ಜೂನ್‌ನಿಂದ ಮೂರನೇ ಅವಧಿ ಶುರು ಎಂದ ಪ್ರಧಾನಿ ಮೋದಿ!

masthmagaa.com:

ಜೂನ್‌ನಿಂದ ನಮ್ಮ ಸರ್ಕಾರದ ಮೂರನೇ ಅವಧಿ ಶುರು ಆಗತ್ತೆ ಅಂತ ಪ್ರಧಾನಿ ಮೋದಿ ಹೇಳಿಕೆ ಕೊಟ್ಟಿದ್ದಾರೆ. ಸೋಮವಾರ ದೇಶಾದ್ಯಂತ ಸುಮಾರು 41 ಸಾವಿರ ಕೋಟಿ ವೆಚ್ಚದ 2 ಸಾವಿರ ರೈಲು ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮೋದಿ ಚಾಲನೆ ಕೊಟ್ಟಿದ್ರು. ಇದ್ರಲ್ಲಿ 27 ರಾಜ್ಯಗಳ 554 ರೈಲು ನಿಲ್ದಾಣಗಳ ಪುನರ್‌ ಅಭಿವೃದ್ದಿ ಕಾಮಗಾರಿ ಸೇರಿದಂತೆ, 1500ಕ್ಕೂ ಅಧಿಕ ರೈಲ್ವೆಗಳಿಗೆ ಸಂಬಂಧಿಸಿದ ಬ್ರಿಡ್ಜ್‌ಗಳನ್ನ ನಿರ್ಮಿಸೊ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಈ ವೇಳೆ ಮಾತನಾಡಿದ ಪಿಎಂ ಮೋದಿ, ಭಾರತ ಅಭೂತಪೂರ್ವ ವೇಗದೊಂದಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ದಿಯಲ್ಲಿ ಪ್ರಗತಿ ಸಾಧಿಸಿದೆ. ಜೊತೆಗೆ ಇಂದಿನ ಕಾರ್ಯಕ್ರಮ ನವಭಾರತದ ಹೊಸ ಸಂಸ್ಕೃತಿಯ ಪ್ರತೀಕವಾಗಿದೆ. ಇಂದು ಭಾರತ ಮಾಡ್ತಿರೊ ಕೆಲ್ಸಗಳೆಲ್ಲ ವೇಗವಾಗೇ ನಡೆಯುತ್ವೆ. ನಾವು ದೊಡ್ಡ ಕನಸುಗಳನ್ನೇ ಕಾಣುತ್ತೇವೆ. ಅವುಗಳನ್ನ ಈಡೇರಿಸಲು ಹಗಲಿರುಳು ಶ್ರಮ ಪಡ್ತಿದ್ದೇವೆ…ಜೂನ್‌ ತಿಂಗಳಿನಿಂದ ನಮ್ಮ ಮೂರನೇ ಅವಧಿ ಶುರುವಾಗುತ್ತೆ ಅಂತ ಹೇಳಿದ್ದಾರೆ.ಅತ್ತ ಸಿಕ್ಕಿಂ ರಾಜ್ಯದ ಮೊದಲ ರೈಲ್ವೇ ಸ್ಟೇಷನ್‌ ನಿರ್ಮಾಣಕ್ಕೆ ಪಿಎಂ ಮೋದಿ ಅಡಿಗಲ್ಲು ಇಟ್ಟಿದ್ದಾರೆ. ಈ ಮೂಲಕ ರಾಂಗ್‌ಪೋನಲ್ಲಿ ರಾಜ್ಯದ ಮೊದಲ ರೈಲ್ವೇ ಸ್ಟೇಷನ್‌ ನಿರ್ಮಾಣವಾಗ್ತಿದೆ.‌ ಚೀನಾ ಬಳಿಯ ಮುಖ್ಯ ಸ್ಟ್ರಾಟಜಿಕ್ ಸ್ಥಳ ನತುಲಾ ಪಾಸ್‌ಗೆ ಈ ಹೊಸ ರೈಲ್ವೇ ಟ್ರ್ಯಾಕ್ ಸಂಪರ್ಕ ನೀಡಲಿದೆ.‌ ಭಾರೀ ಗಾತ್ರದ ಮಿಲಿಟರಿ ಉಪಕರಣಗಳನ್ನ ಚೀನಾ ಬಾರ್ಡರ್‌ಗೆ ತಲುಪಿಸೋಕೆ ಈ ನಟ್‌ವರ್ಕ್‌ನಿಂದ ಹೆಲ್ಪ್‌ ಆಗಲಿದೆ.

ಮತ್ತೊಂದ್ಕಡೆ ದೇಶದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಬಿಜೆಪಿ ಸರ್ಕಾರದ ಅಗ್ನಿಪಥ್‌ ಯೋಜನೆಯನ್ನ ರದ್ದು ಮಾಡಲಾಗುತ್ತೆ ಅಂತ ಕೈ ನಾಯಕ ಸಚಿನ್‌ ಪೈಲಟ್‌ ಹೇಳಿದ್ದಾರೆ. ಅಲ್ದೇ ಸೇನಾ ನೇಮಕಾತಿಗಾಗಿ ಈ ಹಿಂದೆ ಇದ್ದ ಹಳೇ ಯೋಜನೆಯನ್ನ ಪುನಃ ಜಾರಿಗೊಳಿಸ್ತೀವಿ. ಅಗ್ನಿಪಥ್‌ ಯೋಜನೆಯನ್ನ ರಾಜಕೀಯಗೊಳಿಸಲಾಗಿದೆ, ಇದು ಕಾಸ್ಟ್‌ ಕಟ್ಟಿಂಗ್‌ ಕ್ರಮ. ಇದ್ರಿಂದ ಕೇಂದ್ರ ಸರ್ಕಾರ ಸೇನೆಯನ್ನ ದುರ್ಬಲಗೊಳಿಸಿದೆ ಅಂತ ಪೈಲಟ್‌ ಹೇಳಿದ್ದಾರೆ. ಜೊತೆಗೆ ಈ ವಿಚಾರವಾಗಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವ್ರಿಗೆ ಪತ್ರ ಬರೆದು ಅಗ್ನಿಫಥ್‌ ಯೋಜನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಅಂತ ವರದಿಯಾಗಿದೆ.

ಜಾರ್ಖಂಡ್‌ ಕಾಂಗ್ರೆಸ್‌ಗೆ ಭಾರಿ ಆಘಾತವಾಗಿದೆ. ಕಾಂಗ್ರೆಸ್‌ ಪಕ್ಷದ ಏಕೈಕ ಸಂಸದೆ, ಮಾಜಿ ಸಿಎಂ ಮಧು ಕೋಡಾ ಪುತ್ರಿ ಗೀತಾ ಕೋಡಾ ತಮ್ಮ ಪಕ್ಷಕ್ಕೆ ಗುಡ್‌ ಬೈ ಹೇಳಿ ಬಿಜೆಪಿ ಸೇರಿದ್ದಾರೆ. 2019ರ ಚುನಾವಣೆಯಲ್ಲಿ 14 ಲೋಕಸಭಾ ಕ್ಷೇತ್ರಗಳನ್ನ ಹೊಂದಿರೊ ಜಾರ್ಖಂಡ್‌ನಲ್ಲಿ ಕಳೆದ ಬಾರಿ ಬಿಜೆಪಿ 12 ಸ್ಥಾನ ಗೆದ್ದಿದ್ರೆ, ಕಾಂಗ್ರೆಸ್‌ ಹಾಗೂ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷಗಳು ತಲಾ ಒಂದು ಸ್ಥಾನದಲ್ಲಿ ಗೆದ್ದಿದ್ವು. ಆದ್ರೆ ಇದೀಗ ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ಗಿದ್ದ ಒಂದು ಸ್ಥಾನವೂ ಜಾರ್ಕೊಂಡ್‌ ಹೋಗಿದೆ.

ಮತ್ತೊಂದ್ಕಡೆ ಮುಂಬರೊ ಲೋಕಸಭಾ ಚುನಾವಣೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ವಿದೇಶಾಂಗ ಸಚಿವ ಎಸ್. ಜೈಶಂಕರ್‌ ಸ್ಫರ್ಧೆ ಮಾಡ್ತಾರೆ ಅಂತ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದ್ದಾರೆ. ಆದ್ರೆ ಈ ಇಬ್ಬರೂ ಪ್ರಭಾವಿ ಸಚಿವರು ಕರ್ನಾಟಕದಿಂದ ಸ್ಪರ್ಧೆ ಮಾಡ್ತಾರ ಅನ್ನೋದ್ರ ಬಗ್ಗೆ ಇನ್ನೂ ಡಿಸೈಡ್‌ ಮಾಡಿಲ್ಲ ಅಂತ ಜೋಷಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply