ರಾಜ್ಯದಲ್ಲಿ ಲಿಂಗಾಯತ ಸಿಎಂ ವಿವಾದ! ಸಿದ್ದು ವಿರುದ್ದ ಚುನಾವಣಾ ಆಯೋಗಕ್ಕೆ ದೂರು!

masthmagaa.com:

ವಿಧಾನಸಭಾ ಚುನಾವಣಾ ಹೊತ್ತಿನಲ್ಲಿ ರಾಜ್ಯದಲ್ಲಿ ಲಿಂಗಾಯತ ಸಿಎಂ ವಿಚಾರ ಭಾರಿ ಸುದ್ದಿ ಮಾಡ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಲಿಂಗಾಯತರನ್ನ ಸಿಎಂ ಮಾಡಬೇಕು ಅಂತ ಬಿಜೆಪಿ ಬೇಡಿಕೆ ಇಟ್ಟಿದೆ. ಇತ್ತ ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ. ಈಗಾಗಲೇ ಲಿಂಗಾಯತರೇ ಮುಖ್ಯಮಂತ್ರಿಗಳಿದ್ದಾರಲ್ಲಾ, ಅವರೇ ಎಲ್ಲ ಭ್ರಷ್ಟಾಚಾರ ಮಾಡಿ ರಾಜ್ಯವನ್ನ ಹಾಳು ಮಾಡಿದ್ದಾರೆ ಅಂತ ಹೇಳಿದ್ದಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ. ಇವರ ಹೇಳಿಕೆ ಬೆನ್ನಲ್ಲೇ ಬಿಜೆಪಿ ಟ್ವೀಟ್‌ ಮಾಡಿ, ʻಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ, ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳು ಮಾಡೋರು ಅನ್ನೊ ದ್ವೇಷಪೂರಿತ ಹೇಳಿಕೆ ನೀಡಿರುವುದು ಅಕ್ಷಮ್ಯ. ಜಗದ್ಗುರು ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು, ಅವರನ್ನು ಎಂದಿಗೂ ಕ್ಷಮಿಸಲ್ಲʼ ಅಂತ ಕಿಡಿಕಾರಿದೆ. ಅಲ್ದೇ ಇತ್ತ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿ, ಲಿಂಗಾಯತ ಸಿಎಂಗಳ ಬಗ್ಗೆ ಸಿದ್ದರಾಮಯ್ಯ ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಅವರೊಬ್ಬ ಹಿರಿಯ ನಾಯಕ. ಅವರು ಲಿಂಗಾಯತ ಸಮುದಾಯದ ಆತ್ಮ ಕಲುಕುವ ಹೇಳಿಕೆ ಕೊಟ್ಟಿದ್ದಾರೆ. ಲಿಂಗಾಯತ ಸಮುದಾಯವನ್ನೇ ಭ್ರಷ್ಟ ಅನ್ನೋದು ತಪ್ಪು. ಅವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ. ಇನ್ನು ತಮ್ಮ ಹೇಳಿಕೆ ವಿವಾದಕ್ಕೆ ತಿರುಗಿತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಲಿಂಗಾಯತರೆಲ್ಲಾ ಭ್ರಷ್ಟರು ಅಂತ ನಾನು ಹೇಳಲೇ ಇಲ್ಲ. ಅದೆಲ್ಲಾ ಬಿಜೆಪಿ ಸೃಷ್ಟಿಸಿದ ಸುಳ್ಳುಗಳಷ್ಟೇ ಎಂದಿದ್ದಾರೆ. ಬೊಮ್ಮಾಯಿ ಮಾತ್ರ ಭ್ರಷ್ಟ ಮುಖ್ಯಮಂತ್ರಿ ಅಂತ ಹೇಳಿದ್ದೆ. ಲಿಂಗಾಯತರೆಲ್ಲಾ ಭ್ರಷ್ಟರು ಅಂತ ನಾನು ಹೇಳಿಲ್ಲ. ವೀರೇಂದ್ರ ಪಾಟೀಲ್‌ರು, ನಿಜಲಿಂಗಪ್ಪನವರು, ಜೆ.ಹೆಚ್ ಪಟೇಲ್‌ರು, ಬಿ.ಡಿ.ಜತ್ತಿ, ಎಸ್.ಆರ್ ಕಂಠಿಯಂತಹ ಅನೇಕ ಪ್ರಾಮಾಣಿಕ ಮುಖ್ಯಮಂತ್ರಿಗಳನ್ನು ಲಿಂಗಾಯತ ಸಮುದಾಯ ಈ ನಾಡಿಗೆ ನೀಡಿದೆ. ಈ ಎಲ್ಲಾ ನಾಯಕರ ಬಗ್ಗೆ ನನಗೆ ವಿಶೇಷ ಪ್ರೀತಿ ಹಾಗೂ ಅಭಿಮಾನವಿದೆ ಅಂತ ಹೇಳಿದ್ದಾರೆ. ಇನ್ನು ಅತ್ತ ಸಿದ್ದರಾಮಯ್ಯ ವಿರುದ್ದ ಲಿಂಗಾಯತ ಯುವ ವೇದಿಕೆಯ ಕಾನೂನು ಘಟಕದಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಅಂತ ಆಯೋಗಕ್ಕೆ ಮನವಿ ಮಾಡಲಾಗಿದೆ.

-masthmagaa.com

Contact Us for Advertisement

Leave a Reply