ಚೀನಾ ಸೇನೆಗೆ Z-20 ಯುದ್ಧ ಹೆಲಿಕಾಪ್ಟರ್‌! ಭಾರತ, ತೈವಾನ್‌ಗೆ ಅಪಾಯ!

masthmagaa.com:

ತನ್ನ ರಕ್ಷಣೆಗಿಂತ ಹೆಚ್ಚು ಸದಾ ಬೇರೆ ದೇಶಗಳಿಗೆ ತೊಂದರೆ ಕೊಡೋಕೆ ಮಿಲಿಟರಿ ಬಲಪಡಿಸೋ ಚೀನಾ ಈಗ ಭಾರತ ಮತ್ತು ತೈವಾನ್‌ಗೆ ಉಪಟಳ ನೀಡೋಕೆ ಹೆಲಿಕಾಪ್ಟರ್‌ ರೆಡಿ ಮಾಡಿದೆ. Z-20 ಅನ್ನೋ ಭಾರೀ ತೂಕದ ಯುದ್ಧ ಹೆಲಿಕಾಪ್ಟರ್‌ನ್ನ ತನ್ನ ಸೇನೆಗೆ ಪರಿಚಯಿಸಿದೆ. ಇದುವರೆಗೆ ಚೀನಾ ಸೇನೆಯಲ್ಲಿರೋ ಬಲಿಷ್ಠವಾದ ಯುದ್ಧ ಹೆಲಿಕಾಪ್ಟರ್‌ Z-10 ಮತ್ತು Z-19 ಹೆಲಿಕಾಪ್ಟರ್‌ಗಳಿಂದ ಹೆಚ್ಚು ಸಾಮರ್ಥ್ಯ ಹೊಂದಿರೋ ಹೆಲಿಕಾಪ್ಟರ್‌ ಈ ʻZ-20ʼ. ಬರೋಬ್ಬರಿ 10 ಟನ್‌ಗಳಷ್ಟು ಯುದ್ಧ ಸಾಮಗ್ರಿಗಳನ್ನ ಹೊತ್ತೊಯ್ಯೋ ಕೆಪಾಸಿಟಿ ಇದಕ್ಕಿದೆ. ಚೀನಾದ ಏರೋಸ್ಪೇಸ್‌ ಕಂಪನಿ ಚಾಂಗ್ಹೇ ಏರ್‌ಕ್ರಾಫ್ಟ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್‌ (Changhe Aircraft Industries Corporation) ಇದನ್ನ ಡೆವೆಲಪ್‌ ಮಾಡಿದೆ. ಇದು ಅಮೆರಿಕ ಸೇನೆಯಲ್ಲಿರೋ ಅಡ್ವಾನ್ಸ್ಡ್‌ ಬೋಯಿಂಗ್‌ AH-64 ಅಪಾಚೆ ಯುದ್ಧ ಹೆಲಿಕಾಪ್ಟರ್‌ನಂತೆ ಹೋಲಿಸುತ್ತೆ. ಸೋ ಅಮೆರಿಕದ ಯುದ್ಧ ಹೆಲಿಕಾಪ್ಟರ್‌ಗೂ ಟಕ್ಕರ್‌ ಕೊಡೋ ಉದ್ದೇಶವನ್ನೂ ಈ Z-20 ಯುದ್ಧ ಹೆಲಿಕಾಪ್ಟರ್‌ ಹೊಂದಿದೆ ಎನ್ನಲಾಗಿದೆ. ಇನ್ನು ಪ್ರಮುಖವಾಗಿ ಭಾರತ ಮತ್ತು ತೈವಾನ್‌ ಜೊತೆಗಿನ ಸಂಘರ್ಷದಲ್ಲಿ ಈ Z-20 ಯುದ್ಧ ಹೆಲಿಕಾಪ್ಟರ್‌ ಚೀನಾಗೆ ಸಹಾಯವಾಗಲಿದೆ ಅಂತ ಚೀನಾ ಮೀಡಿಯಾಗಳು ರಿಪೋರ್ಟ್‌ ಮಾಡಿವೆ. ಈ ಯುದ್ಧ ಹೆಲಿಕಾಪ್ಟರ್‌ ಅತೀ ಎತ್ತರದಲ್ಲೂ ಯುದ್ಧ ಮಾಡೋ ಸಾಮರ್ಥ್ಯ ಹೊಂದಿದ್ದು…ಭಾರತ ಮತ್ತು ಚೀನಾ ಗಡಿಭಾಗದಲ್ಲಿರೋ ಪರ್ವತ ಪ್ರದೇಶಗಳಲ್ಲಿ ಉತ್ತಮ ಕಾರ್ಯಚರಣೆ ನಡೆಸಲಿದೆ. ಇದ್ರ ನಿಯೋಜನೆಯಿಂದ ಭಾರತಕ್ಕೆ ಸಮಸ್ಯೆಯಾಗಲಿದೆ ಅಂತ ವಿಶ್ಲೇಷಿಸಲಾಗ್ತಿದೆ. ಅಲ್ದೇ ವಿವಾದಿತ ತೈವಾನ್‌ ಜಲಸಂಧಿಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸೋಕೂ ಸಾಧ್ಯವಿದೆ ಅಂತೇಳಾಗ್ತಿದೆ.

-masthmagaa.com

Contact Us for Advertisement

Leave a Reply