“ನಾನು ಇವತ್ತು ಬದುಕಿರೋದೆ ಧರ್ಮಸ್ಥಳ ಕ್ಷೇತ್ರದ ಮಹಿಮೆಯಿಂದ” : ನಟ ದರ್ಶನ್‌

masthmagaa.com:

ನಟ ದರ್ಶನ್‌ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರದಲ್ಲಿ ಭಾಗಿಯಾಗಿ ತಮ್ಮ ಜೀವನದಲ್ಲಿ ನಡೆದ ಒಂದು ಮಹತ್ವ ಪೂರ್ಣ ವಿಷಯದ ಬಗ್ಗೆ, ಇದುವರೆಗೂ ಅವರು ಎಲ್ಲೂ ಹೇಳಿಕೊಳ್ಳದ ವಿಷಯದ ಬಗ್ಗೆ ಮಾತನಾಡಿದ್ದಾರೆ. ನಾನು ಇವತ್ತು ಬದುಕಿದ್ದೀನಿ ಅಂದ್ರೆ ಅದಕ್ಕೆ ಈ ಧರ್ಮಸ್ಥಳ ಕ್ಷೇತ್ರವೇ ಕಾರಣ ಅಂತ ನಟ ದರ್ಶನ್‌ ಹೇಳಿದ್ದಾರೆ.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಬುಧವಾರ (ಮೇ 3) ಸಂಜೆ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ನಡೆಯಿತು. 51ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಇದು. ಈ ವಿವಾಹದಲ್ಲಿ ಒಟ್ಟು 201 ಜೋಡಿ ಸಪ್ತಪದಿ ತುಳಿದಿದ್ದಾರೆ, ಅದರಲ್ಲಿ 52 ಜೋಡಿ ಬೇರೆ ಬೇರೆ ಜಾತಿಯವರು ಎಂಬುದು ವಿಶೇಷ. ಅದರಲ್ಲೂ ಎಲ್ಲರ ಹಾಟ್‌ ಫೇವರೇಟ್‌ ಡಿ ಬಾಸ್‌, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಇನ್ನೂ ವಿಶೇಷ ಅಂತ ಹೇಳಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಶನ್‌ ಜೋಡಿಗಳಿಗೆ ಶುಭ ಹಾರೈಸಿ, ತಮ್ಮ ಜೀವನದಲ್ಲಿ ಧರ್ಮಸ್ಥಳ ಏಕೆ ಇಂಪಾರ್ಟೆಂಟ್‌ ಅಂತ ಕೂಡ ಹೇಳಿದ್ದಾರೆ.

ದರ್ಶನ್‌ ಮಾತುಗಳನ್ನ ಶುರು ಮಾಡ್ತಾ ಇದ್ದಂತೆ ಫ್ಯಾನ್ಸ್‌ಗಳೆಲ್ಲಾ ಜೋರಾಗಿ ಕೂಗೋದಕ್ಕೆ ಶುರು ಮಾಡಿದ್ರು. “ಧರ್ಮಸ್ಥಳದಲ್ಲಿ ದಯವಿಟ್ಟು ಯಾರು ನನಗೆ ಜೈಕಾರ ಹಾಕಬೇಡಿ, ದೇವರಿಗೆ ಜೈಕಾರ ಹಾಕಿ, ಶ್ರೀ ವೀರೇಂದ್ರ ಹೆಗ್ಗಡೆ ಅವರಿಗೆ ಜೈಕಾರ ಹಾಕಿ, ನಾವೆಲ್ಲ ಕೇವಲ ನಿಮಿತ್ತ ಮಾತ್ರ, ಇಲ್ಲಿ ಯಾರೂ ಕೂಗಬೇಡಿ ಇದು ನನ್ನ ಹಂಬಲ್‌ ರಿಕ್ವಸ್ಟ್‌.” ಅಂತ ಹೇಳಿದರು. “ಹೊಸ ಜೀವನಕ್ಕೆ ಕಾಲಿಡ್ತಾ ಇರುವ 201 ಜೋಡಿಗಳಿಗೂ ಒಳ್ಳೆದಾಗ್ಲಿ” ಅಂತ ಶುಭ ಹಾರೈಸಿ ತಮ್ಮ ಮಾತುಗಳನ್ನ ಶುರು ಮಾಡಿದ್ರು. “ಮದುವೆ ಮೆನಯಲ್ಲಿ ಕಂಪ್ಲೇಂಟ್ಸ್‌ಗಳು ಇಲ್ಲದೇನೆ ನಿಮ್ಮ ಮದುವೆ ಮುಗಿದಿದೆ. ಎಷ್ಟೋ ಲಕ್ಷ ಖರ್ಚು ಮಾಡಿ, ದುಂದು ವೆಚ್ಚ ಮಾಡಿ ಮದುವೆ ಆಗೋ ಬದಲು ಈ ರೀತಿ ಮದುವೆ ಆಗೋದು ತುಂಬಾ ಒಳ್ಳೇದು. ನಾನ್‌ ಯಾಕೆ ಇದೆಲ್ಲಾ ಹೇಳ್ತಾ ಇದೀನಿ ಅಂದ್ರೆ ನನ್ನ ಮದುವೆ ಆಗಿದ್ದೂ ಕೂಡ ಇಲ್ಲೇ. ನಮ್ಮ ಜೊತೆ ಬಂದೋರು ನಮ್ಮ ಮದುವೆ ಬಗ್ಗೆ ಏನೂ ಕಂಪ್ಲೇಂಟ್‌ ಮಾಡದೇ ಊಟ ಮಾಡ್ಕೊಂಡು ಹೋಗಿದ್ರು, ಯಾಕಂದ್ರೆ ಇದು ದೇವಸ್ಥಾನ. ಅದ್‌ ಸರಿ ಇಲ್ಲ, ಇದ್‌ ಸರಿ ಇಲ್ಲ, ಅಂತ ಹೇಳೋ ಹಾಗೇ ಇಲ್ಲ. ಈ ಜಾಗದ ಮಹಿಮೆ ಹೇಳ್ತೀನಿ, ಈ ಟೈಮಲ್ಲಿ ಹೇಳೋದು ಅಂತ ಅಲ್ಲ, ಇಲ್ಲಿ ತನಕ ನಾನು ಈ ವಿಷಯವನ್ನ ಎಲ್ಲೂ ಹೇಳಿಲ್ಲ. ಆದರೆ ಇವಾಗ ಹೇಳಬೇಕು ಅಂತ ಅನಿಸ್ತಾ ಇದೆ. ನಮ್ಮ ಅಪ್ಪ ತೀರಿಕೊಂಡ ಟೈಮ್‌ನಲ್ಲಿ ನಮಗೆಲ್ಲಾ ತುಂಬಾ ಕಷ್ಟ ಇತ್ತು, ಒಂದು ಹೊತ್ತಿನ ಊಟಕ್ಕೂ ಕಷ್ಟ ಅನ್ನುವಂತ ಪರಿಸ್ಥಿತಿ ಇತ್ತು. ಆಗ ನಮ್ಮ ಅಮ್ಮ ಕಾರ್‌ ತೆಗಿಯೋ ಧರ್ಮಸ್ಥಳ ಹೋಗೋಣ ಅಂದ್ರು, ನನಗೆ ಫುಲ್‌ ಶಾಕ್‌, ಡಿಸೇಲ್‌ಗೆ ದುಡ್ಡಿಲ್ಲ, ಇವಾಗ ಯಾಕೆ ಅಂತ. ಎಲ್ಲೆಲ್ಲೋ ಇದ್ದ ಅಷ್ಟೋ ಇಷ್ಟೋ ದುಡ್ಡ್‌ ತಗೊಂಡು ನಾನು ತಮ್ಮ, ಅಕ್ಕ, ಅಮ್ಮ, ನಾಲ್ಕೂ ಜನಾನೂ ಹೋದ್ವಿ. ದೇವರ ದರ್ಶನ ಎಲ್ಲಾ ಮಾಡ್ಕೊಂಡ್ವಿ, ಅಲ್ಲಿಂದ ನಮ್ಮ ಅಮ್ಮ ತುಂಬಾ ಡಲ್‌ ಆಗಿದ್ರು. ಯಾಕೆ ಅಂತ ನಮಗೆ ಗೊತ್ತಿರಲಿಲ್ಲ. ಯಾಕಂದ್ರೆ ನಾವೆಲ್ಲ ಆಗ ಚಿಕ್ಕವರು. ಹಾಗಾಗಿ ನಮಗೆ ಅಷ್ಟೇನೂ ಗೊತ್ತಗ್ತಾ ಇರಲಿಲ್ಲ. ಹಾಗೇ ಅಲ್ಲಿಂದ ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನ ಮೀಟ್‌ ಮಾಡಬೇಕು ಅಂತ ಅವರ ಮನೆಗೆ ಹೋದ್ವಿ. ಅಲ್ಲಿ ನಮ್ಮ ಅಮ್ಮ ಮಾತಾಡಿದ ರೀತಿ ನೋಡಿ ನನಗೆ ಭಯ ಆಗೋಯ್ತು. ಏನಪ್ಪಾ ಈ ರೀತಿ ಎಲ್ಲಾ ಹೇಳ್ತಾ ಇದಾರೆ ಅಂತ . ಯಾಕಂದ್ರೆ ನಮ್ಮ ಅಮ್ಮ ಅಲ್ಲಿಗೆ ಡಿಸೈಡ್‌ ಮಾಡಿದ್ರಂತೆ. ಇರೋ 3 ಜನ ಮಕ್ಕಳನ್ನ ಕರ್ಕೊಂಡು ಕೆಆರ್‌ಎಸ್‌ಗೆ ತಳ್ಳಿ ನಾನು ಬಿದ್‌ ಬಿಡ್ವಾ ಅಂತ . ಯಾಕಂದ್ರೆ ಮನೆಗೆ ಒಂದು ಆಧಾರ ಸ್ತಂಭ ಯಾರಿಲ್ಲ ಅಂತ. ಅವತ್ತು ವೀರೇಂದ್ರ ಹೆಗ್ಗಡೆ ಅವರು ಹೇಳಿದ ಒಂದು ಮಾತು ತುಂಬಾನೇ ಚೆನ್ನಾಗಿದೆ. ಅಲ್ಲಮ್ಮಾ, ಇಬ್ಬಿಬ್ರು ಗಂಡು ಮಕ್ಕಳು ಇದಾರೆ. ಒಳ್ಳೆದಾಗತ್ತೆ ಹೋಗು ಅಂತ ಹೇಳಿದ್ರು. ಅವತ್ತು ಅವರು ಹೋಗು ಅಂತ ಕಳ್ಸಿದ್ದು ನೋಡಿ ಇವತ್ತು ಇಲ್ಲಿ ಇದೀನಿ. ಈ ರೀತಿಯ ಒಂದು ಮಾತು, ಅವರ ಹಿತವಚನ, ಇವತ್ತು ಎಷ್ಟೋ ಕುಟುಂಬಗಳಿಗೆ ಹೆಲ್ಪ್‌ ಆಗಿದೆ. ಇಲ್ಲಿ ಬಂದೋರ್‌ ಯಾರು ಬರೀ ಗೈಲಿ ಅಂತೂ ಹೋಗಿಲ್ಲ. ಹೊಸದಾಗಿ ಮದುವೆ ಆದ ಎಲ್ಲಾ ಜೋಡಿಗಳಿಗೂ ನಾನು ಹೇಳೊದು ಇಷ್ಟೆ. ಕಷ್ಟ- ಸುಖ ಏನೇ ಬರಲಿ ಆ ಮಂಜುನಾಥ ಸ್ವಾಮಿ ಪಾದಕ್ಕೆ ಹಾಕಿ, ಇಲ್ಲಿ ಬಂದು ವೀರೇಂದ್ರ ಹೆಗ್ಗಡೆ ಅವರ ಹತ್ರ ಹೇಳ್ಕೊಳಿ. ಎಲ್ಲ ಸರಿ ಆಗತ್ತೆ. ಎಲ್ಲರಿಗೂ ಒಳ್ಳೆದ್‌ ಆಗತ್ತೆ.” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply