ರಾಜ್ಯದಲ್ಲಿಇಂದು ಎಲ್ಲೆಲ್ಲಿ ಮಳೆಯಾಗಿದೆ? ದೇಶದಲ್ಲಿ ವರುಣನ ಅಬ್ಬರ ಹೇಗಿದೆ? ಇಲ್ಲಿದೆ ನೋಡಿ ಮಾಹಿತಿ!

masthmagaa.com:

ರಾಜ್ಯದಲ್ಲಿ ಎಡಬಿಡದೇ ಸುರಿತೀರೋ ಮಹಾಮಳೆ ಇಂದೂ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಮಂಜಗುಣಿ ಎಂಬಲ್ಲಿ ಅತಿಹೆಚ್ಚು 185.5 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿಯ ಜಿಲ್ಲೆಗಳ ಬಹುತೇಕ ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಕಡೆ ಸಾಧರಣ, ಕೆಲವು ಕಡೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಕಲಬುರಗಿ, ವಿಜಯಪುರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಹಾಸನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.
ಇನ್ನು ರಾಜ್ಯದಲ್ಲಿ ಮಳೆಯ ಪರಿಸ್ಥಿತಿಯಿಂದ ಉಂಟಾದ ಮೂಲಸೌಕರ್ಯ ಕಾರ್ಯಗಳನ್ನ ಮರುಸ್ಥಾಪಿಸೋಕೆ ಸುಮಾರು 500 ಕೋಟಿ ರೂಪಾಯಿ ನೀಡೋದಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಇದರಲ್ಲಿ ರಸ್ತೆ ನಿರ್ಮಾಣ, ಸಣ್ಣ ಸೇತುವೆಗಳು, ವಿದ್ಯುತ್ ಕಂಬಗಳ ಮರುಸ್ಥಾಪನೆ ಸೇರಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚುವರಿ ಅನುದಾನ ಬಿಡುಗಡೆ ಮಾಡ್ತೀವಿ ಅಂತ ಹೇಳಿದ್ರು. ಇನ್ನು ಮಳೆಯ ಹೊಡೆತಕ್ಕೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿಹೋಗಿವೆ. ಒಳಹರಿವಿನ ಪ್ರಮಾಣದಲ್ಲೂ ಏರಿಕೆಯಾಗುತ್ತಿದ್ದು ಹೆಚ್ಚುವರಿ ನೀರನ್ನ ನದಿಗೆ ಬಿಡಲಾಗುತ್ತಿದೆ. ಇದರಿಂದ ಹಲವು ಭಾಗಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ನದಿ ತೀರದ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಇನ್ನು ದೇಶದ ಉಳಿದ ಭಾಗಗಳಲ್ಲೂ ಮಳೆಯ ಅಬ್ಬರ ಏನ್‌ ಕಡಿಮೆ ಇಲ್ಲ. ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್‌ನಲ್ಲಿ ಅತಿವೃಷ್ಠಿಗೆ ಜನ ಹೈರಾಣಾಗಿದ್ದಾರೆ. ಈ ಮೂರು ರಾಜ್ಯಗಳಲ್ಲೇ ಕಳೆದ 24 ಗಂಟೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 18 ಮಂದಿ ಪ್ರಾಣ ಬಿಟ್ಟಿದ್ದಾರೆ. ಈಗಾಗಲೇ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳನ್ನ ಈ ಮೂರು ರಾಜ್ಯಗಳಲ್ಲಿ ನಿಯೋಜಿಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply