ಕೇರಳದಲ್ಲಿ ಟಿಫನ್‌ ಬಾಕ್ಸ್‌ನಲ್ಲಿ ಬಾಂಬ್‌! ಅಸಲಿಗೆ ಅಲ್ಲಿ ನಡೆದಿದ್ದೇನು ಗೊತ್ತಾ?

masthmagaa.com:

ನೆರೆ ರಾಜ್ಯ ಕೇರಳದಲ್ಲಿ ಶಂಕಿತ ಉಗ್ರದಾಳಿಯಾಗಿದೆ. ಕೊಚ್ಚಿ ಬಳಿ ಇಂದು ಬೆಳಿಗ್ಗೆ ಸರಣಿ ಸ್ಫೋಟಗಳು ಸಂಭವಿಸಿದ್ದು ಓರ್ವ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 10 ಜನರು ICUನಲ್ಲಿದ್ದು 6ಜನರ ಸ್ಥಿತಿ ಗಂಭೀರವಾಗಿದೆ ಅಂತ ತಿಳಿದು ಬಂದಿದೆ. ಇಲ್ಲಿನ ಜಮ್ರಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಬೆಳಗ್ಗೆ 9.40 ಕ್ಕೆ ಈ ಸ್ಫೋಟಗಳು ಸಂಭವಿಸಿವೆ ಅಂತ ಪೊಲೀಸರು ತಿಳಿಸಿದ್ದಾರೆ. ಕೊಚ್ಚಿ ಬಳಿಯ ಕಲಮಸ್ಸೆರಿಯಲ್ಲಿನ ಈ ಭವನದಲ್ಲಿ ʻಜೆಹೋವಾಸ್ ವಿಟ್ನೆಸೆಸ್‌‌ʼ ಎಂಬ ಕ್ರಿಶ್ಚಿಯನ್‌ ಧಾರ್ಮಿಕ ಸಂಸ್ಥೆ ಪ್ರಾರ್ಥನಾ ಸಭೆ ಆಯೋಜಿಸಿತ್ತು. ಮೂರು ದಿನಗಳಿಂದ ಅಂದ್ರೆ ಅಕ್ಟೋಬರ್‌ 27ರಿಂದ ಈ ಸಭೆ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಇಂದು ಕೊನೆಯ ದಿನವಾಗಿತ್ತು. ಈ ವೇಳೆ ಸಾವಿರಾರು ಜನರು ನೆರೆದಿದ್ದರು. ಈ ವೇಳೆ ಬರೋಬ್ಬರಿ 5 ಸ್ಪೋಟಗಳು ಸಂಭವಿಸಿವೆ ಅಂತ ಪೊಲೀಸರು ಹೇಳಿದ್ದಾರೆ. ಇನ್ನು ಘಟನೆ ನಡೆದ ಬೆನ್ನಲ್ಲೇ ಈ ಭಾಗದಲ್ಲಿ ರಜೆಯಲ್ಲಿದ್ದ ವೈದ್ಯರು ಸೇರಿ ಎಲ್ಲ ಆರೋಗ್ಯ ಕಾರ್ಯಕರ್ತರೂ ಕೂಡಲೇ ಸೇವೆಗೆ ಹಿಂತಿರುಗುವಂತೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚನೆ ನೀಡಿದ್ದಾರೆ. ಪ್ರಾರ್ಥನೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮೊದಲ ಸ್ಫೋಟ ಉಂಟಾಗಿದೆ. ಇದು ತೀವ್ರ ಸ್ವರೂಪದ್ದಾಗಿದ್ದು, ನಂತರದ ಸ್ಫೋಟಗಳು ಲಘು ಪ್ರಮಾಣದ್ದಾಗಿವೆ ಅಂತ ಗೊತ್ತಾಗಿದೆ. ಘಟನೆ ನಂತರ ಸ್ಥಳದಲ್ಲಿದ್ದ ಜನರು ಚೆಲ್ಲಾಪಿಲ್ಲಿಯಾಗಿದ್ದು, ಭವನದ ಒಳಗಿದ್ದ ಚೇರ್‌ಗಳು ಹೊತ್ತಿ ಉರಿದಿವೆ. ಪ್ರಾಥಮಿಕ ತನಿಖೆಯಲ್ಲಿ ಉಗ್ರರ ಕರಿನೆರಳು ಇರೋ ಶಂಕೆ ವ್ಯಕ್ತವಾಗಿತ್ತು, ತನಿಖೆ ವೇಳೆ ಇದಕ್ಕೆ ಪುಷ್ಠಿ ನೀಡುವಂತೆ ಸ್ಥಳದಲ್ಲಿ ಬ್ಯಾಟರಿ, ವೈರ್‌ಗಳು, ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ಸ್ಪೋಟಕ್ಕೆ IED ಅಥ್ವಾ ಸುಧಾರಿತ ಸ್ಫೋಟಕ ಸಾಧನ ಬಳಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಈ IEDಯನ್ನು ಟಿಫಿನ್ ಬಾಕ್ಸ್‌ನಲ್ಲಿ ಕೊಂಡೊಯ್ಯಲಾಗಿದೆ ಅಂತ ಕೇರಳ ಡಿಜಿಪಿ ಶೇಖ್ ದರ್ವೇಶ್ ಸಾಹೇಬ್ ಹೇಳಿದ್ದಾರೆ. ಜೊತೆಗೆ ಘಟನೆಗೆ ಸಂಬಂಧಪಟ್ಟಂತೆ ತನಿಖೆಗೆ ಕೂಡಲೇ ವಿಶೇಷ ತಂಡ ರಚಿಸೋದಾಗಿ ಡಿಜಿಪಿ ತಳಿಸಿದ್ದಾರೆ. ಇನ್ನು ಸ್ಥಳದಲ್ಲಿ ರಾಷ್ಟ್ರೀಯ ತನಿಖಾ ದಳದ ಅಥವಾ (NIA) ಸಿಬ್ಬಂದಿ ಪೊಲೀಸರ ಜೊತೆಗೂಡಿ ತನಿಖೆ ನಡೆಸುತ್ತಿದ್ದಾರೆ. ಸ್ಪೋಟ ನಡೆದ ಕನ್ವೆನ್ಷನ್‌ ಹಾಲ್‌ನ ಕಳೆದ ಮೂರು ದಿನಗಳ ಸಿಸಿಟಿವಿ ಫುಟೇಜನ್ನು ಸಹ ಪರಿಶೀಲನೆ ಮಾಡ್ತಿದ್ದಾರೆ. ಸ್ಫೋಟದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಹೈ-ಅಲರ್ಟ್‌ ಘೋಷಿಸಿದೆ. ಜೊತೆಗೆ ನಾಳೆ ಅಂದ್ರೆ ಸೋಮವಾರ ಬೆಳಿಗ್ಗೆ ಹತ್ತು ಗಂಟೆಗೆ ಸರ್ವಪಕ್ಷ ಸಭೆ ನಡೆಸಲು ಕೇರಳ ಸಿಎಂ ಪಿಣರಾಯಿ ವಿಜಯನ್‌ ತೀರ್ಮಾನಿಸಿದ್ದಾರೆ. ಘಟನೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರದಾಡುತ್ತಿದ್ದು, ಸುಳ್ಳು ಸುದ್ದಿ ಹಬ್ಬಿಸೋರ ವಿರುದ್ಧ ಕಠಿಣ ಕ್ರಮ ತಗೊಳ್ಳೋದಾಗಿ ಕೇರಳ ಪೊಲೀಸರು ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತ ಕೇರಳ-ಕರ್ನಾಟಕ ಗಡಿಯಲ್ಲಿ ಬರುವ 14 ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಅಲರ್ಟ್‌ನಲ್ಲಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಪೊಲೀಸರು ಚೆಕ್‌ಪೋಸ್ಟ್‌ಗಳಲ್ಲಿ ಕೇರಳದಿಂದ ಬರೋ ವಾಹನಗಳನ್ನ ತಪಾಸಣೆ ಮಾಡುತ್ತಿದ್ದಾರೆ. ಕೇರಳದಲ್ಲಿ ಸ್ಫೋಟ ನಡೆದ ಬೆನ್ನಲ್ಲೇ ದೇಶದ ಹಲವು ಭಾಗಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ. ಮಹಾರಾಷ್ಟ್ರ, ದಿಲ್ಲಿ, ಸೇರಿ ಇತರೆ ರಾಜ್ಯಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಕೇರಳ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿಯ ವ್ಯಕ್ತಿಯೊಬ್ಬ ಸ್ಫೋಟದ ಹೊಣೆ ಹೊತ್ತು ಪೊಲೀಸರಿಗೆ ಶರಣಾಗಿದ್ದಾನೆ. ಮೀನಹಿಲೆ ಎಂಬ ವ್ಯಕ್ತಿ ಸ್ಪೋಟಕ ಇಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತ ಯಾವುದಾದರೂ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾನಾ ಅಂತ ತನಿಖೆ ನಡೆಸುತ್ತಿದ್ದಾರೆ. ಅತ್ತ ಕಣ್ಣೂರು ಪೊಲೀಸರು ವ್ಯಕ್ತಿಯೊಬ್ಬನ ಬ್ಯಾಗ್​ನಲ್ಲಿ ಅನುಮಾನಾಸ್ಪದ ವಸ್ತುಗಳನ್ನು ಗುರುತಿಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತ್​ ಮೂಲದ ಈತ ಮಂಗಳೂರಿನಿಂದ ಅರಿಕಾಡಿಗೆ ತೆರಳುತ್ತಿದ್ದ ಎನ್ನಲಾಗಿದೆ.

masthmagaa.com

Contact Us for Advertisement

Leave a Reply