ಬಾಹ್ಯಾಕಾಶಕ್ಕೆ ಹಾರಿದ ಬ್ರಾನ್ಸನ್‌ ಸಕ್ಕತ್‌ ಕ್ರೇಜಿ ಮನುಷ್ಯ! ಯಾಕೆ ಗೊತ್ತಾ?

masthmagaa.com:

ಬಾಹ್ಯಾಕಾಶ ರೇಸ್​ನಲ್ಲಿ ಹೊಸ ಯುಗವೊಂದು ಶುರುವಾಗಿದೆ. ಬ್ರಿಟನ್ ಮೂಲದ ಕೋಟಿಕುಳ ರಿಚರ್ಡ್​ ಬ್ರಾನ್ಸನ್​ ಬಾಹ್ಯಾಕಾಶ ಟೂರ್ ಮಾಡ್ಕೊಂಡು ವಾಪಸ್ಸಾಗಿ ಇತಿಹಾಸ ಬರೆದಿದ್ದಾರೆ. ನಿನ್ನೆ ರಾತ್ರಿ ರಿಚರ್ಡ್​ ಬ್ರಾನ್ಸನ್ ಇಬ್ಬರು ಪೈಲಟ್​​ಗಳು, ಮೂವರು ಅಸ್ಟ್ರೋನಾಟ್​​ಗಳ ಜೊತೆಗೆ ವರ್ಜಿನ್ ಗೆಲಾಕ್ಟಿಕ್​​ನ ಯುನಿಟಿ 22 ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಹಾರಿದ್ರು. ನ್ಯೂ ಮೆಕ್ಸಿಕೋದಿಂದ ಹಾರಿದ ಈ ನೌಕೆ ಒಂದೂವರೆ ಗಂಟೆ ಹಾರಾಟ ನಡೆಸಿದೆ. ಭೂಮಿಯಿಂದ 88 ಕಿಲೋಮೀಟರ್​ ಎತ್ತರದವರೆಗೆ ಸಾಗಿ, ಸಬ್​ ಆರ್ಬಿಟಲ್​​​ಗೆ ಹೋಗಿ ವಾಪಸ್ ಆಗಿದೆ. ಈ ವೇಳೆ ಗಗನಯಾತ್ರಿಗಳು ಗುರುತ್ವಾಕರ್ಷಣೆಹೀನತೆಯನ್ನು ಕೂಡ ಅನುಭವಿಸಿದ್ದಾರೆ. ನಂತರ ಪುನಃ ಭೂಮಿಯ ವಾತಾವರಣವನ್ನು ಪ್ರವೇಶಿಸಿ, ನ್ಯೂ ಮೆಕ್ಸಿಕೋದಲ್ಲಿರೋ ಸ್ಪೇಸ್​ಪೋರ್ಟ್​​​ನಲ್ಲಿ ಲ್ಯಾಂಡ್ ಆಗಿದೆ. ಈ ಬಾಹ್ಯಾಕಾಶ ಕ್ಷೇತ್ರದಲ್ಲೂ ಖಾಸಗಿ ಟೂರ್​​ಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಕ್ಷೇತ್ರದಲ್ಲಿ ತುಂಬಾ ಕಾಂಪಿಟಿಷನ್ ಇತ್ತು. ಆದ್ರೆ ಎಲ್ಲರಿಗಿಂತ ಮುನ್ನ ಈ ದಾಖಲೆಯನ್ನು ತಮ್ಮ ಬುಟ್ಟಿಗೆ ಹಾಕ್ಕೊಂಡಿದ್ದಾರೆ ರಿಚರ್ಡ್ ಬ್ರಾನ್ಸನ್​. ರಿಚರ್ಡ್ ಬ್ರಾನ್ಸನ್​​ ಬಾಹ್ಯಾಕಾಶಕ್ಕೆ ಹೋಗಿ ಬಂದ ಬಳಿಕ ಪ್ರತಿಕ್ರಿಯಿಸಿದ್ದು, ಇದು ಯಾವುದೇ ರೇಸ್ ಅಲ್ಲ. ಎಲ್ಲಾ ಒಳ್ಳೆ ರೀತಿಲಿ ಆಯ್ತು ಅನ್ನೋದೇ ಖುಷಿ ಅಂದ್ರು. ಯಾತ್ರೆ ವೇಳೆ ತೆಗೆದ ಒಂದು ಫೋಟೋ ಶೇರ್ ಮಾಡಿ, ಬಾಹ್ಯಾಕಾಶದ ಹೊಸ ಯುಗಕ್ಕೆ ಸ್ವಾಗತ ಅಂತ ಹೇಳಿದ್ದಾರೆ. ಅದೇ ರೀತಿ ಅದೇ ರೀತಿ ತಾವು ಬಾಹ್ಯಾಕಾಶದಲ್ಲಿ ನೌಕೆಯ ಒಳಗೇ ತೇಲಾಡ್ತಿರೋ ದೃಶ್ಯವೊಂದನ್ನು ಕೂಡ ಶೇರ್ ಮಾಡಿದ್ದಾರೆ. ನಾನು ಬಾಲ್ಯದಿಂದಲೂ ಬಾಹ್ಯಾಕಾಶಕ್ಕೆ ಹಾರಬೇಕು ಅಂತ ಕನಸು ಕಂಡಿದ್ದೆ. ಅದು ಈಗ ನನಸಾಗಿದೆ ಅಂತ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ಜುಲೈ 20ರಂದು ಜೆಫ್ ಬೆಜೋಸ್​​ ಕೂಡ ತಮ್ಮ ಸಹೋದರ ಮತ್ತು ಇತರೆ ಸಿಬ್ಬಂದಿ ಜೊತೆ ಬಾಹ್ಯಾಕಾಶ ಪ್ರವಾಸ ಮಾಡ್ತಿದ್ದಾರೆ.

ರಿಚರ್ಡ್​ ಬ್ರಾನ್ಸನ್ ಯಾರು?
ರಿಚರ್ಡ್​ ಬ್ರಾನ್ಸನ್ ಬ್ರಿಟನ್ ಮೂಲದ ಕೋಟ್ಯಾಧಿಪತಿ..1950ರಲ್ಲಿ ಇವರು ಲಂಡನ್​​ನಲ್ಲಿ ಜನಿಸಿದ್ರು. ಇನ್ನೊಂದು ವಾರ ಹೋದ್ರೆ ಇವರಿಗೆ 70 ವರ್ಷ ಆಗುತ್ತೆ. ಆದ್ರೆ ಇವರ ಸಾಧನೆ ಒಂದೆರಡಲ್ಲ.. ಹಲವಾರು ಬಾರಿ ಸಾವಿನ ಜೊತೆ ಸರಸ ಆಡಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 1987ರಲ್ಲಿ ಇವರು ದೊಡ್ಡ ಹಾಟ್ ಏರ್​ ಬಲೂನ್​ ಮೂಲಕ ಅಟ್ಲಾಂಟಿಕ್ ಸಮುದ್ರವನ್ನು ದಾಟಿ ದಾಖಲೆ ಬರೆದಿದ್ರು. ನಂತರ ಇದೇ ಹಾಟ್ ಏರ್ ಬಲೂನ್​​ನಲ್ಲಿ 1991ರಲ್ಲಿ ಫೆಸಿಫಿಕ್ ಸಾಗರವನ್ನು ದಾಟಿ ತಮ್ಮದೇ ದಾಖಲೆ ಮುರಿದಿದ್ರು. ಇವರು ಸಣ್ಣ ಇರುವಾಗ ಡೈಸ್​ಲೆಕ್ಸಿಯಾ ಸಮಸ್ಯೆಯಿಂದ ಬಳಲುತ್ತಿದ್ರು. ಈ ಸಮಸ್ಯೆ ಇರುವ ಮಕ್ಕಳು ಓದಿನ ಕಡೆಗೆ ಸರಿಯಾಗಿ ಫೋಕಸ್ ಮಾಡೋಕೆ ಆಗೋದಿಲ್ಲ. ಹೀಗಾಗಿ ತುಂಬಾ ವೀಕ್ ವಿದ್ಯಾರ್ಥಿ ಅಂತ ಕರೆಸಿಕೊಂಡಿದ್ದ ಇವರು, ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ರು. ಶಾಲೆ, ಕಾಲೇಜು ಅಂತ ಹೋಗಿದ್ರೆ ಇವರು ಈ ಮಟ್ಟಕ್ಕೆ ಬೆಳೆಯುತ್ತಿದ್ರೋ ಇಲ್ವೋ ಗೊತ್ತಿಲ್ಲ. ನಂತರ 1968ರಲ್ಲಿ ಅಂದ್ರೆ ತಮ್ಮ 18ನೇ ವಯಸ್ಸಿನಲ್ಲಿ ಸ್ಟೂಡೆಂಟ್ ಅಂತ ಒಂದು ಮ್ಯಾಗ್ಜೀನ್ ಶುರು ಮಾಡಿದ್ರು. ಇದು ಅವರ ಜೀವನದ ಮೊದಲ ಸಂಸ್ಥೆಯಾಗಿತ್ತು. ಅದೇ ಇವತ್ತು 400 ಸಂಸ್ಥೆಗಳಲ್ಲಿ ಶೇರು ಹೊಂದಿದ್ದು, ಕಂಟ್ರೋಲ್ ಮಾಡ್ತಿದ್ದಾರೆ. 590 ಕೋಟಿ ಡಾಲರ್​ನಷ್ಟು ಆಸ್ತಿ ಹೊಂದಿದ್ದಾರೆ. ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ ಹತ್ತತ್ರ 43 ಸಾವಿರ ಕೋಟಿ ರೂಪಾಯಿ ಆಗುತ್ತೆ. ಇವರಿಗೆ ಬಾಹ್ಯಾಕಾಶಕ್ಕೆ ಹಾರೋ ಹುಚ್ಚು ಇದ್ದಿದ್ರಿಂದ 2004ರಲ್ಲಿ ವರ್ಜಿನ್ ಗೆಲಾಕ್ಟಿನ್ ಅನ್ನೋ ಸ್ಪೇಸ್​​​​​ ಫ್ಲೈಟ್ ಕಂಪನಿ ಶುರು ಮಾಡಿದ್ರು. ಅದ್ರ ಯುನಿಟಿ 22 ಫ್ಲೈಟ್ ಅವರ ಬಾಲ್ಯದ ಕನಸು ನನಸು ಮಾಡಿದೆ.

ಇನ್ನೊಂದು ವಿಷ್ಯ ಅಂದ್ರೆ ಇದ್ರಲ್ಲಿ ಭಾರತೀಯ ಮೂಲದ ಶಿರಿಶಾ ಬಾಂಡ್ಲಾ ಕೂಡ ಇದ್ದಾರೆ. ಇವರು ಗಗನಯಾನ ಕೈಗೊಂಡ ಮೂರನೇ ಭಾರತ ಮೂಲದ ಮಹಿಳೆಯಾಗಿದ್ದಾರೆ. ಇವರಿಗೂ ಮುನ್ನ ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್​ ಗಗನಯಾತ್ರೆ ಕೈಗೊಂಡಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ 1987ರಲ್ಲಿ ಜನಿಸಿದ್ದ ಇವರು 4 ವರ್ಷವಿದ್ದಾಗ ಅಮೆರಿಕಗೆ ಹೋಗಿದ್ರು. ಈಕೆ ನಾಸಾದಲ್ಲಿ ಕೆಲಸ ಮಾಡಬೇಕು ಅಂತ ಕನಸು ಕಂಡಿದ್ರು. ಆದ್ರೆ ಆಕೆಯ ದೃಷ್ಟಿ ಕಡಿಮೆ ಇದ್ದಿದ್ದರಿಂದ ನಾಸಾದಲ್ಲಿ ಕೆಲಸ ಗಗನಯಾತ್ರಿಯಾಗಲು ಸಾಧ್ಯವಾಗಿರಲಿಲ್ಲ. ನಂತರ ವರ್ಜಿನ್​ ಗೆಲಾಕ್ಟಿನ್​​ ಸಂಸ್ಥೆಯನ್ನು ಸೇರಿಕೊಂಡಿದ್ರು.

ಇನ್ನು ವರ್ಜಿನ್ ಗೆಲಾಕ್ಟಿಕ್ ಸಂಸ್ಥೆಯ ಸ್ಪೇಸ್​ ಟೂರ್​ಗೆ ಈಗಾಗಲೇ 600 ಜನ ಟಿಕೆಟ್ ಬುಕ್ ಮಾಡಿದ್ದಾರೆ. ಗಾಯಕಿ ಲೇಡಿ ಗಾಗಾ, ನಟ ಟಾಮ್ ಹ್ಯಾಂಕ್ಸ್ ಕೂಡ ಇವರಲ್ಲಿ ಸೇರಿದ್ದಾರೆ. ಅಂದಹಾಗೆ ಒಂದು ಟಿಕೆಟ್ ಬೆಲೆ ಎರಡೂವರೆ ಲಕ್ಷ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 1.85 ಕೋಟಿ ರೂಪಾಯಿ ಆಗುತ್ತೆ.

-masthmagaa.com

Contact Us for Advertisement

Leave a Reply