ಇಸ್ರೇಲ್‌ ವಿರುದ್ದ ಭಾರತ ಮತ! ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್‌ಗೆ ಸಪೋರ್ಟ್‌!

masthmagaa.com:

ಇಸ್ರೇಲ್‌- ಹಮಾಸ್‌ ಯುದ್ಧ ಮುಂದುವರೆದಿದ್ದು, ಇಸ್ರೇಲ್‌ ವಿರುದ್ಧ ಮುಸ್ಲಿಂ ರಾಷ್ಟ್ರಗಳು ಕೆಂಡಕಾರ್ತಿವೆ. ಇದೀಗ ಸೌದಿ ಅರೇಬಿಯಾದಲ್ಲಿ ನಡೆದ ಅರಬ್‌ ಮತ್ತು ಮುಸ್ಲಿಂ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಗಾಜಾ ಮೇಲಿನ ದಾಳಿಯನ್ನ ಖಂಡಿಸಿದ್ದಾರೆ. ʻʻಗಾಜಾ ನಗರದಲ್ಲಿ ಇಸ್ರೇಲ್‌ ಸೇನೆ ಆತ್ಮರಕ್ಷಣೆ ನೆಪದಲ್ಲಿ ನಡೆಸುತ್ತಿರೋ ಪ್ಯಾಲೆಸ್ತೀನಿ ನಾಗರಿಕರ ಹತ್ಯಾಕಾಂಡವನ್ನ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ತೀವ್ರವಾಗಿ ಖಂಡಿಸಬೇಕು. ಈ ಕೂಡಲೇ ಇಸ್ರೇಲ್‌ ಸೇನೆಗೆ ಉಗ್ರ ಸಂಘಟನೆಯ ಪಟ್ಟ ಕಟ್ಟಬೇಕುʼʼ ಅಂತ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಕರೆ ನೀಡಿದ್ದಾರೆ. ಮುಂದುವರೆದು ಮಾತಾಡಿರುವ ರೈಸಿ, ಅಮೆರಿಕ ಸರ್ಕಾರ ಈ ಯುದ್ಧದ ಪ್ರಮುಖ ಅಪರಾಧಿ. ಅಮೆರಿಕ ತನ್ನ ಅಕ್ರಮ ಮಗು ಇಸ್ರೇಲ್‌ಗೆ ಗಾಜಾದ ಅಮಾಯಕರ ವಿರುದ್ಧ ಅಪರಾಧ ಎಸಗಲು ಪ್ರೋತ್ಸಾಹ ಕೊಡ್ತಿದೆ. ಅಲ್ದೆ ಈ ಯುದ್ಧದ ಕಂಟ್ರೋಲಿಂಗ್‌ ಮಷಿನ್‌ ಅಮೆರಿಕದ ಕೈಯಲ್ಲಿದ್ದು, ಕದನವಿರಾಮ ಘೋಷಿಸದಂತೆ ತಡಿತಿದೆ. ಜಗತ್ತು ಅಮೆರಿಕದ ಇನ್ನೊಂದು ಮುಖವನ್ನ ನೋಡ್ಬೇಕು ಅಂತ ಕಿಡಿಕಾರಿದ್ದಾರೆ. ಇದೇ ವೇಳೆ ಹಮಾಸ್‌ ಉಗ್ರರನ್ನ ಹೊಗಳಿರುವ ರೈಸಿ, ಹಮಾಸ್‌ಗೆ ಇಸ್ರೇಲ್‌ ದಾಳಿಯನ್ನ ತಡೆಯದೇ ಬೇರೆ ದಾರಿಯಿಲ್ಲ. ಹೀಗಾಗಿ ಯಶಸ್ವಿಯಾಗಿ ಇಸ್ರೇಲ್‌ ದಾಳಿಗೆ ಪ್ರತಿರೋಧ ಒಡ್ಡುತ್ತಿರೋ ಹಮಾಸ್‌ಗಳ ಕೈಗೆ ಮುತ್ತು ಕೊಡ್ತೀವಿ ಅಂತ ಹೇಳಿದ್ದಾರೆ. ಈ ಕಡೆ ಗಾಜಾ ಮೇಲಿನ ಇಸ್ರೇಲ್ ದಾಳಿಯ ಖಂಡನೆ ನಡುವೆಯೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇಸ್ರೇಲ್ ಜತೆಗಿನ ರಾಜತಾಂತ್ರಿಕ ಸಂಬಂಧವನ್ನು ಉಳಿಸಿಕೊಳ್ಳಲು ಆಲೋಚನೆ ನಡೆಸಿದೆ ಅಂತ ವರದಿಯಾಗಿದೆ. ಯುಎಇ ತನ್ನ ಸ್ವಹಿತಾಸಕ್ತಿಗಳನ್ನು ಕಾಪಾಡಿಕೊಳ್ಳೋದ್ರ ಜೊತೆ ಇಸ್ರೇಲ್ ನಡೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸೋದು ಉದ್ದೇಶವಾಗಿದೆ ಅಂತ ಹೇಳಲಾಗ್ತಿದೆ. ಒಟ್ಟಿನಲ್ಲಿ ಹಲವು ರಾಷ್ಟ್ರಗಳು ಇಸ್ರೇಲ್‌- ಹಮಾಸ್‌ ಯುದ್ಧವನ್ನ ಅಡ್ವಾಂಟೇಜ್‌ ಆಗಿ ತೆಗೆದುಕೊಳ್ಳೋ ಪ್ರಯತ್ನ ನಡೆಸುತ್ತಿವೆ ಅಂತ ವಿಶ್ಲೇಷಣೆ ಮಾಡಲಾಗ್ತಿದೆ.

ಇತ್ತ ಹಮಾಸ್‌ ಉಗ್ರರು ಉತ್ತರ ಗಾಜಾದಲ್ಲಿ ತಮ್ಮ ಕಂಟ್ರೋಲ್‌ ಕಳೆದುಕೊಂಡಿದ್ದು, ಉಗ್ರರಿಗೆ ಅಡಗಿಕೊಳ್ಳಲು ಯಾವುದೇ ಜಾಗವಿಲ್ಲ ಅಂತ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಜೊತೆಗೆ ಹಮಾಸ್‌ನ ಲೀಡರ್‌ ಯಾಹ್ಯ ಸಿನ್ವಾರ್‌ನಿಂದ ಹಿಡಿದು ಹಮಾಸ್‌ನ ಕೊನೆ ಭಯೋತ್ಪಾದಕನವರೆಗೂ ಎಲ್ಲರನ್ನೂ ಹೊಡೆದು ಹಾಕ್ತೀವಿ. ನಮ್ಮ ಸೇನೆ ಭೂಮಿಯ ಮೇಲೆ ಹಾಗೂ ಸುರಂಗದ ಒಳಗೂ ನುಗ್ಗಿ ದಾಳಿ ನಡೆಸುತ್ತಿದ್ದು, ಗೆಲ್ಲೋವರೆಗೂ ನಮ್ಮ ದಾಳಿಯನ್ನ ಕಂಟಿನ್ಯೂ ಮಾಡ್ತೀವಿ ಅಂತ ನೆತನ್ಯಾಹು ಅಬ್ಬರಿಸಿದ್ದಾರೆ. ಅತ್ತ ಹಮಾಸ್‌ನ ಪ್ರಮುಖ ಕಮಾಂಡರ್‌ ಅಹ್ಮದ್‌ ಸಿಯಾಮ್‌ನನ್ನ ಹೊಡೆದುರುಳಿಸಿರೋದಾಗಿ ಇಸ್ರೇಲ್‌ ಸೇನೆ ಹೇಳಿದೆ. ಈ ಸಿಯಾಮ್‌ ಗಾಜಾದ ರಾಂಟಿಸ್‌ ಆಸ್ಪತ್ರೆಯಲ್ಲಿ ಸುಮಾರು ಒಂದು ಸಾವಿರ ಪೇಷಂಟ್‌ಗಳನ್ನ ಒತ್ತೆಯಾಳಾಗಿಟ್ಟುಕೊಂಡಿದ್ದ. ಅಲ್ದೆ ಈ ಉಗ್ರ ಉತ್ತರ ಗಾಜಾದಿಂದ ಜನರು ಸುರಕ್ಷಿತ ಸ್ಥಳಗಳಿಗೆ ಹಾಗೂ ದಕ್ಷಿಣ ಗಾಜಾಗೆ ತೆರಳಿದಂತೆ ಸ್ಟಾಪ್‌ ಮಾಡ್ತಿದ್ದ. ಈಗ ಆತನನ್ನ ಕೊಂದು ಹಾಕಿದ್ದೀವಿ ಅಂತ ಇಸ್ರೇಲ್‌ ಸೇನೆ ತಿಳಿಸಿದೆ.

ಇನ್ನೊಂದ್‌ ಕಡೆ ಪ್ಯಾಲಸ್ತೈನ್‌ನಲ್ಲಿ ಇಸ್ರೇಲ್‌ನ ಸೆಟಲ್‌ಮೆಂಟ್‌ಗಳನ್ನ ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. ಪೂರ್ವ ಜೆರುಸೆಲಂ ಸೇರಿದಂತೆ, ಪ್ಯಾಲಸ್ತೈನ್‌ ಮತ್ತು ಸಿರಿಯಾದಿಂದ ವಶಪಡಿಸಿಕೊಂಡಿರೋ ಜಾಗಗಳಲ್ಲಿ ಇಸ್ರೇಲ್‌ ಚಟುವಟಿಕೆಗಳನ್ನ ಖಂಡಿಸುವ ನಿರ್ಣಯವನ್ನ ವಿಶ್ವಸಂಸ್ಥೆಯಲ್ಲಿ ಅಂಗೀಕರಿಸಲಾಗಿದೆ. ಈ ನಿರ್ಣಯಕ್ಕೆ ಭಾರತ ವೋಟ್‌ ಹಾಕಿದ್ದು, ಇದನ್ನ ವಿರೋಧಿಸಿ ಅಮೆರಿಕ ಹಾಗೂ ಕೆನಡಾ ಸೇರಿ 7 ದೇಶಗಳು ಮತಹಾಕಿವೆ. ಇನ್ನು ಈ ಬಗ್ಗೆ ಮಾತಾಡಿರೋ ಭಾರತದ ಉಪ ಖಾಯಂ ಪ್ರತಿನಿಧಿ ಯೋಜನಾ ಪಟೇಲ್‌, ಮಾನವೀಯ ಬಿಕ್ಕಟ್ಟನ್ನ ಬಗೆಹರಿಸಿ ಗಾಜಾ ಜನರಿಗೆ ನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ಜಾಗತಿಕವಾಗಿ ತೆಗೆದುಕೊಳ್ಳುವ ನಿರ್ಣಯವನ್ನ ನಾವು ಸ್ವಾಗತಿಸುತ್ತೇವೆ ಹಾಗೂ ಭಾರತ ಕೂಡ ತನ್ನ ಪ್ರಯತ್ನ ಮಾಡ್ತಿದೆ ಅಂತ ಹೇಳಿದ್ದಾರೆ. ಜೊತೆಗೆ ಭಾರತ ಮೊದಲಿನಿಂದಲೂ ಮಾತುಕತೆ ನಡೆಸಿ ಪ್ಯಾಲಸ್ತೈನ್‌ ಬಿಕ್ಕಟ್ಟನ್ನ ಪರಿಹರಿಸಿಕೊಳ್ಳಲು ಬೆಂಬಲ ಕೊಡ್ತಾ ಬಂದಿದೆ. ಜೊತೆಗೆ ಇಸ್ರೇಲ್‌- ಪ್ಯಾಲಸ್ತೈನ್‌ ಶಾಂತಿಯುತ ಗಡಿ ಹಂಚಿಕೊಳ್ಳೋ ಮೂಲಕ ಸಾರ್ವಭೌಮ ಸ್ವತಂತ್ರ ಪ್ಯಾಲಸ್ತೈನ್‌ ರಚನೆಗೆ ಸಪೋರ್ಟ್‌ ಮಾಡುತ್ತೆ ತಿಳಿಸಿದ್ದಾರೆ.

ಅತ್ತ ಇಸ್ರೇಲ್‌ ದಾಳಿಗೆ ತುತ್ತಾಗಿರೋ ಗಾಜಾದ ಆಸ್ಪತ್ರೆ ಅಲ್‌ ಶಿಫಾ ಜೊತೆಗಿನ ಸಂಪರ್ಕ ಕಟ್‌ ಆಗಿದೆ ಅಂತ WHO ಹೇಳಿದೆ. ಕೂಡಲೇ ಗಾಜಾದಲ್ಲಿ ಕದನವಿರಾಮ ಘೋಷಿಸಬೇಕು ಅಂತ ಒತ್ತಾಯಿಸಿದ್ದು, ಆಸ್ಪತ್ರೆಯಲ್ಲಿ ಸಿಗಾಕ್ಕೊಂಡಿರೋ ಹೆಲ್ತ್‌ ವರ್ಕರ್ಸ್‌ ಹಾಗೂ ರೋಗಿಗಳ ಕುರಿತು WHO ಕಳವಳ ವ್ಯಕ್ತಪಡಿಸಿದೆ. ಈ ಕಡೆ ದಾಳಿಯಲ್ಲಿ ಮೂರು ನವಜಾತಶಿಶುಗಳು ಪ್ರಾಣ ಕಳೆದುಕೊಂಡಿದ್ದು, ಹಲವು ಮಕ್ಕಳು ಇಂಟೆನ್ಸಿವ್‌ ಕೇರ್‌ನಲ್ಲಿವೆ. ಆದ್ರೆ ಎಲೆಕ್ಟ್ರಿಸಿಟಿ ಪೂರೈಕೆಯಿಲ್ಲದ ಕಾರಣ ಮಕ್ಕಳ ಸಾವಿನ ಸಂಖ್ಯೆ ಏರಿಕೆಯಾಗೋ ಸಾಧ್ಯತೆಯಿದೆ ಅಂತ ಆಸ್ಪತ್ರೆಯ ಡೈರಕ್ಟರ್‌ ಹೇಳಿದ್ದಾರೆ. ಇದರ ನಡುವೆಯೇ ಆಸ್ಪತ್ರೆಯಿಂದ ಮಕ್ಕಳನ್ನ ಸ್ಥಳಾಂತರ ಮಾಡೋಕೆ ನಾವು ರೆಡಿ ಇದೀವಿ ಅಂತ ಇಸ್ರೇಲ್‌ ಸೇನೆ ಹೇಳಿದೆ. ಇದೆಲ್ಲದರ ನಡುವೆ ವಿದೇಶಿ ಪಾಸ್‌ಪೋರ್ಟ್‌ ಇರೋರು ಗಾಜಾದಿಂದ ಸ್ಥಳಾಂತರಗೊಳ್ಳಲು ಈಜಿಪ್ಟ್‌- ಗಾಜಾ ನಡುವಿನ ರಾಫಾ ಬಾರ್ಡರ್‌ ಓಪನ್‌ ಮಾಡೋದಾಗಿ ಗಾಜಾ ಅಧಿಕಾರಿಗಳು ಅನೌನ್ಸ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply