ರಷ್ಯಾದಲ್ಲಿ ಭೀಕರ ಉಗ್ರ ದಾಳಿ: 60ಕ್ಕೂ ಹೆಚ್ಚು ಮಂದಿ ಸಾವು!

masthmagaa.com:

ರಷ್ಯಾ ರಾಜಧಾನಿ ಮಾಸ್ಕೋ ಬಳಿ ಕಂಡು ಕೇಳರಿಯದ ಉಗ್ರದಾಳಿಯಾಗಿದೆ. ಅಲ್ಲಿನ ಕನ್ಸರ್ಟ್‌ ಹಾಲ್‌ ಒಂದರ ಮೇಲೆ ಶುಕ್ರವಾರ ಸಂಜೆ ಐಎಸ್‌ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಕನಿಷ್ಠ 60 ಮಂದಿ ಬಲಿಯಾಗಿ, 150ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಗಾಯಗೊಂಡಿರೋರ ಪೈಕಿ 60 ಜನ ಕ್ರಿಟಿಕಲ್‌ ಕಂಡಿಷನ್‌ನಲ್ಲಿದ್ದಾರೆ.. ಹಾಗಾಗಿ ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಉಗ್ರರು ಕಟ್ಟಡಕ್ಕೆ ನುಗ್ಗಿ ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ್ದಾರೆ. ಮಾಸ್ಕೋ ಬಳಿಯ ಕ್ರೋಕಸ್‌ ನಗರದಲ್ಲಿ ಖ್ಯಾತ ರಾಕ್‌ ಬ್ಯಾಂಡ್‌ ಒಂದರ ಮ್ಯೂಸಿಕ್ ಕನ್ಸರ್ಟ್‌ ಆಯೋಜಿಸಲಾಗಿತ್ತು. 9 ಸಾವಿರ ಮಂದಿ ಸೇರಬಹುದಾದ ಹಾಲ್‌ನಲ್ಲಿ‌ ಈ ಷೋನ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿದ್ವು. ಈ ವೇಳೆ ಕಟ್ಟಡದಲ್ಲಿ ಅಡಗಿಕೊಂಡಿದ್ದ ಉಗ್ರರು, ಜನರ ಮಧ್ಯೆ ಬಂದು ಏಕಾಏಕಿ ಗುಂಡು ಹಾರಿಸೋಕೆ ಶುರು ಮಾಡಿದ್ದಾರೆ. ಇದರಿಂದ ಭಾರಿ ಅನಾಹುತವೇ ನಡೆದೋಗಿದೆ. ಈ ದಿಢೀರ್‌ ಘಟನೆಯಿಂದ ಜನ ಕಿರುಚಿ ಚೀರಾಡಿ ಅಲ್ಲಿಂದ ಓಡಿ ಹೋಗ್ತಿರೋ ದೃಶ್ಯಗಳು ರಷ್ಯಾದಲ್ಲಿ ಭಾರೀ ವೈರಲ್‌ ಆಗಿವೆ. ಇನ್ನು ದಾಳಿ ಮಾಡಿದ ಉಗ್ರರು ಕಟ್ಟಡಕ್ಕೂ ಬೆಂಕಿ ಹಚ್ಚಿದ್ದಾರೆ. ರಷ್ಯಾ ಪಡೆಗಳು ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಆಂಬುಲೆನ್ಸ್‌ಗಳು, ಅಗ್ನಿಶಾಮಕದಳ, ಹೆಲಿಕಾಪ್ಟರ್‌ ಬಳಸಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಇನ್ನು ಹಾಲ್‌ನ ಗಾರ್ಡ್‌ಗಳ ಬಳಿ ಬಂದೂಕುಗಳಿರ್ಲಿಲ್ಲ ಅನ್ನೋ ವಿಚಾರ ಕೂಡ ಬಯಲಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಸ್ಪೆಶಲ್‌ ಫೋರ್ಸ್‌ಗಳು ಬರೋಕೆ ಮುಂಚೇನೆ ದಾಳಿಕೋರರು ಅಲ್ಲಿಂದ ಎಸ್ಕೇಪ್‌ ಕೂಡ ಆಗಿದ್ದಾರೆ. ಅಷ್ಟೇ ಅಲ್ಲ ಕೆಲವೊಂದಷ್ಟು ಉಗ್ರರು ರಷ್ಯಾದ ಬೀದಿ ಬೀದಿಗಳಲ್ಲಿ ರಾಜರೋಷವಾಗಿ ಬಂದೂಕು ಹಿಡಿದು ತಿರುಗಿದ್ದಾರೆ. ಈ ದೃಶ್ಯಗಳು ಸಾಕಷ್ಟು ವೈರಲ್‌ ಆಗಿವೆ. IS ಉಗ್ರರ ಅಫ್ಘನ್‌ ಘಟಕ, IS ಕೊರಾಸನ್‌ ಉಗ್ರರು ಈ ದಾಳಿ ಬಗ್ಗೆ ಸ್ಟೇಟ್‌ಮೆಂಟ್‌ ರಿಲೀಸ್‌ ಮಾಡಿವೆ. ಕ್ರೈಸ್ತರ ಮೇಲೆ ದಾಳಿ ಮಾಡಿದ್ದು ನಾವೇ ಅಂತ ದಾಳಿ ಹೊಣೆ ಹೊತ್ಕೊಂಡಿದ್ದಾರೆ. ಅಂದ್ಹಾಗೆ 2015ರಲ್ಲಿ ರಷ್ಯಾ, ಸಿರಿಯಾದ ನಾಗರೀಕ ಯುದ್ಧಕ್ಕೆ ಎಂಟರ್‌ ಆಗಿತ್ತು. ಇದೇ ಸೇಡಿಗೆ ಈ ಸಂಘಟನೆ ಈ ಕೃತ್ಯ ಎಸಗಿದೆ ಅಂತ ವಿಶ್ಲೇಷಿಸಲಾಗ್ತಿದೆ. ರಷ್ಯಾ ಹಾಗೂ ಪಾಶ್ಚಿಮಾತ್ಯ ದೇಶಗಳ ಸಂಬಂಧ ಅತ್ಯಂತ ಕೆಳಮಟ್ಟಕ್ಕೆ ಇಳಿದಿರೋ ಟೈಮಲ್ಲೇ ಈ ದುರ್ಘಟನೆ ಸಂಭವಿಸಿದೆ. 2018ರಿಂದ ಈ ಕೊರಸಾನ್‌ ಗುಂಪನ್ನ ತಾಲಿಬಾನ್‌ ಹಾಗೂ ಅಮೆರಿಕನ್‌ ಪಡೆಗಳು ಹೊಸಕಿ ಹಾಕಿದ್ವು. ಯಾಕಂದ್ರೆ ಇಬ್ರಿಗೂ ಇವರು ಶತ್ರುಗಳು ಆದ್ರೆ. ಅಷ್ಟೇ ಅಲ್ಲ ಸಿರಿಯಾದಲ್ಲಿ ಈ ಉಗ್ರನೆಲೆಗಳ ಮೇಲೆ ರಷ್ಯಾ ಸಾಕಷ್ಟು ದಾಳಿ ಮಾಡಿತ್ತು. ಅಲ್ಲಿಂದ ಇವರು ತಣ್ಣಗಿದ್ರು. ಈಗ ಅದರ ಸೇಡು ತೀರಿಸಕೊಳ್ಳೊಕೆ ನಾವು ದಾಳಿ ಮಾಡಿದ್ದೇವೆ ಅಂತ ಉಗ್ರಸಂಘಟನೆ ಹೇಳಿದೆ. ಸದ್ಯ ಘಟನೆ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್‌ ತಕ್ಷಣಕ್ಕೆ ರಿಯಾಕ್ಟ್‌ ಮಾಡಿಲ್ಲ. ದಾಳಿಗೊಳಗಾದೋರು ವೇಗವಾಗಿ ಗುಣಮುಖವಾಗ್ಲಿ ಅಂತೇಳಿದ್ದಾರೆ. ಆದ್ರೆ ಪುಟಿನ್‌ರ ಈ ಮೌನದ ಬಗ್ಗೆ ಅಲ್ಲಿನ ರಿಟೈರ್ಡ್‌ ಜನರಲ್‌ ಒಬ್ರು ಮಾತಾಡಿ, ಅಧ್ಯಕ್ಷ ಪುಟಿನ್‌ಗೆ ಈ ಘಟನೆ ಸ್ವಲ್ಪ ಮುಜುಗರ ತಂದಿದೆ ಅಂತೇಳಿದ್ದಾರೆ. ಇನ್ನು ರಷ್ಯಾದಲ್ಲಿ ನಡೆದ ಈ ಘೋರ ಘಟನೆಗೆ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ರಿಯಾಕ್ಟ್‌ ಮಾಡಿ ಖಂಡನೆ ವ್ಯಕ್ತಪಡಿಸಿವೆ. ಪಿಎಂ ಮೋದಿಯವರು ರಿಯಾಕ್ಟ್‌ ಮಾಡಿ ಇದೊಂದು ಹೇಯ ಕೃತ್ಯ..ಇದನ್ನ ನಾವು ಬಲವಾಗಿ ಖಂಡಿಸ್ತೇವೆ. ಭಾರತ ಈ ಟೈಮಲ್ಲಿ ರಷ್ಯಾ ಜೊತೆ ಒಗ್ಗಟಿನಿಂದ ನಿಲ್ಲುತ್ತೆ. ಘಟನೆಯಿಂದ ಹಾನಿಗೊಳಗಾದೋರ ಕುಟುಂಬಗಳಿಗಾಗಿ ನಾವು ಪ್ರಾರ್ಥನೆ ಮಾಡ್ತೇವೆ ಅಂದಿದ್ದಾರೆ. ಇನ್ನು ಅಮೆರಿಕ ಈ ದಾಳಿ ಬಗ್ಗೆ ಈ ತಿಂಗಳ ಆರಂಭದಲ್ಲೇ ರಷ್ಯಾಗೆ ವಾರ್ನಿಂಗ್‌ ನೀಡಿತ್ತು ಅನ್ನೋ ವಿಚಾರ ಕೂಡ ಬೆಳಕಿಗೆ ಬಂದಿದೆ. ಅದು ನಿಜ ಕೂಡ ಹೌದು. ಯಾಕಂದ್ರೆ ರಷ್ಯಾದಲ್ಲಿರೋ ಅಮೆರಿಕನ್ನರಿಗೆ ಅಲ್ಲಿನ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಈ ಬಗ್ಗೆ ಅಡ್ವೈಸರಿ ನೀಡಿತ್ತು. ಈ ಹಿಂದೆ ಸುತ್ತು ಜಗತ್ತು ಬುಲೆಟಿನ್‌ನಲ್ಲಿ ಈ ಬಗ್ಗೆ ನಿಮಗೆ ಮಾಹಿತಿ ಕೊಟ್ಟಿದ್ವಿ. ಆದ್ರೆ ಅಮೆರಿಕ ವಾರ್ನಿಂಗ್‌ ಕೊಟ್ಟಂತೆ ರಷ್ಯಾದಲ್ಲಿ ದೊಡ್ಡ ಉಗ್ರದಾಳಿಯೇ ಆಗಿದೆ. ಇನ್ನು ಅತ್ತ ಯುಕ್ರೇನ್‌ ಈ ಬಗ್ಗೆ ರಿಯಾಕ್ಟ್‌ ಮಾಡಿ, ಯುಕ್ರೇನ್‌ಗೂ ಈ ದಾಳಿಗೂ ಯಾವ ಸಂಬಂಧಾನೂ ಇಲ್ಲ. ನಾವು ಉಗ್ರರ ದಾರಿ ಬಳಸಿ ಯುದ್ಧ ಮಾಡಲ್ಲ. ರಷ್ಯಾ ಜೊತೆಗಿನ ಸಂಘರ್ಷ ಏನಿದ್ರೂ ಯುದ್ಧಭೂಮಿಯಲ್ಲಿ ಡಿಸೈಡ್‌ ಆಗ್ಬೇಕು ಅಂತೇಳಿದೆ. ಇನ್ನು ದಾಳಿ ನಂತರ ರಷ್ಯಾದ ಏರ್‌ಪೋರ್ಟ್‌ ಹಾಗೂ ಇತರೆ ಸಾರಿಗೆ ಕೇಂದ್ರಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಒಟ್ನಲ್ಲಿ ರಷ್ಯಾದಲ್ಲಿ ಪುಟಿನ್‌ ಅಧಿಕಾರಕ್ಕೆ ಬಂದ್ಮೇಲೆ ಅಷ್ಟೇನೂ ದೊಡ್ಡ ಉಗ್ರದಾಳಿಗಳು ಆಗಿರಲಿಲ್ಲ. ಆದ್ರೆ ಪುಟಿನ್‌ 5ಬಾರಿಗೂ ರಷ್ಯಾದ ಚುಕ್ಕಾಣಿ ಹಿಡಿದ ಬಳಿಕ ಈ ಉಗ್ರದಾಳಿಯಾಗಿದೆ. ಸಧ್ಯ ಪುಟಿನ್‌ ಮೌನ ವಹಿಸಿಕೊಂಡು ಕೂತಿದ್ದಾರೆ. ಈ ಮೌನದ ಹಿಂದೆ ದೊಡ್ಡ ಸೇಡಿನ ಬೆಂಕಿ ಇದೆಯಾ? ಅಥವಾ ಪುಟಿನ್‌ ಸುಮ್ನಾಗ್ತಾರಾ? ರಷ್ಯಾ ಇದನ್ನ ಯಾವ ರೀತಿ ತಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.

-masthmagaa.com

Contact Us for Advertisement

Leave a Reply