masthmagaa.com:

ಸ್ನೇಹಿತರೆ, ಇವತ್ತು ಡಿಸೆಂಬರ್ 31. ಈ ಇಡೀ ವರ್ಷ ಹೇಗೆ ಕಳೀತು ಅಂತ ನಿಮಗೆಲ್ಲಾ ಗೊತ್ತೇ ಇದೆ. ಕಳೆದ 365 ದಿನಗಳನ್ನೂ ಸೇರಿಸಿ ಒಂದು ಫಿಲ್ಮ್ ಅಂತ ಕರೆಯೋದಾದ್ರೆ, ಅದೊಂದು ವಿಲನ್ನೇ ಹೀರೋ ಆಗಿರೋ ಸಿನೆಮಾ.. ಮತ್ತು ಆ ವಿಲನ್ನೇ ಚೀನಾ ಹಾಗೂ ಅದರ ಅಧ್ಯಕ್ಷ ಷಿ ಜಿನ್​ಪಿಂಗ್. ಇಲ್ಲ… ಚೀನಾ ಈ ವೈರಾಣುವನ್ನ ಸೃಷ್ಟಿ ಮಾಡಿ ಜಗತ್ತಿಗೆ ಬಿಡ್ತು ಅಂತ ನಾವ್ ಹೇಳಲ್ಲ. ಮತ್ತೆ ಯಾಕೆ ಚೀನಾ ವಿಲನ್? ಬನ್ನಿ ಸ್ಟೆಪ್ ಬೈ ಸ್ಟೆಪ್ ಈ ಸಸ್ಪೆನ್ಸ್ ಥ್ರಿಲ್ಲರ್​ ಕಥೆಯನ್ನ ಎಳೆಎಳೆಯಾಗಿ ನಿಮ್ಮ ಮುಂದೆ ಇಡ್ತಾ ಹೋಗ್ತೀವಿ.

ಸ್ಬೇಹಿತರೆ, ಚೀನಾದಲ್ಲಿ ಕೊರೋನಾ ಹುಟ್ಟಿದಾಗ ಅದನ್ನ ಘೋಷಿಸಿ ಲಾಕ್ಡೌನ್ ಮಾಡಿದ್ದು 2020ರ ಜನವರಿ 23ನೇ ತಾರೀಖು. ಆದ್ರೆ ಅದಕ್ಕೂ ಮೊದಲು ಏನೆಲ್ಲಾ ಅನಾಹುತ ನಡೆಯಬೇಕೋ ಅದೆಲ್ಲಾ ನಡೆದು ಹೋಗಿತ್ತು. ಸರಿಯಾಗಿ 25 ದಿನಗಳ ಹಿಂದೆ, ಡಿಸೆಂಬರ್ 30ನೇ ತಾರೀಖಿನ ವೇಳೆಗೆಲ್ಲಾ ಈ ಇಡೀ ವರ್ಷವನ್ನ ಜಗತ್ತು ಹೇಗೆ ಕಳೆಯುತ್ತೆ ಅನ್ನೋದು ನಿರ್ಧಾರ ಆಗಿ ಹೋಗಿತ್ತು. ಸೋ ಚೀನಾದಲ್ಲಿ ಮೊದಲ ಬಾರಿಗೆ ಹೊಸ ಕಾಯಿಲೆ ಬಗ್ಗೆ ಅಲರ್ಟ್ ಮಾಡಿದ ಕ್ಷಣದಿಂದ – ಅದನ್ನ ಜಗತ್ತಿಗೆ ಘೋಷಿಸಿ ವುಹಾನ್ ಲಾಕ್​ಡೌನ್ ಮಾಡಿದ ದಿನದ ಮಧ್ಯೆ ಇದ್ದ ಆ 25 ದಿನಗಳು ಏನೆಲ್ಲಾ ನಡೀತು ಅನ್ನೋದನ್ನ ಎಳೆಎಳೆಯಾಗಿ ನೊಡಿದ್ರೆ ಚೀನಾ ಈ ಜಗತ್ತಿಗೆ ಮಾಡಿದ ಅನ್ಯಾಯ ಎಂಥದ್ದು ಅಂತ ಅರ್ಥಾಗುತ್ತೆ.

