ರಾಜ್ಯದಲ್ಲಿ ಮಳೆ… ಜನ ಜೀವನ ದುಸ್ತರ: ಒಂದೇ ಕುಟುಂಬದ ನಾಲ್ವರ ಸಾವು!

masthmagaa.com:

ರಾಜ್ಯಕ್ಕೆ ಒಂದಷ್ಟು ಬಿಡುವು ಕೊಟ್ಟಿದ್ದ ವರುಣ ಮತ್ತೆ ಅಬ್ಬರಿಸೋಕೆ ಶುರುವಾಗಿದ್ದಾನೆ. ಭಾರೀ ಮಳೆಗೆ ಜನ ಜೀವನ ಅಕ್ಷರಶಃ ಅಸ್ತವ್ಯಸ್ತವಾಗಿದ್ದು ರಸ್ತೆಗಳೆಲ್ಲಾ ನದಿಯಂತಾಗಿದೆ. ಹಲವು ದುರಂತಗಳಿಗೆ ಸಾಕ್ಷಿಯಾಗಿದೆ. ಕರಾವಳಿ ಮಲೆನಾಡು ಭಾಗಗಳಲ್ಲಿ ದಾಖಲೆಯ ಮಳೆಯಾಗ್ತಿದ್ದು ಕಳೆದ 24 ಗಂಟೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಎಂಬಲ್ಲಿ ಅತಿಹೆಚ್ಚು ಅಂದ್ರೆ ಎಷ್ಟು ಗೊತ್ತಾ… ಬರೋಬ್ಬರಿ 548.5 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ರಾಜ್ಯಾದ್ಯಂತ ಕೆಲವು ಕಡೆ ಅಧಿಕ ಇನ್ನುಳಿದ ಕಡೆ ಭಾರಿ ಅಂದ್ರೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಇನ್ನು ರಾಜ್ಯದ ಕೊಡಗು, ದಕ್ಷಿಣಕನ್ನಡ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಇನ್ನು ಶಿವಮೊಗ್ಗ ಜಿಲ್ಲೆಗೆ ಆರೆಂಜ್‌ ಘೋಷಣೆ ಮಾಡಿದ್ರೆ, ಮೈಸೂರು, ಹಾಸನ, ತುಮಕೂರು, ಹಾವೇರಿ, ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಹಾಗೂ ಬೀದರ್‌ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಮಳೆ ಅಬ್ಬರ ಜೋರಾಗಿದ್ದು ಹಲವು ಏರಿಯಾಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿ ಮಾಡಿದೆ. ಇನ್ನು ನೆರೆಯ ಕೇರಳದಲ್ಲಿ ಭಾರಿ ಮಳೆಯ ನೀರಿಕ್ಷೆ ಇದ್ದು ರಾಜ್ಯದ ಬಹುತೇಕ ಭಾಗಗಳಿಗೆ ಕಟ್ಟೆಚ್ಚರ ನೀಡಲಾಗಿದೆ. ಕೇರಳದಲ್ಲಿರೋ 14 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ.

ಎಡೆಬಿಡದೆ ಸುರೀತಿರೋ ಭಾರಿ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುಟ್ಟಳ್ಳಿ ಎಂಬಲ್ಲಿ ಗುಡ್ಡ ಕುಸಿದು ಮನೆಗೆ ಬಿದ್ದ ಪರಿಣಾಮ ಒಂದೇ ಮನೆಯ ನಾಲ್ವರು ಪ್ರಾಣ ಬಿಟ್ಟಿದ್ದಾರೆ. ಇತ್ತ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಅದೇ ರೀತಿಯಾಗಿದ್ದು ಜಿಲ್ಲೆಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಮೃತ ಪಟ್ಟಿದ್ದಾರೆ. ಮಳೆಯಿಂದ ಮನೆ ಗೋಡೆ ಕುಸಿದು ಮೈಸೂರು ಜಿಲ್ಲೆಯ ಕೆಂಚನಕೆರೆ ಹೊಸಕೋಟೆ ಅನ್ನೋ ಗ್ರಾಮದಲ್ಲಿ ವೃದ್ಧೆಯಬ್ಬರು ಪ್ರಾಣ ಬಿಟ್ಟಿದ್ದಾರೆ. ಇನ್ನು ಮಳೆಯ ಅಬ್ಬರಕ್ಕೆ ನೂತನವಾಗಿ ನಿರ್ಮಾಣವಾಗುತ್ತಿರೋ ಬಹುನಿರೀಕ್ಷಿತ ಮೈಸೂರು – ಬೆಂಗಳೂರು ದಶಪಥ ಹೆದ್ದಾರಿಯ ಮೇಲೆಯೂ ನೀರು ನುಗ್ಗಿದ್ದು ಮಂಡ್ಯದಿಂದ ಮದ್ದೂರಿಗೆ ಹೋಗುವ ಸಂಚಾರ ಮಾರ್ಗವನ್ನ ಬಂದ್‌ ಮಾಡಲಾಗಿದೆ.ಇಷ್ಟೇ ಅಲ್ಲ ರಾಜ್ಯದಲ್ಲಿ ಹಲವು ಕಡೆ ಹಳ್ಳಕೊಳ್ಳ ನದಿ ಜಲಾಶಯಗಳು ಅಪಾಯದ ಮಟ್ಟ ಮೀರಿ ಹರೀತಿವೆ. ಗುಡ್ಡ ಕುಸಿಯೋದು, ರಸ್ತೆ ಹಾಳಾಗೋದು,ಮನೆ ಕುಸಿಯೋದು ಕಾಮನ್‌ ಆಗ್ಬಿಟ್ಟಿದೆ.

-masthmagaa.com

Contact Us for Advertisement

Leave a Reply