ಮತ್ತೆ ತಮ್ಮ ಕ್ರೂರ ಆಡಳಿತ ನೀಡ್ತಾರಾ ತಾಲಿಬಾನಿಗಳು..?

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮೇಲ್ನೋಟಕ್ಕೆ ಸಾಫ್ಟ್​ ಆದಂತೆ ತೋರಿಸಿಕೊಳ್ತಿದ್ರು ತನ್ನ ಹಳೆಯ ಭಯಾನಕ ರೂಲ್ಸ್​​ಗಳನ್ನು ಮುಂದುವರಿಸೋ ಎಲ್ಲಾ ಲಕ್ಷಣ ಕಾಣ್ತಾ ಇದೆ. ಯಾಕಂದ್ರೆ ಇಲ್ಲಿ ಅಂಗಡಿಗಳ ಮುಂದಿರೋ ಬೋರ್ಡ್​​ಗಳಲ್ಲಿರೋ ಮಹಿಳೆಯರ ಫೋಟೋಗಳಿಗೆ ಕಪ್ಪು ಬಣ್ಣ ಬಳೀತಾ ಇದಾರೆ. ಗೋಡೆಗಳ ಮೇಲಿರೋ ಫೋಟೋಗಳಿಗೂ ಪೇಂಟ್ ಹೊಡೆದು ಮುಚ್ಚುತ್ತಿದ್ದಾರೆ. ಅಂದ್ರೆ ಹಿಜಬ್ ಧರಿಸದೇ ಇರೋ ಎಲ್ಲಾ ಮಹಿಳೆಯರ ಮುಖಗಳನ್ನು ಮುಚ್ತಿದ್ದಾರೆ. ಮತ್ತೊಂದ್ಕಡೆ ಪುರುಷರನ್ನು ಮಂಡಿಯೂರಿಸಿ ಅವರ ತಲೆ ಬೋಳಿಸುತ್ತಿರುವ ದೃಶ್ಯಗಳು ವೈರಲ್ ಆಗ್ತಿದೆ. ಫೋಟೋಗಳನ್ನೇ ಬಿಡ್ತಿಲ್ಲ. ಇನ್ನು ಹಿಜಬ್ ಹಾಕದೇ ರಸ್ತೆಯಲ್ಲಿ ಹೋಗೋಕೆ ಬಿಡ್ತಾರಾ ಅನ್ನೋ ಚರ್ಚೆ ನಡೀತಾ ಇದೆ. ಇಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದ್ರಲ್ಲಿ ತಾಲಿಬಾನಿ ನಾಯಕರನ್ನು ಮಹಿಳಾ ಆಂಕರ್ ಇಂಟರ್ ವ್ಯೂ ಮಾಡಿದ್ದಾರೆ. ಅದೂ ಅಲ್ಲದೆ ಇತ್ತೀಚೆಗೆ ತಾಲಿಬಾನಿ ನಾಯಕರು, ಇಸ್ಲಾಂ ಎಮಿರೇಟ್ಸ್​​ನಲ್ಲಿ ಮಹಿಳೆಯರು ಸಂತ್ರಸ್ತರಾಗಲು ನಾವು ಬಿಡಲ್ಲ. ಅವರನ್ನು ನಮ್ಮ ಸರ್ಕಾರದಲ್ಲೂ ಸೇರಿಸಿಕೊಳ್ತೀವಿ ಅಂತೆಲ್ಲಾ ಹೇಳಿದ್ರು. ಆದ್ರೀಗ ಹಿಜಬ್ ಹಾಕಿಲ್ಲ ಅಂತ ಫೋಟೋಗಳಿಗೆ ಪೇಂಟ್ ಹೊಡಿತಿದ್ದಾರೆ. ಮುಂದೇನಾಗಬಹುದು ಅಂತ ಇದ್ರಲ್ಲೇ ಗೆಸ್ ಮಾಡ್ಬೋದು..

ಅಂದಹಾಗೆ ತಾಲಿಬಾನಿಗಳ ಬಗ್ಗೆ ಜನರಿಗೆ ಈ ಪರಿ ಭಯ ಇದೆ ಅಂದ್ರೆ ಅದಕ್ಕೆ ಕಾರಣ 1996ರಿಂದ 2001ರವರೆಗೆ ಅವರು ನಡೆಸಿದ ಆಡಳಿತ.. ಮತ್ತು ಅದ್ರಲ್ಲಿದ್ದ ರೂಲ್ಸ್​ಗಳು.. ಶಿಕ್ಷೆಗಳು.. ಆಗ ಷರಿಯಾ ಕಾನೂನುಗಳನ್ನ ಜಾರಿಗೆ ತಂದ ತಾಲಿಬಾನಿಗಳು, ಟಿವಿ, ಡಾನ್ಸ್​, ಸಂಗೀತ, ಸಿನಿಮಾ, ಮನೋರಂಜನೆ ಕಾರ್ಯಕ್ರಮಗಳನ್ನ ಬ್ಯಾನ್ ಮಾಡಿದ್ರು. ಹೆಣ್ಣು ಮಕ್ಕಳು ಶಾಲೆ-ಕಾಲೇಜು ಮತ್ತು ಕೆಲಸಕ್ಕೆ ಹೋಗೋದನ್ನ ನಿರ್ಬಂಧಿಸಿದ್ರು. ಮಹಿಳೆಯರಿಗೆ ಮನೆಯಿಂದ ಹೊರಗೆ ಬರೋಕೂ ಅವಕಾಶ ಇರಲಿಲ್ಲ. ಒಂದ್ವೇಳೆ ಬಂದ್ರೂ ಬುರ್ಕಾ, ಹಿಜಬ್ ಎಲ್ಲಾ ಹಾಕ್ಕೊಂಡು ಫುಲ್ ಕವರ್ ಆಗಿ ಬರಬೇಕಿತ್ತು. ಪುರುಷರು ಗಡ್ಡ ಬಿಡೋದು ಕಡ್ಡಾಯ ಮಾಡಿದ್ರು. ಕೊಲೆ ಮಾಡ್ದೋರು, ಪರಸ್ತ್ರೀ ಜೊತೆ ಸಂಬಂಧ ಇಟ್ಕೊಳ್ಳರನ್ನ ಪಬ್ಲಿಕ್​ ಪ್ಲೇಸ್​​ನಲ್ಲೇ ಶಿಕ್ಷಿಸಲಾಯ್ತು. ಕಳ್ಳರ ಕೈ ಕಾಲುಗಳನ್ನ ಕಟ್​ ಮಾಡಿದ್ರು.

ಇವೆಲ್ಲದ್ರ ನಡುವೆ ತಾಲಿಬಾನಿಗಳ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದ್ದಾರೆ. ಫಲಕಗಳನ್ನು ಹಿಡಿದು ಉದ್ಯೋಗ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೂ ಅವಕಾಶ ನೀಡಬೇಕು ಅಂತ ಒತ್ತಾಯಿಸಿದ್ದಾರೆ.

ಇಷ್ಟು ದಿನ ಹಳೆ ಕಾಲದ ರಷ್ಯಾ ನಿರ್ಮಿತ ಬಂದೂಕು ಹಿಡಿದು ಓಡಾಡ್ತಿದ್ದ ತಾಲಿಬಾನಿಗಳು ಈಗ ಅಮೆರಿಕದ ಅತ್ಯಾಧುನಿಕ ಬಂದೂಕು ಹಿಡಿದು ಓಡಾಡೋಕೆ ಶುರು ಮಾಡಿದ್ಧಾರೆ.

ಅಮೆರಿಕ ಅಫ್ಘಾನಿಸ್ತಾನವನ್ನು ಭೀಕರವಾದ ಅವ್ಯವಸ್ಥೆಯ ಸ್ಥಿತಿಯಲ್ಲಿ ಬಿಟ್ಟು ಹೋಗ್ತಿದೆ ಅಂತ ಚೀನಾ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾ ವಿದೇಶಾಂಗ ವಕ್ತಾರ ಹುವಾ ಚುನಿಂಗ್, ಅಮೆರಿಕ ಅಫ್ಘಾನಿಸ್ತಾನವನ್ನು ಭೀಕರ ಅವ್ಯವಸ್ಥೆಗೆ ದೂಡಿ ಹೋಗ್ತಿದೆ. ವಿದೇಶಗಳಲ್ಲಿ ಅಮೆರಿಕದ ಮಧ್ಯಸ್ಥಿಕೆ ವಹಿಸಿದಲ್ಲೆಲ್ಲಾ ಇರೋದನ್ನು ನಾಶ ಮಾಡಿದೆ ಬಿಟ್ರೆ.. ಏನನ್ನೂ ನಿರ್ಮಾಣ ಮಾಡಿಲ್ಲ ಅಂತ ಹೇಳಿದ್ದಾರೆ. ಇನ್ನು ನಿನ್ನೆ ಮಾತನಾಡಿದ್ದ ಇವರು, ನಾವು ತಾಲಿಬಾನಿಗಳ ಅಫ್ಘಾನಿಸ್ತಾನ ಸರ್ಕಾರದ ಜೊತೆ ಸ್ನೇಹ ಮತ್ತು ಸಹಕಾರದ ಸಂಬಂಧ ಮುಂದುವರಿಸ್ತೀವಿ ಅಂತ ಹೇಳಿದ್ರು. ಆದ್ರೆ ಅಫ್ಘಾನಿಸ್ತಾನದ ಈ ಸ್ಥಿತಿಗೆ ಅಲ್ಲಿನ ರಾಜಕೀಯ ನಾಯಕತ್ವ ಮತ್ತು ಸೇನೆಯೇ ಕಾರಣ ಅಂತ ನ್ಯಾಟೋ ಹೇಳಿದೆ. ಅಫ್ಘಾನಿಸ್ತಾನದ ಪರಿಸ್ಥಿತಿ ಸಂಬಂಧ ಇವತ್ತು ಮೀಟಿಂಗ್ ಇತ್ತು. ಅದಾದ್ಮೇಲೆ ಈ ಹೇಳಿಕೆ ಕೊಟ್ಟಿದೆ ನ್ಯಾಟೋ. ಇನ್ನು ಜರ್ಮನಿಯಂತೂ ಕಾಬೂಲ್ ಏರ್​ಪೋರ್ಟ್​​ನಲ್ಲಿ ನಡೆದ ಘಟನೆ ನೋಡಿದ್ರೆ ಪಾಶ್ಚಿಮಾತ್ಯ ದೇಶಗಳಿಗೆ ನಾಚಿಕೆಯಾಗಬೇಕು ಅಂತ ಹೇಳಿಕೊಂಡಿದೆ.

ಜರ್ಮನಿ ಅಫ್ಘಾನಿಸ್ತಾನ ಅಭಿವೃದ್ಧಿಗಾಗಿ ನೀಡ್ತಿದ್ದ ನೆರವನ್ನು ಇನ್ಮುಂದೆ ಕೊಡಲ್ಲ ಅಂತ ಹೇಳಿದೆ. ಪ್ರತಿವರ್ಷ ಜರ್ಮನಿ ಅಫ್ಘಾನಿಸ್ತಾನಕ್ಕೆ 50 ಕೋಟಿ ಡಾಲರ್ ಅಂದ್ರೆ 3,744 ಕೋಟಿ ರೂಪಾಯಿ ಸಹಾಯಧನ ನೀಡ್ತಿತ್ತು. ಆದ್ರೆ ಈ ಹಿಂದೆಯೇ ತಾಲಿಬಾನಿಗಳು ಅಧಿಕಾರಕ್ಕೆ ಬಂದ್ರೆ ನಾವು ಈ ದುಡ್ಡು ಕೊಡಲ್ಲ ಅಂತ ಹೇಳಿತ್ತು. ಅದರಂತೆ ಈಗ ಘೋಷಣೆ ಮಾಡಿದೆ. ಇನ್ನು ಅಫ್ಘಾನಿಸ್ತಾನದಲ್ಲಿರೋ ಲೋಕಲ್ ಡೆವೆಲಪ್​ಮೆಂಟ್ ಆಫೀಸರ್, ಎನ್​ಜಿಒ ಸಿಬ್ಬಂದಿಯನ್ನು ಕೂಡ ಅಲ್ಲಿಂದ ಸ್ಥಳಾಂತರ ಮಾಡ್ತೀವಿ ಅಂತ ತಿಳಿಸಿದೆ.

