ಅಮೆರಿಕ-ರಷ್ಯಾ ಸಂಘರ್ಷ: ಬೈಡೆನ್ ಮೇಲೆ ಪುಟಿನ್​ ಪ್ರತೀಕಾರ!

masthmagaa.com:

ರಷ್ಯಾ ಮೇಲೆ ಅಮೆರಿಕ ಸ್ಯಾಂಕ್ಷನ್ಸ್ ಹೇರಿದ ಮರುದಿನವೇ ರಷ್ಯಾ ಅದಕ್ಕೆ ಪ್ರತೀಕಾರ ತೀರಿಸಿಕೊಂಡಿದೆ. ರಷ್ಯಾದಲ್ಲಿರೋ ಅಮೆರಿಕದ 10 ರಾಯಭಾರಿಗಳು ರಷ್ಯಾ ಬಿಟ್ಟು ಹೋಗುವಂತೆ ಪುಟಿನ್ ಸರ್ಕಾರ ಸೂಚನೆ ಕೊಟ್ಟಿದೆ. ಅಂದ್ಹಾಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ, ಅಮೆರಿಕ ಮೇಲೆ ಸೈಬರ್ ದಾಳಿ, ಯುಕ್ರೇನ್​ಗೆ ಬೆದರಿಕೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಜೋ ಬೈಡೆನ್ ಸರ್ಕಾರ ರಷ್ಯಾ ಮೇಲೆ ಹಲವು ನಿರ್ಬಂಧಗಳನ್ನ, ಸ್ಯಾಂಕ್ಷನ್​ಗಳನ್ನ ಹೇರಿತ್ತು. ಇದರ ಒಂದು ಭಾಗವಾಗಿ ಅಮೆರಿಕದಲ್ಲಿರೋ ರಷ್ಯಾದ 10 ರಾಜತಾಂತ್ರಿಕರನ್ನ ರಷ್ಯಾಗೆ ವಾಪಸ್ ಕಳಿಸೋದಾಗಿ ಹೇಳಿತ್ತು. ಇದೀಗ ರಷ್ಯಾ ಕೂಡ ಅಷ್ಟೇ ಪ್ರಮಾಣದ, ಅಂದ್ರೆ 10 ಜನ ಅಮೆರಿಕದ ರಾಜತಾಂತ್ರಿಕರನ್ನ ಅಮೆರಿಕಕ್ಕೆ ವಾಪಸ್ ಹೋಗುವಂತೆ ಸೂಚಿಸಿದೆ. ಜೊತೆಗೆ, ಒಳ್ಳೆತನವನ್ನ ತೋರಿಸಲು, ಸಂಘರ್ಷ ಮತ್ತು ಹಗೆತನ ಬಿಡಲು ಅಮೆರಿಕಕ್ಕೆ ಇದು ಸರಿಯಾದ ಸಮಯ. ಇಲ್ಲದಿದ್ರೆ ಅಮೆರಿಕಗೆ ನೋವುಂಟು ಮಾಡುವ ಸರಣಿ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗುತ್ತೆ. ಅಲ್ಲದೆ ಅಮೆರಿಕಗೆ ಆರ್ಥಿಕವಾಗಿ ಪೆಟ್ಟು ಕೊಡುವ ಮತ್ತು ರಷ್ಯಾದಲ್ಲಿರೋ ಅಮೆರಿಕದ ರಾಜತಾಂತ್ರಿಕರ ಸಂಖ್ಯೆಯನ್ನ 300ಕ್ಕೆ ಇಳಿಸೋ ಅವಕಾಶ ನಮ್ಮ ಬಳಿ ಇದ್ದರೂ ಅದನ್ನ ಸದ್ಯಕ್ಕೆ ತಡೆ ಹಿಡಿದಿದ್ದೇವೆ ಅಂತ ರಷ್ಯಾದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ಈ ಮೂಲಕ ಬೈಡೆನ್​ಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಪುಟಿನ್. ಅಂದ್ಹಾಗೆ ಕಳೆದ ತಿಂಗಳಷ್ಟೇ ಪುಟಿನ್​ರನ್ನ ಜೋ ಬೈಡೆನ್ ‘ಕಿಲ್ಲರ್’ ಅಂತ ಕರೆದಿದ್ದರು. ಅದಾದ ಬಳಿಕ ಅಮೆರಿಕ-ರಷ್ಯಾ ಸಂಬಂಧ ಕೋಲ್ಡ್​-ವಾರ್ ಸಮಯದಷ್ಟು ಹದಗೆಟ್ಟಿತ್ತು. ಇದರಿಂದ ಸಿಟ್ಟಿಗೆದ್ದ ರಷ್ಯಾ ಅಮೆರಿಕದಲ್ಲಿದ್ದ ತನ್ನ ರಾಯಭಾರಿಯನ್ನ ವಾಪಸ್ ಕರೆಸಿಕೊಂಡಿತ್ತು. ಜೊತೆಗೆ ರಷ್ಯಾದಲ್ಲಿರೋ ಅಮೆರಿಕ ರಾಯಭಾರಿಯನ್ನ ಅಮೆರಿಕ ವಾಪಸ್ ಕರೆಸಿಕೊಳ್ಳಬೇಕು ಅಂತ ಹೇಳಿತ್ತು. ಇದೀಗ ಎರಡೂ ದೇಶಗಳು ಒಂದಷ್ಟು ರಾಜತಾಂತ್ರಿಕರನ್ನ ವಾಪಸ್ ಕಳಿಸಿದೆ. ಇದು ರಷ್ಯಾ-ಅಮೆರಿಕ ಸಂಘರ್ಷವನ್ನ ಮತ್ತಷ್ಟು ಗಂಭೀರ ಸ್ವರೂಪಕ್ಕೆ ತೆಗೆದುಕೊಂಡು ಹೋದಂತೆ ಕಾಣ್ತಿದೆ.

-masthmagaa.com

Contact Us for Advertisement

Leave a Reply