“ಅಂಬರೀಷ್‌ ಸ್ವಾಭಿಮಾನಿ ಸುಮಲತಾ ರೀತಿ ಬೇಡಿಕೊಳ್ಳಲಿಲ್ಲ” : ಚೇತನ್‌ ಅಹಿಂಸಾ

masthmagaa.com:

ಒಂದು ಕಾಲದ ನಟ , ಸೋ ಕಾಲ್ಡ್‌ ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಈ ನಟ, ನಿತ್ಯದ ಬೆಳವಣಿಗೆಗಳ ಬಗ್ಗೆ ಒಂದಿಲ್ಲೊಂದು ಕಮೆಂಟ್‌ ಮಾಡಿ ಹಿಗ್ಗಾ ಮುಗ್ಗಾ ಟ್ರೋಲ್‌ ಆಗ್ತಾರೆ, ಜೈಲಿಗೆ ಹೋಗಿ ಬೇಲ್‌ ಮೇಲ್‌ ವಾಪಸ್‌ ಬರ್ತಾರೆ. ಇದು ಅವರಿಗೆ ಒಂದ್‌ರೀತಿ ರೋಟಿನ್‌ ಆಗ್ಬಿಟ್ಟಿದೆ. ಈ ಹಿಂದೆ ರಾಹುಲ್‌ ಗಾಂಧಿ ಬಗ್ಗೆ, ಬಿಜೆಪಿ ಸರಕಾರದ ಬಗ್ಗೆ ಕೊನೆಗೆ ಇತ್ತೀಚೆಗೆ ಹಿಂದೂ ಧರ್ಮದ ಬಗ್ಗೆಯೂ ಕೂಡ ಮಾತನಾಡಿ ಜೈಲಿಗೆ ಹೋಗಿ ಬೇಲ್‌ ಮೂಲಕ ಹೊರ ಬಂದಿದ್ದ ಇವರು ಸುಮಲಾತಾ ಅಂಬರೀಷ್‌ ಅವರ ಬಗ್ಗೆ ಮಾತನಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಮಾರ್ಚ್‌28 ರಂದು ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ ಸ್ಮಾರಕ ಲೋಕಾರ್ಪಣೆಗೊಂಡಿದೆ. ಈ ಉದ್ಘಾಟನೆಯ ಸಂದರ್ಭದಲ್ಲಿ ಸಂಸದೆ ಸುಮಲತಾ ಅವರು, ‘ಅಂಬರೀಶ್‌ ಬದುಕಿದ್ದ ದಿನದವರೆಗೂ ಯಾರ ಬಳಿಯೂ ಕೈ ಚಾಚಿದವರಲ್ಲ’ ಎಂದು ಭಾವುಕವಾಗಿ ಹೇಳಿಕೊಂಡಿದ್ದರು. ಇದೀಗ ಅದೇ ವಿಚಾರವನ್ನ ಮುಂದಿಟ್ಟುಕೊಂಡು ಚೇತನ್‌ ಟ್ವಿಟ್ಟರ್‌ನಲ್ಲಿ ಸುಮಲತಾರಿಗೆ ಟೀಕಿಸಿದ್ದಾರೆ.

ಅಂಬಿ ಸ್ಮಾರಕದ ವಿಚಾರವಾಗಿ ಸುಮಲತಾ ಕಾರ್ಯಕ್ರಮದಲ್ಲಿ “ಅಂಬರೀಷ್‌ ಅವರು ಇಲ್ಲಿಯ ತನಕ ಯಾರ ಬಳಿಯೂ ಕೈ ಚಾಚಿದಂತ ವ್ಯಕ್ತಿ ಅಲ್ಲ, ಅವರು ಯಾವಾಗಲೂ ಜನರಿಗೆ ಇಷ್ಟ ಆಗೋದು ಅವರ ನೇರ ನುಡಿಗಳಿಂದ. ನಟನಾಗಿದ್ದಾಗಿನಿಂದ ಹಿಡಿದು ರಾಜಕಾರಣಿಯಾಗುವವರೆಗೂ ಅವರು ತಮ್ಮ ನೇರ ನುಡಿಗಳನ್ನ ಬಿಟ್ಟುಕೊಟ್ಟಿಲ್ಲ. ಆತ್ಮೀಯರಿಗೆ ಪ್ರೀತಿಯಿಂದ ಬೈಯ್ಯುತ್ತಿದ್ದ ಅಂಬಿಯನ್ನ ಪ್ರೀತಿಸುವವರು ತುಂಬಾ ಜನ ಇದ್ದಾರೆ. ಕಷ್ಟ ಅಂತ ಮನೆಗೆ ಬಂದವರನ್ನ ಯಾವತ್ತು ಬರಿಗೈಲಿ ಅಂಬಿ ಕಳಿಸಲಿಲ್ಲ, ಯಾವತ್ತು ಕಷ್ಟ ಅಂತ ಬೇರೆಯವರ ಮುಂದೆ ಕೈಚಾಚಿದವರಲ್ಲ” ಎಂದು ಹೇಳುತ್ತಾ ಭಾವುಕರಾಗಿದ್ದರು.

ಸುಮಲತಾ ಅವರ ಮಾತುಗಳಿಗೆ ಚೇತನ್‌ ಪ್ರತಿಕ್ರಿಯಿಸಿ “‘ಅಂಬರೀಶ್ ಯಾರನ್ನೂ ಕೈ ಚಾಚಿದವರಲ್ಲ. ಇದು ಸುಮಲತಾ ಅವರ ಹೇಳಿಕೆ. ಹಾಗಂತ ಬರೆದು ನಂತರ ಬ್ರಾಕೇಟ್‌ನಲ್ಲಿ ಅನಗತ್ಯ ಅಂಬರೀಶ್ ಸ್ಮಾರಕಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ & 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತ 23.4 ಕೋಟಿ ರೂ.ಗಳನ್ನು ಖರ್ಚು ಮಾಡೋಕೆ ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ?” ಅಂತ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

ಅಲ್ಲದೇ, ಈ ಹಿಂದೆ ವಿಷ್ಣುವರ್ಧನ್‌ ಅವರ ಸ್ಮಾರಕ ಲೋಕಾರ್ಪಣೆ ಆದಾಗ್ಲೂ ಸಹ ಇದೇ ರೀತಿ ಹೇಳಿಕೆಯನ್ನ ಚೇತನ್‌ ಕೊಟ್ಟಿದ್ದರು. ”ಸಿನಿಮಾ ಸ್ಟಾರ್‌ಗಳ ಸ್ಮಾರಕಗಳಿಗೆ ಕರ್ನಾಟಕದ ಸಾರ್ವಜನಿಕರ ಜಾಗ, ಹಣ, ಮತ್ತು ಸಂಪನ್ಮೂಲಗಳನ್ನು ಬಳಸಬಾರದು. ಹಲವಾರು ಕನ್ನಡಿಗರಂತೆ ಕೆಲಸ ಮಾಡಿ ಸಂಪಾದಿಸುವ ಚಲನಚಿತ್ರ ಸ್ಟಾರ್‌ಗಳು, ಈಗಾಗಲೇ ನಮ್ಮ ಸಮಾಜದಲ್ಲಿ ಅನಗತ್ಯ ಪ್ರಚಾರ ಮತ್ತು ತಮ್ಮ ಚಲನಚಿತ್ರಗಳ ಯಶಸ್ಸಿಗೆ ಅನಗತ್ಯವಾಗಿ ಗಮನ ಪಡೆಯುತ್ತಾರೆ. ಕರ್ನಾಟಕದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಸ್ತುಸಂಗ್ರಹಾಲಯಗಳಿಗೆ ಸ್ಮಾರಕ ಭೂಮಿಗಳು ಒಳ್ಳೆಯ ಉಪಯೋಗಕ್ಕೆ ಬರುತ್ತವೆ” ಎಂದು ಬರೆದುಕೊಂಡಿದ್ದರು, ಚೇತನ್‌ ನೇರವಾಗಿ ಡಾ. ವಿಷ್ಣುವರ್ಧನ್‌ ಸ್ಮಾರಕದ ಹೆಸರು ಹೇಳದಿದ್ದರೂ, ಅವರು ಕಾಮೆಂಟ್‌ ಮಾಡಿರುವುದು ಉದ್ಘಾಟನೆಯಾದ ವಿಷ್ಣು ಸ್ಮಾರಕದ ಬಗ್ಗೆ ಅನ್ನೋದು ತಿಳಿಯುತ್ತಿತ್ತು.

ಇದು ಸಾಲದು ಅಂತ ಚಿತ್ರಪ್ರೇಮಿಗಳು, ಸೆಲೆಬ್ರಿಟಿಗಳು ಬಹಳ ಮೆಚ್ಚಿ ನೋಡಿದ್ದ ‘ಕಾಂತಾರ’ ಚಿತ್ರದ ಬಗ್ಗೆ ಕೂಡಾ ನಟ ಚೇತನ್‌ ಕಮೆಂಟ್‌ ಮಾಡಿದ್ದರು.”ನಮ್ಮ ಕನ್ನಡದ ಚಲನಚಿತ್ರ ‘ಕಾಂತಾರ’ ಚಿತ್ರ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲ ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಸಿನಿಮಾದಲ್ಲಿ ತೋರಿಸಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ನಲಿಕೆ/ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವಂತದ್ದು. ಮೂಲನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲಾಗಲಿ, ಅದರಾಚೆಯಾಗಲಿ, ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ” ಎಂದು ಹೇಳಿದ್ದರು.

ಸದ್ಯಕ್ಕೆ ಸುಮಲತಾ ಅಂಬರೀಷ್ ವಿರುದ್ಧ ನೀಡಿದ ಅವಹೇಳನಕಾರಿ ಹೇಳಿಕೆಗೆ ಸಂಬಂಧಪಟ್ಟಂತೆ ಇಂದು ಮಧ್ಯಾಹ್ನ 2 ಗಂಟೆಗೆ ಸುಮಲತಾ ಅಂಬರೀಶ್ ಬಗ್ಗೆ ಚೇತನ್ ಅಹಿಂಸಾ ನೀಡಿರುವ ಹೇಳಿಕೆಯನ್ನು ಖಂಡಿಸಿ, ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ ಮ ಹರೀಶ್ ಮತ್ತು ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಪತ್ರಿಕಾ ಗೋಷ್ಠಿಯನ್ನ ಏರ್ಪಡಿಸಿದ್ದು ಚೇತನ್ ಅಹಿಂಸಾ ಮೇಲೆ ಯಾವ ರೀತಿ ಆಕ್ಷನ್ ತೆಗೆದುಕೊಳ್ಳಬಹುದು ಕಾದು ನೋಡಬೇಕಾಗಿದೆ.

-masthmagaa.com

Contact Us for Advertisement

Leave a Reply