ಅಪ್ಪು 11ನೇ ದಿನದ ಪೂಜೆ… ಇಡೀ ದಿನದ ಮಾಹಿತಿ!

masthmagaa.com:

ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ 11 ದಿನ ಕಳೆದಿದೆ. ಈ ಹಿನ್ನೆಲೆಯಲ್ಲಿ ಇಂದು ಅವರ ಪುಣ್ಯ ಸ್ಮರಣೆ ಕಾರ್ಯ ನಡೀತು. 11ನೇ ದಿನದ ಪೂಜೆಯಲ್ಲಿ ರಾಜ್ ಕುಟುಂಬದವರು ಸೇರಿ ಹಲವರು ಭಾಗಿಯಾಗಿದ್ದರು.. ಬೆಳಗ್ಗೆ 10 ಗಂಟೆ ಸುಮಾರಿಗೆ ಪುನೀತ್ ಪತ್ನಿ ಅಶ್ವಿನಿ, ಮಕ್ಕಳಾದ ಧ್ರುತಿ, ವಂದಿತಾ, ಸಹೋದರರಾದ ಶಿವಣ್ಣ, ರಾಘಣ್ಣ​ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪುನೀತ್​ ಸಮಾಧಿ ಸ್ಥಳಕ್ಕೆ ಬಂದು ಪೂಜೆ ಸಲ್ಲಿಸಿದರು. ಚಿಕ್ಕಪ್ಪನ ಪುಣ್ಯ ತಿಥಿ ಕಾರ್ಯ ನೆರವೇರಿಸುವ ಮೂಲಕ ವಿನಯ್ ರಾಜ್ ಕುಮಾರ್ ಕೇಶಮುಂಡನ ಮಾಡಿಸಿಕೊಂಡು ಪುನೀತ್​ಗೆ ಪಿಂಡ ಪ್ರದಾನ ಮಾಡಿದರು.
ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಸಹೋದರ ಶಿವಣ್ಣ, ಅಪ್ಪುನನ್ನ ಕಳೆದುಕೊಂಡಿದ್ದೇವೆ ಅಂತ ಈಗಲೂ ನಂಬೋಕೆ ಆಗ್ತಿಲ್ಲ. ತುಂಬಾ ನೋವಾಗ್ತಿದೆ. ಇವತ್ತು ಪೂಜೆ ಮಾಡುವಾಗಲೂ ತುಂಬಾ ನೋವಾಯ್ತು. ಬೆಳಗ್ಗೆ ವಿಧಿ ವಿಧಾನ ಮಾಡುವಾಗ ನಾವು ಇದೆಲ್ಲಾ ಅವನಿಗೆ ಮಾಡ್ಬೇಕಾ ಅನ್ನಿಸ್ತು. ಯಾರಿಗೂ ತೊಂದರೆಯಾಗಬಾರದೆಂದು ಪೂಜೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಇನ್ನು ಪುನೀತ್​​ ರಾಜ್​​ಕುಮಾರ್​​ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂಬ ವಿಚಾರ‌ಕ್ಕೆ ಪ್ರಕ್ರಿಯಿಸಿದ ಶಿವಣ್ಣ, ಅವನು ಅಮರಶ್ರೀ.. ಆ ಶ್ರೀಗಿಂತ ಯಾವುದೂ ದೊಡ್ಡದಲ್ಲ ಅಂತ ಹೇಳಿದ್ರು.
11ನೇ ದಿನದ ಕಾರ್ಯವಾದ್ದರಿಂದ ಮಧ್ಯಾಹ್ನ 12 ಗಂಟೆಯವರೆಗೆ ಕಂಠೀರವ ಸ್ಟುಡಿಯೋ ಆವರಣದೊಳಗೆ ಸಾರ್ವಜನಿಕರ ಪ್ರವೇಶವನ್ನ ನಿರ್ಬಂಧಿಸಲಾಗಿತ್ತು. 12 ಗಂಟೆ ಬಳಿಕ ಅಪ್ಪು ಸಮಾಧಿ ದರ್ಶನ ಮಾಡಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿತ್ತು. ನಾಳೆ ಅಂದ್ರೆ ಮಂಗಳವಾರ ಅರಮನೆ ಮೈದಾನದಲ್ಲಿ ರಾಜ್ ಕುಟುಂಬದಿಂದ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಇನ್ನು ದೊಡ್ಮನೆ ಕುಟುಂಬ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ ಸ್ಮರಣೆಯನ್ನ ಹಮ್ಮಿಕೊಂಡಿತ್ತು. ಮನೆಯ ಮುಂಭಾಗದಲ್ಲಿ ಬೃಹತ್ತಾದ ಪೆಂಡಾಲ್​ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯದಲ್ಲಿ ಚಿತ್ರರಂಗದ ಬಹುತೇಕ ಗಣ್ಯರು ಭಾಗಿಯಾಗಿದ್ದರು.

-masthmagaa.com

Contact Us for Advertisement

Leave a Reply