ಅಮೆರಿಕ, ಆಸ್ಟ್ರೇಲಿಯಾದಿಂದ ರಾಯಭಾರಿಗಳನ್ನು ವಾಪಸ್ ಕರೆಸಿದ ಫ್ರಾನ್ಸ್​!

masthmagaa.com:

ಅಮೆರಿಕ ಮತ್ತು ಫ್ರಾನ್ಸ್​​ನ ಶತಮಾನಗಳ ಸಂಬಂಧ ಈಗ ಒಡೆಯೋಕೆ ಶುರುವಾಗಿದೆ. ಅದಕ್ಕೆ ಹುಳಿಯ ರೀತಿ ಕೆಲಸ ಮಾಡಿದ್ದು ಸಬ್​ಮರೀನ್ ಒಪ್ಪಂದ. ಫ್ರಾನ್ಸ್ ಜೊತೆಗೆ ಮಾಡಿಕೊಂಡಿದ್ದ ಒಪ್ಪಂದ ಕ್ಯಾನ್ಸಲ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ಅಮೆರಿಕ ಮತ್ತು ಇಂಗ್ಲೆಂಡ್​ನೊಂದಿಗೆ ಪರಮಾಣು ಸಬ್​ಮರೀನ್​ಗಾಗಿ ಹೊಸ ಒಪ್ಪಂದ ಮಾಡ್ಕೊಂಡಿತ್ತು. ಇದ್ರ ಬಗ್ಗೆ ಡೀಟೇಲಾಗಿ ನಿನ್ನೆ ಮತ್ತು ಮೊನ್ನೆಯ ಫುಲ್​ನ್ಯೂಸ್​ನಲ್ಲಿ ನಾವು ಮಾಹಿತಿ ನೀಡಿದ್ವಿ. ಆದ್ರೀಗ ಲೇಟೆಸ್ಟ್ ಬೆಳವಣಿಗೆಯಲ್ಲಿ ಫ್ರಾನ್ಸ್ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿದ್ದ ತನ್ನ ರಾಯಭಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಆಸ್ಟ್ರೇಲಿಯಾ ನಮ್ಮ ಜೊತೆಗಿನ ಒಪ್ಪಂದ ಮುರಿದುಕೊಂಡು ಅಮೆರಿಕ ಜೊತೆಗೆ ಒಪ್ಪಂದ ಮಾಡ್ಕೊಳ್ಳಕ್ಕೆ ಮುಂದಾಗಿರೋದ್ರಿಂದ ಅಮೆರಿಕದಲ್ಲಿರೋ ತನ್ನ ರಾಯಭಾರಿ ಫಿಲಿಪ್ ಎಟಿಎನ್​​ ಮತ್ತು ಆಸ್ಟ್ರೇಲಿಯಾದಲ್ಲಿರೋ ರಾಯಭಾರಿ ಜೀನ್ ಪೀರ್ರಿ ಥೆಬೌಲ್ಟ್​​ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಆದೇಶಿಸಿದ್ಧಾರೆ ಅಂತ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್ ಯೆಸ್ ಲೇ ಡ್ರಿಯಾನ್ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ನಮ್ಮ ನಡುವೆ 2016ರಿಂದಲೂ ಈ ಪ್ರಾಜೆಕ್ಟ್ ಸಂಬಂಧ ಕೆಲಸ ನಡೀತಾ ಇತ್ತು. ಮಿತ್ರರಾಷ್ಟ್ರಗಳ ನಡುವೆಯೇ ಇಂಥಹ ವರ್ತನೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಅಂತ ಕೂಡ ಕಿಡಿಕಾರಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕದಲ್ಲಿದ್ದ ಫ್ರಾನ್ಸ್ ರಾಯಭಾರಿ ಫಿಲಿಪ್ ಎಟಿಎನ್​​​​​​​​​, ನನ್ನನ್ನು ಮಾತುಕತೆಗಾಗಿ ಪ್ಯಾರಿಸ್​​ಗೆ ಬರುವಂತೆ ಸೂಚಿಸಲಾಗಿದೆ. ಅಮೆರಿಕದ ಘೋಷಣೆಯಿಂದಾಗಿ ನಮ್ಮ ಒಪ್ಪಂದಗಳು, ಇಂಡೋ-ಪೆಸಿಫಿಕ್ ಸಾಗರದಲ್ಲಿ ಯೂರೋಪಿನ ಮಹತ್ವಕ್ಕೆ ಧಕ್ಕೆಯಾಗಿದೆ ಅಂತ ಹೇಳಿದ್ದಾರೆ.