ಡಿಸೆಂಬರ್ 30, 2019

2019ರ ಡಿಸೆಂಬರ್ 30ನೇ ತಾರೀಖು ವುಹಾನ್ ಆಸ್ಪತ್ರೆಗಳಲ್ಲಿ ಹೊಸ, ನಿಗೂಢ ಕಾಯಿಲೆಯಿಂದ ಬಳಲುತ್ತಿರೋ ರೋಗಿಗಳು ದಾಖಲಾಗ್ತಿದ್ದಾರೆ ಅನ್ನೋದು ನಗರದ ಅಧಿಕಾರಿಗಳಿಗೆ ಗೊತ್ತಾಗಿತ್ತು. ಆದ್ರೆ ಅವರು ಅದನ್ನ ಬಹಿರಂಗ ಮಾಡಲೇ ಇಲ್ಲ. ನಿಯಮದ ಪ್ರಕಾರ ಇಂತಹ ಹೊಸ ಮಾದರಿಯ ಕಾಯಿಲೆ ಬಂದಾಗ ಅದನ್ನ ನೇರವಾಗಿ ದೇಶದ ಸಿಡಿಸಿ – ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​ಗೆನೇ ರಿಪೋರ್ಟ್ ಮಾಡಬೋದಿತ್ತು. ಆದ್ರೆ ವುಹಾನ್ ಅಧಿಕಾರಿಗಳ ಒತ್ತಡಕ್ಕೆ ಒಳಗಾದ ಆಸ್ಪತ್ರೆಗಳು ಆ ಕೆಲಸ ಮಾಡಲೇ ಇಲ್ಲ.

ಆದ್ರೆ ಅದೇ ದಿನ ವುಹಾನ್ ಅಧಿಕಾರಿಗಳು ನಗರದ ಆಸ್ಪತ್ರೆಗಳಿಗೆ ಎರಡು ಗುಪ್ತ ನೋಟಿಸ್ ಜಾರಿ ಮಾಡಿದ್ರು. ಇದರಲ್ಲಿ ಇಂತಹ ಪ್ರತಿಯೊಂದು ಹೊಸ ಪ್ರಕರಣ ಬಗ್ಗೆ ನಗರದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಈ ರೋಗಿಗಳನ್ನ ಹೇಗೆ ನೊಡಿಕೊಳ್ಳಬೇಕು ಅಂತ ಹೇಳಲಾಗಿತ್ತು. ಆದರೆ ಜಾರಿಯಾದ 12 ನಿಮಿಷಗಳಲ್ಲೇ ಈ ನೋಟಿಸ್​ಗಳು ಚೀನಾದ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ವಿ ಚಾಟ್​ನಲ್ಲಿ ಲೀಕ್ ಆಗಿದ್ದವು. ಯಾವುದೋ ಹೊಸ ನ್ಯುಮೋನಿಯಾದಂತಹ ಕಾಯಿಲೆ ಬಂದಿದೆಯಂತೆ ಅಂತ ಚೀನಾದಾದ್ಯಂತ ಗುಲ್ಲಾಯಿತು. ಹೀಗೆ ಈ ವಿಚಾರ ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್​ನ ಚೀಫ್ ಜಾರ್ಜ್ ಗೌವ್ ಅವರನ್ನ ತಲುಪ್ತು. ನೋಡಿ… ಸಿಡಿಸಿ ಚೀಫ್​ಗೆ ಈ ವಿಚಾರ ಎಲ್ಲಕ್ಕಿಂತ ಮೊದಲು ಗೊತ್ತಾಗ್ಬೇಕಿತ್ತು. ಆದ್ರೆ ಅವರಿಗೆ ಗೊತ್ತಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಬಂದ ಮೇಲೆ. ಈ ಜಾರ್ಜ್ ಗೌವ್​ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ತರಬೇತಿ ಪಡೆದು ಬಂದ ಒಬ್ಬ ಆಧುನಿಕ ಡಾಕ್ಟರ್. ಇಷ್ಟಾಗ್ತಿದ್ದಂತೆ ಕೂಡಲೇ ಚೈನೀಸ್ ನ್ಯಾಶನಲ್ ಹೆಲ್ತ್ ಕಮಿಷನ್ ಅದೇ ರಾತ್ರಿ ಒಂದು ಟೀಮನ್ನ ವುಹಾನ್​ಗೆ ಕಳಿಸ್ತು.

ಇದಕ್ಕೂ ಒಂದು ವಾರದ ಮೊದಲೇ ಒಬ್ಬ 65 ವರ್ಷದ ವೃದ್ಧೆಯ ಶ್ವಾಸಕೋಶ ದ್ರವದ ಸ್ಯಾಂಪಲ್​ ಅನ್ನ ದಕ್ಷಿಣ ಚೀನಾದಲ್ಲಿರೋ ವಿಶನ್ ಮೆಡಿಕಲ್ಸ್ ಅನ್ನೋ ಲ್ಯಾಬ್​ಗೆ ಕಳಿಸಿಕೊಟ್ಟಿದ್ರು. ವಿಷನ್ ಮೆಡಿಕಲ್ಸ್​​ನ ಪರೀಕ್ಷೆಗಳಲ್ಲಿ ಇದ್ಯಾವುದೋ ಹೊಸ ವೈರಸ್. ಹಾಗೂ ಇದು ಸಾರ್ಸ್ ವೈರಾಣು ಥರಾನೇ ಇದೆ ಅನ್ನೋದು ಖಚಿತ ಆಗಿತ್ತು. ಅಷ್ಟೊತ್ತಿಗೆಲ್ಲಾ ಇನ್ನೂ ಎರಡು ಲ್ಯಾಬ್​ಗಳೂ ಸೇಮ್ ಕನ್​ಕ್ಲೂಶನ್​​ಗೆ ಬಂದಿದ್ದವು. ಆದ್ರೆ ಯಾರೂ ಈ ಬಗ್ಗೆ ರಿಪೋರ್ಟ್​ಗಳನ್ನ ಬಹಿರಂಗ ಮಾಡುವ ಧೈರ್ಯ ಮಾಡಲಿಲ್ಲ. ಆದ್ರೆ ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿದ ವಿಷನ್ ಮೆಡಿಕಲ್ಸ್ ಕೂಡಲೇ ಈ ಮಾಹಿತಿಯನ್ನ ಚೈನೀಸ್ ಅಕಾಡೆಮಿ ಆಫ್ ಮೆಡಿಕಲ್ ಸೈನ್ಸಸ್​ಗೆ ಗುಪ್ತವಾಗಿ ಕಳಿಸಿಕೊಡ್ತು. ಹಾಗೂ ತನ್ನ ಒಬ್ಬ ಹಿರಿಯ ಅಧಿಕಾರಿಯನ್ನ ರಹಸ್ಯವಾಗಿ ವುಹಾನ್​ಗೆ ಕಳಿಸಿ ಕೂಡಲೇ ಅಧಿಕಾರಿಗಳನ್ನ ಎಚ್ಚರಿಸಿ ಬರುವಂತೆ ಹೇಳ್ತು.

ಡಿಸೆಂಬರ್ 31, 2019

ವರ್ಷದ ಕೊನೇ ದಿನ, ಅಂದ್ರೆ ಡಿಸೆಂಬರ್ 31, 2019ರಂದು ವುಹಾನ್​ಗೆ ಬಂದ ರಾಷ್ಟ್ರೀಯ ತಜ್ಞರ ತಂಡ ಕೂಡ ನಾವು ಎಲ್ಲಾ ತನಿಖೆ ಮಾಡಿದ್ದೀವಿ. ಇದೇನೋ ಹೊಸ ರೀತಿಯ ಕಾಯಿಲೆ ಲಕ್ಷಣ ಇದೆ ಅಷ್ಟೆ. ಆದ್ರೆ ಇದೊಂದು ಭಯಾನಕ ಸಾಂಕ್ರಾಮಿಕದ ಥರ ಏನೂ ಕಾಣ್ತಿಲ್ಲ ಅಂತ ಹೇಳಿಬಿಡ್ತು.

