ದೇಶದಲ್ಲಿ ಎದ್ದು ನಿಂತ ‘ಚೀನಾ ವೈರಸ್’! ಮತ್ತೆ ಮಾಸ್ಕ್‌, ಸ್ಯಾನಿಟೈಸರ್‌ ಕಡ್ಡಾಯ!

masthmagaa.com:

ಚೀನಾದಲ್ಲಿ ಕೊರೊನಾ ಸೋಂಕು ಸ್ಪೋಟವಾಗ್ತಿರೋ ಹಿನ್ನೆಲೆಯಲ್ಲಿ ಇದೀಗ ಅದ್ರ ಪಕ್ಕದಲ್ಲೇ ಇರೋ ನಮ್ಮ ಭಾರತದಲ್ಲೂ ಸಹ ಇದ್ರ ಭೀತಿ ಶುರುವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳೋಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಕ್‌ ಮಾಂಡವೀಯ, ಗೃಹ ಸಚಿವ ಅಮಿತ್‌ ಶಾ, ಜ್ಯೋತಿರಾಧಿತ್ಯ ಸಿಂಧ್ಯಾ ಮತ್ತು ಇತರ ಹಿರಿಯ ಅಧಿಕಾರಿಗಳು ವರ್ಚುವಲ್‌ ಸಭೆಯಲ್ಲಿ ಭಾಗಿಯಾಗಿದ್ದಾರೆ. ಕೋವಿಡ್‌ ಕುರಿತು ಎಚ್ಚರಿಕೆ ವಹಿಸೋಕೆ, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಬಳಕೆ ಕುರಿತು ಜಾಗೃತಿ ಮೂಡಿಸೋಕೆ ರಾಜ್ಯಗಳಿಗೆ ಸೂಚಿಸಲಾಗಿದೆ. ಚೀನಾ ಸೇರಿದಂತೆ ಇತರ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನ ಏರ್‌ಪೋರ್ಟ್‌ನಲ್ಲಿ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಡಿಸೋಕೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಜೊತೆಗೆ ಹೊಸ ಕೇಸ್​​ಗಳ ರೂಪಾಂತರಿಗಳನ್ನ ಪತ್ತೆ ಹಚ್ಚೋಕೆ, ಬೂಸ್ಟರ್ ಡೋಸ್ ನೀಡೋಕೆ ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿದೆ. ಇನ್ನು ಹೊಸ ವರ್ಷ ಆಚರಣೆ, ಹಬ್ಬದ ದಿನಗಳಲ್ಲಿ ಮಾರ್ಗಸೂಚಿ ಪಾಲಿಸಬೇಕು ಅಂತ ಆರೋಗ್ಯ ಸಚಿವ ಮಾಂಡವೀಯ ಹೇಳಿದ್ದಾರೆ.
ಇತ್ತ ರಾಜ್ಯದಲ್ಲೂ ಸಹ ಉನ್ನತ ಮಟ್ಟದ ಸಭೆ ಮಾಡಲಾಗಿದ್ದು, ಕೊರೊನಾ ಸಂಬಂಧ ಹಲವು ಗೈಡ್‌ಲೈನ್ಸ್‌ಗಳನ್ನ ಬಿಡುಗಡೆ ಮಾಡಲಾಗಿದೆ.
ಎಸಿ ಇರೋ ಕ್ಲೋಸ್‌ ಡೋರ್‌ ರೂಮ್‌ಗಳಲ್ಲಿ ಮಾಸ್ಕ್‌ ಬಳಕೆ ಮಾಡ್ಬೇಕು. ವ್ಯಾಕ್ಸಿನ್‌ನ ಮೂರನೇ ಡೋಸ್‌ನ್ನ ಎಲ್ಲರೂ ಹಾಕಿಸಿಕೊಳ್ಳಬೇಕು ಅಂತ ಆರೋಗ್ಯ ಸಚಿವ ಕೆ.ಸುಧಾಕರ್‌ ತಿಳಿಸಿದ್ದಾರೆ. ಜೊತೆಗೆ ಶ್ವಾಸಕೋಶಕ್ಕೆ ಸಂಬಂಧಪಟ್ಟ ಎಲ್ಲ ಪ್ರಕರಣಗಳಿಗೂ ಕಡ್ಡಾಯ ತಪಾಸಣೆ ಮಾಡೋಕೆ ನಿರ್ಧಾರ ಮಾಡಲಾಗಿದೆ. ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟ್‌ ಮಾಡಲಾಗುತ್ತೆ ಅಂತ ಸುಧಾಕರ್‌ ಹೇಳಿದ್ದಾರೆ. ಅತ್ತ ದಿಲ್ಲಿ, ತಮಿಳು ನಾಡು ಸೇರಿದಂತೆ ಇತರ ರಾಜ್ಯಗಳಲ್ಲೂ ಕೋವಿಡ್‌ಗೆ ಸಂಬಂಧಪಟ್ಟಂತೆ ಹೈ ಪ್ರೊಫೈಲ್‌ ಮೀಟಿಂಗ್‌ ಮಾಡಲಾಗಿದ್ದು ಗೈಡ್‌ಲೈನ್‌ಗಳನ್ನ ಜಾರಿ ಮಾಡಲಾಗಿದೆ.
