ನಾಳೆಯಿಂದಲೇ ಭಾಗಶಃ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಆರಂಭ

masthmagaa.com:

ಕೊರೋನಾ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಹಂತ ಹಂತವಾಗಿ ಆರಂಭವಾಗುವ ಲಕ್ಷಣ ಕಾಣ್ತಿದೆ. ದೆಹಲಿಯಲ್ಲಿ ಇವತ್ತು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ, ‘ಫ್ರಾನ್ಸ್, ಅಮೆರಿಕ ಮತ್ತು ಜರ್ಮನಿ ದೇಶಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇದರ ಪ್ರಕಾರ ಜುಲೈ 18ರಿಂದ ಆಗಸ್ಟ್ 1ರವರೆಗೆ ದೆಹಲಿ, ಮುಂಬೈ, ಬೆಂಗಳೂರು ಮತ್ತು ಫ್ರಾನ್ಸ್​ನ ಪ್ಯಾರಿಸ್ ನಡುವೆ ವಿಮಾನಯಾನ ಸೇವೆ ಆರಂಭವಾಗಲಿದೆ. ಏರ್​ ಫ್ರಾನ್ಸ್ ಕಂಪನಿಯ 28 ವಿಮಾನಗಳು ಈ ಅವಧಿಯಲ್ಲಿ ಹಾರಾಟ ನಡೆಸಲಿವೆ’ ಎಂದಿದ್ದಾರೆ.

ಅಮೆರಿಕ ವಿಚಾರಕ್ಕೆ ಬಂದ್ರೆ ಯುನೈಟೆಡ್​ ಏರ್​ಲೈನ್ಸ್​ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಜುಲೈ 17ರಿಂದ ಜುಲೈ 31ರವರೆಗೆ ಒಟ್ಟು 18 ವಿಮಾನಗಳು ಭಾರತ-ಅಮೆರಿಕ ನಡುವೆ ಹಾರಾಟ ನಡೆಸಲಿವೆ. ಜರ್ಮನಿಗೂ ಮನವಿ ಮಾಡಿಕೊಂಡಿದ್ದು, ಲುಫ್ತಾನ್ಸಾ ಕಂಪನಿ ಜೊತೆಗಿನ ಒಪ್ಪಂದ ಕೊನೆಯ ಹಂತದಲ್ಲಿದೆ ಎಂದಿದ್ದಾರೆ.

ಟ್ರಾವೆಲ್ ಬಬಲ್ ಅಥವಾ ದ್ವಿಪಕ್ಷೀಯ ಏರ್​ ಬಬಲ್ ಒಪ್ಪಂದದ ಅಡಿ ಈ ಮಧ್ಯಂತರ ವಿಮಾನಯಾನ ಸೇವೆ ಆರಂಭವಾಗಲಿದೆ. ಅಂದ್ರೆ ಎರಡು ದೇಶಗಳು ತಮ್ಮ ಗಡಿಗಳನ್ನ ಮತ್ತೆ ತೆರೆದು ಪುನಃ  ಸಂಪರ್ಕ ಸ್ಥಾಪಿಸುವುದಾಗಿದೆ. ಕೊರೋನಾ ಹಾವಳಿಯನ್ನ ನಿಯಂತ್ರಿಸಿದ ದೇಶಗಳು ಅಥವಾ ಹೆಚ್ಚೆಚ್ಚು ಕೊರೋನಾ ಪರೀಕ್ಷೆಗಳನ್ನ ನಡೆಸುವ ದೇಶಗಳ ನಡುವೆ ಈ ವಿಶೇಷ ಒಪ್ಪಂದ ಏರ್ಪಡುತ್ತದೆ.

ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ಏರ್​ ಬಬಲ್ಸ್ ಉತ್ತಮ ಆಯ್ಕೆ. ಎಷ್ಟು ಸಾಧ್ಯವೋ ಅಷ್ಟು ಪ್ರಯಾಣಿಕರಿಗೆ ಈ ಏರ್ ಬಬಲ್ ವ್ಯವಸ್ಥೆ ಮೂಲಕ ಅವಕಾಶ ಮಾಡಿಕೊಡುತ್ತೇವೆ. ಆದ್ರೆ ಇದು ಉಚಿತವಲ್ಲ. ಪ್ರಯಾಣಕ್ಕೂ ಮುನ್ನ ಕೆಲವೊಂದು ಪರೀಕ್ಷೆಗಳನ್ನ ನಡೆಸಲಾಗುತ್ತದೆ. ಅಲ್ಲದೆ ಹೊರ ದೇಶಗಳು ಕೂಡ ಕೆಲವೊಂದು ನಿರ್ಬಂಧಗಳನ್ನ ವಿಧಿಸಿವೆ. ಹೀಗಾಗಿ ನಿಮ್ಮ ಬಳಿ ವೀಸಾ ಸೇರಿದಂತೆ ಬೇರೆಲ್ಲಾ ದಾಖಲೆಗಳು ಇದ್ದರೂ ಸರ್ಕಾರದಿಂದ ವಿಶೇಷ ಅನುಮತಿ ಪಡೆಯಬೇಕು ಅಂತ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply