masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋಸೆಫ್ ಬೈಡೆನ್ 253 ಎಲೆಕ್ಟೊರಲ್ ವೋಟ್​ಗಳೊಂದಿಗೆ ಮುನ್ನಡೆ ಸಾಧಿಸಿದ್ದರೆ, ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ 214 ಎಲೆಕ್ಟೊರಲ್​ ಮತಗಳೊಂದಿಗೆ ಹಿನ್ನಡೆ ಅನುಭವಿಸುತ್ತಿದ್ದಾರೆ. ಚುನಾವಣೆ ಗೆಲ್ಲಲು 270 ಎಲೆಕ್ಟೊರಲ್ ಮತಗಳನ್ನ ಪಡೆಯಬೇಕಿದೆ. ಈ ಮ್ಯಾಜಿಕ್ ನಂಬರ್​ಗೆ ಹತ್ತಿರದಲ್ಲಿರುವ ಬೈಡೆನ್ ಅಮೆರಿಕ ಅಧ್ಯಕ್ಷರಾಗೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ. ಆದ್ರೆ ಇನ್ನು 6 ರಾಜ್ಯಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡಿಲ್ಲ. ಈ ಪೈಕಿ ನೆವಾಡಾ, ಅರಿಜೋನಾ, ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಬೈಡೆನ್ ಮುನ್ನಡೆ ಸಾಧಿಸಿದ್ರೆ, ಡೊನಾಲ್ಡ್​ ಟ್ರಂಪ್ ಅಲಸ್ಕಾ ಮತ್ತು ನಾರ್ಥ್​ ಕೆರೊಲಿನಾ ರಾಜ್ಯಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದಾರೆ. ಮತ್ತೊಂದುಕಡೆ ಜಾರ್ಜಿಯಾದಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಫೈಟ್​ ಏರ್ಪಟ್ಟಿದೆ. ಒಂದ್ವೇಳೆ ಯಾವುದಾದರೂ ಅಭ್ಯರ್ಥಿ ಸಾವಿರ ಮತಗಳ ಅಂತರದಲ್ಲಿ ಗೆದ್ದರೆ ಮತ್ತೊಮ್ಮೆ ಮತ ಎಣಿಕೆ ನಡೆಸಲಾಗುವುದು ಅಂತ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ. ಒಂದ್ವೇಳೆ ಜಾರ್ಜಿಯಾದಲ್ಲಿ ಡೊನಾಲ್ಡ್ ಟ್ರಂಪ್ ಸೋತರೆ ರಿಪಬ್ಲಿಕನ್ ಪಕ್ಷಕ್ಕೆ ದೊಡ್ಡ ಮುಖಭಂಗವಾಗಲಿದೆ. ಯಾಕಂದ್ರೆ 1992ರಿಂದ ಜಾರ್ಜಿಯಾ ರಾಜ್ಯ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿದೆ. ಕಳೆದ 28 ವರ್ಷಗಳಿಂದ ಇಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳೇ ಜಯಭೇರಿ ಬಾರಿಸುತ್ತಾ ಬಂದಿದ್ದಾರೆ.

ಇದೆಲ್ಲದರ ನಡುವೆ ದೇಶವನ್ನು ಉದ್ದೇಶಿಸಿ ಮಾತನಾಡಿರುವ ಬೈಡೆನ್, ‘ನಾವು 300 ಎಲೆಕ್ಟೊರಲ್ ಮತಗಳನ್ನು ಪಡೆಯುವ ಹಾದಿಯಲ್ಲಿದ್ದೇವೆ. ಈಗಿನ ನಂಬರ್ಸ್​ ನೋಡಿದ್ರೆ ನಮಗೆ ಸ್ಪಷ್ಟ ಬಹುಮತ ಸಿಗುವ ಎಲ್ಲಾ ಲಕ್ಷಣ ಕಾಣುತ್ತಿದೆ. ನಾವು ಡೊನಾಲ್ಡ್​ ಟ್ರಂಪ್​ ಅವರನ್ನ 40 ಲಕ್ಷ ಮತಗಳಿಂದ ಸೋಲಿಸುತ್ತೇವೆ’ ಅಂತ ಹೇಳಿದ್ದಾರೆ.

ಮತ್ತೊಂದುಕಡೆ ಟ್ವೀಟ್ ಮಾಡಿರುವ ಡೊನಾಲ್ಡ್​ ಟ್ರಂಪ್, ‘ಅಡ್ಡದಾರಿ ಮೂಲಕ ಜೋ. ಬೈಡೆನ್ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಏರಬಾರದು. ಹಾಗೆ ಮಾಡೋದಾದ್ರೆ ನಾನು ಕೂಡ ಮಾಡಬಹುದು’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply