ರಾಜ್ಯದಲ್ಲಿ ಶುರುವಾಗುತ್ತಾ ರೆಸಾರ್ಟ್‌ ರಾಜಕಾರಣ?

masthmagaa.com:

ಕರ್ನಾಟಕ ಚುನಾವಣೆಯಲ್ಲಿ ಈ ಬಾರಿ ಅತಂತ್ರ ಫಲಿತಾಂಶ ನಿರ್ಮಾಣವಾಗಲಿದೆ ಅಂತ ಗಳು ಭವಿಷ್ಯ ನುಡಿದ ಬೆನ್ನಲ್ಲೇ ರಾಜ್ಯದಲ್ಲಿ ರೆಸಾರ್ಟ್‌ ರಾಜಕೀಯ ಶುರುವಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳನ್ನ ಬೆಂಗಳೂರಿಗೆ ಬರುವಂತೆ ಹೇಳಿದೆ. ರಾಜ್ಯದಲ್ಲಿ ಆಪರೇಷನ್‌ ಕಮಲಕ್ಕೆ ಅವಕಾಶ ಮಾಡಿಕೊಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪಕ್ಷದ ಅಭ್ಯರ್ಥಿಗಳನ್ನ ಬೆಂಗಳೂರು ಹಾಗೂ ಹೈದರಾಬಾದ್‌ನ ಕೆಲ ನಿರ್ದಿಷ್ಟ ಸ್ಥಳಗಳಿಗೆ ಶಿಫ್ಟ್‌ ಮಾಡಲು ಪ್ಲ್ಯಾನ್‌ ಮಾಡಲಾಗ್ತಿದೆ. ಅಲ್ದೇ ಪ್ರತಿ ಜಿಲ್ಲೆಗೆ ಇಬ್ಬರು ಉಸ್ತುವಾರಿಗಳನ್ನು ಕಾಂಗ್ರೆಸ್‌ ನೇಮಕ ಮಾಡಿದೆ. ಶನಿವಾರ ರಾತ್ರಿ ಒಳಗೆ ಗೆದ್ದ ಕಾಂಗ್ರೆಸ್‌ ಶಾಸಕರನ್ನ ಬೆಂಗಳೂರಿಗೆ ಕರೆತರುವ ಹೊಣೆಯನ್ನ ಈ ಉಸ್ತುವಾರಿಗಳಿಗೆ ನೀಡಲಾಗಿದೆ ಅಂತ ಮಾಹಿತಿ ಲಭ್ಯವಾಗಿದೆ. ಇವರ ಜೊತೆ ಗೆದ್ದ ಪಕ್ಷೇತರ ಶಾಸಕರನ್ನೂ ಮನವೊಲಿಸಿ ಕಾಂಗ್ರೆಸ್‌ ಪಕ್ಷಕ್ಕೆ ಕರೆತರಲು ಸೂಚಿಸಲಾಗಿದೆ. ಇತ್ತ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಹೈವೋಲ್ಟೇಜ್‌ ಸಭೆ ನಡೆದಿದೆ. ಸುರ್ಜೇವಾಲಾ, ಡಿಕೆ ಸಹೋದರರು ಚರ್ಚೆ ನಡೆಸಿದ್ದಾರೆ. ಚರ್ಚೆ ಮುಗಿದ ಬಳಿಕ ಮಾತಾಡಿದ ಡಿಕೆ ಸುರೇಶ್‌, ʻಕಪ್‌ ಈಗ್ಲೂ ಅವ್ರದ್ದೇ, ಮುಂದಕ್ಕೆ ನಮ್ಮದುʼ ಅಂತ ಮಾರ್ಮಿಕವಾಗಿ ಹೇಳಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಅವ್ರಿಗೆ ಗೆಲ್ಲಬಹುದಾದ ಪಕ್ಷೇತರ ಅಭ್ಯರ್ಥಿಗಳಿಗೆ ಗಾಳ ಹಾಕುವ ಕೆಲಸ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ ಅವ್ರಿಗೆ ಸಿದ್ದರಾಮಯ್ಯ ಖುದ್ದು ಕರೆ ಮಾಡಿ ಈಗಾಗಲೇ ಮಾತಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶಿರಹಟ್ಟಿ ಕ್ಷೇತ್ರ, ಅರಕಲಗೂಡು, ರಾಣೆಬೆನ್ನೂರು ಕ್ಷೇತ್ರಗಳ ಪಕ್ಷೇತರ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ. ಇನ್ನೊಂದ್‌ ಕಡೆ ಬಿಜೆಪಿ ಕೂಡ ತಂತ್ರ ಹೆಣೆಯಲು ಮುಂದಾಗಿದ್ದು, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವ್ರ ಮನೆಯಲ್ಲಿ ಮಹತ್ವದ ಮಾತುಕತೆ ನಡೆಸಿದೆ. ಸಿಎಂ ಬೊಮ್ಮಾಯಿ ಕೂಡ ಸಭೆಯಲ್ಲಿ ಭಾಗಿಯಾಗಿದ್ದಾರೆ. 108 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲೋ ನಿರೀಕ್ಷೆ ಇದ್ದು, ಉಳಿದ ಸೀಟ್‌ಗಳಿಗಾಗಿ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನ ಸಂಪರ್ಕ ಮಾಡುವ ಬಗ್ಗೆ ಚರ್ಚೆ ನಡೆದಿದೆ ಸುದ್ದಿಯಾಗಿದೆ. ಈ ಪೈಕಿ ಬೊಮ್ಮಾಯಿಯವರೇ ಕೆಲವರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಹರಪನಹಳ್ಳಿ ಕ್ಷೇತ್ರದ ಲತಾ ಮಲ್ಲಿಕಾರ್ಜುನ್‌ ಅವ್ರಿಗೆ ಫೋನ್‌ ಮಾಡಿ ಬೊಮ್ಮಾಯಿ ಮಾತಾಡಿದ್ದಾರೆ. ಅಲ್ದೇ ಬಿಜೆಪಿಯ ಸ್ಥಳೀಯ ನಾಯಕರಿಗೂ ಪಕ್ಷೇತರರ ಜೊತೆ ಸಂಪರ್ಕದಲ್ಲಿರಲು ಸೂಚನೆ ನೀಡಲಾಗಿದೆ.

-masthmagaa.com

Contact Us for Advertisement

Leave a Reply