ಮತ್ತೊಂದ್ಕಡೆ ವಾಷಿಂಗ್ಟನ್​​ನಲ್ಲಿರೋ ಫ್ರಾನ್ಸ್ ರಾಯಭಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಔತಣಕೂಟವನ್ನು ಕೂಡ ಫ್ರಾನ್ಸ್ ಕ್ಯಾನ್ಸಲ್ ಮಾಡಿದೆ. ಅಮೆರಿಕ ಕ್ರಾಂತಿಯ ವೇಳೆ ನಡೆದಿದ್ದ ನೌಕಾಯುದ್ಧದ ದಿನದ ಆಚರಣೆಗಾಗಿ ಈ ಔತಣಕೂಟ ಏರ್ಪಡಿಸಲಾಗಿತ್ತು. ಯಾಕಂದ್ರೆ ಈ ನೌಕಾಯುದ್ಧದಲ್ಲಿ ಫ್ರಾನ್ಸ್ ತುಂಬಾ ಮಹತ್ವದ ಪಾತ್ರ ವಹಿಸಿತ್ತು. ಬರೀ ನೌಕಾಯುದ್ಧ ಮಾತ್ರವಲ್ಲ.. ಅಮೆರಿಕದ ಇಡೀ ಕ್ರಾಂತಿಯಲ್ಲಿ ಫ್ರಾನ್ಸ್ ಪಾತ್ರ ಮಹತ್ವದ್ದಾಗಿತ್ತು. ಅಮೆರಿಕನ್ನರಿಗೆ ಆರ್ಥಿಕ, ಸೇನೆ, ಶಸ್ತ್ರಾಸ್ತ್ರ ಸೇರಿದಂತೆ ವಿವಿಧ ರೀತಿಯಲ್ಲಿ ಬೆಂಬಲಿಸಿತ್ತು. ನಂತರ ಅಮೆರಿಕ ಬ್ರಿಟಿಷರಿಂದ ಸ್ವಾತಂತ್ರ್ಯಗೊಂಡ ಬಳಿಕೂ ಫ್ರಾನ್ಸ್​ ಜೊತೆಗಿನ ಸಂಬಂಧ ತುಂಬಾ ಬಲಿಷ್ಠವಾಗಿಯೇ ಇತ್ತು.

ಹೀಗಾಗಿಯೇ ಈಗ ಹಾಳಾಗ್ತಿರೋ ಸಂಬಂಧವನ್ನು ಸರಿಪಡಿಸಿಕೊಳ್ಳಲು ಅಮೆರಿಕ ಕೂಡ ಎಲ್ಲಾ ರೀತಿಯ ಪ್ರಯತ್ನ ನಡೆಸ್ತಿದೆ. ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧಿವೇಶನದ ವೇಳೆ ಫ್ರಾನ್ಸ್​​ ಮುನಿಸನ್ನು ಮಾತುಕತೆ ಮೂಲಕ ಶಮನ ಮಾಡುವ ನಂಬಿಕೆ ಇದೆ ಅಂತ ಅಮೆರಿಕದ ಸ್ಟೇಟ್ ಡಿಪಾರ್ಟ್​ಮೆಂಟ್ ಹೇಳಿದೆ. ಮತ್ತೊಂದ್ಕಡೆ ಆಸ್ಟ್ರೇಲಿಯಾ ಕೂಡ ಫ್ರಾನ್ಸ್ ಫ್ರೆಂಡ್ಶಿಪ್ ಕಳ್ಕೊಳ್ಳಕ್ಕೆ ರೆಡಿ ಇಲ್ಲ.. ಫ್ರಾನ್ಸ್​ಗೆ ಎಲ್ಲವನ್ನೂ ಅರ್ಥ ಮಾಡಿಸ್ತೀವಿ. ಉಭಯದೇಶಗಳ ಸಂಬಂಧ ಉತ್ತಮವಾಗಿಸುವತ್ತ ಕೆಲಸ ಮಾಡ್ತೀವಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply