ಉತ್ತರ ಕೊರಿಯಾದಿಂದ ಮತ್ತೊಂದು ಹೈಪರ್​​​ಸಾನಿಕ್‌ ಕ್ಷಿಪಣಿ ಪರೀಕ್ಷೆ!

masthmagaa.com:

ಉತ್ತರ ಕೊರಿಯಾ ಹೈಪರ್​ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಮೊದಲಿಗೆ ಖಂಡಾಂತರ ಕ್ಷಿಪಣಿ ಅಂತ ಸುದ್ದಿಯಾಗಿತ್ತು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಉತ್ತರ ಕೊರಿಯಾ ಸರ್ಕಾರ, ನಾವು ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿದ್ದೀವಿ. ಅದು ತನ್ನ ಗುರಿಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ ಅಂತ ಹೇಳಿದ್ದಾರೆ. ಉತ್ತರ ಕೊರಿಯಾದಲ್ಲಿ ಜನ ಪ್ರವಾಹ, ಕೊರೋನಾ ನಿರ್ಬಂಧಗಳಿಂದಾಗಿ ಪರದಾಡ್ತಿದ್ದಾರೆ. ದೇಶದ ಮೇಲೆ ಈಗಾಗಲೇ ಅಂತಾರಾಷ್ಟ್ರೀಯ ಸಮುದಾಯ ಹಲವಾರು ರೀತಿಯ ನಿರ್ಬಂಧಗಳನ್ನು ವಿಧಿಸಿದೆ. ಆದ್ರೂ ಕೂಡ ಕಿಮ್ ಜಾಂಗ್ ಉನ್ ಶಸ್ತ್ರಾಸ್ತ್ರ ಪ್ರೇಮ ಕಡಿಮೆಯಾಗಿಲ್ಲ. ಹೊಸ ವರ್ಷವನ್ನು ಹೈಪರ್​ಸಾನಿಕ್ ಕ್ಷಿಪಣಿ ಪರೀಕ್ಷೆ ಮೂಲಕವೇ ಶುರು ಮಾಡಿದ್ದಾರೆ. 700 ಕಿಲೋಮೀಟರ್ ದೂರದಲ್ಲಿದ್ದ ಟಾರ್ಗೆಟ್​​ನ್ನು ರೀಚ್ ಆಗಿದೆ. ಇದನ್ನು ವಿಮಾನದಲ್ಲಿ ಕುಳಿತೂ ಕಂಟ್ರೋಲ್ ಮಾಡ್ಬೋದು.. ಚಳಿಗಾಲದಲ್ಲೂ ಇದು ಕಾರ್ಯ ನಿರ್ವಹಿಸುವಲ್ಲಿ ಸಮರ್ಥವಾಗಿದೆ ಅಂತ ಉತ್ತರ ಕೊರಿಯಾ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಅಮೆರಿಕ, ಕೆನಡಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಈ ಕ್ಷಿಪಣಿ ಪರೀಕ್ಷೆಯನ್ನು ಖಂಡಿಸಿವೆ. ಪಕ್ಕದ ದಕ್ಷಿಣ ಕೊರಿಯಾ ಮತ್ತು ಜಪಾನ್ ಕೂಡ ಉತ್ತರ ಕೊರಿಯಾದ ಮೇಲೆ ನಿಗಾ ಇಟ್ಟಿವೆ. ಅಂದಹಾಗೆ ಈ ಖಂಡಾಂತರ ಕ್ಷಿಪಣಿ ಭೂಮಿಯ ಕಕ್ಷೆಯಿಂದ ಹೊರಹೋಗಿ ನಂತರ ಬಂದು ಗುರಿಯನ್ನು ಟಾರ್ಗೆಟ್ ಮಾಡುತ್ತೆ. ಆದ್ರೆ ಈ ಹೈಪರ್​ಸಾನಿಕ್ ಕ್ಷಿಪಣಿ ಕಡಿಮೆ ಎತ್ತರದಲ್ಲೇ ವೇಗವಾಗಿ ಹೋಗಿ ಟಾರ್ಗೆಟ್ ಫಿನಿಶ್ ಮಾಡೋ ಸಾಮರ್ಥ್ಯಹೊಂದಿರುತ್ತೆ. ಇದು ಶಬ್ದಕ್ಕಿಂಗಲೂ ಐದು ಪಟ್ಟು ಜಾಸ್ತಿ ವೇಗದಲ್ಲಿ ಚಲಿಸೋ ತಾಕತ್ತು ಹೊಂದಿರುತ್ತೆ. ಸೆಪ್ಟೆಂಬರ್ ತಿಂಗಳಲ್ಲೂ ಕಿಮ್ಮಣ್ಣನ ದೇಶ ವಸಾಂಗ್-8 ಅನ್ನೋ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ ನಡೆಸಿತ್ತು. ಇನ್ನು ಇತ್ತೀಚೆಗಷ್ಟೇ ಚೀನಾ ಮತ್ತು ರಷ್ಯಾ ಕೂಡ ಇದೇ ರೀತಿಯ ಕ್ಷಿಪಣಿಗಳ ಪರೀಕ್ಷೆ ನಡೆಸಿತ್ತು.

-masthmagaa.com

Contact Us for Advertisement

Leave a Reply