ಎಂದಿನಂತೆ ಕೊರೊನಾ ವಿಚಾರ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಜಾಗತಿಕವಾಗಿ ಕೊರೊನಾ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಪ್ರಾರಂಭಿಸಿದ್ದ ʻಜನ ಆಕ್ರೋಶ ಯಾತ್ರೆʼಯನ್ನ ನಿಲ್ಲಿಸಿರೋದಾಗಿ ಬಿಜೆಪಿ ಹೇಳಿದೆ. ನಮಗೆ ರಾಜಕೀಯಕ್ಕಿಂತ ಜನರ ಸುರಕ್ಷತೆ ಮುಖ್ಯ.. ಹಾಗಾಗಿ ನಾವು ನಮ್ಮ ಯಾತ್ರೆಯನ್ನ ನಿಲ್ಲಿಸಿದ್ದೇವೆ ಅಂತ ಬಿಜೆಪಿ ನಾಯಕ ಅರುಣ್‌ ಸಿಂಗ್‌ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರೋ ಸಿಂಗ್‌, ಕಾಂಗ್ರೆಸ್ ಭಾರತ್‌ ಜೋಡೊ ಯಾತ್ರೆಯನ್ನ ಮುಂದುವರೆಸಿ, ಜನರ ಜೀವದ ಜೊತೆ ಆಟ ಆಡ್ತಿದೆ.. ಅಂತ ಕಿಡಿಕಾರಿದ್ದಾರೆ. ಇನ್ನೊಂದ್‌ ಕಡೆ ಭಾರತ್‌ ಜೋಡೊ ಯಾತ್ರೆಯನ್ನ ನಿಲ್ಲಿಸಿ ಅಂತ ಸಚಿವ ಮಾನ್ಸುಖ್‌ ಮಾಂಡವೀಯ ಬರೆದಿದ್ದ ಪತ್ರಕ್ಕೆ ರಾಹುಲ್‌ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಯಾತ್ರೆ ಕಾಶ್ಮೀರದವರೆಗೂ ಸಂಚರಿಸಲಿದೆ. ಈ ಬಾರಿ ಬಿಜೆಪಿ ಯಾತ್ರೆಯನ್ನ ನಿಲ್ಲಿಸೋಕೆ ಹೊಸ ಕೊರೊನಾ ನೆಪ ಮಾಡ್ಕೊಂಡ್‌ ಬಂದಿದೆ. ನಮ್ಮ ಯಾತ್ರೆಯಿಂದ ದೇಶದ ಶಕ್ತಿ ಮತ್ತು ಸತ್ಯದ ಬಗ್ಗೆ ಬಿಜೆಪಿಗೆ ಭಯ ಹುಟ್ಟಿದೆ.. ಹಾಗಾಗಿ ಮಾಸ್ಕ್‌ ಹಾಕಿ, ಯಾತ್ರೆ ನಿಲ್ಲಿಸಿ ಅಂತ ಹೇಳ್ತಿದ್ದಾರೆ.. ಇವೆಲ್ಲಾ ಯಾತ್ರೆ ನಿಲ್ಲಿಸೋಕೆ ಕಾರಣಗಳು ಅಷ್ಟೆ ಅಂತ ರಾಹುಲ್‌ ಗಾಂಧಿ ವಾಗ್ದಾಳಿ ಮಾಡಿದ್ದಾರೆ.
ಇತ್ತ ರಾಜ್ಯದಲ್ಲೂ ಸಹ ಕೊರೊನಾ ರಾಜಕೀಯ ಜೋರಾಗಿದೆ. ʻಕೋವಿಡ್‌ ನೆಪ ಮಾಡ್ಕೊಂಡು ಚುನಾವಣೆಯನ್ನ ಮುಂದೆ ಹಾಕೋಕೆ ಸರ್ಕಾರ ಪ್ರಯತ್ನ ಮಾಡ್ತಿದೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ..ಈ ಬಗ್ಗೆ ನಿನ್ನೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕರ ಬಳಿ ಚರ್ಚೆ ನಡೆಸಲಾಗಿದೆ. ಸಂಪುಟದಲ್ಲೂ ಚರ್ಚೆ ನಡಿತಿದೆ, ದೆಹಲಿಯ ಪ್ರಧಾನಿ ಕಚೇರಿಯಿಂದ ದೂರವಾಣಿ ಕರೆ ಬಂದಿದೆ ಅಂತ ಮಾಹಿತಿ ಇದೆ. ಇದೆಲ್ಲಾ ಚುನಾವಣೆ ಮಂದೂಡೋಕೆ ಮಾಡ್ತಿರೋ ಸಂಚು. ಅವ್ರು ಯಾವಾಗಾದ್ರು ಚುನಾವಣೆ ಮಾಡ್ಲಿ.. ನಮ್ಮ ಪಕ್ಷ ಸಿದ್ಧವಿದೆ ಅಂತ ಶಿವಕುಮಾರ್‌ ಹೇಳಿದ್ದಾರೆ. ಈ ಹಿಂದೆ ನಾವು ಮೇಕೆದಾಟು ಯಾತ್ರೆ ಮಾಡಿದಾಗ ಕೋವಿಡ್ ನೆಪದಲ್ಲಿ, ನಮ್ಮ ವಿರುದ್ಧ ನಾಲ್ಕೈದು ಪ್ರಕರಣಗಳನ್ನ ದಾಖಲಿಸಿದ್ರು. ಈಗ ರಾಹುಲ್‍ ಗಾಂಧಿ ಯಾತ್ರೆಗೆ ಜನ ಸೇರೋದನ್ನ ತಪ್ಪಿಸೋಕೆ ಕೇಸ್‌ ದಾಖಲಿಸುವ ಹುನ್ನಾರ ನಡೆದಿದೆ. ಕೋವಿಡ್ ವಿಷಯದಲ್ಲಿ ವೈಜ್ಞಾನಿಕವಾಗಿ ಯಾವುದೇ ಮಾಹಿತಿ ಇಲ್ಲ… ಆದರೆ ಪ್ರತಿಪಕ್ಷಗಳ ಜನಪ್ರಿಯ ಕಾರ್ಯಕ್ರಮಗಳನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಅಂತ ಕಾಂಗ್ರೆಸಿಗರು ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply