ಅಮೆರಿಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಕೇಸ್​​ನ ತೀರ್ಪು ಪ್ರಕಟ

masthmagaa.com:

ಕಳೆದ ವರ್ಷ ಅಮೆರಿಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಜಾರ್ಜ್​ ಫ್ಲಾಯ್ಡ್​ ಸಾವಿನ ಪ್ರಕರಣದ ತೀರ್ಪು ಬಂದಿದೆ. ಈ ಪ್ರಕರಣದಲ್ಲಿ ಅಮೆರಿಕದ ಮಿನಿಯಾಪೊಲೀಸ್​​ನ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ತಪ್ಪಿಕಸ್ಥ ಅಂತ ಕೋರ್ಟ್ ತೀರ್ಪು ನೀಡಿದೆ. 45 ಸಾಕ್ಷ್ಯಗಳನ್ನ ಪರಿಗಣಿಸಿ 12 ಜಡ್ಜ್​ಗಳ ಪೀಠ ಈ ತೀರ್ಪು ನೀಡಿದೆ. ಅಂದ್ಹಾಗೆ ಕಳೆದ ವರ್ಷದ ಮೇ 25ರಂದು ಶ್ವೇತ ವರ್ಣಿಯ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಮತ್ತು ಮೂವರು ಪೊಲೀಸ್ ಅಧಿಕಾರಿಗಳು ಕಪ್ಪು ವರ್ಣಿಯ ಜಾರ್ಜ್​ ಫ್ಲಾಯ್ಡ್​​ನನ್ನ ಅರೆಸ್ಟ್ ಮಾಡೋಕೆ ಮುಂದಾಗ್ತಾರೆ. ಇದಕ್ಕೆ ಕಾರಣ, ಅಂಗಡಿಯೊಂದರಲ್ಲಿ ಸಿಗರೆಟ್​ ತಗೊಂಡಿದ್ದ ಜಾರ್ಜ್​ ಫ್ಲಾಯ್ಡ್​ ಅದಕ್ಕೆ 20 ಡಾಲರ್​ನ ನಕಲಿ ನೋಟನ್ನ ನೀಡಿದ್ರು ಅನ್ನೋದು. ತಕ್ಷಣ ಸ್ಥಳಕ್ಕೆ ಬಂದ ಡೆರೆಕ್ ಚೌವಿನ್ ಮತ್ತು ಅವರ ತಂಡ ಜಾರ್ಜ್​ ಫ್ಲಾಯ್ಡ್ ಬಂಧಿಸಲು ಮುಂದಾಗುತ್ತೆ. ಈ ವೇಳೆ ಡೆರೆಕ್ ಚೌವಿನ್ ಅಂತೂ ಫ್ಲಾಯ್ಡ್ ಅವರ ಕುತ್ತಿಗೆ ಮೇಲೆ ತಮ್ಮ ಕಾಲನ್ನ ಒತ್ತಿ ಇಟ್ಕೋತಾರೆ. ಈ ವೇಳೆ ಜಾರ್ಜ್​ ಫ್ಲಾಯ್ಡ್​ ‘ಐ ಕಾಂಟ್ ಬ್ರೀದ್’.. ನಂಗೆ ಉಸಿರಾಡೋಕೆ ಆಗ್ತಿಲ್ಲ ದಯವಿಟ್ಟು ಕಾಲನ್ನ ತೆಗೀರಿ ಅಂತ ಗೋಗರಿಯುತ್ತಾರೆ. ಆದ್ರೂ ಡೆರೆಕ್ ಚೌವಿನ್​ ಬಿಡೋದೆ ಇಲ್ಲ. ನೋಡ ನೋಡ್ತಿದ್ದಂತೇ ಜಾರ್ಜ್​ ಫ್ಲಾಯ್ಡ್​ ಮಾತಾಡೋದನ್ನೇ ನಿಲ್ಲಿಸಿಬಿಡ್ತಾರೆ. ಅಂದ್ರೆ ಅವರ ಉಸಿರು ನಿಂತು ಹೋಗಿರುತ್ತೆ.

ಈ ಎಲ್ಲಾ ದೃಶ್ಯಗಳು ಸ್ಥಳೀಯರ ಮೊಬೈಲ್​ ಮತ್ತು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಅಮೆರಿಕದಲ್ಲಿ ಬಿಳಿಯರಿಂದ ಕಪ್ಪು ವರ್ಣಿಯರ ಮೇಲಿನ ದಬ್ಬಾಳಿಕೆ ವಿರುದ್ಧ ಭಾರಿ ಪ್ರತಿಭಟನೆ ನಡೆದ್ವು. ಐ ಕಾಂಟ್ ಬ್ರೀದ್​ ಸೇರಿದಂತೆ ಜಾರ್ಜ್​ ಫ್ಲಾಯ್ಡ್ ಹೆಸರಿನಲ್ಲಿ ಹಲವು ಅಭಿಯಾನಗಳು ಆರಂಭವಾದ್ವು. ಅಮೆರಿಕ ಮಾತ್ರವಲ್ಲದೆ ಜಗತ್ತಿನ ವಿವಿಧ ಭಾಗಗಳಿಗೆ ಇದು ವ್ಯಾಪಿಸಿತು. ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಈ ಅಭಿಯಾನ, ಪ್ರತಿಭಟನೆಗೆ ದನಿಗೂಡಿಸಿದ್ರು. ಇದರ ಬೆನ್ನಲ್ಲೇ ಡೆರೆಕ್ ಚೌವಿನ್ ಮತ್ತು ಇತರ ಮೂರು ಅಧಿಕಾರಿಗಳನ್ನ ಕೆಲಸದಿಂದ ತೆಗೆದುಹಾಕಲಾಗುತ್ತೆ. ಡೆರೆಕ್ ಚೌವಿನ್​ ಅರೆಸ್ಟ್ ಆಗ್ತಾರೆ. ಬಳಿಕ ಬೇಲ್​ ಪಡ್ಕೊಂಡು ಹೊರ ಬರ್ತಾರೆ. ಇದೀಗ ಈ ಪ್ರಕರಣದಲ್ಲಿ ಅವರು ತಪ್ಪಿಕಸ್ಥ ಅಂತ ಕೋರ್ಟ್​ ತೀರ್ಪು ನೀಡಿದೆ. ಅವರಿಗೆ 12ರಿಂದ 40 ವರ್ಷ ಜೈಲು ಶಿಕ್ಷೆ ಆಗಬಹುದು. ಕೋರ್ಟ್​ ತೀರ್ಪನ್ನ ಸ್ವಾಗತಿಸಿರೋ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, ಇದೊಂದು ಆರಂಭ ಅಂತ ಹೇಳಿದ್ದಾರೆ. ಐ ಕಾಂಟ್ ಬ್ರೀದ್ ಅನ್ನೋದು ಜಾರ್ಜ್​ ಫ್ಲಾಯ್ಡ್ ಅವರ ಕೊನೇ ಪದಗಳು. ಆದ್ರೆ ಅವರ ಜೊತೆಗೆ ಆ ಪದಗಳು ಸಾಯಲು ನಾವು ಬಿಡೋದಿಲ್ಲ ಅಂತ ಜೋ ಬೈಡೆನ್​ ಹೇಳಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ತೀರ್ಪನ್ನ ಸ್ವಾಗತಿಸಿದ್ದಾರೆ. ಆದ್ರೆ ನಿಜವಾದ ನ್ಯಾಯಕ್ಕೆ ನಾವು ಮಾಡಬೇಕಾದದ್ದು ಇನ್ನೂ ಸಾಕಷ್ಟಿದೆ ಎಂದಿದ್ದಾರೆ ಒಬಾಮಾ. ಇದೆಲ್ಲದರ ನಡುವೆ ಡೆರೆಕ್ ಚೌವಿನ್ ಪರ ವಕೀಲರು ಮಾತ್ರ, ಜವಾಬ್ದಾರಿಯುತ ಪೊಲೀಸ್ ಅಧಿಕಾರಿ ರೀತಿ ಚೌವಿನ್ ವರ್ತಿಸಿದ್ದಾರೆ ಅಂತ ಹೇಳಿದ್ದಾರೆ. ಮಿನಿಯಾಪೊಲೀಸ್​ನ ಪೊಲೀಸ್​ ಆಫೀಸರ್ಸ್​ ಫೆಡರೇಷನ್ ಕೂಡ​, ಈ ಪ್ರಕರಣದಲ್ಲಿ ಯಾರೂ ವಿನ್ನರ್ ಇಲ್ಲ ಅಂತ ಹೇಳಿದೆ. ಇನ್ನು ಈ ಪ್ರಕರಣದಲ್ಲಿ ಉಳಿದ ಮೂರು ಪೊಲೀಸ್ ಅಧಿಕಾರಿಗಳ ವಿಚಾರಣೆ ಈ ವರ್ಷಾಂತ್ಯದಲ್ಲಿ ನಡೆಯಲಿದೆ.

-masthmagaa.com

Contact Us for Advertisement

Leave a Reply