ಪಂಜಾಬ್​​ ಕೋರ್ಟ್​​ನಲ್ಲಿ ಸ್ಫೋಟ: 1 ಸಾವು, ಐವರಿಗೆ ಗಾಯ

masthmagaa.com:

ಪಂಜಾಬ್​​ನಲ್ಲಿ ಎಲೆಕ್ಷನ್ ಹತ್ತಿರ ಬರ್ತಿದ್ದಂತೆ ಒಂದಲ್ಲಾ ಒಂದು ಘಟನೆ ನಡೀತಾನೇ ಇದೆ. ಧರ್ಮ ನಿಂದನೆ ಆರೋಪದಲ್ಲಿ ಹತ್ಯೆ ನಡೆದ ಒಂದು ವಾರದ ಒಳಗಾಗಿ ಸ್ಫೋಟ ಸಂಭವಿಸಿದೆ. ಲೂದಿಯಾನಾ ಕೋರ್ಟ್​​ ಕಟ್ಟಡದ 2ನೇ ಫ್ಲೋರ್​​ನ ಬಾತ್​ರೂಂನಲ್ಲಿ ಈ ಘಟನೆ ಸಂಭವಿಸಿದೆ. ಇದ್ರಲ್ಲಿ ಒಬ್ಬರು ಪ್ರಾಣ ಬಿಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಸ್ಫೋಟಕ ತೀವ್ರತೆಗೆ ಗೋಡೆಗಳೆಲ್ಲಾ ಧ್ವಂಸಗೊಂಡಿವೆ. ಸ್ಥಳಕ್ಕೆ ಎನ್​ಐಎ, ಎನ್​ಎಸ್​​​ಜಿ ಪಡೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಷ್ಟು ಸೆಕ್ಯೂರಿಟಿ ನಡುವೆ ಸ್ಫೋಟಕವನ್ನು ಕೋರ್ಟ್​ ಒಳಗೆ ತಗೊಂಡು ಹೋಗಿದ್ದು ಹೇಗೆ ಅನ್ನೋದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಚರಣ್​​ಜೀತ್ ಸಿಂಗ್ ಚನ್ನಿ, ಚುನಾವಣೆ ಹತ್ತಿರದಲ್ಲಿರೋದ್ರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರೋ ಉದ್ದೇಶದಿಂದ ಈ ಸ್ಫೋಟ ಮಾಡಲಾಗಿದೆ. ತಪ್ಪಿತಸ್ಥರನ್ನು ಸುಮ್ನೆ ಬಿಡಲ್ಲ ಅಂತ ಹೇಳಿದ್ದಾರೆ. ಡಿಸಿಎಂ ಸುಖ್​ಜಿಂದರ್ ಸಿಂಗ್ ರಾಂಧವ, ನಮ್ಮದು ಗಡಿ ರಾಜ್ಯ.. ಹೀಗಾಗಿ ಹೊರಗಿನಿಂದ ದಾಳಿ ನಡೆದಿರೋ ಸಾಧ್ಯತೆ ಇದೆ ಅಂತ ಹೇಳಿದ್ದಾರೆ. ಇನ್ನು ಈ ಘಟನೆ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆ ಕೂಡ ಪಂಜಾಬ್ ಸರ್ಕಾರಕ್ಕೆ ಸೂಚಿಸಿದೆ. ಈ ಬಗ್ಗೆ ಮೊದಲು ಟ್ವೀಟ್ ಮಾಡಿದ ಮಾಜಿ ಸಿಎಂ ಅಮರಿಂದರ್ ಸಿಂಗ್​​, ಘಟನೆಯಿಂದ ಬೇಜಾರಾಗಿದೆ. ಪೊಲೀಸರು ಬುಡದಿಂದ ತನಿಖೆ ನಡೆಸಬೇಕು ಅಂತ ಒತ್ತಾಯಿಸಿದ್ದಾರೆ. ಇತ್ತೀಚೆಗೆ ಇದೇ ಅಮರಿಂದರ್ ಸಿಂಗ್ ಪಾಕಿಸ್ತಾನದಿಂದ ರಾಜ್ಯಕ್ಕೆ ಅಪಾಯ ಇದೆ. ಸಿಆರ್​​ಪಿಎಫ್ ತುಕಡಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಅಂತ ಮನವಿ ಮಾಡಿದ್ರು. ಈ ಹಿಂದೆ 2017ರ ಚುನಾವಣೆ ವೇಳೆಗೆ ಕಾಂಗ್ರೆಸ್ ಪ್ರಚಾರ ಕಾರ್ಯಕ್ರಮದ ಬಳಿ ಸ್ಫೋಟವಾಗಿ ಮೂವರು ಮಕ್ಕಳು ಸೇರಿ 6 ಮಂದಿ ಪ್ರಾಣ ಬಿಟ್ಟಿದ್ರು.

-masthmagaa.com

Contact Us for Advertisement

Leave a Reply