ಒಂಟೆಮರಿ ಕದ್ದು ಪ್ರಿಯತಮೆಗೆ ಗಿಫ್ಟ್ ಕೊಟ್ಟ..! ಆಮೇಲೆ ಏನಾಯ್ತು?

masthmagaa.com:

ದುಬೈ ಪೊಲೀಸರು ಒಬ್ಬ ವ್ಯಕ್ತಿಯನ್ನ ಬಂಧಿಸಿದ್ದಾರೆ. ಎಲ್ಲಾ ಕಡೆ ಇದು ನಡೆಯುತ್ತೆ. ಅದ್ರಲ್ಲೇನ್ ವಿಶೇಷ..!? ವಿಶೇಷ ಏನಂದ್ರೆ ದುಬೈನಂತಾ ದುಬೈನಲ್ಲಿ, ತೈಲ ಶ್ರೀಮಂತರ ನಾಡಿನಲ್ಲಿ ಒಂಟೆ ಮರಿ ಕಳ್ಳತನ ಮಾಡಿದ ಆರೋಪದಲ್ಲಿ ಯುಎಇ ಪ್ರಜೆಯೊಬ್ಬನನ್ನ ಬಂಧಿಸಲಾಗಿದೆ. ಒಂಟೆ ಮರಿಗಳಿಗೆ ದುಬೈನಲ್ಲಿ ಬಾಳ ಬೆಲೆಯಿದೆ. ಅದನ್ನ ಅಮೂಲ್ಯವಾದ ಸರಕಿನಂತೆ ನೋಡ್ತಾರೆ. ಹೀಗಿರೋವಾಗ ಪ್ರಜೆಯೊಬ್ಬ ತನ್ನ ಪ್ರಿಯತಮೆಗೆ ಬರ್ಡೇ ಗಿಫ್ಟ್ ಕೊಡೋಕೆ, ಬೇರೆಯವರು ಸಾಕಿದ್ದ ಒಂಟೆ ಮರಿಯನ್ನ ಕದ್ದಿದ್ದಾನೆ. ದುಬೈ ಪೊಲೀಸರು ಈ ಸಂಬಂಧ ತನಿಖೆ ಆರಂಭ ಮಾಡಿದಾಗ ಈತನಿಗೆ ಭಯ ಆಗಿದೆ. ಹೇಳಿ ಕೇಳಿ ಗಲ್ಫ್ ರಾಷ್ಟ್ರಗಳಲ್ಲಿ ಕಳ್ಳತನಕ್ಕೆ ಭಾರೀ ಶಿಕ್ಷೆ ಇದೆ.

ಸೋ ಹೆದರಿದ ಈತ ಬಳಿಕ ತಾನೇ ಪೊಲಿಸರಿಗೆ ಕಾಲ್ ಮಾಡಿ, ‘ಇಲ್ಲೊಂದು ಒಂಟೆ ಮರಿ ಓಡಾಡ್ತಿತ್ತು ನೋಡಿ’ ಅಂತ ಮಳ್ಳಾಟ ಮಾಡಿದ್ದಾನೆ. ಪೊಲೀಸರು ಬಂದು ಅವರದೇ ಭಾಷೆಯಲ್ಲಿ ಬಾಯ್ಬಿಡಿಸಿದಾಗ, ಇದನ್ನ ತಾನು ಪ್ರಿಯತಮೆಗೆ ಉಡುಗೊರೆ ಕೊಡಲು ಕದ್ದಿದ್ದಾಗಿಯೂ, ಈಗ ಹೆದರಿಕೆಯಿಂದ ತಾನೇ ಮಾಹಿತಿ ನೀಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ. ಸದ್ಯ ಅಪರೂಪದ ತಳಿಯ ಒಂಟೆ ಮರಿಯನ್ನ ದುಬೈ ಪೊಲೀಸರು ಮಾಲಿಕರಿಗೆ ನೀಡಿದ್ದು, ಒಂಟೆ ಕಳ್ಳ ಹಾಗೂ ಆತನ ಪ್ರಿಯತಮೆ, ಇಬ್ಬರನ್ನೂ ಹಿಡಿದು ಜೈಲಿಗೆ ಹಾಕಿದ್ದಾರೆ.

ಬಹಳ ಹಿಂದೆ ಗಲ್ಫ್ ರಾಷ್ಟ್ರಗಳಲ್ಲಿ ಒಂಟೆಗಳು ಜನರ ಜೀವನದ ಅತಿಮುಖ್ಯ ಭಾಗ ಆಗಿದ್ವು. ಆಹಾರಕ್ಕಾಗಿ, ಹಾಲಿಗಾಗಿ, ಮರುಳುಗಾಡಿನಲ್ಲಿ ಪ್ರಯಾಣಕ್ಕಾಗಿ ಈ ಜನ ಒಂಟೆಗಳನ್ನ ಬಳಸ್ತಿದ್ರು. ಈಗ ದುಬೈ ಬದಲಾಗಿದೆ. ಎಲ್ಲೆಲ್ಲೂ ಗಗನ ಚುಂಬಿ ಕಟ್ಟಡಗಳು ಹಾಗೂ ಲಕ್ಷುರಿ ಕಾರ್​ಗಳು! ಆದ್ರೆ ಜನ ಇನ್ನೂ ತಮ್ಮ ಒಂಟೆ ಪ್ರೀತಿ ಬಿಟ್ಟಿಲ್ಲ. ಈಗಲೂ ಸಾಕ್ತಾರೆ. ಆಗಾಗ ಒಂಟೆ ರೇಸ್ ನಡೆಯುತ್ತೆ.. ಒಂಟೆಗಳ ಬ್ಯೂಟಿ ಕಾಂಟೆಸ್ಟ್ ಕೂಡ ನಡೆಯುತ್ತೆ. ಮಿಸ್ ಒಂಟೆ ಹಾಗೂ ಮಿಸ್ಟರ್​ ಒಂಟೆಗಳ ಆಯ್ಕೆ ಕೂಡ ಮಾಡ್ತಾರೆ.

-masthmagaa.com

 

Contact Us for Advertisement

Leave a Reply