ಪ್ರತಿಯೊಬ್ಬರಿಗೂ ಫ್ರೀ ಕೊರೋನಾ ಲಸಿಕೆ ಕೊಡಿ: ದೆಹಲಿ ಸಿಎಂ ಒತ್ತಾಯ

masthmagaa.com:

ದೇಶದ ಎಲ್ಲಾ ಜನತೆಗೂ ಕೊರೋನಾ ಲಸಿಕೆಯನ್ನ ಉಚಿತವಾಗಿ ಕೊಡಬೇಕು ಅಂತ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೇಂದ್ರ ಸರ್ಕಾರಕ್ಕೆ​ ಮತ್ತೊಮ್ಮೆ ಆಗ್ರಹಿಸಿದ್ದಾರೆ. ಒಂದ್ವೇಳೆ ಕೇಂದ್ರ ಸರ್ಕಾರ ಹಾಗೇನಾದ್ರೂ ಮಾಡದಿದ್ರೆ ಅಥವಾ ಅವಶ್ಯಕತೆಬಿದ್ರೆ ದೆಹಲಿ ಜನತೆಗೆ ಉಚಿತವಾಗಿ ಲಸಿಕೆ ಹಾಕುತ್ತೇವೆ ಅಂತ ಅವರು ಹೇಳಿದ್ದಾರೆ. ಇದರ ಜೊತೆಗೆ ಲಸಿಕೆ ಬಗ್ಗೆ ಸುಳ್ಳು ಸುದ್ದಿಗಳನ್ನ ಹಬ್ಬಿಸಬೇಡಿ ಅಂತಾನೂ ಮನವಿ ಮಾಡಿದ್ದಾರೆ. ಅಂದ್ಹಾಗೆ ದೇಶದಲ್ಲಿ ಮೊದಲ ಹಂತದಲ್ಲಿ ಕೊರೋನಾ ಲಸಿಕೆಯನ್ನ ಉಚಿತವಾಗಿ ಕೊಡ್ತೀವಿ ಅಂತ ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಆದ್ರೆ ಮುಂದಿನ ಹಂತದಲ್ಲಿ, ಅಂದ್ರೆ ಜನಸಾಮಾನ್ಯರಿಗೆ ಲಸಿಕೆ ಫ್ರೀಯಾಗಿ ಸಿಗುತ್ತಾ ಅನ್ನೋದನ್ನ ಅಧಿಕೃತವಾಗಿ ಇನ್ನೂ ಹೇಳಿಲ್ಲ. ಹೀಗಾಗಿ ದೆಹಲಿ ಸೇರಿದಂತೆ ಕೆಲವೊಂದು ರಾಜ್ಯಗಳು ಜನರಿಗೆ ಫ್ರೀಯಾಗಿ ಲಸಿಕೆ ಕೊಡ್ತೀವಿ ಅಂತ ಘೋಷಣೆ ಮಾಡಿವೆ. ಅದ್ರಲ್ಲಿ ಈ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರೋ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಕೂಡ ಸೇರಿದೆ.

ಅಂದ್ಹಾಗೆ ಸೀರಂ ಇನ್​ಸ್ಟಿಟ್ಯೂಟ್​ನ ‘ಕೋವಿಶೀಲ್ಡ್​’ ಲಸಿಕೆಯನ್ನ ಕೇಂದ್ರ ಸರ್ಕಾರಕ್ಕೆ ಒಂದು ಡೋಸ್​ಗೆ 200 ರೂಪಾಯಿಯಂತೆ ಕೊಡ್ತೀವಿ, ಖಾಸಗಿ ಮಾರುಕಟ್ಟೆಗಾದ್ರೆ 1,000 ರೂಪಾಯಿ ಅಂತ ನಿನ್ನೆಯಷ್ಟೇ ಸೀರಂ ಕಂಪನಿಯ ಸಿಇಒ ಮತ್ತು ಮಾಲೀಕ ಅಡಾರ್ ಪೂನಾವಾಲಾ ಹೇಳಿದ್ರು. ಭಾರತ್​ ಬಯೋಟೆಕ್​ನ ‘ಕೋವಾಕ್ಸಿನ್​’ ಲಸಿಕೆಯ ಒಂದು ಡೋಸ್​ಗೆ 295 ರೂಪಾಯಿ ಫಿಕ್ಸ್ ಮಾಡಲಾಗಿದೆ. ಇದು ಸರ್ಕಾರಕ್ಕೆ ನೀಡಿರುವ ಸ್ಪೆಷಲ್ ಪ್ರೈಸ್​. ಖಾಸಗಿ ಮಾರುಕಟ್ಟೆಯಲ್ಲಿ ಕೋವಾಕ್ಸಿನ್ ಲಸಿಕೆಯ ರೇಟು ಎಷ್ಟು ಅನ್ನೋದು ಇನ್ನೂ ಗೊತ್ತಾಗಿಲ್ಲ.

-masthmagaa.com

Contact Us for Advertisement

Leave a Reply