ಯುರೋಪ್‌ನಲ್ಲಿ ಭೀಕರ ಪ್ರವಾಹ.. 60 ಮಂದಿ ಬಲಿ!

masthmagaa.com:

ಪಶ್ಚಿಮ ಯೂರೋಪ್​​ನಲ್ಲಿ ಚಂಡಮಾರುತದಿಂದಾಗಿ ಮಳೆಯಬ್ಬರ ಜೋರಾಗಿದ್ದು, ಪ್ರವಾಹ ಉಂಟಾಗಿದೆ. ಅದ್ರಲ್ಲೂ ಈ ಭಾಗದ ರಾಷ್ಟ್ರಗಳಾದ ಜರ್ಮನಿ ಮತ್ತು ಬೆಲ್ಜಿಯಂನಲ್ಲಿ ಪರಿಸ್ಥಿತಿ ತುಂಬಾ ಭೀಕರವಾಗಿದ್ದು, ಈವರೆಗೆ 60 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಜರ್ಮನಿಯವರೇ ಆಗಿದ್ದಾರೆ. ಇನ್ನು ಪ್ರವಾಹದ ನಡುವೆ ಜರ್ಮನಿ ಒಂದ್ರಲ್ಲೇ 1300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಜೋರಾಗಿ ನಡೀತಾ ಇದೆ. ರಸ್ತೆಗಳೆಲ್ಲಾ ನೀರಿನಿಂದಾವೃತವಾಗಿದ್ದು, ವಾಹನಗಳು ಕೊಚ್ಚಿಹೋಗಿವೆ. ಕೆಲ ಮನೆಗಳು ಕೂಡ ಪ್ರವಾಹದ ಸುಳಿಗೆ ಸಿಕ್ಕಿ ಕುಸಿದು ಬಿದ್ದಿದೆ. ಮನೆಗಳ ಅವಶೇಷದ ಒಳಗೂ ಹಲವರು ಸಿಲುಕಿದ್ದಾರೆ. ಇನ್ನು ಕೆಲವರು ಕುಸಿಯದೇ ಉಳಿದಿರೋ ಮನೆಯ ಮೇಲ್ಛಾವಣಿಗೆ ಹೋಗಿ ಕೂತಿದ್ದು, ಮನೆ ಸುತ್ತಲೂ ನೀರು ಆವರಿಸಿದೆ. ಜರ್ಮನಿ ಮತ್ತು ಬೆಲ್ಜಿಯಂ ಜೊತೆಗೆ ಪಕ್ಕದ ಲಕ್ಷಂಬರ್ಗ್ ಮತ್ತು ನೆದರ್​ಲ್ಯಾಂಡ್​​ನಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಜರ್ಮನಿಗೆ ಹೋಲಿಸಿದ್ರೆ ಪ್ರವಾಹದ ರುದ್ರತಾಂಡವ ಸ್ವಲ್ಪ ಕಡಿಮೆ ಇದೆ. ಇದುವರೆಗೆ ಯಾರೂ ಪ್ರಾಣ ಕಳೆದುಕೊಂಡಿಲ್ಲ. ಜರ್ಮನಿಯಲ್ಲಿ ಕಳೆದ 100 ವರ್ಷಗಳಲ್ಲೇ ಇಂಥ ಮಳೆಯಾಗಿರಲಿಲ್ಲ ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದ್ಯ ಜರ್ಮನ್ ಚಾನ್ಸಲರ್ ಎಂಜೆಲಾ ಮರ್ಕೆಲ್ ಅಮೆರಿಕ ಪ್ರವಾಸದಲ್ಲಿದ್ದು, ಅಲ್ಲಿಂದಲೇ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಸಂತಾಪ ಸೂಚಿಸಿದ್ದಾರೆ. ಅದೇ ರೀತಿ ಬೈಡೆನ್ ಕೂಡ ದುರಂತಕ್ಕೆ ವಿಷಾದಿಸಿದ್ದಾರೆ.

-masthmagaa.com

Contact Us for Advertisement

Leave a Reply