ಅಫ್ಘಾನಿಸ್ಥಾನದಲ್ಲಿ ಮಾನವೀಯ ನೆರವಿನ ಮೊತ್ತವನ್ನು 10 ಪರ್ಸೆಂಟ್ ಜಾಸ್ತಿ ಮಾಡ್ತೀವಿ ಅಂತ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಹೇಳಿದ್ದಾರೆ. ಆದ್ರೆ ಈ ದುಡ್ಡು ಮಾನವೀಯ ನೆರವಿಗಾಗಿ ಖರ್ಚು ಮಾಡಲಾಗುತ್ತೆ ಹೊರತು, ತಾಲಿಬಾನಿಗಳಿಗೆ ಸಿಗೋದಿಲ್ಲ ಅಂತ ಕೂಡ ತಿಳಿಸಿದ್ದಾರೆ.

ನೀವು ಕೊಟ್ಟಿರೋ ಮಾತು ಉಳಿಸಿಕೊಳ್ಳಿ ಅಂತ ತಾಲಿಬಾನಿಗಳಿಗೆ ವಿಶ್ವಸಂಸ್ಥೆ ತಾಕೀತು ಮಾಡಿದೆ. ಯಾಕಂದ್ರೆ ತಾಲಿಬಾನಿಗಳು ಹಿಂದಿನ ಸರ್ಕಾರದಲ್ಲಿದ್ದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕೆಲಸಕ್ಕೆ ಮರಳುವಂತೆ ಸೂಚಿಸಿದೆ. ನೀವು ಹಿಂದಿನ ಸರ್ಕಾರದಲ್ಲಿದ್ದದ್ದಕ್ಕೆ ನಾವೇನೂ ಮಾಡಲ್ಲ. ಕ್ಷಮಿಸ್ತೀವಿ. ಹೆಣ್ಮಕ್ಕಳಿಗೆ ಶಿಕ್ಷಣದ ಅವಕಾಶ ನೀಡೋದಾಗಿಯೂ ಭರವಸೆ ನೀಡಿತ್ತು. ಇದನ್ನು ಪಾಲಿಸುವಂತೆ ವಿಶ್ವಸಂಸ್ಥೆ ತಿಳಿಸಿದೆ.

ತಾಲಿಬಾನಿಗಳು ಈವರೆಗೆ ನೀಡಿರೋ ಎಲ್ಲಾ ಸಂದೇಶವನ್ನು ನಾವು ಸ್ವಾಗತಿಸ್ತೀವಿ ಅಂತ ಟರ್ಕಿ ಹೇಳಿದೆ. ತಾಲಿಬಾನ್ ಸೇರಿದಂತೆ ಅಫ್ಘಾನಿಸ್ತಾನದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೀವಿ. ಟರ್ಕಿ ಕಡೆಯಿಂದ ಅಫ್ಘಾನಿಸ್ತಾನ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವು ನೀಡೋದನ್ನ ಮುಂದುವರಿಸ್ತೀವಿ ಅಂತ ಟರ್ಕಿ ಹೇಳಿದೆ.

ವಲಸಿಗರಿಗೆ ಸಂಬಂಧಿಸಿದಂತೆ ಇರೋ ವಿಶ್ವಸಂಸ್ಥೆಯ ಹೈಕಮಿಷನರ್ ಫರ್ ರೆಫ್ಯೂಜೀಸ್ ಸ್ಟೇಟ್​​ಮೆಂಟ್ ರಿಲೀಸ್ ಮಾಡಿದೆ. ಸದ್ಯಕ್ಕೆ ಯಾವುದೇ ದೇಶಗಳು ಅಫ್ಘಾನಿಸ್ತಾನದಿಂದ ಬಂದ ವಲಸಿಗರನ್ನು ಬಲವಂತವಾಗಿ ಕಳುಹಿಸಬಾರದು ಅಂತ ತಿಳಿಸಿದೆ. ಈ ಸಂಘಟನೆಯಲ್ಲಿ ವಿಶ್ವದ 174 ದೇಶಗಳು ಸದಸ್ಯತ್ವ ಹೊಂದಿವೆ.

ಅಮೆರಿಕ ತನ್ನ ಸಿಬ್ಬಂದಿ ಜೊತೆಗೆ ಅಲ್ಲಿ ತಮ್ಮ ಸೇನೆಗೆ ಹೆಲ್ಪ್ ಮಾಡಿದ ಅಫ್ಘನ್ನರನ್ನು ಕೂಡ ಕರೆದುಕೊಂಡು ಹೋಗ್ತಿದೆ. ಹೀಗಾಗಿ ತನ್ನ ಮೂರು ಸೇನಾನೆಲೆಗಳಲ್ಲಿ 22 ಸಾವಿರದಷ್ಟು ತಾತ್ಕಾಲಿಕ ಮನೆಗಳನ್ನು ನಿರ್ಮಿಸಿದೆ ಅಂತ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ. ಅದೇ ರೀತಿ ಅಫ್ಘಾನಿಸ್ಥಾನದ ನಿರಾಶ್ರಿತರ ಅಗತ್ಯತೆಗಳನ್ನು ಪೂರೈಸಲು ಅಮೆರಿಕ ನಿರಾಶ್ರಿತರು ಮತ್ತು ವಲಸಿಗರ ಸಹಾಯ ನಿಧಿಯಿಂದ 50 ಕೋಟಿ ಡಾಲರ್ ಅಂದ್ರೆ 3,744 ಕೋಟಿ ರೂಪಾಯಿ ಬಿಡುಗಡೆ ಮಾಡೋ ಅಗತ್ಯತೆ ಇದೆ ಅಂತ ವೈಟ್ ಹೌಸ್ ಹೇಳಿದೆ.

ಇನ್ನು ಈವರೆಗೆ 176 ಮಂದಿ ಭಾರತೀಯರನ್ನು ಕರೆತರಲಾಗಿದ್ದು, ಇನ್ನೂ ಕೆಲವರು ಅಲ್ಲೇ ಉಳಿದಿದ್ದಾರೆ. ಅವರನ್ನು ಕರೆತರಲು ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾರತೀಯ ಅಧಿಕಾರಿಗಳನ್ನು ಕರೆತರೋ ಬಗ್ಗೆ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜೊತೆ ನಿನ್ನೆ ಸಂಜೆ ಸಭೆ ನಡೆಸಿದ್ರು ಅಂತ ಗೊತ್ತಾಗಿದೆ.

ಇವೆಲ್ಲದ್ರ ನಡುವೆ ಇತ್ತು ಪ್ರಧಾನಿ ಮೋದಿ ಕೂಡ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆ ನಡೆಸಿದ್ದಾರೆ. ಇದ್ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್​​, ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಗೃಹಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ರು. ಇನ್ನು ನಿನ್ನೆ ತಡರಾತ್ರಿವರೆಗೂ ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡ್ಕೊಳ್ತಿದ್ರು ಅಂತ ಮಾಹಿತಿ ಸಿಕ್ಕಿದೆ.

ಮತ್ತೊಂದ್ಕಡೆ 1650 ಮಂದಿ ಅಫ್ಗಾನಿಸ್ತಾನದಿಂದ ಭಾರತಕ್ಕೆ ಬರಲು ಅಪ್ಲೈ ಮಾಡಿದ್ದಾರೆ. ಕಾಬೂಲ್​​​​ನಲ್ಲಿರೋ ಭಾರತೀಯ ರಾಯಭಾರಿ ಕಚೇರಿ ಕಂಪ್ಲೀಟ್ ಆಗಿ ಬಂದ್ ಆಗಿಲ್ಲ. ಸ್ಥಳೀಯ ಸಿಬ್ಬಂದಿ ಜೊತೆ ಕೆಲಸ ಮಾಡ್ತಿದೆ ಅಂತ ಸರ್ಕಾರಿ ಮೂಲಗಳು ತಿಳಿಸಿವೆ. ಅಲ್ಲಿ ಈ ಅರ್ಜಿಗಳು ಸಲ್ಲಿಕೆಯಾಗಿವೆ ಅಂತ ಸರ್ಕಾರಿ ಮೂಲಗಳು ತಿಳಿಸಿವೆ. ಇವತ್ತು ಬೆಳಗ್ಗೆಯಷ್ಟೇ ಭಾರತದ ವಿದೇಶಾಂಗ ಇಲಾಖೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರೋರಿಗೆ ಇ ವೀಸಾ ನೀಡೋದಾಗಿ ಘೋಷಿಸಿತ್ತು.

ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರೆಹಮಾನ್ ಬರ್ಕ್​​​ ಅಫ್ಘಾನಿಸ್ತಾನದ ತಾಲಿಬಾನಿಗಳನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ವಿರುದ್ಧ ಹೇಗೆ ಹೋರಾಡಿ ಸ್ವಾತಂತ್ರ್ಯ ಪಡೆದೆವೋ ಅದೇ ರೀತಿ ತಾಲಿಬಾನಿಗಳು ಸ್ವಾತಂತ್ರ್ಯ ಪಡೆದಿದ್ದಾರೆ. ತಾಲಿಬಾನಿಗಳು ರಷ್ಯಾ ಮತ್ತು ಅಮೆರಿಕದಂತ ದೇಶಗಳಿಗೆ ತಮ್ಮ ನೆಲದಲ್ಲಿ ಇರಲು ಬಿಡಲಿಲ್ಲ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ, ಸಮಾಜವಾದಿ ಪಕ್ಷದಲ್ಲಿ ಏನ್ ಬೇಕಾದ್ರೂ ನಡೆಯುತ್ತೆ. ಇಂಥಾ ಹೇಳಿಕೆ ನೀಡ್ತಾರೆ ಅಂತಾದ್ರೆ ಅವರಿಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್​​ಗೂ ಯಾವುದೇ ವ್ಯತ್ಯಾಸ ಇಲ್ಲ ಅಂತ ಹೇಳಿದ್ದಾರೆ.

ಅಫ್ಘಾನಿಸ್ತಾನದ ಪರಿಸ್ಥಿತಿ ನಿರಂತರವಾಗಿ ಬೆಳವಣಿಗೆಗಳಾಗ್ತಿವೆ. ದೇಶದ ಹಲವಾರು ಜನ ಟ್ವಿಟರ್ ಮೂಲ ಸಹಾಯಕ್ಕಾಗಿ ಮೊರೆ ಇಡ್ತಿದ್ದಾರೆ ಅಂತ ಟ್ವಿಟರ್ ಸಂಸ್ಥೆ ಹೇಳಿದೆ. ಜನರನ್ನು ಸುರಕ್ಷಿತವಾಗಿಡೋದೇ ನಮ್ಮ ಗುರಿ. ಹೀಗಾಗಿ ನಾವು ಸಂಸ್ಥೆಯ ರೂಲ್ಸ್​​ ಕರೆಕ್ಟಾಗಿ ಪಾಲನೆಯಾಗ್ತಿದೆಯೋ ಇಲ್ವೋ ಅನ್ನೋದನ್ನ ಸೂಕ್ಷ್ಮವಾಗಿ ಮಾನಿಟರ್ ಮಾಡ್ತೀವಿ ಅಂತ ಟ್ವಿಟರ್​ ತಿಳಿಸಿದೆ.

ತಾಲಿಬಾನ್ ಮಧ್ಯಂತರ ಸರ್ಕಾರದ ಲೀಡರ್ ಮುಲ್ಲಾ ಅಬ್ದುಲ್ ಘನಿ ಬರಾದರ್​ ಕತಾರ್​ ವಿದೇಶಾಂಗ ಸಚಿವ ಶೇಖ್ ಮೊಹ್ಮದ್ ಅಬ್ದುಲ್ ರಹಮಾನ್ ಅಲ್ ತಾನಿ ಅವರನ್ನು ಭೇಟಿಯಾಗಿದ್ದಾರೆ. ಉಭಯ ನಾಯಕರು ಅಫ್ಘಾನಿಸ್ತಾನದ ಭದ್ರತೆ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಇದಾದ ಬಳಿಕ ಅಲ್ಲಿಂದ ನೇರವಾಗಿ ಮುಲ್ಲಾ ಅಬ್ದುಲ್ ಘನಿ ಬರಾದರ್​ ಅಪ್ಘಾನಿಸ್ತಾನಕ್ಕೆ ವಾಪಸ್ಸಾಗಿದ್ದಾರೆ. ಕತಾರ್ ರಾಜಧಾನಿ ದೋಹಾದಲ್ಲಿ ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಬರಾದರ್ ಅಫ್ಘಾನಿಸ್ತಾನಕ್ಕೆ ಬರ್ತಿದ್ದು, ಸದ್ಯಲ್ಲೇ ಪೂರ್ಣ ಪ್ರಮಾಣದ ಸರ್ಕಾರ ಘೋಷಣೆಯಾಗೋ ಸಾಧ್ಯತೆ ಇದೆ.

ಅಫ್ಘಾನಿಸ್ತಾನದ ಜೊತೆಗೆ ಭಾನುವಾರ ಗಡಿ ಬಂದ್ ಮಾಡಿಕೊಂಡಿದ್ದ ಪಾಕಿಸ್ತಾನ ಈಗ ಮತ್ತೆ ಓಪನ್ ಮಾಡಿದೆ. ಟ್ರಕ್ ಸೇರಿದಂತೆ ಸರಕು ಸಾಗಿಸೋ ವಾಹನಗಳ ಓಡಾಟ ಕೂಡ ಶುರುವಾಗಿದೆ.

ಇದೆಲ್ಲಾ ಅಫ್ಘಾನಿಸ್ತಾನದ್ದಾದ್ರೆ, ಪಕ್ಕದ ಪಾಕಿಸ್ತಾನಿದಲ್ಲಿ ಕೆಲ ದುಷ್ಟರು ನಾವು ಏನಾದ್ರೂ ಮಾಡ್ಬೇಕಲ್ಲಾ ಅಂತ ದುರ್ಬುದ್ಧಿ ತೋರ್ಸಿದ್ದಾರೆ. ಮಹಾರಾಜ ರಂಜಿತ್ ಸಿಂಗ್​​​ ಪ್ರತಿಮೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಇತಿಹಾಸ ಪ್ರಸಿದ್ಧ ಲಾಹೋರ್​ಫೋರ್ಟ್​​ನಲ್ಲಿರೋ ಪ್ರತಿಮೆ ಇದಾಗಿದೆ. ತೆಹ್ರೀಕ್ ಇ ಲಬ್ಬೈಕ್ ಪಾಕಿಸ್ತಾನ್ ಕಾರ್ಯಕರ್ತ ರಿಜ್ವಾನ್ ಅನ್ನೋನು ಈ ಕೃತ್ಯ ಎಸಗಿದ್ದಾನೆ ಅಂತ ಗೊತ್ತಾಗಿದೆ. ಭಾರತದ ವಿದೇಶಾಂಗ ಇಲಾಖೆ ಈ ಕೃತ್ಯವನ್ನು ಖಂಡಿಸಿದೆ. ಇಂಥಹ ಕೆಲವು ಅವಿದ್ಯಾವಂತ ಜನರ ಗುಂಪಿನಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮಾನ ಹರಾಜಾಗ್ತಿದೆ. ಇದು ದೇಶಕ್ಕೆ ಅಪಾಯಕಾರಿ ಅಂತ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಚೌಧರಿ ಹೇಳಿದ್ದಾರೆ.
-masthmagaa.com

Contact Us for Advertisement

Leave a Reply