ಯುಕ್ರೇನ್‌ನಿಂದ ಭಾರತೀಯರ ಶಿಫ್ಟಿಂಗ್: ಇಂದು ಏನೇನಾಯ್ತು?

masthmagaa.com:

ಯುದ್ಧಪೀಡಿತ ಯುಕ್ರೇನ್​ನಿಂದ ಅಮಾಯಕ ಜನರನ್ನ ಸುರಕ್ಷಿತವಾಗಿ ಸ್ಥಳಾಂತರ ಮಾಡುವ ಪ್ರಕ್ರಿಯೆ ಇವತ್ತು ಸ್ವಲ್ಪ ಯಶಸ್ಸು ಕಂಡಿದೆ. ಇಷ್ಟು ದಿನ ರಷ್ಯಾ ಸೇನೆ ದಾಳಿ ಮಾಡ್ತಿದೆ, ಸ್ಥಳಾಂತರದ ಮಾರ್ಗಗಳು ರಷ್ಯಾಗೆ ಹೋಗೋಥರ ಇವೆ ಅಂತ ಈ ಕಾರ್ಯಾಚರಣೆ ಸಕ್ಸಸ್​ ಆಗಿರಲಿಲ್ಲ. ಆದ್ರಿವತ್ತು ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ಐದು ನಗರಗಳ ಪೈಕಿ ಸುಮಿಯಲ್ಲಿ ಸ್ಥಳಾಂತರ ಪ್ರಕ್ರಿಯೆ ಬಹುತೇಕ ಯಶಸ್ಸು ಕಂಡಿದೆ. ಸುಮಿ ನಗರದಲ್ಲಿ ಭಾರತದ ಸುಮಾರು 694 ವಿದ್ಯಾರ್ಥಿಗಳು ಸಿಲುಕಿದ್ದರು. ಅವರೆಲ್ಲರನ್ನ ಈಗ ಅಲ್ಲಿಂದ ಯುಕ್ರೇನ್​​ನ ಮತ್ತೊಂದು ನಗರವಾದ ಪೋಲ್ಟಾವಾಗೆ ಸ್ಥಳಾಂತರಿಸಲಾಗಿದೆ. ಭಾರತದ ರಾಯಭಾರ ಕಚೇರಿ ಮತ್ತು ರೆಡ್​ ಕ್ರಾಸ್​ ಸಂಸ್ಥೆಯ ಸಹಾಯದ ಮೂಲಕ ಒಟ್ಟು 12 ಬಸ್​​ಗಳಲ್ಲಿ ಭಾರತೀಯರನ್ನ ಶಿಫ್ಟ್ ಮಾಡಲಾಗಿದೆ. ಭಾರತೀಯರ ಜೊತೆಗೆ ಅಲ್ಲಿದ್ದ ಬಾಂಗ್ಲಾ ಮತ್ತು ನೇಪಾಳದ ನಾಗರಿಕರಿಗೂ ಸಹಾಯ ಮಾಡಲಾಗಿದೆ. ಪೊಲ್ಟಾವಾ ನಗರದಿಂದ ಟ್ರೇನ್​ನಲ್ಲಿ ಇವರನ್ನ ಮತ್ತಷ್ಟು ಪಶ್ಚಿಮಕ್ಕೆ ಕರ್ಕೊಂಡ್​ ಹೋಗಿ, ಅಕ್ಕಪಕ್ಕದ ದೇಶಗಳಿಂದ ಭಾರತಕ್ಕೆ ಏರ್​ಲಿಫ್ಟ್ ಮಾಡಲಾಗುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ. ಜೊತೆಗೆ ಉಳಿದ ನಗರಗಳಲ್ಲೂ ತೆರೆದಿರೋ ಹ್ಯುಮನಿಟೇರಿಯನ್ ಕಾರಿಡಾರ್​ ಅನ್ನ ಭಾರತೀಯರು ಯೂಸ್ ಮಾಡ್ಕೋಬೇಕು ಅಂತ ಯುಕ್ರೇನ್​ನಲ್ಲಿರೋ ಭಾರತದ ರಾಯಭಾರ ಕಚೇರಿ ಸೂಚನೆ ಕೊಟ್ಟಿದೆ.

