ಯುಪಿ ಸರ್ಕಾರ-ರೈತರ ಒಪ್ಪಂದ.. ಕಸ ಗುಡಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ!

masthmagaa.com:

ಉತ್ತರಪ್ರದೇಶದ ಲಖೀಮ್​ಪುರ್​ ಖೇರಿ ಜಿಲ್ಲೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತರು ಮತ್ತು ಯುಪಿ ಸರ್ಕಾರ ಒಂದು ಒಪ್ಪಂದಕ್ಕೆ ಬಂದಿದೆ. ಇದರ ಪ್ರಕಾರ, ಹಿಂಸಾಚಾರ ಪ್ರಕರಣವನ್ನ ಹೈಕೋರ್ಟ್ ನಿವೃತ್ತ ಜಡ್ಜ್​ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತೆ. ಮೃತರ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿ ಪರಿಹಾರ ಕೊಡಲಾಗುತ್ತೆ. ಜೊತೆಗೆ ಮೃತರ ಕುಟುಂಬದ ಓರ್ವ ಸದಸ್ಯನಿಗೆ ಅವರ ಅರ್ಹತೆ ಮೇಲೆ ಸರ್ಕಾರಿ ಕೆಲಸ ನೀಡಲಾಗುತ್ತೆ. ಗಾಯಗೊಂಡವರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತೆ. ಈ ವಿಚಾರವನ್ನ ಉತ್ತರ ಪ್ರದೇಶದ ಎಡಿಜಿ ಪ್ರಶಾಂತ್ ಕುಮಾರ್ ಮತ್ತು ರೈತ ಮುಖಂಡ ರಾಕೇಶ್ ಟಿಕಾಯತ್ ಜಂಟಿಯಾಗಿ ಘೋಷಿಸಿದ್ದಾರೆ. ಇನ್ನು ಭಾನುವಾರ ಹಿಂಸಾಚಾರ ನಡೆದ ಬೆನ್ನಲ್ಲೇ ಲಖಿಮ್​ಪುರ ಖೇರಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ರಾಜಕೀಯ ನಾಯಕರು ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಲಾಗಿದೆ. ಇನ್ನು ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲು ಯತ್ನಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾರನ್ನ ಇವತ್ತು ಬೆಳಗಿನಜಾವ ಪೊಲೀಸರು ವಶಕ್ಕೆ ಪಡೆದಿದ್ದರು. ಅದಾದ ಬಳಿಕ ಅವರು ಪೊರಕೆ ಹಿಡಿದುಕೊಂಡು ನೆಲ ಗುಡಿಸೋ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹುಶಃ ಇದು ಪೊಲೀಸರು ಅವರನ್ನ ವಶಕ್ಕೆ ಪಡೆದು ಇಟ್ಟಿರೋ ರೂಮ್​ನ ವಿಡಿಯೋ​ ಇರಬಹುದು ಅಂತ ಅಂದಾಜಿಸಲಾಗಿದೆ. ಪಂಜಾಬ್ ಉಪ ಮುಖ್ಯಮಂತ್ರಿ ಸುಖ್​ಜಿಂದರ್ ರಾಂಧವಾ, ಯುಪಿ ಮಾಜಿ ಸಿಎಂ ಅಖಿಲೇಶ್ ಯಾದವ್​ರನ್ನ ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪ್ರಿಯಾಂಕಾ ಗಾಂಧಿ ವಾದ್ರಾರನ್ನ ಗೃಹಬಂಧನದಲ್ಲಿ ಇಟ್ಟಿರೋದನ್ನ ಖಂಡಿಸಿ ಮತ್ತು ಲಖೀಮ್​ಪುರ ಹಿಂಸಾಚಾರವನ್ನ ಖಂಡಿಸಿ ಕಾಂಗ್ರೆಸ್ ಪಕ್ಷ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದೆ. ಕರ್ನಾಟಕದಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮತ್ತು ಇತರ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply