ಜಮ್ಮು ಕಾಶ್ಮೀರದಲ್ಲಿ 12 ದಿನಗಳಾದರೂ ಸಿಗದ ಉಗ್ರರು!

masthmagaa.com:

ಜಮ್ಮು ಕಾಶ್ಮೀರದ ಪೂಂಚ್​ ಜಿಲ್ಲೆಯ ನಾರ್ ಖಾಸ್ ಅರಣ್ಯ ಪ್ರದೇಶದಲ್ಲಿ ಸೇರಿಕೊಂಡಿರೋ ಉಗ್ರರು ಇನ್ನೂ ಯೋಧರ ಕೈಗೆ ಸಿಗ್ತಾನೇ ಇಲ್ಲ. 12ನೇ ದಿನವಾದ ಇಂದು ಕೂಡ ಕಾರ್ಯಾಚರಣೆ ಮುಂದುವರಿದಿದೆ. 36 ಗಂಟೆಗಳ ಕಾಲ ಸ್ವಲ್ಪ ಸೈಲೆಂಟ್ ಇತ್ತು. ಆದ್ರೆ ಈಗ ಮತ್ತೆ ಅರಣ್ಯದಿಂದ ಗುಂಡು ಮತ್ತು ಸ್ಫೋಟಕದ ಶಬ್ದಗಳು ಕೇಳಿ ಬರ್ತಿವೆ. ಬುಧವಾರ ರಾತ್ರಿ ಯಾರೂ ಕೂಡ ಮನೆಯಿಂದ ಹೊರಬರಬಾರದು ಅಂತ ಮಸೀದಿಗಳಿಂದ ಅನೌನ್ಸ್ ಮಾಡಲಾಗಿದೆ. ಇದ್ರಿಂದ ಉಗ್ರರನ್ನು ಸೆದೆ ಬಡಿಯಲು ಸೇನೆ ದೊಡ್ಡ ಕಾರ್ಯಾಚರಣೆ ನಡೆಸಲಿದೆ ಅನ್ನೋದು ದೃಢವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ದೀರ್ಘಾವಧಿಯ ಉಗ್ರ ನಿಗ್ರಹ ಕಾರ್ಯಾಚರಣೆ ಇದಾಗಿದೆ. ಅರಣ್ಯದಲ್ಲಿ ಸೇರಿರೋ ಉಗ್ರರು ಫುಲ್ ತರಬೇತಿ ಪಡೆದವರಾಗಿದ್ದು, ಹಲವು ದಿನಗಳ ಹಿಂದೆಯೇ ಇಲ್ಲಿ ಬಂದಿದ್ದಾರೆ. ಮತ್ತು ಅಡಗುದಾಣಗಳನ್ನು ನಿರ್ಮಿಸಿಕೊಂಡಿದ್ದಾರೆ ಅನ್ನೋದು ಸ್ಪಷ್ಟವಾಗಿದೆ. ಈ ಕಾರ್ಯಾಚರಣೆಯಲ್ಲಿ ಈಗಾಗಲೇ 11 ಮಂದಿ ಯೋಧರು ಪ್ರಾಣ ಕಳ್ಕೊಂಡಿದ್ದಾರೆ.

ಈ ನಡುವೆ ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಪ್ರಕರಣಗಳ ತನಿಖೆಯನ್ನು ಎನ್​ಐಎ ಅಂದ್ರೆ ರಾಷ್ಟ್ರೀಯ ತನಿಖಾ ದಳ ಕೈಗೆತ್ತಿಕೊಂಡಿದೆ. ಅದ್ರ ಭಾಗವಾಗಿಯೇ ಇವತ್ತು ವಿವಿಧ ಭಾಗಗಳಲ್ಲಿ ದಾಳಿ ನಡೆಸಲಾಯ್ತು. ಜೊತೆಗೆ ಭದ್ರತೆ ಸಂಬಂಧ ಇವತ್ತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಬಿಎಸ್​​ಎಫ್ ಡಿಜಿ ಪಂಕಜ್ ಸಿಂಗ್ ಕೂಡ ಮೂರು ದಿನಗಳ ಕಾಶ್ಮೀರ ಪ್ರವಾಸ ಕೈಗೊಂಡಿದ್ದು, ಗಡಿಯಲ್ಲಿನ ಸ್ಥಿತಿಯ ಪರಿಶೀಲನೆ ನಡೆಸಲಿದ್ದಾರೆ.

ಜಮ್ಮು ಕಾಶ್ಮೀರದ ರಜೌರಿಯ ಲ್ಯಾಮ್​ ವಲಯದಲ್ಲಿ ವಿಡಿಸಿ ಅಂದ್ರೆ ವಿಲೇಜ್ ಡಿಫೆನ್ಸ್ ಕಮಿಟಿ ಟ್ರೇನಿಂಗ್ ಆಯೋಜಿಸಿದೆ. ಈ ಮೂಲಕ ಸ್ಥಳೀಯ ಹುಡುಗ, ಹುಡುಗಿಯರು ಮತ್ತು ವಿಡಿಸಿ ಸದಸ್ಯರಿಗೆ ಶಸ್ತ್ರಾಸ್ತ್ರ ಹ್ಯಾಂಡಲ್ ಮಾಡೋದು, ಗುಂಡು ಹಾರಿಸೋ ಟ್ರೇನಿಂಗ್ ನೀಡಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಲ್ಲಿನ ಸ್ಥಳೀಯರು, ಉಗ್ರರ ದಾಳಿಯನ್ನು ತಡೆಯಲು ನಮಗೆ ಸಹಾಯ ಆಗಲಿ ಅಂತ ನಮಗೆ ಟ್ರೇನಿಂಗ್ ನೀಡಲಾಗ್ತಿದೆ. ಭಾರತದ ಸೇನೆಗೆ ನಮ್ಮ ಧನ್ಯವಾದ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply