ಶಂಕರ್ ನಾಗ್, ಚಿರಂಜೀವಿ ಸರ್ಜಾ, ಅಪ್ಪು ಕೊನೆಯ ಸಿನಿಮಾ ಬಗ್ಗೆ ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ವಿಷಯ!

masthmagaa.com:

ತಮ್ಮ ಡಿಫೆರೆಂಟ್‌ ಗೆಟಪ್‌, ಸ್ಟೈಲ್‌, ಡಾನ್ಸ್‌, ನಟನೆಯ ಮೂಲಕ ಜನರ ಮನಸ್ಸಲ್ಲಿ ಮನೆ ಮಾಡುವ ನಟರು ಅಭಿಮಾನಿಗಳನ್ನ ಅಗಲಿದಾಗ ಉಂಟಾಗುವ ನೋವು ಪದಗಳಲ್ಲಿ ಹೇಳೋಕೆ ಸಾಧ್ಯಇಲ್ಲ. ಲೈಫ್‌ ಅಲ್ಲಿ ಒಂದು ಸಲ ಆದ್ರೂ ತಮ್ಮ ಫೇವರೇಟ್‌ ಆಕ್ಟರ್‌ನ್ನ ನೋಡ್ಭೇಕು, ಅವರ ಜೊತೆ ಸೆಲ್ಫಿ ತಗೋಬೇಕು ಅಂತ ಕನಸು ಕಾಣುವ ಅಭಿಮಾನಿಗಳಿಗೆ ಅವರ ಸಾವು ದೊಡ್ಡ ಆಘಾತ ಆಗ್ಬಿಡತ್ತೆ. ಕನ್ನಡ ಚಿತ್ರರಂಗದಲ್ಲಿ ಅಕಾಲಿಕ ಮರಣ ಹೊಂದಿದ ನಟರ ಕೊನೆಯ ಸಿನಿಮಾಗೆ ಅವರ ಅಣ್ಣ ಅಥ್ವಾ ತಮ್ಮ ವಾಯ್ಸ್‌ ಕೊಟ್ಟಿರುವ ಕೆಲವು ನಿದರ್ಶನಗಳಿವೆ. ಅವುಗಳಲ್ಲಿ ಕೆಲವನ್ನ ಈ ವರದಿಯಲ್ಲಿ ನೋಡೋಣ

1. ಶಂಕರ್‌ ನಾಗ್‌ : ಶಂಕರ್‌ ನಾಗ್‌ ಅಂದ್ರೆ ಯಾರಿಗೆ ಗೊತ್ತಿರಲ್ಲ ಹೇಳಿ. ಸಪ್ಟಂಬರ್‌ 30, 1990ರಂದು ನಮ್ಮನ್ನೆಲ್ಲಾ ಅಗಲಿದ ಶಂಕರ್‌ನಾಗ್‌, 80 ದಶಕದ ಹೀರೋ ಆದರೂ ಕೂಡ ಈಗಿನ ಜನರೇಷನ್‌ ಮಕ್ಕಳಿಗೂ ಸಹ ಇವರು ಫೇವರೇಟ್‌ ಆಗಿರ್ತಾರೆ. ತಮ್ಮ 35 ವರ್ಷದ ಸಣ್ಣ ಜರ್ನಿಯಲ್ಲೇ ಇಡೀ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಛಾಪನ್ನ ಶಂಕರ್‌ನಾಗ್‌ ಮೂಡಿಸಿದ್ರು. “ಒಂದಾನೊಂದು ಕಾಲದಲ್ಲಿ”ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶಂಕರ್‌ ನಾಗ್‌, ನಟನಾಗಿ ಮಾತ್ರವಲ್ಲದೇ “ಮಿಂಚಿನ ಓಟ”, “ಗೀತಾ”, “ಒಂದು ಮುತ್ತಿನ ಕತೆ” ಚಿತ್ರದ ಮೂಲಕ ಡೈರೆಕ್ಟರ್‌ ಆಗಿಯೂ ಕೂಡ ಫೇಮಸ್‌ ಆದ್ರು. ಆಟೋರಾಜ ಚಿತ್ರದ ಮೂಲಕ ಪ್ರತಿಯೊಬ್ಬ ಆಟೋ ಚಾಲಕರಿಗೂ ಕೂಡ ಇವರು ಚಿರಪರಿಚಿತ ಆದ್ರು. ಮೂವತ್ತು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಮಾಲ್ಗುಡಿ ಡೇಸ್ ಧಾರಾವಾಹಿ ಎಲ್ಲರಿಗೂ ನೆನಪಿರತ್ತೆ. 80 ಮತ್ತು 90ರ ದಶಕದ ಆರಂಭದಲ್ಲಿ ಈ ಧಾರವಾಹಿ ಮನೆಮಾತಾಗಿತ್ತು. ಮಾಲ್ಗುಡಿಯ ಕಾಲ್ಪನಿಕ ಕಥೆಗಳು ಭಾರತೀಯ ಪ್ರೇಕ್ಷಕರನ್ನು ಹಲವು ವರ್ಷಗಳ ಕಾಲ ರಂಜಿಸಿದ್ದವು. ಇಂತ ಅದ್ಭುತ ಕತೆಯನ್ನ ಡೈರೆಕ್ಟ್‌ ಮಾಡಿದ್ದು ನಮ್ಮ ಕನ್ನಡದ ಶಂಕರ್‌ ನಾಗ್‌.

ಕರಾಟೆ ಕಿಂಗ್‌ ಶಂಕರ್‌ ನಾಗ್‌ ಅವರು ಎಂದಿಗೂ ಮರೆಯೋಕೆ ಸಾಧ್ಯವಾಗದೇ ಇರುವಂತ ಅದ್ಭುತ ಸಿನಿಮಾಗಳನ್ನ ನಮಗೆ ಕೊಡುಗೆಯಾಗಿ ಕೊಟ್ಟು ಹೋಗಿದ್ದಾರೆ. ಇನ್ನು ಶಂಕರ್‌ ನಾಗ್‌ ಅವರ ಕೊನೆಯ ಚಿತ್ರ “ನಾಗಿಣಿ”. ಕೆಲವೊಂದು ಕಡೆ ” ಸುಂದರಕಾಂಡ” ಇವರ ಕೊನೆ ಚಿತ್ರ ಅಂತ ಹೇಳಲಾಗತ್ತೆ. ಯಾಕಂದ್ರೆ ನಾಗಿಣಿ ಚಿತ್ರ ನಂತರ ಸುಂದರಕಾಂಡ ಚಿತ್ರ ರಿಲೀಸ್‌ ಆಗಿದ್ದು. ಆದರೆ ಕೆಲವು ಮೂಲಗಳ ಪ್ರಕಾರ ಸುಂದರಕಾಂಡದ ಶೂಟಿಂಗ್‌ ಎಲ್ಲಾ ಮೊದಲೇ ಮುಗಿದಿತ್ತು. ರಿಲೀಸ್‌ ಮಾಡಿದ್ದು ಮಾತ್ರ ಲೇಟ್‌ ಆಗಿ. ಹಾಗಾಗಿ ನಾಗಿಣಿ ಚಿತ್ರ ಅರ್ಧ ಭಾಗದಿಂದ ಶಂಕರ್‌ನಾಗ್‌ ಅವರ ವಾಯ್ಸ್‌ ಗೆ ಅನಂತ್‌ನಾಗ್‌ ಡಬ್‌ ಮಾಡಿದ್ರು. ನಾಗಿಣಿ ಸಿನಿಮಾದ್‌ ಶೂಟಿಂಗ್‌ ಎಲ್ಲಾ ಕಂಪ್ಲೀಟ್‌ ಆದ ನಂತರ ಶಂಕರ್‌ ನಾಗ್‌ ಅವರಿಗೆ ಆಕ್ಸಿಡೆಂಟ್‌ ಆಗಿ ನಮ್ಮನ್ನೆಲ್ಲಾ ಅಗಲಿದ್ದು. ಈಗಲೂ ಅವರು ನಮ್ಮ ಜೊತೆಯಲ್ಲಿದ್ದಾರೆ ಅಂತಾನೇ ಅಭಿಮಾನಿಗಳು ತಿಳಿದಿದ್ದಾರೆ. ಈಗಲೂ ಪ್ರತಿ ಆಟೋ ಡ್ರೈವರ್ ಗಳು ಅವರನ್ನೇ ನೆನಪು ಮಾಡಿಕೊಳ್ತಾರೆ, ಕನ್ನಡ ರಾಜ್ಯೋತ್ಸವ ಬಂತು ಅಂದ್ರೆ ಸಾಕು ಶಂಕರ್‌ನಾಗ್‌ ಅವರ ಫೋಟೋ ಇಟ್ಟು ಪೂಜೆ ಮಾಡ್ತಾರೆ.

2. ಚಿರಂಜೀವಿ ಸರ್ಜಾ : ಜೂನ್‌ 6, 2020ರಂದು ಯುವ ನಟ, ಬಾಳಿ‌ ಬದುಕಬೇಕಿದ್ದ ಪ್ರತಿಭೆ ಹೇಳದೇ ಕೇಳದೇ ಇಹಲೋಕ ತ್ಯಜಿಸಿದ್ರು. ಚಿರಂಜೀವಿ ಸರ್ಜಾ ನಮ್ಮನ್ನೆಲ್ಲಾ ಅಗಲಿ 3 ವರ್ಷ ಆಗ್ತಾ ಬಂತು. ಆದರೂ ಕೂಡ ಅವರ ನೆನಪು ಇನ್ನೂ ಹಾಗೇ ಇದೆ. ಚಿರಂಜೀವಿ ಸರ್ಜಾ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಶಾಕ್‌ ಆಗಿತ್ತು. ಬಣ್ಣದ ಲೋಕಕ್ಕೆ ಕಾಲಿಟ್ಟು ಬರೀ 10 ವರ್ಷಗಳಾಗಿತ್ತು. ನಟಿ ಮೇಘನಾ ರಾಜ್ ಅವರನ್ನು ಮನಸಾರೆ ಇಷ್ಟಪಟ್ಟು ಮದುವೆ ಆಗಿದ್ದರು. ಕೆಲವೇ ತಿಂಗಳಲ್ಲಿ ಜ್ಯುನಿಯರ್‌ ಚಿರು ಎಂಟ್ರಿ ಆಗ್ತಿತ್ತು. ಈ ಎಲ್ಲ ಸಂಭ್ರಮಗಳನ್ನುಅರ್ಧಕ್ಕೆ ಬಿಟ್ಟು ಚಿರು ಇಹಲೋಕ ತ್ಯಜಸಿದರು. ಹಾರ್ಟ್‌ ಅಟ್ಯಾಕ್‌ನಿಂದ ಸಾವನ್ನಪ್ಪಿದ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ “ರಾಜಮಾರ್ತಾಂಡ.” ಈ ಸಿನಿಮಾದ ಡಬ್ಬಿಂಗ್‌ ಮುಗಿದಿರಲಿಲ್ಲ. ಅಷ್ಟರಲ್ಲೇ ಚಿರು ಇಹಲೋಕ ತ್ಯಜಿಸಿದ್ರು. ಹಾಗಾಗಿ ಅಣ್ಣನ ಕೊನೆ ಸಿನಿಮಾಗೆ ಧೃವ ಸರ್ಜಾ ವಾಯ್ಸ್‌ ಕೊಟ್ಟಿದ್ದಾರೆ. ಈ ಸಿನಿಮಾ ಇನ್ನಷ್ಟೇ ರಿಲೀಸ್‌ ಆಗಬೇಕಿದೆ. ಧೃವ ಸರ್ಜಾ ಮತ್ತು ಚಿರಂಜೀವಿ ಅರ್ಜಾ ಅವರ ಬಾಂಡಿಂಗ್‌ ತುಂಬಾನೇ ಅದ್ಭುತ ಅಂತ ಹೇಳಬೋದು. ಇವರಿಬ್ಬರ ಈ ಬಾಂಡಿಂಗ್‌ ಬಗ್ಗೆ ಇಡೀ ಸ್ಯಾಂಡಲ್‌ವುಡ್‌ಗೆ ಗೊತ್ತಿತ್ತು. ಈಗಲೂ ಕೂಡ ಧೃವ ಸರ್ಜಾ ಅಣ್ಣನ ನೆನಪು ಮಾಡಿಕೊಂಡು ಸೋಷಿಯಲ್‌ ಮಿಡಿಯಾದಲ್ಲಿ ಕೆಲವು ಪೋಸ್ಟ್‌ಗಳನ್ನ ಮಾಡ್ತಾ ಇರ್ತಾರೆ.

3. ಪುನೀತ್‌ ರಾಜ್‌ಕುಮಾರ್‌ : ಪವರ್‌ ಸ್ಟಾರ್‌ ಅನ್ನೋ ಹೆಸರು ಕೇಳಿದ್ರೆ ಸಾಕು ಒಂದ್‌ ಸೆಕೆಂಡ್‌ ಗೂಸ್‌ಬಂಬ್ಸ್‌ ಬರತ್ತೆ. ನಟನೆ ಮಾತ್ರವಲ್ಲದೇ ತಮ್ಮ ಸಾಮಾಜಿಕ ಕಾರ್ಯಗಳಿಂದ ಕೂಡ ಪುನೀತ್‌ ರಾಜ್‌ಕುಮಾರ್‌ ಜನಮಾನಸದಲ್ಲಿ ಒಂದಾದವರು. ಸ್ಯಾಂಡಲ್‌ವುಡ್‌ನ ಸರಳತೆಯ ಸಾಮ್ರಾಟ್‌, ಅಭಿಮಾನಿಗಳ ಆರಾಧ್ಯದೈವ, ಕನ್ನಡ ಚಿತ್ರರಂಗದ ಬೆಟ್ಟದ ಹೂ, ಯುವಕರ ಪಾಲಿನ ಯುವರತ್ನ, ಅಪ್ಪು ಅವರು ಅಕ್ಟೋಬರ್‌ 29, 2021ರಂದು ನಮ್ಮನ್ನೆಲ್ಲಾ ಅಗಲಿದ ನೋವನ್ನ ಇಂದಿಗೂ ಯಾರೂ ಮರೆತಿಲ್ಲ. ಎಂದಿಗೂ ಮರೆಯೋದಿಲ್ಲ. ಇವರ ಸಾವು ಕರುನಾಡಿನ ಪ್ರತಿಯೊಂದು ಮನೆಯಲ್ಲೂ ಮೌನ ತಂದಿತ್ತು. ಅಪ್ಪು ಅಭಿಮಾನಿಗಳಿಗೆ ದೇವರು ಮಾಡಿದ ಮಹಾ ಮೋಸ ಅಂತ ಅಭಿಮಾನಿಗಳು ಈಗಲೂ ದೇವರಿಗೆ ಹಿಡಿ ಶಾಪ ಹಾಕ್ತಾರೆ. ಆದರೆ ಸಾವು ಅನ್ನೋದು ಎಲ್ಲವನ್ನೂ, ಎಲ್ಲರಿಂದಲೂ ದೂರ ಮಾಡಿಬಿಡತ್ತೆ. ಇನ್ನೂ ಎಷ್ಟೋ ಜನರ ಜೀವನ , ಸಂಸಾರದ ಬೆಳಕಾಗಿದ್ದ ಅಪ್ಪು ಎಂದಿಗೂ ಅಮರ. ಇನ್ನು ಅಪ್ಪು ಅವರ ಕೊನೆಯ ಚಿತ್ರ ” ಜೇಮ್ಸ್‌”. ಮಾರ್ಚ್ 17ರಂದು ಪವರ್​ ಸ್ಟಾರ್​ ಹುಟ್ಟುಹಬ್ಬದಂದು ಅವರ ಕೊನೆಯ ಸಿನಿಮಾ ‘ಜೇಮ್ಸ್’ ರಿಲೀಸ್​ ಆಗಿ ಸೂಪರ್ ಹಿಟ್​ ಆಗಿತ್ತು. ಅಪ್ಪು ಅವರ ಕೊನೆಯ ಸಿನಿಮಾಗೆ ಸೆಂಚುರಿ ಸ್ಟಾರ್​ ಶಿವಣ್ಣ ಧ್ವನಿ ನೀಡಿದ್ದರು, ಅಪ್ಪುಅವರ ಶೂಟಿಂಗ್‌ ಟೈಮ್‌ನಲ್ಲಿ ಮಾತನಾಡಿದ್ದ ಧ್ವನಿಯನ್ನುಹೊಸ ತಂತ್ರಜ್ಞಾನ ಬಳಸಿ ಉಳಿಸಿಕೊಳ್ಳೋದಕ್ಕೆ ಚಿತ್ರತಂಡ ಶತಾಯಗತಾಯ ಪ್ರಯತ್ನ ಮಾಡಿತ್ತು, ಆಡಿಯೋ ಸ್ಯಾಂಪಲ್‌ನ್ನ ವಿದೇಶಕ್ಕೂ ಕಳಿಸಲಾಗಿತ್ತು. ಆದರೆ ಬಿಡುಗಡೆ ವೇಳೆಗೆ ಈ ಪ್ರಯತ್ನ ಫಲಿಸದ ಕಾರಣ ಶಿವಣ್ಣ ಅಪ್ಪುಗೆ ವಾಯ್ಸ್‌ ಕೊಟ್ರು. ಸೋ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಅಪ್ಪು ವಾಯ್ಸ್‌ನ್ನ ಮಿಸ್‌ ಮಾಡಿಕೊಂಡಿದ್ರು, ಆದರೆ OTTಯಲ್ಲಿ ಜೇಮ್ಸ್‌ ಸಿನಿಮಾ ರಿಲೀಸ್‌ ಆಗಿದೆ. ಇಲ್ಲಿ ಅಪ್ಪು ಅವರ ವಾಯ್ಸ್‌ ಅಲ್ಲೇ ಸಿನಿಮಾವನ್ನ ನೋಡಬಹುದಾಗಿದೆ.

-masthmagaa.com

Contact Us for Advertisement

Leave a Reply