ರಾಜ್ಯದಲ್ಲಿ ಮುಂದುವರೆದ ಮಹಾಮಳೆ!

masthmagaa.com:

ರಾಜ್ಯದಲ್ಲಿ ಸುರೀತಿರೋ ಮಹಾಮಳೆ ಹಾಗೇಯೇ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ ರಾಮನಗರದಲ್ಲಿ ಅತಿಹೆಚ್ಚು ಅಂದ್ರೆ 132 ಮಿಲಿಮೀಟರ್‌ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡು ಸೇರಿದಂತೆ ಬಹುತೇಕ ಕಡೆ ಸಾಧರಣ ಮಳೆ, ಇನ್ನು ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಕಲಬುರಗಿ, ವಿಜಯಪುರ, ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಧಾರವಾಡ, ಗದಗ, ಹಾವೇರಿ, ದಾವಣಗೆರೆ, ಉಡುಪಿ, ದಕ್ಷಿಣಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಘೋಷಿಸಿದೆ.  ಇನ್ನು ರಾಜ್ಯದ ಹಲವೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆರೆಗಳು ಒಡೆಯದಂತೆ, ಏರಿ ಬಿರುಕು ಬಿಡದಂತೆ ಎಚ್ಚರಿಕೆ ವಹಿಸಬೇಕು. ಕೆರೆಗಳ ಸಮೀಕ್ಷೆ ನಡೆಸಿ ಅಗತ್ಯವಿರುವ ಕಡೆ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇನ್ನು ಮಳೆಯ ಅಬ್ಬರಕ್ಕೆ ರಾಜ್ಯದ ಅನೇಕ ಜಿಲ್ಲೆಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿವೆ. ರಾಮನಗರದ ಹಲವು ಗ್ರಾಮಗಳು ಅಧಿಕ ಮಳೆಯಿಂದಾಗಿ ಜಲಾವೃತಗೊಂಡಿವೆ. ಕೆಲವು ಕಡೆ ಪ್ರವಾಹದ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಹಾನಿಗೀಡಾದ ಪ್ರದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ, ಕಂದಾಯ ಸಚಿವ ಆರ್‌ ಅಶೋಕ್‌, ಅಶ್ವಥ್‌ ನಾರಾಯಣ ಸೇರಿದಂತೆ ಹಲವು ನಾಯಕರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ಕರೆಯೊಂದು ಒಡೆದು100 ರಿಂದ 150 ಮನೆಗಳಿಗೆ ಹಾನಿಯಾಗಿದೆ ಅಂತ ಹೇಳಲಾಗಿದೆ.ಅತ್ತ ಚಾಮರಾಜನಗರದಲ್ಲೂ ಭಾನುವಾರದಿಂದ ಸುರೀತಿರೋ ಧಾರಾಕಾರ ಮಳೆಗೆ ಜಿಲ್ಲೆಯ ಹಲವು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿವೆ. ಇನ್ನು ನೆರೆಯ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡು, ಹಾಗೂ ಆಂಧ್ರ ಪ್ರದೇಶಗಳ ಬಹುತೇಕ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್‌ ಜಾರಿ ಮಾಡಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಹಳ್ಳಿಯೊಂದರಲ್ಲಿ ಮನೆ ಮೇಲೆ ಭೂಕುಸಿತ ಉಂಟಾಗಿ ಒಂದೇ ಕುಟುಂಬದ ಐವರು ಪ್ರಾಣ ಕಳೆದುಕೊಂಡಿದ್ದಾರೆ.

-asthmagaa.com

Contact Us for Advertisement

Leave a Reply