ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ! ಸುಪ್ರೀಂ ಕೋರ್ಟ್‌ನಲ್ಲಿ ನವೆಂಬರ್ 23ಕ್ಕೆ ಅಂತಿಮ ವಿಚಾರಣೆ!

masthmagaa.com:

ಕರ್ನಾಟಕ ಮಹಾರಾಷ್ಟ್ರ ಗಡಿ ಸಮಸ್ಯೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ನವೆಂಬರ್‌ 23ಕ್ಕೆ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಈ ವೇಳೆ ಮಾತನಾಡಿದ ಏಕನಾಥ್‌ ಶಿಂಧೆ, ಮಹಾರಾಷ್ಟ್ರ ಕರ್ನಾಟಕ ಗಡಿ ಸಮಸ್ಯೆಯಲ್ಲಿ ರಾಜ್ಯ ಸರ್ಕಾರವು ಗಡಿ ಭಾಗದ ಜನರ ಬೆನ್ನಿಗೆ ನಿಂತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲು ಹಿರಿಯ ವಕೀಲ ವೈದ್ಯನಾಥನ್ ಅವರನ್ನು ನೇಮಿಸ್ತೀವಿ ಅಂತ ಘೋಷಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯದ ಪರವಾಗಿ ಯಾವ ರೀತಿ ವಾದ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡಲಾಗಿದೆ ಅಂತ ಮೂಲಗಳು ತಿಳಿಸಿವೆ. ಇದರ ಬೆನ್ನಲ್ಲೇ ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಗೆ ಬದ್ಧವಾಗಿ ರಾಜ್ಯ ಸರ್ಕಾರ ಕೈಗೊಳ್ಳುವ ಕ್ರಮಗಳನ್ನು ನಮ್ಮ ಪಕ್ಷ ಬೆಂಬಲಿಸುತ್ತದೆ. ಕಾಲವ್ಯಯ ಮಾಡದೆ‌ ಸಿಎಂ ಅವರು ವಿರೋಧ ಪಕ್ಷಗಳ ಸಭೆ ಕರೆದು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ‌ಮಾಡಬೇಕು. ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರ ಸರ್ಕಾರ ವಿಶೇಷ ಆಸಕ್ತಿ ತೋರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಬೇಕು ಅಂತ ಆಗ್ರಹ ಮಾಡಿದ್ದಾರೆ. ಅಂದಹಾಗೆ ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿ, ಖಾನಾಪುರ, ಕಾರವಾರ ಮುಂತಾದ ಗಡಿ ಭಾಗಗಳಲ್ಲಿರುವ ಸುಮಾರು 865 ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಅನ್ನೋ ವಾದವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಮಂಡಿಸಿತ್ತು. ಮಹಾರಾಷ್ಟ್ರ ಸರ್ಕಾರ ಕೂಡ ಇದಕ್ಕೆ ಬೆಂಬಲ ಕೊಟ್ಟಿತ್ತು. ಆದ್ರೆ ಮಹಾಜನ್ ವರದಿಯಲ್ಲಿ ಬೆಳಗಾವಿ ಸೇರಿ ಗಡಿ ಭಾಗದ 865 ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಅಂತ ಹೇಳಿತ್ತು. ಈ ಮಹಾಜನ್ ವರದಿಯನ್ನು ತಿರಸ್ಕರಿಸಿದ್ದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಆ ಕುರಿತು ಈಗ ವಿಚಾರಣೆ ನಡೆಯಲಿದ್ದು ಈ ಮನವಿಯನ್ನ ಪರಿಗಣಿಸಬೇಕೋ ಅಂದ್ರೆ ಇದನ್ನ ವಿಚಾರಣೆ ನಡೆಸಬೇಕೋ ಬೇಡ್ವೋ ಅನ್ನೋ ಬಗ್ಗೆ ಕೋರ್ಟ್‌ ನಿರ್ಧಾರ ಮಾಡಲಿದೆ.

-masthmagaa.com

Contact Us for Advertisement

Leave a Reply