masthmagaa.c0m:

ಚೀನಾದಿಂದ ಕೊರೋನಾ ವೈರಸ್​​ ದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಸರ್ಕಾರ ‘ಗುಂಡಿಕ್ಕಿ ಕೊಲ್ಲಲು’ ಆದೇಶ ಹೊರಡಿಸಿದೆ. ಚೀನಾ ಜೊತೆ ಗಡಿ ಹಂಚಿಕೊಂಡಿರುವ ಉತ್ತರ ಕೊರಿಯಾದಲ್ಲಿ ಇದುವರೆಗೆ ಒಂದೇ ಒಂದು ಸೋಂಕಿನ ಪ್ರಕರಣ ವರದಿಯಾಗಿಲ್ಲ. ಆದ್ರೆ ಆರೋಗ್ಯ ವ್ಯವಸ್ಥೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಉತ್ತರ ಕೊರಿಯಾದಲ್ಲಿ ಒಂದ್ವೇಳೆ ಕೊರೋನಾ ಸ್ಫೋಟಗೊಂಡರೆ ಅದನ್ನ ನಿರ್ವಹಿಸಲು ಕಿಮ್ ಸರ್ಕಾರ​ ಹೆಣಗಾಡೋದು ಖಚಿತ. ಹೀಗಾಗಿಯೇ ಇಂತಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗ್ತಿದೆ.

ಸೋಂಕಿತರ ಮೇಲೆ ಗುಂಡು ಹಾರಿಸ್ತಾರಾ..?

ಅಂದ್ಹಾಗೆ ಕೊರೋನಾ ಭಯದಲ್ಲಿ ಜನವರಿಯಿಂದಲೂ ಚೀನಾ ಜೊತೆಗಿನ ಗಡಿಯನ್ನು ಉತ್ತರ ಕೊರಿಯಾ ಬಂದ್ ಮಾಡಿಕೊಂಡಿದೆ. ಇದರಿಂದ ಕಳ್ಳಸಾಗಣೆಯಾಗಿ ಉತ್ತರ ಕೊರಿಯಾಗೆ ಬರ್ತಿದ್ದ ಸರಕುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಸರಕುಗಳ ಕಳ್ಳಸಾಗಣೆ ಮಾಡುವವರ ಮೂಲಕ ಸೋಂಕು ದೇಶಕ್ಕೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಇದನ್ನ ತಡೆಯಲು ಚೀನಾ ಗಡಿ ಕಡೆಗೆ 1-2 ಕಿಲೋ ಮೀಟರ್​ನಷ್ಟು ಭಾಗವನ್ನು ಬಫರ್ ಝೋನ್ ಅಂತ ಘೋಷಿಸಲಾಗಿದೆ. ಇಲ್ಲಿ ಉತ್ತರ ಕೊರಿಯಾದ ವಿಶೇಷ ಕಾರ್ಯಾಚರಣೆ ಪಡೆಗಳು ಸನ್ನದ್ಧವಾಗಿದ್ದು, ಗಡಿ ನುಸುಳುವವರ ಮೇಲೆ ಗುಂಡು ಹಾರಿಸಲು ಆದೇಶಿಸಲಾಗಿದೆ. ಹೀಗಂತ ದಕ್ಷಿಣ ಕೊರಿಯಾದಲ್ಲಿರುವ ಅಮೆರಿಕದ ಸೇನಾ ಕಮಾಂಡರ್ ರಾಬರ್ಟ್ ಅಬ್ರಾಮ್​ ಹೇಳಿದ್ದಾರೆ.

ಇನ್ನು ಆಗಾಗ ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಯೋಗ ಮಾಡಿ ಇಡೀ ವಿಶ್ವಕ್ಕೆ ಚಮಕ್ ಕೊಡುವ ಉತ್ತರ ಕೊರಿಯಾ ಮೇಲೆ ಈಗಾಗಲೇ ಆರ್ಥಿಕ ನಿರ್ಬಂಧಗಳನ್ನು ಹೇರಲಾಗಿದೆ. ಈಗ ಗಡಿ ಕೂಡ ಮುಚ್ಚಿರುವುದರಿಂದ ಚೀನಾದಿಂದ ಆಮದು ಮಾಡಿಕೊಳ್ತಿದ್ದ ಸರಕುಗಳ ಪ್ರಮಾಣ ಶೇ. 85ರಷ್ಟು ಕುಸಿದಿದೆ. ಇದರ ಜೊತೆಗೆ ‘ಮೈಸ್ಯಾಕ್​’ ಚಂಡಮಾರುತ ಸೃಷ್ಟಿಸಿರುವ ಅವಾಂತರಗಳಿಂದ ಉತ್ತರ ಕೊರಿಯಾ ತತ್ತರಿಸಿ ಹೋಗಿದೆ. ಇವೆಲ್ಲದರ ನಡುವೆ ಕೊರೋನಾ ಕೂಡ ದೇಶಕ್ಕೆ ಬಂದು ಬಿಟ್ಟರೆ ಅಷ್ಟೇ ಕಥೆ ಅನ್ನೋ ಮನಸ್ಥಿತಿಯಲ್ಲಿ ಕಿಮ್ ಜಾಂಗ್ ಉನ್ ಇದ್ದಾರೆ. ಹೀಗಾಗಿಯೇ ವೈರಸ್​ ದೇಶಕ್ಕೆ ಕಾಲಿಡದಂತೆ ನೋಡಿಕೊಳ್ಳುವತ್ತ ಕಿಮ್ ಸರ್ಕಾರ ತನ್ನ ದೃಷ್ಟಿ ನೆಟ್ಟಿದೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply