`ಹೌಡಿ ಮೋದಿ’ಯಲ್ಲಿ ಪಾಕ್‍ಗೆ ಮೋದಿ ವಾರ್ನಿಂಗ್..!

ಸಂವಿಧಾನದ 370ನೇ ವಿಧಿಯಡಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದಾರೆ. 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, 370ನೇ ವಿಧಿಯು ಜಮ್ಮು ಕಾಶ್ಮೀರ ಮತ್ತು ಲಡಾಖ್ ಜನರನ್ನು ಅಭಿವೃದ್ಧಿ ಮತ್ತು ಸಮಾನ ಅಧಿಕಾರದಿಂದ ವಂಚಿತರನ್ನಾಗಿ ಮಾಡಿತ್ತು. ಇದ್ರಿಂದ ಕಾಶ್ಮೀರ ಭಾಗದಲ್ಲಿ ಭಯೋತ್ಪಾದಕರ ಮೇಲುಗೈ ಆಗಿತ್ತು. ಈ ವಿಧಿಯ ರದ್ದತಿಯಿಂದ ಅಲ್ಲಿನ ಜನರಿಗೆ ಅವಕಾಶಗಳು ತೆರೆದುಕೊಂಡಿವೆ. ಅಲ್ಲದೆ ಅಲ್ಲಿನ ಮಹಿಳೆಯರು, ಮಕ್ಕಳು, ದಲಿತರ ಮೇಲೆ ಆಗುತ್ತಿದ್ದ ತಾರತಮ್ಯ ಕೊನೆಯಾಗಲಿದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು. ಮೇಲ್ಮನೆಯಲ್ಲಿ ನಮ್ಮ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೂ 370ನೇ ವಿಧಿ ರದ್ದುಪಡಿಸುವ ಮಸೂದೆ ಬಹುಮತದಿಂದ ಅಂಗೀಕಾರವಾಯಿತು. ಈ ಮೂಲಕ ದೇಶದಲ್ಲಿ 70 ವರ್ಷಗಳಿಂದ ಇದ್ದ ಕಾನೂನಿಗೆ ಎಳ್ಳುನೀರು ಬಿಟ್ಟೆವು ಅಂತ ಹೇಳಿದ್ರು. ಅಲ್ಲದೆ ಎಲ್ಲರೂ ಎದ್ದುನಿಂತು ಇದಕ್ಕೆ ಬೆಂಬಲಿಸಬೇಕು ಅಂದ್ರು. ಆಗ ಅಲ್ಲಿದ್ದವರೆಲ್ಲಾ ಎದ್ದು ನಿಂತು ಚಪ್ಪಾಳೆ ತಟ್ಟಿದ್ರು.

ಭಾರತದ ಈ ಕ್ರಮದಿಂದ ಕೆಲವರಿಗೆ ತೊಂದರೆಯಾಗಿದೆ. ತಮ್ಮ ದೇಶವನ್ನೇ ಸರಿಯಾಗಿ ನಿಭಾಯಿಸಲು ಆಗದವರು, ಭಾರತವನ್ನು ದ್ವೇಷಿಸುವುದನ್ನೇ ರಾಜಕಾರಣವನ್ನಾಗಿ ಮಾಡಿಕೊಂಡಿದ್ದಾರೆ. ಅವರು ಭಯೋತ್ಪಾದನೆಯನ್ನು ಪೋಷಿಸಿ, ಬೆಳೆಸುತ್ತಾ ಜಗತ್ತಿಗೆ ಕಂಟಕವಾಗಿದ್ದಾರೆ. ಅವರು ಎಂಥವರು ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ಎಂದು ಮೋದಿ ಪಾಕಿಸ್ತಾನದ ಹೆಸರೇಳದೆ ವಾಗ್ದಾಳಿ ನಡೆಸಿದ್ರು. ಅಲ್ಲದೆ ಅಮೆರಿಕದಲ್ಲಿ 9/11 ಮತ್ತು ಮುಂಬೈನಲ್ಲಿ 26/11 ದಾಳಿಯನ್ನು ಮರೆಯಲು ಸಾಧ್ಯವಿಲ್ಲ. ಈ ಭಯೋತ್ಪಾದಕ ದಾಳಿಗಳಿಗೆ ಕಾರಣಕರ್ತರು ಒಂದೇ ದೇಶದವರು. ಅವರು ಎಲ್ಲಿದ್ದರು ಮತ್ತು ಎಲ್ಲಿದ್ದಾರೆ ಎಂಬುದು ಇಡೀ ವಿಶ್ವಕ್ಕೇ ಗೊತ್ತಿದೆ ಅಂದ್ರು.

Contact Us for Advertisement

Leave a Reply