲ್ಲಿ ಅಧಿಕಾರದಲ್ಲಿತ್ತು. 2018ರಲ್ಲಿ ಇವರ ಸರ್ಕಾರವನ್ನ ಪತನಗೊಳಿಸಿ ಆಬಿ ಅಹ್ಮದ್ ಪ್ರಧಾನಿಯಾದ್ರು. ಅಧಿಕಾರಕ್ಕೆ ಬಂದ ಆಬಿ ಅಹ್ಮದ್​​ ಸುಧಾರಣೆ ಹೆಸರಲ್ಲಿ ವಿರೋಧಿಗಳನ್ನ ಮಟ್ಟಹಾಕ್ತಿದ್ದಾರೆ, ಟಿಗ್ರೆ ಸರ್ಕಾರಕ್ಕೆ ಇದ್ದ ಅಧಿಕಾರವನ್ನ ಕಿತ್ತುಕೊಂಡಿದ್ದಾರೆ, ಚುನಾವಣೆ ನಡೆಸದೇ ಅಧಿಕಾರದಲ್ಲಿದ್ದಾರೆ, ಸರ್ವಾಧಿಕಾರಿ ರೀತಿ ವರ್ತಿಸ್ತಿದ್ದಾರೆ, ಇತ್ಯಾದಿ ಇತ್ಯಾದಿ ಅಂತ ಟಿಗ್ರೆ ಆರೋಪ ಮಾಡ್ತಿದೆ. ಅಲ್ಲದೆ ಇತಿಯೋಪಿಯಾ ಸರ್ಕಾರದ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ಮಾಡ್ತಿದೆ. 2020ರಲ್ಲಿ ದೊಡ್ಡ ಯುದ್ಧನೇ ನಡೆದು ಹೋಗಿತ್ತು. ಈಗಲೂ ಅದರ ಹೊಗೆ ಆಡ್ತಾ ಇದೆ. ಯುದ್ಧದ ಬಳಿಕ ಟಿಗ್ರೆ ಪೀಪಲ್ಸ್ ಲಿಬರೇಷನ್ ಫ್ರಂಟ್ ಅನ್ನ ಉಗ್ರ ಸಂಘಟನೆ ಅಂತ ಘೋಷಿಸಿರೋ ಆಬಿ ಅಹ್ಮದ್​ ಸರ್ಕಾರ ಅದರ ಸದಸ್ಯರ ವಿರುದ್ಧ ಕಾರ್ಯಾಚರಣೆ ನಡೆಸ್ತಿದೆ. ಅದಕ್ಕೆ ಸಪೋರ್ಟ್​ ಮಾಡೋರನ್ನ ಅರೆಸ್ಟ್ ಮಾಡಲಾಗ್ತಿದೆ. ಸೋ ಈಗ ವಶಕ್ಕೆ ಪಡೆದಿರೋ ವಿಶ್ವಸಂಸ್ಥೆಯ 16 ಮಂದಿ ಸಿಬ್ಬಂದಿ ಕೂಡ ಟಿಗ್ರೆ ಜನಾಂಗಕ್ಕೆ ಸೇರಿದವರು ಇರಬಹುದು ಅಂತ ಶಂಕಿಸಲಾಗಿದೆ. ಆದ್ರೆ ಇತಿಯೋಪಿಯಾ ಪೊಲೀಸರು ಮಾತ್ರ ನಾವು ಯಾವುದೇ ಜನಾಂಗದವರನ್ನ ಟಾರ್ಗೆಟ್​ ಮಾಡ್ತಿದ್ದ, ಕಾನೂನು ವಿರುದ್ಧವಾಗಿ ನಡೆದುಕೊಂಡವರನ್ನ ಅರೆಸ್ಟ್ ಮಾಡ್ತಿದ್ದೀವಿ ಅಂತ ಹೇಳಿದ್ದಾರೆ. ಮತ್ತೊಂದು ವಿಚಾರ ಅಂದ್ರೆ ಟಿಗ್ರೆ ಬಂಡುಕೋರರು ರಾಜಧಾನಿ ಆಡಿಸ್​ ಅಬಾಬಾವನ್ನ ವಶಪಡಿಸಿಕೊಳ್ಳಲು ಬರ್ತಿದ್ದಾರೆ. ಈ ಹಿನ್ನೆಲೆ ನವೆಂಬರ್​ 2ನೇ ತಾರೀಖೇ ಇತಿಯೋಪಿಯಾ ಸರ್ಕಾರ ತುರ್ತುಪರಿಸ್ಥಿತಿ ಘೋಷಿಸಿತ್ತು. ಅದರ ಪ್ರಕಾರ ಉಗ್ರ ಸಂಘಟನೆ ಜೊತೆ ಇರೋ ಯಾವುದೇ ವ್ಯಕ್ತಿಯನ್ನ ಕೋರ್ಟ್ ಆದೇಶವಿಲ್ಲದೆ ಅರೆಸ್ಟ್ ಮಾಡಬಹುದು. ಇಂಥಾ ಪರಿಸ್ಥಿತಿಯಲ್ಲಿ ಬ್ರಿಟನ್​, ಅಮೆರಿಕ ಸೇರಿದಂತೆ ಹಲವು ದೇಶಗಳು ಇತಿಯೋಪಿಯಾದಲ್ಲಿರೋ ತನ್ನ ಪ್ರಜೆಗಳು ವಾಪಸ್​ ಬನ್ನಿ ಅಂತ ಸಲಹೆ ಕೊಟ್ಟಿವೆ. ಜೊತೆಗೆ ಇತಿಯೋಪಿಯಾ ಮತ್ತು ಟಿಗ್ರೆ ನಡುವಿನ ಸಂಘರ್ಷವನ್ನ ಶಾಂತಿಯುತವಾಗಿ ಬಗೆಹರಿಸಲು ಪ್ರಯತ್ನ ಪಡ್ತಿವೆ.

-masthmagaa.com

Contact Us for Advertisement

Leave a Reply