ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ!

masthmagaa.com:

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರೋ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಪೂಜಾ ಸಮಯದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಪರಿಣಾಮ ಪೂಜೆಯಲ್ಲಿ ಭಾಗಿಯಾಗಿದ್ದ ಒಟ್ಟು 14 ಮಂದಿ ಪುರೋಹಿತರು ಮತ್ತು ಸಹಾಯಕರು ಗಾಯಗೊಂಡಿದ್ದಾರೆ. ಈ ಪೈಕಿ 8 ಮಂದಿಯ ಸ್ಥಿತಿ ಗಂಭೀರವಾಗಿದ್ದು….35ರಿಂದ 45% ಸುಟ್ಟು ಗಾಯಗಳಾಗಿವೆ. ಸದ್ಯ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅಂದ್ಹಾಗೆ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಎಂದಿನಂತೆ ಬೆಳಿಗ್ಗೆ ಸುಮಾರು 5:50ಕ್ಕೆ ʻಭಸ್ಮಾರತಿʼ ಮಾಡ್ತಿರೋ ವೇಳೆ ಗರ್ಭಗುಡಿ ಒಳಗಡೆನೇ ಈ ಅಗ್ನಿ ಅವಘಡ ಸಂಭವಿಸಿದೆ. ಹೋಳಿ ಪ್ರಯುಕ್ತ…ಆಚರಣೆ ಭಾಗವಾಗಿ ʻಗುಲಾಲ್‌ʼ ಅಂದ್ರೆ ಬಣ್ಣದ ಪುಡಿಯನ್ನ ಎಸೆಯಲಾಗಿತ್ತು. ಈ ವೇಳೆ ಎಸೆಯಲ್ಪಟ್ಟ ಬಣ್ಣದ ಪುಡಿ, ಕರ್ಪೂರವಿರೋ ಆರತಿ ತಟ್ಟೆ ಮೇಲೆ ಬಿದ್ದ ತಕ್ಷಣವೇ ಬೆಂಕಿ ಅವಘಡ ಸಂಭಿವಿಸಿದೆ. ಆದ್ರೆ ಬಣ್ಣದ ಪುಡಿ ಆರತಿ ತಟ್ಟೆ ಮೇಲೆ ಬಿದ್ದಕ್ಕೋ.. ಅಥ್ವಾ ಬೇರೆ ರೀತಿಯ ಕೆಮಿಕಲ್‌ ರಿಯಾಕ್ಷನ್‌ ಆಗಿ ಈ ರೀತಿ ಆಯ್ತಾ…ಅನ್ನೋ ಬಗ್ಗೆ ಯಾವ್ದೇ ರೀತಿಯ ಕ್ಲಾರಿಟಿ ಇಲ್ಲ ಅಂತ ಹೇಳಲಾಗ್ತಿದೆ. ಈ ಅವಘಡ ಸಂಭವಿಸೋ ವೇಳೆ ಅಲ್ಲಿನ ಹಾಲ್‌ ಒಂದ್ರಲ್ಲಿ ಸಾಕಷ್ಟು ಮಂದಿ ಭಕ್ತಾದಿಗಳು ಮತ್ತು ವಿವಿಐಪಿಗಳು ನೆರೆದಿದ್ರು. ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗ್ತಿದೆ. ಇನ್ನು ಈ ಅವಘಡಕ್ಕೆ ಪ್ರಧಾನಿ ಮೋದಿಯವ್ರು ರಿಯಾಕ್ಟ್‌ ಮಾಡಿದ್ದಾರೆ. ʻಉಜ್ಜಯಿನಿಯಲ್ಲಿ ನಡೆದ ಘಟನೆ ಅತ್ಯಂತ ನೋವಿನ ಸಂಗತಿ. ಗಾಯಾಳುಗಳು ಆದಷ್ಟು ಬೇಗ ಗುಣಮುಖರಾಗ್ಲಿ ಅಂತ ನಾನು ಹಾರೈಸ್ತೀನಿʼ ಅಂತೇಳಿದ್ದಾರೆ. ಇನ್ನು ಈ ಅವಘಡಕ್ಕೆ ಮಧ್ಯ ಪ್ರದೇಶದ ಸಿಎಂ ಮೋಹನ್‌ ಯಾದವ್‌ ಕೂಡ ರಿಯಾಕ್ಟ್‌ ಮಾಡಿದ್ದು, ʻಗಾಯಾಳುಗಳಿಗೆ ತಲಾ 1 ಲಕ್ಷ ರೂಪಾಯಿ ನೆರವು ಹಾಗೂ ಫ್ರೀಯಾಗಿ ಉತ್ತಮ ಚಿಕಿತ್ಸೆ ನೀಡಲಾಗುತ್ತೆ. ಇಂತಹ ಘಟನೆ ಪುನಃ ನಡೆಯದಂತೆ ನೋಡ್ಕೊಳ್ತೇವೆʼ ಅಂತ ಘೋಷಿಸಿದ್ದಾರೆ.

-masthmagaa.com

Contact Us for Advertisement

Leave a Reply