ಯುಕ್ರೇನ್- ರಷ್ಯಾ ಯುದ್ಧ! ಇವತ್ತಿನ ಅಪ್​ಡೇಟ್ ಇಲ್ಲಿದೆ

masthmagaa.com:

ಯುಕ್ರೇನ್‌ ಮೇಲೆ ರಷ್ಯಾ ಆಕ್ರಮಣ ಮಾಡಿ ಇವತ್ತಿಗೆ ಸರಿಯಾಗಿ ಎರಡು ತಿಂಗಳು ಪೂರ್ಣವಾಗಿದ್ರೂ ಕೂಡ ಇಬ್ಬರ ನಡುವಿನ ಬಡಿದಾಟ ಮಾತ್ರ ಕಮ್ಮಿಯಾಗಿಲ್ಲ. ಈ ನಡುವೆಯೇ ಯುಕ್ರೇನ್‌ ಅಧ್ಯಕ್ಷ ವೊಲಿಡಿಮಿರ್‌ ಝೆಲೆನ್ಸ್ಕಿ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಮತ್ತೊಮ್ಮೆ ಮಾತುಕತೆಯ ಆಫರ್‌ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು
ಯುದ್ದವನ್ನ ಕೊನೆಗಾಣಿಸೋ ಸಂಬಂಧ ಸಭೆ ಸೇರೋಕೆ ನಾವು ರೆಡಿ ಇದ್ದೀವಿ. ಯುದ್ದ ಆರಂಭವಾದಗಿನಿಂದ ಇಲ್ಲಿ ತನಕ ನಾವು ಇದನ್ನೇ ಹೇಳ್ತಾ ಬಂದಿದ್ದೀವಿ.. ಆದ್ರೆ ಇದನ್ನ ನಾವು ಭಯದಿಂದ ಹೇಳ್ತಿಲ್ಲ ಅಂತ ಹೇಳಿದ್ದಾರೆ.

-ಇದ್ರ ನಡುವೆಯೇ ರಷ್ಯಾ ಯುಕ್ರೇನ್‌ ಗಡಿಯಲ್ಲಿ ಇಸ್ಕಾಂಡರ್‌-ಎಂ ಮಿಸೈಲ್‌ ಲಾಂಚರ್‌ಗಳನ್ನ ನಿಯೋಜಿಸಿದೆ ಅಂತ ಯುಕ್ರೇನ್‌ ಆರೋಪಿಸಿದೆ. ಬೆಲ್‌ಗೊರೋಡ್‌ ಭಾಗದಲ್ಲಿ ರಷ್ಯಾ ತನ್ನ ಸೇನೆಯನ್ನ ಹೆಚ್ಚುಗೊಳಿಸ್ತಿದೆ. ಯುಕ್ರೇನ್ ಗಡಿಯ 60 ಕಿಲೋಮೀಟರ್​​ನಷ್ಟು ದೂರದಲ್ಲಿ ಇಸ್ಕಾಂಡರ್​ ಎಂ ಮಿಸೈಲ್ ಲಾಂಚರ್​ಗಳನ್ನು ನಿಯೋಜಿಸಿದೆ. ಜೊತೆಗೆ ಬೆಲ್ಗೊರೊಡ್​ನಲ್ಲಿ ಸೇನೆಯ ನಿಯೋಜನೆಯನ್ನು ಕೂಡ ಹೆಚ್ಚಿಸುತ್ತಿದೆ ಅಂತ ಯುಕ್ರೇನ್ ಸೇನೆಯ ಜೆನರಲ್ ಸ್ಟಾಫ್ ಹೇಳಿಕೆ ನೀಡಿದ್ದಾರೆ. ನ್ಯಾಟೋ ಎಸ್‌ಎಸ್‌-26 ಸ್ಟೋನ್‌ ಅಂತ ಹೆಸರಿಟ್ಟಿರೋ ಇಸ್ಕಾಂಡರ್‌ ಮೊಬೈಲ್‌ ಬ್ಯಾಲಿಸ್ಟಿಕ್‌ ಮಿಸೈಲ್‌ಗಳು ಸುಮಾರು 500 ಕಿಲೋಮೀಟರ್​ವರೆಗೂ ದಾಳಿ ಮಾಡೋ ಸಾಮರ್ಥ್ಯ ಹೊಂದಿವೆ. ಜೊತೆಗೆ ಪರಮಾಣು ಆಯುಧಗಳಿಗೆ ವಿರುದ್ಧವಾಗಿಯೂ ಇವುಗಳನ್ನು ಬಳಸಬಹುದಾಗಿದೆ. ಆದ್ರೆ ಇವುಗಳ ನಿಯೋಜನೆ ಬಗ್ಗೆ ರಷ್ಯಾ ಕಡೆಯಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