ಅಷ್ಟರಲ್ಲಿ ವಿಷನ್ ಮೆಡಿಕಲ್ಸ್​ನ ಡೇಟಾ ಕೂಡ ರಾಜಧಾನಿ ಬೀಜಿಂಗ್​ ತಲುಪಿತ್ತಲ್ಲ..!? ಕೂಡಲೇ ಅಖಾಡಕ್ಕಿಳಿದ ನ್ಯಾಶನಲ್ ಹೆಲ್ತ್ ಕಮಿಷನ್ ಆಫ್ ಚೈನಾ ಎಲ್ಲಾ ಲ್ಯಾಬ್​​ಗಳ ಮೇಲೆ ಮುಗಿಬಿತ್ತು. ಈ ಹೊಸ ಕಾಯಿಲೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನ ನಾಶಪಡಿಸಿ ಅಂತ ಆದೇಶ ನೀಡ್ತು ಹಾಗೂ ರೋಗಿಗಳ ಸ್ಯಾಂಪಲ್​ಳನ್ನ ಸೀಝ್ ಮಾಡಿ ತೆಗೆದುಕೊಂಡು ಹೋಯ್ತು. ಜೊತೆಗೆ ಏನೇ ಸಂಶೋಧನೆ ನಡೆಸಿದ ವರದಿಗಳಿದ್ರೆ ಅದನ್ನ ಸರ್ಕಾರದ ಅನುಮತಿ ಇಲ್ಲದೆ ಎಲ್ಲೂ ಪ್ರಕಟಿಸುವಂತಿಲ್ಲ ಅಂತ ಆದೇಶ ನೀಡಲಾಯ್ತು. ವಿಷನ್​​ ಮೆಡಿಕಲ್ಸ್​ಗೆ ಅಂತೂ ಸ್ವತಃ ಹೆಲ್ತ್ ಕಮಿಷನ್ ಮುಖ್ಯಸ್ಥರೇ ಖುದ್ದು ಹೋಗಿ ಅಲ್ಲಿದ್ದ ಸ್ಯಾಂಪಲ್​ಗಳನ್ನ ಸೀಝ್ ಮಾಡಿದ್ರು.

ಆದ್ರೆ ವಿಚಾರ ಅಷ್ಟರಲ್ಲೇ ಚೀನಾದ ವೈದ್ಯಲೋಕದಲ್ಲಿ ತಲ್ಲಣ ಮುಡಿಸಿತ್ತು. ಹಲವು ಲ್ಯಾಬ್​ಗಳು ಸ್ಯಾಂಪಲ್ ತರಿಸಿಕೊಂಡು ಸಂಶೋಧನೆ ಶುರು ಮಾಡಿದ್ದವು. ಅದರಲ್ಲಿ ಶಾಂಘಾಯ್ ಹೆಲ್ತ್ ಕ್ಲಿನಿಕಲ್ ಸೆಂಟರ್​​ನ ಮುಖ್ಯ ವೈರಾಣು ಶಾಸ್ತ್ರಜ್ಞ ಶಾಂಗ್ ಯೋಂಗ್ಶೆನ್ ಮತ್ತು ತಂಡ ಕೂಡ ಸೇರಿತ್ತು. ಶಾಂಗ್ ಅವರ ಟೀಮ್ ಈ ಹೊಸ ವೈರಾಣುವಿನ ಜೆನೆಟಿಕ್ ಕೋಡನ್ನ ಕ್ರಾಕ್ ಮಾಡಿತ್ತು. ಮತ್ತು ಇದೊಂದು ಅತ್ಯಂತ ಅಪಾಯಕಾರಿ ಮಾಹಾಮಾರಿ ಆಗಬಹುದು ಅಂತ ಕನ್​ಕ್ಲೂಶನ್​​ಗೆ ಬಂದಿತ್ತು. ಸೋ ಜನವರಿ 5ನೇ ತಾರೀಖು ಈ ತಂಡ ಶಾಂಘಾಯ್​​ನ ಹಿರಿಯ ಅಧಿಕಾರಿಗಳಿಗೆ ಈ ಬಗ್ಗೆ ಆಂತರಿಕವಾಗಿ ಎಚ್ಚರಿಸೋ ಪ್ರಯತ್ನ ಮಾಡಿದ್ರು. ಕೂಡಲೇ ಏನಾದ್ರೂ ಮಾಡಿ ಅಂತ ಹೇಳಿದ್ರು.

