ನಾನು ಗಾಂಧೀಜಿ, ನೆಹರು ಹೆಸರು ಹೇಳಿದ್ರೆ ತೋರಿಸಿ ನೋಡೋಣ: ಅನಂತ ಕುಮಾರ್ ಹೆಗಡೆ ಸವಾಲ್

ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟ ಒಂದು ದೊಡ್ಡ ಡ್ರಾಮಾ ಎಂದಿದ್ದ ವಿವಾದದ ಹೇಳಿಕೆ ವಿಚಾರವಾಗಿ ಅನಂತ ಕುಮಾರ್ ಹೆಗಡೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಿರುವ ಅವರು, ಮಾಧ್ಯಮಗಳಲ್ಲಿ ತೋರಿಸುತ್ತಿರೋದೆಲ್ಲಾ ದೊಡ್ಡ ಸುಳ್ಳು. ನಾನು ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ನಾನು ನನ್ನ ಹೇಳಿಕೆಯಲ್ಲಿ ಯಾವುದೇ ರಾಜಕೀಯ ಪಕ್ಷವನ್ನಾಗಲೀ, ಗಾಂಧೀಜಿಯವರ ಹೆಸರನ್ನಾಗಲೀ ಉಲ್ಲೇಖಿಸಿಲ್ಲ. ನಾನು ಗಾಂಧೀಜಿ, ನೆಹರು ಅಥವಾ ಬೇರೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಉಲ್ಲೇಖಿಸಲೇ ಇಲ್ಲ.  ಒಂದು ವೇಳೆ ನಾನು ಯಾವುದೇ ಹೆಸರನ್ನು ಉಲ್ಲೇಖಿಸಿದ್ರೆ ತೋರಿಸಿ ನೋಡೋಣ ಅಂತ ಸವಾಲ್ ಹಾಕಿದ್ಧಾರೆ.

ಶನಿವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಂತ ಕುಮಾರ್ ಹೆಗಡೆ, ಮಹಾತ್ಮ ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಹೋರಾಟವನ್ನು ಡ್ರಾಮಾ ಎಂದು ಕರೆದಿದ್ರು. ಅಲ್ಲದೆ ಇತಿಹಾಸ ಓದುವಾಗ ಇಂಥಹವರನ್ನು ಮಹಾತ್ಮ ಎಂದು ಕರೆದಿರೋದನ್ನು ಕಂಡು ರಕ್ತ ಕುದಿಯಿತು. ಸ್ವಾತಂತ್ರ್ಯದ ಇಡೀ ಆಂದೋಲನವನ್ನು ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದೊಂದಿಗೆ ನಡೆಸಲಾಯ್ತು. ನಾಯಕರು ಎಂದು ಕರೆಯಲ್ಪಡುವ ಇವರ್ಯಾರಿಗೂ ಪೊಲೀಸರು ಒಮ್ಮೆಯೂ ಹೊಡೆದಿಲ್ಲ. ಅವರ ಸ್ವಾತಂತ್ರ್ಯ ಹೋರಾಟವೇ ಒಂದು ದೊಡ್ಡ ನಾಟಕವಾಗಿತ್ತು. ಈ ನಾಯಕರು ಬ್ರಿಟಿಷರ ಒಪ್ಪಿಗೆಯ ಮೇರೆಗೆ ಈ ಹೋರಾಟದ ನಾಟಕವಾಡಿದ್ದರು. ಇದೊಂದು ಸ್ವಾತಂತ್ರ್ಯ ಹೋರಾಟದ ಒಪ್ಪಂದವಾಗಿತ್ತು. ಕಾಂಗ್ರೆಸ್ ಬೆಂಬಲಿಗರು ಉಪವಾಸ ಮತ್ತು ಸತ್ಯಾಗ್ರಹದಿಂದಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಅಂತ ಹೇಳ್ತಾರೆ. ಆದ್ರೆ ಇದು ನಿಜವಲ್ಲ. ಸತ್ಯಾಗ್ರಹದಿಂದಾಗಿ ಬ್ರಿಟಿಷರು ದೇಶವನ್ನು ತೊರೆಯಲಿಲ್ಲ. ಬ್ರಿಟಿಷರು ಹತಾಶೆಯಿಂದ ಸ್ವಾತಂತ್ರ್ಯವನ್ನು ನೀಡಿದರು. ಇತಿಹಾಸವನ್ನು ಓದುವಾಗ ಎಂತೆಂಥಾ ಜನ ಮಹಾತ್ಮರಾಗಿದ್ದಾರೆ ಅಂತ ರಕ್ತ ಕುದಿಯುತ್ತೆ ಅಂತ ಹೇಳಿದ್ದರು. ಇದಕ್ಕೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ ಅಂತ ಕೂಡ ಬಿಜೆಪಿಯ ಮೂಲಗಳು ತಿಳಿಸಿದ್ದವು.

 

Contact Us for Advertisement

Leave a Reply