-ಇನ್ನೊಂದ್‌ ಕಡೆ ಯುದ್ದಭೂಮಿ ಯುಕ್ರೇನ್‌ಗೆ ಇಂದು ಅಮೆರಿಕದ ಉನ್ನತ ಅಧಿಕಾರಿಗಳ ದಂಡೇ ಹರಿದು ಬರ್ತಿದೆ. ಡಿಫೆನ್ಸ್‌ ಸೆಕ್ರೆಟರಿ ಲಾಯ್ಡ್​​ ಆಸ್ಟಿನ್‌, ಸೆಕ್ರೆಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಸೇರಿದಂತೆ ಅಮೆರಿಕಾದ ಟಾಪ್‌ ಅಧಿಕಾರಿಗಳು ಯುಕ್ರೇನ್‌ಗೆ, ಅದರಲ್ಲೂ ಯುದ್ದಪೀಡಿತ ಕಿಯೇವ್‌ ನಗರಕ್ಕೆ ಬಂದಿಳಿಯಲಿದ್ದಾರೆ. ಈ ಬಗ್ಗೆ ಯುಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಮಾತನಾಡಿದ್ದು, ಅಮೆರಿಕಾದ ಅಧಿಕಾರಿಗಳ ಜೊತೆ ನಾವು ಚರ್ಚೆ ಮಾಡ್ತೀವಿ. ಈ ವೇಳೆ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಅವರು ನಮಗೆ ಕೊಟ್ಟೇ ಕೊಡ್ತಾರೆ. ಈ ಬಗ್ಗೆ ನಮಗೆ ನಂಬಿಕೆ ಇದೆ ಅಂತ ಹೇಳಿದ್ದಾರೆ.

– ಇಬ್ಬರ ನಡುವಿನ ಭೀಕರ ಯುದ್ದಕ್ಕೆ ಈಗ ಡಾನ್‌ಬಾಸ್‌ ಪ್ರದೇಶ ಸಾಕ್ಷಿಯಾಗಿದೆ. ಯುಕ್ರೇನ್‌ನ ದಕ್ಷಿಣ ಭಾಗಗಳ ಒಂದೊಂದೇ ಪ್ರದೇಶವನ್ನ ಕಬಳಿಸಿ ರಣೋತ್ಸಾಹದಲ್ಲಿ ಮುನ್ನುಗ್ಗುತ್ತಿರೋ ರಷ್ಯಾ, ಯುಕ್ರೇನ್‌ನ ಸಿಕ್ಕಸಿಕ್ಕ ಜಾಗದಲ್ಲಿ ಸ್ಪೋಟಕಗಳನ್ನ ಸುರೀತಿದೆ. ಈಗ ರಷ್ಯಾ ಸೈನಿಕರು ಚಿಮ್ಮಿಸಿದ ಶೆಲ್ಲಿಂಗ್‌ಗಳು ಲುಹಾನ್​​ಸ್ಕ್​​​ ಪ್ರದೇಶದ ಗಿರ್ಸ್ಕೆ ಅನ್ನೋ ಹಳ್ಳಿ ಮೇಲೆ ಬಿದ್ದಿದ್ದು 8 ಜನ ನಾಗರಿಕರು ಸಾವಿಗೀಡಾಗಿದ್ದಾರೆ ಅಂತ ಅಲ್ಲಿನ ಗವರ್ನರ್‌ ಮಾಹಿತಿ ನೀಡಿದ್ದಾರೆ.

– ಇನ್ನು ಯುಕ್ರೇನ್‌ ಯುದ್ದ ಶುರುವಾದಾಗಿಂದ ಒಂದಲ್ಲ ಒಂದು, ವಿಚಿತ್ರ, ವಿಶೇಷ, ಅಥ್ವಾ ದುರಂತ ಕಥೆಗಳನ್ನ ಕೇಳ್ತಾನೇ ಇದ್ದೀರಿ. ಈಗ ಕೂಡ ರಷ್ಯಾ ಕಂಟ್ರೋಲ್‌ನಲ್ಲಿರೋ ಮಾರಿಯೋಪೋಲ್‌ನಲ್ಲಿ ಅಂತಹುದೇ ದುರಂತ ಘಟನೆ ವರದಿಯಾಗಿದೆ. ನಗರದಲ್ಲಿ ಸಿಲುಕಿರೋ ಮಹಿಳೆಯೊಬ್ಬರು ತನ್ನ ಮಗುವನ್ನ ಹಿಡಿದು ಇಲ್ಲಿಂದ ಪಾರಾಗೋಕೆ ಸಹಾಯ ಮಾಡಿ ಅಂತ ಅಂಗಲಾಚಿದ್ದಾರೆ. ಈ ಬಗ್ಗೆ ವಿಡಿಯೋ ಹರಿಬಿಡಲಾಗಿದ್ದು ಇದರಲ್ಲಿ ಸಂತ್ರಸ್ತ ಮಹಿಳೆ ತನ್ನ ಮಗುವಿಗೆ ಆಹಾರ ಇಲ್ಲ.. ನಾವು ಹಲವು ದಿನಗಳಿಂದ ಸೂರ್ಯನನ್ನೂ ನೋಡಿಲ್ಲ ಅಂತ ಕಣ್ಣೀರು ಹಾಕಿದ್ದಾರೆ.

-masthmagaa.com

Contact Us for Advertisement

Leave a Reply