ಜನವರಿ 9, 2020

ಅಷ್ಟೊತ್ತಿಗಾಗಲೇ ಚೀನಾ ಸರ್ಕಾರ ಇದೊಂದು ಹೊಸ ಕೊರೋನಾ ವೈರಸ್ ಅಂತ ಬಹಿರಂಗ ಪಡಿಸಿತ್ತು​. ಆದ್ರೆ ಅಷ್ಟೊಂದು ಅಪಾಯಕಾರಿ ಏನೂ ಅಲ್ಲ ಅಂತ ಹೇಳೋ ಮೂಲಕ ತೇಪೆ ಹಚ್ಚೋ ಕೆಲಸ ಮುಂದುವರಿಸಿತ್ತು.

ಜನವರಿ 11, 2020

ಚೀನಾದಲ್ಲಿ ಮೊದಲ ಕೊರೋನಾ ಸಾವು ವರದಿಯಾಯ್ತು. ಇನ್ನು ತಡ ಮಾಡಿದ್ರೆ ಪ್ರಯೋಜನ ಇಲ್ಲ ಅಂತ ಅರಿತ ಶಾಂಗ್ ಯೋಂಗ್ಶೆನ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿರೋ ತಮ್ಮ ವೈದ್ಯ ಮಿತ್ರ ಎಡ್ವರ್ಡ್ ಹೋಮ್ಸ್ ಮೂಲಕ ತಮ್ಮ ತಂಡ ರೆಡಿ ಮಾಡಿದ್ದ ಈ ಕೊರೋನಾ ವೈರಾಣುವಿನ ಜೆನೆಟಿಕ್ ಸೀಕ್ವೆನ್ಸ್ ಹಾಗೂ ಎಲ್ಲಾ ಡೇಟಾವನ್ನ ಆನ್ಲೈನ್​ಲ್ಲಿ ಹಾಕಿಸಿಬಿಟ್ಟರು.

ಜನವರಿ 14, 2020

ಈಗ ಅದ್ಯಾವುದೋ ಕೊರೋನಾ ಅಂತೆ, ಚೀನಾದಲ್ಲಂತೆ ಅಂತ ಜಗತ್ತಿನ ಬೇರೆ ಬೇರೆ ಕಡೆ ಸಣ್ಣಗೆ ಸುದ್ದಿಯಾಗಲು ಶುರುವಾಗಿತ್ತು. ಸೋ ತಕ್ಷಣ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಇಡೀ ದೇಶದ ಎಲ್ಲಾ ಟಾಪ್ ವೈದ್ಯಕೀಯ ಸಿಬ್ಬಂದಿಯೊಂದಿಗೆ ಗುಪ್ತ ಸಭೆ ನಡೆಸಿ ಈ ವೈರಾಣು ಸಂಬಂಧ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ಮಾಡಿದ್ರು. ಎಲ್ಲಾ ಆಸ್ಪತ್ರೆಗಳಿಗೆ 63 ಪುಟಗಳ ಗೈಡ್​ಲೈನ್ಸ್ ಕೂಡ ಜಾರಿ ಆಯ್ತು. ಆದ್ರೆ ಜಗತ್ತಿನಿಂದ ಮಾತ್ರ ಎಲ್ಲವನ್ನೂ ಮುಚ್ಚಿಡ್ತಾನೇ ಹೋಯ್ತು ಚೀನಾ. ಬಹಿರಂಗ ಮಾಡೋದು ಬಿಡಿ, ಈ ವೈರಾಣು ಪ್ರಾಣಿಗಳಿಂದ ಮನುಷ್ಯನಿಗೆ ಬಂದಿದೆ ಅಷ್ಟೆ. ಮನುಷ್ಯರಿಂದ ಮನುಷ್ಯರಿಗೆ ಹರಡ್ತಾನೇ ಇಲ್ಲ ಅಂತ ಹೇಳಿಬಿಡ್ತು ಚೀನಾ.

ಜನವರಿ 18, 2020

ಈಗ ಚೀನಾದ ನ್ಯಾಷನಲ್ ಹೆಲ್ತ್ ಕಮಿಷನ್ ಡಾಕ್ಟರ್ ಶಾಂಗ್ ನಾನ್ಶಾನ್ ನೇತೃತ್ವದಲ್ಲಿ ಚೀನಾಗೆ ಮತ್ತೊಂದು ತಂಡವನ್ನ ಕಳಿಸ್ತು. ಈ 84 ವರ್ಷದ ಡಾಕ್ಟರ್ ಶಾಂಗ್ ನಾನ್ಶಾನ್ ಅತ್ಯಂತ ಅನುಭವಿ ಹಾಗೂ ಈ ಹಿಂದೆ ಸಾರ್ಸ್ ಮಹಾಮಾರಿ ಬಯಲಿಗೆಳೆದಿದ್ದ ಕೀರ್ತಿ ಕೂಡ ಇವರಿಗಿತ್ತು. ಇವರು ವುಹಾನ್​ಗೆ ಬಂದು ತನಿಖೆ ಮಾಡಿ ವರದಿ ಕೊಟ್ಟಾಗ ಎಲ್ಲರಿಗೂ ಶಾಕ್ ಆಗಿತ್ತು. ಯಾಕಂದ್ರೆ ಎಲ್ಲರೂ ಅಂದುಕೊಂಡಿದ್ದಕ್ಕಿಂತಲೂ ಕಾಯಿಲೆ ಸಾವಿರಾರು ಜನಕ್ಕೆ ಆಲ್ರೆಡಿ ಹರಡಿಬಿಟ್ಟಿದೆ. ಕೆಲ ವೈದ್ಯರುಗಳಿಗೂ ಹರಡಿಬಿಟ್ಟಿದೆ ಅಂತ ಬಯಲಾಗಿತ್ತು. ಈಗ ಮನುಷ್ಯನಿಂದ ಮನುಷ್ಯನಿಗೆ ಈ ಕಾಯಿಲೆ ಹರಡುತ್ತೆ ಅಂತ ಚೀನಾ ಸರ್ಕಾರ ಒಪ್ಪಿಕೊಳ್ಳಲೇಬೇಕಾಯ್ತು.

ಜನವರಿ 19, 2020

ಡಾಕ್ಟರ್ ಶಾಂಗ್ ನಾನ್ಶಾನ್ ವರದಿ ಚೀನಾವನ್ನೇ ಅಲ್ಲಾಡಿಸಿತ್ತು. ಜನವರಿ 19ರ ಬೆಳ್ಳಂಬೆಳಗ್ಗೆ ನ್ಯಾಷನಲ್ ಹೆಲ್ತ್ ಕಮಿಷನ್​ ಅಧಿಕಾರಿಗಳು, ಎತ್ತರದ ಗೋಡೆಗಳನ್ನ ಹೊಂದಿದ್ದ ಚೀನಾದ ಕಮ್ಯೂನಿಸ್ಟ್ ಪಾರ್ಟಿಯ ಮುಖ್ಯ ಕಚೇರಿ ಶೋಂಗ್ನಾನೈಗೆ ದೌಡಾಯಿಸಿದ್ರು. ಆಗ ಪ್ರೆಸಿಡೆಂಟ್ ಷಿ ಜಿನ್​ಪಿಂಗ್ ಅಲ್ಲಿ ಇರಲಿಲ್ಲ. ಬದಲಾಗಿ ಪ್ರಧಾನಿ ಲಿ ಕೆಕಿಯಾಂಗ್ ಅಧಿಕಾರಿಗಳ ಮಾತನ್ನ ಆಲಿಸಿದ್ರು. ಇದಾದ ಮೂರು ದಿನಗಳ ಬಳಿಕ ಒಂದು ಮಹತ್ವದ ಬೆಳವಣಿಗೆ ಆಯ್ತು.

