ಇಸ್ರೇಲ್‌-ಹಮಾಸ್‌ ಯುದ್ಧ! 500ಕ್ಕೂ ಹೆಚ್ಚು ಜನರ ಮಾರಣಹೋಮ!

masthmagaa.com:

ಸದಾ ಯುದ್ಧಕ್ಕಾಗಿ ಹಪಹಪಿಸುವ ಮಧ್ಯಪ್ರಾಚ್ಯದಲ್ಲಿ ಮತ್ತೆ ಕಿಡಿ ಹಾರಿದೆ. ತುಂಡು ಭೂಮಿಗಾಗಿ ದಶಕಗಳ ಕದನಕ್ಕೆ ಹಮಾಸ್​​​ ಮತ್ತೆ ಕಾಲ್ಕೆರೆದಿದೆ. ರಾಕೆಟ್​​ಗಳ ಸುನಾಮಿ, ಮದ್ದಿನ ಮಾರ್ದನ ಮೆಡಿಟೆರಿನಿಯನ್​ ಸಮುದ್ರ ದಂಡೆಯನ್ನ ನೆತ್ತರಗಂಪಿಗೆ ತಿರುಗಿಸಿದೆ. ಹಮಾಸ್​​ನ ಯುದ್ಧದಾಹದಿಂದ ರಕ್ಕಸ ರೂಪದ ಟೆರರಿಸ್ಟ್​ಗಳು ಬೆಂಕಿ ಉಗುಳುತ್ತಿದ್ದಾರೆ. ಗಾಜಾ ಪಟ್ಟಿಯಿಂದ ಹೊರ ಚಿಮ್ಮುತ್ತಿರೋ ಕ್ಷಿಪಣಿ, ಇಸ್ರೇಲ್​ನ್ನ ಕಾಡ್ಗಿಚ್ಚು ಹಬ್ಬಿರೋ ನಾಡಿನಂತೆ ಮಾಡಿದೆ. ಹಮಾಸ್​ ಬಂಡುಕೋರರ ಹೊಡೆತಕ್ಕೆ ಬಸವಳಿದಿರೋ ಇಸ್ರೇಲ್​ ಜನರು ಪ್ರಾಣ ಉಳಿಸಿಕೊಳ್ಳಲು ಪರದಾಟ ನಡೆಸ್ತಿದ್ದಾರೆ. ಏಟಿಗೆ ಎದುರೇಟು, ರಕ್ತಕ್ಕೆ ರಕ್ತ ಅಂತ ಕೌಂಟರ್​ ಅಟ್ಯಾಕ್​ ಶುರು ಮಾಡಿರೋ ಇಸ್ರೇಲ್ ಸಹ ಹಮಾಸ್​ ಮೇಲೆ ಬೆಂಕಿ ಉಗುಳುತ್ತಿದೆ. ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಭೀಕರ ಸ್ವರೂಪ ಪಡೆದುಕೊಂಡಿದ್ದು ದಾಳಿ-ಪ್ರತಿದಾಳಿಯಲ್ಲಿ ಎರಡೂ ಕಡೆಯ ಸುಮಾರು 500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ಗಾಜಾ ಪಟ್ಟಿಯಿಂದ ಹಮಾಸ್‌ ಉಗ್ರರು ಏಕಾಏಕಿ 5 ಸಾವಿರ ರಾಕೆಟ್‌ ದಾಳಿ ಮಾಡಿದ್ದರು. ಈ ದಾಳಿಯವನ್ನ ಕವರ್‌ ಆಗಿ ಬಳಸಿಕೊಂಡ ಹಮಾಸ್‌ ಉಗ್ರರು ಬೈಕು, ಜೆಸಿಬಿ, ಕಾರು, ಪ್ಯಾರಾಗ್ಲೈಡರ್‌ಗಳ ಮೂಲಕ ಇಸ್ರೇಲ್‌ಗೆ ನುಸುಳಿ ಮನಬಂದಂತೆ ಗುಂಡು ಹಾರಿಸಿದ್ರು. ಬಳಿಕ ಯುದ್ಧ ಘೋಷಿಸಿರುವ ಇಸ್ರೇಲ್‌ ಪ್ರತಿದಾಳಿ ಪ್ರಾರಂಭಿಸಿದೆ. ಇಸ್ರೇಲ್ ನಡೆಸಿರುವ ಪ್ರತಿದಾಳಿಯಲ್ಲಿ ಗಾಜಾಪಟ್ಟಿ ಸಮೀಪ ಕನಿಷ್ಠ 100 ಹಮಾಸ್‌ ಉಗ್ರರು ಸೇರಿದಂತೆ 256 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಭೀಕರ ಯುದ್ಧದ ಹಲವು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಗಾಜಾ ಪಟ್ಟಿ ಬಳಿ ಮೃತಪಟ್ಟ ಇಸ್ರೇಲ್‌ ಸೈನಿಕನ ಮೃತದೇಹವನ್ನ ಪ್ಯಾಲಸ್ತೀನ್‌ ಜನರು ಎಳೆದು ತುಳಿದಾಡ್ತಿರೋದು ವಿಡಿಯೋದಲ್ಲಿ ರೆಕಾರ್ಡ್‌ ಆಗಿದೆ. ಇನ್ನೊಂದ್‌ ಕಡೆ ಜರ್ಮನ್‌ ಯುವತಿಯೊಬ್ಬಳ ಬೆತ್ತಲೆ ದೇಹವನ್ನ ಹಮಾಸ್‌ ಉಗ್ರರು ತೆರೆದ ಟ್ರಕ್‌ನಲ್ಲಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಒಂದು ಹರಿದಾಡಿದೆ. ಪ್ಯಾಲೆಸ್ಟಿನಿಯನ್ ನಾಗರೀಕರು ಮಹಿಳೆಯ ಮೃತದೇಹವನ್ನು ನಿಂದಿಸಿ ಬಳಿಕ ಉಗುಳುವುದನ್ನು ಈ ವೀಡಿಯೋದಲ್ಲಿ ನೋಡಬಹುದು. ನಂತರ ಕಪಾಳಮೋಕ್ಷ ಮಾಡುವುದನ್ನು ಸಹಾ ವೀಡಿಯೋದಲ್ಲಿ ಕಾಣಬಹುದು. ಈ ಕುರಿತು ಆಕೆಯ ತಾಯಿ ಇದು ತಮ್ಮ ಮಗಳು ಶನಿ ಲೌಕ್‌ ಅಂತ ದೃಢಪಡಿಸಿದ್ದು, ತಮ್ಮ ಮಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹಮಾಸ್‌ ನಡೆಸಿದ ದಾಳಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಇಸ್ರೇಲಿಗರು ಪ್ರಾಣತೆತ್ತಿದ್ದು ಇದ್ರಲ್ಲಿ 26 ಇಸ್ರೇಲಿ ಯೋಧರು ಇದ್ರು. ಇತ್ತ ಗಾಜಾದಲ್ಲಿ ಅಡಗಿಕೊಂಡಿರುವ ಹಮಾಸ್‌ನ ಅಡಗುದಾಣಗಳನ್ನೆಲ್ಲಾ ನಾಶ ಮಾಡೋದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಗಾಜಾದಲ್ಲಿರುವ ನಿವಾಸಿಗಳು ಅಲ್ಲಿಂದ ತೆರಳುವಂತೆ ತಿಳಿಸಿದ್ದು, ಇಲ್ಲವಾದ್ರೆ ನಾವೇ ಬಲವಂತವಾಗಿ ಖಾಲಿ ಮಾಡಿಸಬೇಕಾಗುತ್ತೆ ಅಂತ ವಾರ್ನ್‌ ಮಾಡಿದ್ದಾರೆ. ಅತ್ತ ಹಮಾಸ್‌ ದಾಳಿ ಬಗ್ಗೆ ಮಾತಾಡಿರುವ ಇಸ್ರೇಲ್‌ ರಕ್ಷಣಾ ಸಚಿವ ಯೋವ್‌ ಗ್ಯಾಲಂಟ್‌, ನಾವು ಇವತ್ತು ದುಷ್ಟತನವನ್ನ ನೋಡಿದ್ದೇವೆ. ಮಕ್ಕಳು, ಮಹಿಳೆಯರು ಹಾಗೂ ವಯಸ್ಸಾದೋರು ಅಂತನು ನೋಡದೆ ಹಮಾಸ್‌ ನಮ್ಮ ಮೇಲೆ ದಾಳಿ ನಡೆಸಿ ಅತಿ ದೊಡ್ಡ ತಪ್ಪು ಮಾಡಿದೆ. ಇದಕ್ಕೆ ಪ್ರತಿಕಾರವಾಗಿ ನಾವು ಗಾಜಾ ಪಟ್ಟಿಯ ವಾಸ್ತವತೆಯನ್ನೇ ಬದಲಾಯಿಸಿ ಬಿಡ್ತೀವಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೊಂದ್‌ ಕಡೆ ಲೆಬನಾನ್‌ ಕಡೆಯಿಂದಲೂ ಇಸ್ರೇಲ್‌ ಮೇಲೆ ದಾಳಿ ನಡೆಸಲಾಗಿದೆ. ಇದಕ್ಕೆ ಪ್ರತಿಯಾಗಿ ಲೆಬನಾನ್ ಯಾವ ಪ್ರದೇಶದಿಂದ ದಾಳಿ ನಡೆಸಲಾಗಿತ್ತೋ ಆ ಕಡೆಗೆ ಇಸ್ರೇಲ್‌ ಸೇನೆ ಕೂಡ ದಾಳಿ ಮಾಡಿದೆ. ಲೆಬನಾನ್‌ನ ಮೌಂಟ್‌ ಡೋವ್‌ ಅಥವಾ ಶೆಬ್ಬಾ ಫಾರ್ಮ್ಸ್‌ ಅನ್ನೊ ಸ್ಥಳದ ಮೇಲೆ ಆರ್ಟಿಲರಿ ಹಾರಿಸಿರೋದಾಗಿ ಇಸ್ರೇಲ್‌ ಸೇನೆ ಹೇಳಿದೆ. ಜೊತೆಗೆ ಹಮಾಸ್‌ ದಾಳಿಯನ್ನೇ ಅಡ್ವಾಂಟೇಜ್‌ ತಗೊಂಡು ಈ ರೀತಿ ಇಸ್ರೇಲ್‌ ಮೇಲೆ ದಾಳಿ ನಡೆಸಲು ಪ್ರಯತ್ನಿಸುವ ಎಲ್ಲಾ ದಾಳಿಗಳನ್ನ ಫೇಸ್‌ ಮಾಡಲು ಬೇಕಾದ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಅಂತ ಇಸ್ರೇಲ್‌ ಸೇನೆ ತಿಳಿಸಿದೆ. ಈ ದಾಳಿ ಬೆನ್ನಲ್ಲೇ ಲೆಬನಾನ್‌ನಲ್ಲಿರುವ ಜಾಗತಿಕ ಉಗ್ರ ಸಂಘಟನೆ ಹಿಜ್ಬುಲ್ಲಾ ಇಸ್ರೇಲ್‌ ಮೇಲೆ ಲೆಬನಾನ್‌ನಿಂದ ದಾಳಿ ನಡೆಸಿದ್ದು ನಾವೇ ಅಂತ ಹೇಳಿಕೊಂಡಿದೆ. ಪ್ಯಾಲಸ್ತೀನ್‌ಗೆ ಬೆಂಬಲ ಸೂಚಿಸಲು ಈ ದಾಳಿ ಮಾಡಲಾಗಿದೆ ಅಂತ ಹೇಳಿದೆ. ಕೆಲವು ವರದಿಗಳ ಪ್ರಕಾರ ಇಸ್ರೇಲ್‌ ಗಾಜಾ ಪಟ್ಟಿಯಲ್ಲಿ ಸೈನ್ಯ ನುಗ್ಗಿಸಿ ಪೂರ್ಣಪ್ರಮಾಣದಲ್ಲಿ ಗಾಜಾ ಪಟ್ಟಿಯನ್ನೇ ಮರುವಶಪಡಿಸಿಕೊಳ್ಳಲು ನೋಡ್ತಿದೆ. ಅತ್ತ ದಾಳಿ ಹಿನ್ನಲೆ ಗಾಜಾಗೆ ನೀರು, ಆಹಾರ, ವಿದ್ಯುತ್‌ ಎಲ್ಲ ರೀತಿಯ ಮೂಲಭೂತ ಸಂಪರ್ಕಗಳನ್ನ ಕಟ್‌ ಮಾಡಿರೋದಾಗಿ ಇಸ್ರೇಲ್‌ ಹೇಳಿದೆ. ಇದೇ ವೇಳೆ ಇಸ್ರೇಲ್‌ನ ಎಸಿಡಾರೊ, ಯಾಖಿನಿ, ಕಫರ್‌ ಅಜಾ, ಸುಫಾ, ಬೀರಿ, ಕಿಬ್ಬಟ್ಜ್‌, ಕಿಸ್ಸುಫಿಮ್‌, ಜಿಕಿಮ್‌ ಅನ್ನೋ 8 ಪ್ರದೇಶಗಳಲ್ಲಿ ಹಮಾಸ್‌ ಉಗ್ರರು ನುಗ್ಗಿದ್ದು ಅವ್ರನ್ನ ಸದೆಬಡೆಯುವ ಕಾರ್ಯಾಚರಣೆ ನಡೆಸಲಾಗ್ತಿದೆ ಅಂತ ಇಸ್ರೇಲ್‌ ಸೇನೆ ಹೇಳಿದೆ.

ಇತ್ತ ಹಮಾಸ್‌ ದಾಳಿ ಕುರಿತು ರಿಯಾಕ್ಟ್‌ ಮಾಡಿರುವ ಭಾರತದಲ್ಲಿರೋ ಇಸ್ರೇಲ್‌ ರಾಜತಾಂತ್ರಿಕ ಅಧಿಕಾರಿ ಮಾಯಾ ಕದೋಶ್‌, ಈ ದಾಳಿ ಹಿಂದೆ ಇರಾನ್‌ ಕೈವಾಡ ಇದೆ ಅಂತ ಹೇಳಿದ್ದಾರೆ. ಖಂಡಿತವಾಗಿ ಈ ದಾಳಿಯನ್ನ ಎಲ್ಲಾ ರೀತಿ ಸಿದ್ಧತೆ ಮಾಡಿಕೊಂಡೇ ನಡೆಸಲಾಗಿದೆ. ಈ ದಾಳಿಗೆ ದೊಡ್ಡ ಮಟ್ಟದಲ್ಲಿ ಸ್ಪಾನ್ಸರ್‌ ಮಾಡಲಾಗಿದ್ದು, ಇದರ ಹಿಂದೆ ಇರಾನ್‌ ಕೈವಾಡವಿದೆ ಅಂತ ನಮಗೆ ಅನ್ನಿಸುತ್ತಿದೆ ಅಂತ ಕದೋಶ್‌ ಸಂಶಯ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ ಒಂದು ಉಗ್ರರ ಗುಂಪು ಸಡನ್‌ ಆಗಿ ಬಂದು ಈ ರೀತಿ ದಾಳಿ ಮಾಡುತ್ತೆ ಅಂದ್ರೆ ಅದರ ಹಿಂದೆ ದೊಡ್ಡ ಬೆಂಬಲ ಹಾಗೂ ಫಂಡಿಂಗ್‌ ಇರಲೇಬೇಕು ಅಂತ ಕದೋಶ್‌ ಆರೋಪಿಸಿದ್ದಾರೆ. ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ಇರಾನ್‌ನ ನಾಯಕ ಅಲಿ ಖಮೇನಿ ಅವರ ಸಲಹೆಗಾರ ರಹೀಮ್‌ ಸಫಾಯಿ ಪ್ಯಾಲಸ್ತೀನ್‌ ಪರವಾಗಿ ಹೇಳಿಕೆ ಕೊಟ್ಟಿದ್ದಾರೆ. ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿರುವ ದಾಳಿ ಸ್ವಾಗತಾರ್ಹ ಬೆಳವಣಿಗೆಯಾಗಿದ್ದು, ಪ್ಯಾಲಸ್ತೀನ್‌ ಮತ್ತು ಜೆರುಸಲೆಮ್‌ ಸ್ವಂತಂತ್ರಗೊ‍ಳ್ಳಲು ಉಗ್ರರು ಕೈಗೊಂಡಿರುವ ಕಾರ್ಯಾಚರಣೆಯೊಂದಿಗೆ ನಾವಿದ್ದೇವೆ ಅಂತ ಹೇಳಿದ್ದಾರೆ.

ಇನ್ನು ಈ ಸಂಘರ್ಷದ ಮಧ್ಯೆ ನುಸ್ರತ್ ಬರುಚಾ ಅನ್ನೋ ಬಾಲಿವುಡ್​​​ ನಟಿಯೊಬ್ಬರು ಇಸ್ರೇಲ್​​ನಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಹೈಫಾ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್​​ನಲ್ಲಿ ಭಾಗಿಯಾಗಲು ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ. ನಿನ್ನೆ ಮಧ್ಯಾಹ್ನ 12.30ರವರೆಗೆ ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವು. ಅವರು ಬೇಸ್​ಮೆಂಟ್ ಒಂದರಲ್ಲಿ ಸೇಫ್ ಆಗಿದ್ದಾರೆ. ಅವರು ವಾಪಸ್ ಭಾರತಕ್ಕೆ ಮರಳಲು ಮಾಡಬೇಕಾಗಿರುವ ವ್ಯವಸ್ಥೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತೊಂದ್‌ ಕಡೆ ಇಸ್ರೇಲ್‌ ಮೇಲೆ ಹಮಾಸ್‌ ದಾಳಿ ಮಾಡಿರೋದನ್ನ ಜರ್ಮನಿ, ಬ್ರಿಟನ್‌, ಕೆನಡಾ ಸೇರಿದಂತೆ ಹಲವು ಕಡೆ ಪ್ಯಾಲಸ್ತೀನಿಯರು ಸಂಭ್ರಮಾಚರಣೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಜರ್ಮನಿಯಲ್ಲಿರುವ ಯಹೂದಿಗಳ ದೇವಾಲಯಗಳು, ಶಾಲೆಗಳು ಮತ್ತು ಸಂಸ್ಥೆಗಳಿಗೆ ಜರ್ಮನಿ ಪೊಲೀಸ್‌ ಭದ್ರತೆ ನೀಡಿರೋದಾಗಿ ಹೇಳಿದೆ. ಅತ್ತ ಫ್ರಾನ್ಸ್‌ ಕೂಡ ಪ್ಯಾರಿಸ್‌ನಲ್ಲಿರುವ ಇಸ್ರೇಲ್‌ ಪ್ರಜೆಗಳು, ಯಹೂದಿಗಳ ಸ್ಥಳ ಹಾಗೂ ಸಂಸ್ಥೆಗಳಿಗೆ ಬಿಗಿಭದ್ರತೆ ನೀಡಿರೋದಾಗಿ ಹೇಳಿದೆ. ಇತ್ತ ಇಸ್ರೇಲ್‌ ಮೇಲೆ ಹಮಾಸ್‌ ದಾಳಿ ಮಾಡಿರೋದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ರೇ ಕಾರಣ ಅಂತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ. ಬೈಡನ್‌ ವೀಕ್‌ ಅಥ್ವಾ ದುರ್ಬಲ ಅಧ್ಯಕ್ಷನಾಗಿರೋದಕ್ಕೆ ಈ ರೀತಿ ಹಿಂಸಾಚಾರ ಭುಗಿಲೆದ್ದಿದ್ದು, ಅತಿದೊಡ್ಡ ದಾಳಿಯಾಗಿದೆ. ಅದಕ್ಕೆ ಒಬ್ಬ ಅಧ್ಯಕ್ಷ ಮತ್ತು ಇನ್ನೊಬ್ಬ ಅಧ್ಯಕನ ನಡುವೆ ವ್ಯತ್ಯಾಸವಿದೆ ಅಂತ ನಂಬ್ತೀನಿ. ಯಾಕಂದ್ರೆ ನಾನು ಅಧ್ಯಕ್ಷನಾಗಿದ್ರೆ ಈ ರೀತಿ ಜಾಗತಿಕ ಜಿಯೋಪೊಲಿಟಿಕಲ್‌ ಸಂಘರ್ಷಗಳು ನಡಿತಾನೆ ಇರ್ಲಿಲ್ಲ. ಅಲ್ದೆ ಹಮಾಸ್‌ ಉಗ್ರರು ನನ್ನ ಜೊತೆಯಲ್ಲಿ ಈ ಮಟ್ಟದ ಆಕ್ರಮಣಕಾರಿಯಾಗಿ ಇರಲಿಲ್ಲ. ಜೊತೆಗೆ ನಾನು ಅಧ್ಯಕ್ಷನಾಗಿದ್ರೆ ಹಮಾಸ್‌ ದಾಳಿ ಆಗ್ಲಿ ಯುಕ್ರೇನ್‌ ಯುದ್ಧ ಆಗಲೀ ಸಂಭವಿಸ್ತಾ ಇರ್ಲಿಲ್ಲ. ಆದ್ರೆ ದುರ್ಬಲ ಹಾಗೂ ಪರಿಣಾಮಕಾರಿಯಾಲ್ಲದ ಬೈಡನ್‌ ನಾಯಕತ್ವ ಇರೋದ್ರಿಂದ ಇಸ್ರೇಲ್‌ ಮೇಲೆ ದಾಳಿ ಮಾಡಲಾಗಿದೆ ಅಂತ ಟ್ರಂಪ್‌ ಆರೋಪಿಸಿದ್ದಾರೆ. ಅತ್ತ ಬೈಡನ್‌ ಸರ್ಕಾರ ಇಸ್ರೇಲ್‌ಗೆ ಸುಮಾರು 8 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 65.6 ಸಾವಿರ ಕೋಟಿ ರುಪಾಯಿ ಮೌಲ್ಯದ ತುರ್ತು ಮಿಲಿಟರಿ ನೆರವನ್ನ ಘೋಷಿಸಿದೆ.

-masthmagaa.com

Contact Us for Advertisement

Leave a Reply