ಭಾರತ-ಪಾಕ್ ಶಾಂತಿ! ಕ್ರಾಂತಿಯೋ..? ಬರೀ ಭ್ರಾಂತಿಯೋ..?

masthmagaa.com:

ಭಾರತ-ಪಾಕಿಸ್ತಾನದ ಡಿಜಿಎಂಒಗಳು ಬಹಳ ಅಪರೂಪಕ್ಕೆ ಹಾಟ್​​ಲೈನ್ ಮೂಲಕ ಚರ್ಚೆ ನಡೆಸಿದ್ದಾರೆ. ಇದು ಬಹಳ ಮುಖ್ಯ ವಿಚಾರ. ಭಾರತ ಇತ್ತೀಚೆಗೆ ಭಯೋತ್ಪಾದನೆ ಹಾಗೂ ಮಾತುಕತೆ ಎರಡೂ ಒಟ್ಟಿಗೇ ಸಾಧ್ಯ ಇಲ್ಲ ಅಂತ ಪಾಕ್​ ಜೊತೆ ಮಾತುಕತೆ ಸಂಪೂರ್ಣ ನಿಲ್ಲಿಸಿತ್ತು. ಜೊತೆಗೆ ಮಾತುಕತೆ ನಡೆಸೋದಾದ್ರೂ ಯಾರ್ ಜೊತೆ ನಡೆಸೋದು ಅನ್ನೋ ಪ್ರಶ್ನೆ ಇತ್ತು. ಯಾಕಂದ್ರೆ ಪಾಕಿಸ್ತಾನದಲ್ಲಿ ಚುನಾಯಿತ ಸರ್ಕಾರದ್ದು ಒಂದು ದಾರಿ.. ಚುನಾಯಿತ ಸರ್ಕಾರ ಶಾಂತಿ ದಾರಿಯಲ್ಲಿ ಬಂದ್ರೂನೂ ಸೇನೆ ಬಿಡ್ತಿರ್ಲಿಲ್ಲ. ಎತ್ತು ಏರಿಗೆ ಕೋಣ ನೀರಿಗೆ ಅನ್ನೋ ಥರ ಪಾಕ್​ನಲ್ಲಿ ಸರ್ಕಾರ ಶಾಂತಿಗೆ, ಸೇನೆ ಅಶಾಂತಿಗೆ ಅನ್ನೋ ರೀತಿ ಇತ್ತು. ಹೀಗಾಗಿ ಭಾರತ ಪಾಕಿಸ್ತಾನವನ್ನ ಸಂಪೂರ್ಣ ಸೈಡ್​ಲೈನ್ ಮಾಡಿ, ಯಾವುದೇ ಮಾತುಕತೆ ಮಾಡಲ್ಲ ಅಂತ ಹೇಳಿತ್ತು. ಆದ್ರೆ ಈಗ ವರ್ಷಗಳ ಬಳಿಕ ಮೊದಲ ಬಾರಿಗೆ ಸೇನೆಯ ಅತ್ಯಂತ ಪ್ರಮುಖ ಅಧಿಕಾರಿಗಳ ಮಾತುಕತೆ ನಡೆದಿದೆ. ಇದರ ಹಿಂದೆ NSA ಅಜಿತ್ ದೋವಲ್​ರ ಹಲವು ತಿಂಗಳ ತೆರೆಮರೆಯ ಕಾರ್ಯಾಚರಣೆ ಕೂಡ ಇದೆ. ಭಾರತ – ಚೀನಾ ಗಡಿಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿರೋ ಸಂದರ್ಭದಲ್ಲೇ ಪಶ್ಚಿಮದ ಶತ್ರು ಪಾಕಿಸ್ತಾನದ ಗಡಿಯಲ್ಲೂ ಶಾಂತಿ ಸ್ಥಾಪಿಸೋ ಪ್ರಯತ್ನವಾಗಿ ದೊಡ್ಡ ಹೆಜ್ಜೆ ಇಟ್ಟಿದಾರೆ ಎರಡೂ ಕಡೆಯ ಸೇನೆಯವ್ರು. ಇದನ್ನ ಬಿಡಿಸಿ ಹೇಳ್ತೀವಿ ನೋಡಿ. ಈ ವೇಳೆ ಎರಡೂ ರಾಷ್ಟ್ರಗಳು ಗಡಿ ನಿಯಂತ್ರಣಾ ರೇಖೆ ಮತ್ತು ಇತರೆ ಪ್ರದೇಶಗಳಲ್ಲಿ ಸದ್ಯದ ಪರಿಸ್ಥಿತಿಯ ಅವಲೋಕನ ನಡೆಸಿವೆ. ಜೊತೆಗೆ ಮುಂದಿನ ದಿನಗಳಲ್ಲಿ ಕೆಲವೊಂದು ಗಡಿಭಾಗದ ಪ್ರದೇಶಗಳಲ್ಲಿ ಮುಕ್ತ, ಸರಳ ಹಾಗೂ ಸೌಹಾರ್ದಯುತ ವಾತಾವರಣ ನೆಲೆಸುವಂತೆ ಮಾಡುವ ಬಗ್ಗೆ ಚರ್ಚೆ ನಡೆಸಿವೆ. ಇಷ್ಟೇ ಅಲ್ಲ.. ಎರಡೂ ರಾಷ್ಟ್ರಗಳು ಗಡಿ ನಿಯಂತ್ರಣ ರೇಖೆ ಮತ್ತು ಇತರ ವಲಯಗಳಲ್ಲಿ ಮಾಡಿಕೊಳ್ಳಲಾದ ಎಲ್ಲಾ ಒಪ್ಪಂದ ಮತ್ತು ಕದನ ವಿರಾಮ ಪಾಲಿಸಲು ಒಪ್ಪಿಕೊಂಡಿವೆ. ಜೊತೆಗೆ ಯಾರೂ ಊಹಿಸಲಾಗದ ಕೆಲವೊಂದು ಘಟನೆಗಳು ನಡೆದ್ರೆ, ಯಾವುದೇ ಮಿಸ್​ ಅಂಡರ್​​ಸ್ಟಾಂಡಿಂಗ್ ಏರ್ಪಟ್ಟರೆ ಅದನ್ನ ಹಾಟ್​ಲೈನ್ ಮತ್ತು ಫ್ಲಾಗ್ ಮೀಟಿಂಗ್​​​ ಮೂಲಕವೇ ಬಗೆಹರಿಸಿಕೊಳ್ಳಲು ಕೂಡ ಒಪ್ಪಿಕೊಳ್ಳಲಾಗಿದೆ. ಈ ಒಪ್ಪಿಗೆ ಫೆಬ್ರವರಿ 24-25 ಮಧ್ಯರಾತ್ರಿಯಿಂದಲೇ ಅನ್ವಯವಾಗಲಿದೆ ಅಂತ ಕೂಡ ಜಂಟಿ ಪ್ರಕಟಣೆ ತಿಳಿಸಿವೆ.

ಇದರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಮುಖ ಪಾತ್ರ ವಹಿಸಿದ್ದಾರೆ. ಪಾಕಿಸ್ತಾನದ ಎನ್​ಎಸ್​ಎ ಮೊಯೀದ್ ಯೂಸುಫ್ ಭಾರತದ ಎನ್​ಎಸ್​ಎ ಅಜಿತ್ ದೋವಲ್ ಜೊತೆ ಕಳೆದ ಹಲವು ತಿಂಗಳಿಂದ ಬ್ಯಾಕ್ ಚಾನಲ್ ಮಾತುಕತೆ ನಡೆಸ್ತಿದ್ರು. ಒಂದುಸಲ ಇಬ್ಬರೂ ಮೂರನೇ ದೇಶವೊಂದರಲ್ಲಿ ರಹಸ್ಯ ಭೇಟಿಯಾಗಿ ಮಾತುಕತೆ ನಡೆಸಿದ್ರು ಅಂತ ಗೊತ್ತಾಗಿದೆ. ಇದಾದ ಬಳಿಕ ಪಾಕಿಸ್ತಾನದ ರಾಜಕಾರಣಿಗಳು ಹಾಗೂ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಮಾತಿನ ದಾಟಿ ಕೂಡ ಸ್ವಲ್ಪ ಸಾಫ್ಟ್​ ಆಗಿತ್ತು. ಭಾರತ ಕೂಡ ಪಾಕ್ ಪ್ರಧಾನಿ ಇಮ್ರಾನ್​ ಖಾನ್​​ ಶ್ರೀಲಂಕಾಗೆ ಹೋಗುವಾಗ ಭಾರತದ ವಾಯುಪ್ರದೇಶ ಬಳಸಲು ಅನುಮತಿ ನೀಡಿ ಪಾಕ್​ ಸನ್ನಡತೆಗೆ ತಾನೂ ಒಂದಷ್ಟು ರಿಯಾಯಿತಿ ತೋರಿಸಿತ್ತು. ಈಗ ಫೈನಲಿ ಎರಡೂ ಸೇನೆಗಳ ನಡುವೆ ಮಹತ್ವದ ಒಪ್ಪಂದ ಆಗಿದೆ. ಅನೌನ್ಸ್​ಮೆಂಟ್ ಆಗಿದೆ.

ಆದ್ರೆ, ಪಾಕಿಸ್ತಾನ ಇದನ್ನ ಎಷ್ಟು ಫಾಲೋ ಮಾಡುತ್ತೆ ಅನ್ನೋದು ನೋಡ್ಬೇಕು. ಯಾಕಂದ್ರೆ 2018ರಲ್ಲಿ ಇದೇ ಥರದ ಒಪ್ಪಂದಕ್ಕೆ ಎರಡೂ ಸೇನೆಗಳು ಸಹಿ ಹಾಕಿದ್ವು. ಆದ್ರೆ ನಂತರದಲ್ಲಿ ಪುನಃ ತನ್ನ ಹಳೆ ಬುದ್ಧಿ ಮುಂದುವರಿಸಿದ ಪಾಕಿಸ್ತಾನ 3 ವರ್ಷದಲ್ಲಿ 11 ಸಾವಿರ ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. ಬರೀ ಈ ವರ್ಷ ಜನವರಿ ತಿಂಗಳೊಂದರಲ್ಲೇ 299 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಹೀಗಾಗಿ ಈ ಸಲನಾದ್ರೂ ಬುದ್ಧಿ ನೆಟ್ಟಗೆ ಇಟ್ಕೋತಾರಾ? ಅಥವಾ ಪಾಕ್ ಬುದ್ಧಿ ಡೊಂಕೇನಾ? ನೋಡ್ಬೇಕು. ಜಾಸ್ತಿ ಕಾಯೋದೇನ್ ಬೇಡ. ಸ್ವಲ್ಪ ದಿನಗಳಲ್ಲೇ ಗೊತ್ತಾಗುತ್ತೆ. ಶಾಂತಿ ಎರಡೂ ದೇಶಕ್ಕೆ ಮುಖ್ಯ ಈಗ. ನಮಗೆ ಎರಡೆರಡು ಕಡೆ ಶತ್ರುಗಳ ಜೊತೆ ದಿನಾ ಬಡಿದಾಡೋದು ಬೇಕಿಲ್ಲ. ನಮಗೆ ಅಂತ ಅಲ್ಲ. ಜಗತ್ತಿನ ಯಾವ ದೇಶನೂ ಏಕ ಕಾಲಕ್ಕೆ ಎರಡೆರಡು ಶತ್ರುಗಳ ಜೊತೆ ಬಡಿದಾಡೋಕೆ ಇಷ್ಟಪಡಲ್ಲ. ಇಲ್ಲಿ ನೋಡಿದ್ರೆ ನಮ್ಮ ಇಬ್ಬರೂ ಶತ್ರುಗಳು ಒಬ್ರಿಗೊಬ್ರು ಚಡ್ಡಿ ದೋಸ್ತುಗಳಾಗಿಬಿಟ್ಟಿದಾರೆ. ಮತ್ತೊಂದುಕಡೆ ಪಾಕಿಸ್ತಾನವೂ ಹುಟ್ಟಿದಲ್ಲಿಂದ ಇಲ್ಲಿ ತನಕ ಬರೀ ಭಾರತ ನಮಗೆ ನಾಳೆ ಹೊಡೀಬೋದು, ಇವತ್ತು ಹೊಡೀಬೋದು ಅನ್ನೋ ಹೆದರಿಕಯಲ್ಲೇ ಜೀವನ ಕಳೀತಾ, ಇರೋ ಬರೋ ಚಿಲ್ರೆ ಕಾಸನ್ನೆಲ್ಲಾ ಸೇನೆ ಮೇಲೆ ಸುರೀತಾ ದೇಶ ಬರ್ಬಾದ್ ಮಾಡಿಕೊಂಡಿದಾರೆ. ಸೋ ಶಾಂತಿ ಇಬ್ಬರಿಗೂ ಬೇಕು. ಆದ್ರೆ ಪಾಕಿಸ್ತಾನ ಶಾಂತಿ ವಿಚಾರದಲ್ಲಿ ಎಷ್ಟು ಸೀರಿಯಸ್ ಅನ್ನೋದರ ಮೇಲೆ ಎಲ್ಲವೂ ಡಿಪೆಂಡ್ ಆಗುತ್ತೆ.

-masthmagaa.com

Contact Us for Advertisement

Leave a Reply