ಇನ್ನು ಕರಾವಳಿ ನಗರ ಮಾರಿಯೋಪೋಲ್​​ನಲ್ಲೂ ತಾತ್ಕಾಲಿಕ ಕದನ ವಿರಾಮ ಬಹುತೇಕ ಯಶಸ್ವಿಯಾಗಿದೆ. ಮಾರಿಯೋಪೋಲ್​​ನಿಂದ ಯುಕ್ರೇನ್​ನ ಝಪೊರಿಝಿಯಾ ನಗರಕ್ಕೆ ಜನರನ್ನ ಶಿಫ್ಟ್ ಮಾಡೋ ಕೆಲಸ ಆರಂಭವಾಗಿದೆ. ಮಾರ್ಗಮಧ್ಯೆ ರಷ್ಯಾ ಶೇಲ್​ ದಾಳಿ ನಡೆಸ್ತು ಅಂತ ಒಂದ್ಸಲ ಯುಕ್ರೇನ್ ಆರೋಪಿಸ್ತು. ಇದರ ಮಧ್ಯೆನೇ ಶಿಫ್ಟಿಂಗ್​ ಕೆಲಸ ಮುಂದುವರಿದಿದೆ. 30 ಬಸ್​, ಎಂಟು ಟ್ರಕ್​ಗಳನ್ನ ಇದಕ್ಕೆ ಬಳಸಿಕೊಳ್ಳಲಾಯ್ತು. ಸದ್ಯ ಸುಮಾರು 3 ಲಕ್ಷ ಜನರಿರೋ ಮಾರಿಯೋಪೋಲ್​​ನಲ್ಲಿ ಕಳೆದ ಕೆಲ ದಿನಗಳಿಂದ ಕರೆಂಟ್​, ನೀರು, ಆಹಾರ ಇಲ್ಲದೆ ಜನ ಕಂಗಾಲಾಗಿದ್ರು. ಒಂದು ಮಗು ಅಂತೂ ಡಿಹೈಡ್ರೇಷನ್​​ನಿಂದ ಪ್ರಾಣ ಕಳ್ಕೊಂಡಿತ್ತು. 2022ನೇ ಇಸವಿಯಲ್ಲಿ, ಡಿಹೈಡ್ರೇಷನ್​ನಿಂದ ಸಾವಾಗುತ್ತೆ ಅಂದ್ರೆ ಪರಿಸ್ಥಿತಿ ಹೇಗಿದೆ, ರಷ್ಯಾದ ದಾಳಿ ಹೇಗಿದೆ ಅನ್ನೋದನ್ನ ಜಗತ್ತು ಅರ್ಥ ಮಾಡ್ಕೊಬೇಕು ಅಂತ ಯುಕ್ರೇನ್ ಅಧ್ಯಕ್ಷ ಝೆಲೆನ್ಸ್​ಕಿ ಹೇಳಿದ್ದಾರೆ. ಮತ್ತೊಂದುಕಡೆ ಇರ್ಪಿನ್​ ನಗರದಿಂದ ಕಿಯವ್​ ನಗರಕ್ಕೆ ಜನರನ್ನ ಶಿಫ್ಟ್ ಮಾಡೋ ಪ್ರಕ್ರಿಯೆ ಆರಂಭವಾಗಿದೆ.

ಸುಮಿ ನಗರದಲ್ಲಿ ಸಿಲುಕಿದ್ದ ಭಾರತದ ವಿಪಿನ್‌ ಯಾದವ್‌ ಅನ್ನೋ ವಿದ್ಯಾರ್ಥಿ ನಾಲ್ಕು-ಐದು ದಿನಗಳಿಂದ ಆಹಾರ ಇಲ್ಲದೇ ಕೇವಲ ಪ್ರೋಟಿನ್‌ ಪೌಡರ್‌ ತಿಂದುಕೊಂಡು ಬದುಕಿದ್ದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ನಾನು ಮತ್ತು ನನ್ನ ಫ್ರೆಂಡ್ಸ್​ ನೀರು ಇಲ್ಲದಿದ್ದಾಗ ಹಿಮವನ್ನ ಕರಗಿಸಿ ಕುಡೀತಾ ಇದ್ವಿ ಅಂತ ಹೇಳಿದ್ದಾನೆ.

ಯುಕ್ರೇನ್​​ನ ಮೈಕೋಲೈವ್​ ಬಂದರಿನಲ್ಲಿ ಸಿಲುಕಿದ್ದ 52 ಭಾರತೀಯ ನಾವಿಕರನ್ನ ಸ್ಥಳಾಂತರಿಸಲಾಗಿದೆ. ಇದಲ್ಲದೆ ಮೂವರು ಸಿರಿಯನ್​ ಮತ್ತು ಇಬ್ಬರು ಲೆಬನೀಸ್​ ಪ್ರಜೆಗಳನ್ನ ಕೂಡ ರಕ್ಷಿಸಿದ್ದೀವಿ ಅಂತ ಯುಕ್ರೇನ್​​ನಲ್ಲಿರೋ ಭಾರತದ ರಾಯಭಾರ ಕಚೇರಿ ತಿಳಿಸಿದೆ. ಮಾರ್ಗದ ನಿರ್ಬಂಧದಿಂದಾಗಿ ಉಳಿದಿರೋ 23 ನಾವಿಕರನ್ನ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ, ಅದಕ್ಕೆ ಪ್ರಯತ್ನ ಮುಂದುವರಿಸ್ತೀವಿ ಅಂತಾನೂ ತಿಳಿಸಿದೆ.

-masthmagaa.com

Contact Us for Advertisement

Leave a Reply