ದೆಹಲಿಯಲ್ಲಿ ಪ್ರತಿಭಟನಾನಿರತ ರೈತರನ್ನ ಕೊಲ್ಲಲು ಸಂಚು?

masthmagaa.com:

ಕೃಷಿ ಕಾನೂನುಗಳನ್ನ ವಿರೋಧಿಸಿ ದೆಹಲಿ-ಹರಿಯಾಣ ಬಾರ್ಡರ್​​ನಲ್ಲಿ ಪ್ರತಿಭಟನೆ ನಡೆಸ್ತಿರೋ ರೈತರು ಓರ್ವ ವ್ಯಕ್ತಿಯನ್ನ ಹಿಡಿದು ಹರಿಯಾಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಮುಖಕ್ಕೆ ರೈತರೇ ಬಟ್ಟೆ ಸುತ್ತಿದ್ದರಿಂದ ಈತ ಯಾರು ಅನ್ನೋದು ಗೊತ್ತಾಗಿಲ್ಲ. ಆದ್ರೆ ಜನವರಿ 26ರಂದು ದೆಹಲಿಯಲ್ಲಿ ರೈತರು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್​ ರ್ಯಾಲಿಗೂ ಮುನ್ನ ರೈತ ಮುಖಂಡರನ್ನ ಕೊಲ್ಲಲು, ಹಿಂಸೆಯನ್ನ ಪ್ರಚೋದಿಸಲು ಈತ ಸಂಚು ರೂಪಿಸಿದ್ದ ಅಂತ ವರದಿಯಾಗಿದೆ. ಈತನಿಗೆ ಪೊಲೀಸ್ ಅಧಿಕಾರಿಯೊಬ್ಬ ಟ್ರೈನಿಂಗ್ ಕೊಟ್ಟಿದ್ದು, ಈತನ ತಂಡದಲ್ಲಿ ಒಟ್ಟು 10 ಜನರಿದ್ದಾರೆ ಅನ್ನೋದನ್ನ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ಆರೋಪಿಯೇ ಮಾತನಾಡಿದ್ದು, ‘ಜನವರಿ 26ನೇ ತಾರೀಖು ದೆಹಲಿ ಪೊಲೀಸರು ಟ್ರಾಕ್ಟರ್ ರ್ಯಾಲಿಯನ್ನ ತಡೆಯಲು ಯತ್ನಿಸಿದಾಗ ಫೈರಿಂಗ್ ನಡೆಸೋದು ನಮ್ಮ ಪ್ಲಾನ್ ಆಗಿತ್ತು. ನಮ್ಗೆ ಬಂದಿರೋ ಆದೇಶ ಪ್ರಕಾರ, ಮೊದಲು ರೈತರನ್ನ ತಡೀಬೇಕು. ರೈತರು ನಿಲ್ಲದಿದ್ರೆ ಗುಂಡು ಹಾರಿಸುವಂತೆ ಆರ್ಡರ್ ಬಂದಿದೆ. ಅದಕ್ಕೂ ಮೊದಲು, ಅಂದ್ರೆ ಜನವರಿ 24ರಂದು ಪ್ರತಿಭಟನೆ ನಡೆಸುತ್ತಿರುವ 4 ಜನರನ್ನ ಶೂಟ್​ ಮಾಡಲು ಪ್ಲಾನ್ ಮಾಡಲಾಗಿದೆ. ನಮ್ಗೆ ಪ್ರದೀಪ್ ಸಿಂಗ್ ಅನ್ನೋ ಪೊಲೀಸ್ ಅಧಿಕಾರಿ ಟ್ರೈನಿಂಗ್ ಕೊಟ್ಟಿದ್ದಾನೆ. ಪ್ರದೀಪ್ ಸಿಂಗ್ ನಮ್ಮನ್ನ ಭೇಟಿಯಾಗಲು ಬಂದಾಗಲೆಲ್ಲಾ ಮಾಸ್ಕ್ ಧರಿಸಿಕೊಂಡು ಬರ್ತಿದ್ದ’ ಅಂತ ಮಾಧ್ಯಮಗಳಿಗೆ ಹೇಳಿದ್ದಾನೆ. ಈತ ಹೇಳ್ತಿರೋದೆಲ್ಲಾ ನಿಜಾನಾ? ಒಂದ್ವೇಳೆ ನಿಜ ಆಗಿದ್ರೆ ಆತ ಯಾರ ಪರವಾಗಿ ಬಂದಿದ್ದ? ಆ ಪೊಲೀಸ್ ಅಧಿಕಾರಿ ಯಾರು? ಅನ್ನೋ ಹತ್ತು ಹಲವು ಪ್ರಶ್ನೆ ಮೂಡಿದೆ. ಅಂದ್ಹಾಗೆ ರೈತರು ಮತ್ತು ಕೇಂದ್ರ ಸರ್ಕಾರ ನಡುವೆ ನಿನ್ನೆ ನಡೆದ ಮಾತುಕತೆಯೂ ವಿಫಲವಾಗಿತ್ತು. ಜೊತೆಗೆ ಜನವರಿ 23ರ ಒಳಗೆ ರೈತರು ತಮ್ಮ ನಿರ್ಧಾರವನ್ನ ತಿಳಿಸುವಂತೆ ಕೇಂದ್ರ ಸರ್ಕಾರ ಸೂಚಿಸಿತ್ತು. ಇದರ ಬೆನ್ನಲ್ಲೇ ರೈತರನ್ನ ಕೊಲ್ಲಲು ಸಂಚು ರೂಪಿಸಿದ್ದ ಎನ್ನಲಾದ ವ್ಯಕ್ತಿಯನ್ನ ರೈತ ಮುಖಂಡರೇ ಹಿಡಿದಿದ್ದಾರೆ.

-masthmagaa.com

Contact Us for Advertisement

Leave a Reply