ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಇನ್ನಿಲ್ಲ!

masthmagaa.com:

ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುತಿದ್ದ ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ ಜಯಂತಿ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.ಬಹುಭಾಷಾ ನಟಿ ಎನಿಸಿಕೊಂಡಿದ್ದ ಜಯಂತಿ ಅವರು ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿಯ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‌ನಲ್ಲಿ ಬೆಳೆದರು.

ಜಯಂತಿಯ ತಾಯಿಯವರಿಗೆ ಇವರನ್ನು ಶಾಸ್ತ್ರೀಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಆಸೆ ಇತ್ತು, ಹಾಗಾಗಿ ಅವರನ್ನ ಚಂದ್ರಕಲಾರವರ ನೃತ್ಯ ಶಾಲೆಗೆ ಸೇರಿಸಿದರು. ಅಂದಹಾಗೆ ಇಲ್ಲಿ ಜಯಂತಿಯವರ ಜೊತೆ ಸಹಪಾಠಿಯಾಗಿದ್ದ ಮನೋರಮಾರವರು ಅವರು ಕೂಡ ಮುಂದೆ ಪ್ರಖ್ಯಾತ ತಮಿಳು ನಟಿಯಾದವರು.

ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನ ನೋಡಿ ತಮ್ಮ`ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇಲ್ಲಿಂದ ಜಯಂತಿಯವರ ಅದೃಷ್ಟ ಬದಲಾಯಿತು. ಅಂದಹಾಗೆ ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದ್ದು ಪುಟ್ಟಸ್ವಾಮಿಯವರೇ. ನಂತರ ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಜಯಂತಿ ಅವರು ಡಾ.ರಾಜ್ ಜೊತೆ ದಾಖಲೆಯ 45 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೆ  ಮೊದಲ ಬಾರಿಗೆ ಬಿಕಿನಿ ತೊಟ್ಟು ಸುದ್ದಿಯಾಗಿದ್ದ ನಟಿ ಜಯಂತಿಯವರು ತಾವು ನಿರ್ವಹಿಸುವ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದರು, ಪಾತ್ರ ಬೇಡುವ ರೀತಿಯಲ್ಲಿ ಅಭಿನಯಿಸುತ್ತಿದ್ದರು.

ಚಿತ್ರರಂಗದಲ್ಲಿ ಬಹುಬೇಡಿಕೆಯಲ್ಲಿದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಒಂದೇ ಒಂದು ಹಾಡಿನಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದರು. ಒನಕೆ ಓಬವ್ವನ ಹಾಡಿನಲ್ಲಿ ಜಯಂತಿಯವರ ಅಭಿನಯ ಇಂದಿಗೂ ಜನಪ್ರಿಯ. ನಟಿ ಜಯಂತಿ, 6 ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1960 ರಿಂದ 1980ರ ದಶಕದವರೆಗೂ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿದ್ದರು. ಎಡಕಲ್ಲು ಗುಡ್ಡದ ಮೇಲೆ, ಮನಸ್ಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತ್ತು, ಮಸಣದ ಹೂವು, ಆನಂದ್, ಟುವಿ ಟುವಿ ಟುವಿ ಚಿತ್ರಗಳಿಗೆ ಜಯಂತಿ ರಾಜ್ಯ ಪ್ರಶಸ್ತಿ ಪಡೆದಿದ್ದ ನಟಿ ಜಯಂತಿ, ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಕನ್ನಡದಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತ್ ನಾಗ್ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು.

ಮೂರು ಮದುವೆ ಆಗಿದ್ದ ಜಯಂತಿಯವರು ಸಿನಿಮಾ ರಂಗಕ್ಕೆ ಪರಿಚಯವಾದ ಶುರುವಿನಲ್ಲಿ ನಿರ್ದೇಶಕ ಕೆಪೆಟಿ ಶಿವರಾಂ ಅವರನ್ನು ಮೊದಲು ವಿವಾಹವಾದರು. ಶಿವರಾಮ ಅವರಿಗೆ ಇದು ಎರಡನೇ ಮದುವೆ, ಜಯಂತಿ ಅವರನ್ನು ಮದುವೆ ಆಗುವ ಮೊದಲು ಅವರಿಗೆ ನಾಲ್ಕು ಮಕ್ಕಳಿದ್ದರು. ಜಯಂತಿ ಶಿವರಾಂ ವೈವಾಹಿಕ ಜೀವನ ಬಹಳ ಕಾಲ ಮುಂದುವರೆಯಲಿಲ್ಲ. 2009 ರಲ್ಲಿ ಶಿವರಾಂ ತೀರಿಹೋದರು. ಜಯಂತಿ ಮತ್ತು ಶಿವರಾಂ ಅವರಿಗೆ ಕೃಷ್ಣಕುಮಾರ್ ಎಂಬ ಪುತ್ರನಿದ್ದು ಇವರು ನಟಿ ಅನು ಪ್ರಭಾಕರ್ ಅವರನ್ನ ವರಿಸಿದ್ದರು. ಆದರೆ 10 ವರ್ಷದ ನಂತರ ಇವರಿಬ್ಬರ ಸಂಬಂಧ ವಿಚ್ಛೇದನದಲ್ಲಿ ಕೊನೆಗೊಂಡಿತು. ಜಯಂತಿ ಯವರು ನಿರ್ಮಾಪಕ ಗಿರಿಬಾಬು ಅವರನ್ನು ಮದುವೆಯಾಗಿ ವಿಚ್ಛೇದನ ನೀಡಿದ್ದರು. ಇದರ ಬಳಿಕ ತನಗಿಂತ ಕಿರಿಯರಾದ ರಾಜ ಶೇಕರ್ ಎಂಬುವವರೊಡನೆ ಮದುವೆ ಮಾಡಿಕೊಂಡ ನಂತರ ಆ ಸಂಬಂಧವೂ ವಿಫಲವಾಗಿ ಮತ್ತೆ ವಿಚ್ಛೇದನ ಪಡೆದುಕೊಂಡರು.

ದಕ್ಷಿಣ ಭಾರತದ ಸ್ಟಾರ್ ನಟರೊಂದಿಗೆಲ್ಲ ನಟಿಸಿದ್ದ ಕೀರ್ತಿ ಹೊಂದಿದ್ದ ಜಯಂತಿ ಅವರು ಸೋಮವಾರ ನಸುಕಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅಸ್ತಮಾ,ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟಿ ಕಳೆದ ವರ್ಷ ಕೋವಿಡ್-19 ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ 40 ದಿನಗಳ ಕಾಲ ಇದ್ದು ಚೇತರಿಸಿಕೊಂಡು ಮನೆಗೆ ಹಿಂತಿರುಗಿದ್ದರು. ಆದರೆ ಇಂದು ಕೊನೆಯುಸಿರೆಳೆದಿದ್ದಾರೆ.

-masthmagaa.com

Contact Us for Advertisement

Leave a Reply