ಜನವರಿ 23, 2020

ಚೀನಾ 571 ನಾವೆಲ್ ಕೊರೋನಾ ವೈರಸ್ ಪ್ರಕರಣಗಳನ್ನ ಅಧಿಕೃತವಾಗಿ ಘೋಷಿಸ್ತು. ಹಾಗೂ ಚೀನಾ ಅಧ್ಯಕ್ಷ ಷಿ ಜಿನ್​​ಪಿಂಗ್ 1 ಕೋಟಿಗೂ ಅಧಿಕ ಜನಸಂಖ್ಯೆಯ ವುಹಾನ್​ ಸಿಟಿ ಲಾಕ್​ಡೌನ್ ಮಾಡುವ ನಿರ್ಧಾರವನ್ನ ಘೋಷಿಸಿದ್ರು. ಆದ್ರೆ ಅದನ್ ಕಂಡ ಇಡೀ ಜಗತ್ತಿಗೆ ಎದೆ ಒಡೆದು ಹೋದಂತಾಗಿತ್ತು. ಯಾಕಂದ್ರೆ ಅಷ್ಟರಲ್ಲಾಗಲೇ ವುಹಾನ್​ ಹಾಗೂ ಚೀನಾದಿಂದ ಲಕ್ಷಾಂತರ ಜನ ಪ್ರಪಂಚದ ಮೂಲೆ ಮೂಲೆಗೂ ಪ್ರಯಾಣ ಮಾಡಿಬಿಟ್ಟಿದ್ದರು. ಮಾರಕ ವೈರಾಣುವನ್ನ ಜಗತ್ತಿನಾದ್ಯಂತ ಸಾಗಿಸಿಬಿಟ್ಟಿದ್ದರು. ಈ ಬಗ್ಗೆ ಗಮನ ಸೆಳೆದ ತನ್ನದೇ ದೇಶದ ವೈದ್ಯರುಗಳನ್ನ ಬಂಧಿಸೋಮಟ್ಟಿಗೆ ಕಣ್ಣಾಮುಚ್ಚಾಲೆ ಆಡಿಬಿಡ್ತು ಚೀನಾ..

ಸ್ನೇಹಿತರೆ ವಿಜ್ಞಾನಿಗಳ ಪ್ರಕಾರ ಚೀನಾ ಆ 25 ಅತ್ಯಂತ ಇಂಪಾರ್ಟೆಂಟ್ ದಿನಗಳನ್ನ ವೇಸ್ಟ್ ಮಾಡದಿದ್ರೆ, ಮೊದಲ ವಾರವೇ ಜಗತ್ತಿಗೆ ಮಾಹಿತಿ ನೀಡಿದ್ದಿದ್ರೆ ಈ ಮಹಾಮಾರಿ ತೀವ್ರತೆ 95 ಪರ್ಸೆಂಟ್ ಕಮ್ಮಿ ಇರ್ತಿತ್ತು. ಇಡೀ ಜಗತ್ತಿಗೆ ಒಂದು ಇಡೀ ವರ್ಷ ವೇಸ್ಟ್ ಆಗ್ತಿರಲಿಲ್ಲ.

-masthmagaa.com

Contact Us for Advertisement

Leave a Reply