ಕದ್ದುಮುಚ್ಚಿ ನಿಮ್ಮ ಮೊಬೈಲ್​ ನೋಡ್ತಿದೆ ‘ಪೆಗಸಸ್​’! ಏನಿದು ಗೊತ್ತಾ?

masthmagaa.com:

ಇಸ್ರೇಲ್​ ಮೂಲದ ಎನ್​ಎಸ್​ಒ ಗ್ರೂಪ್​ ಅಭಿವೃದ್ಧಿಪಡಿಸಿ, ಮಾರಾಟ ಮಾಡ್ತಿರೋ ಪೆಗಸಸ್ ಅನ್ನೋ ಹ್ಯಾಕಿಂಗ್ ಸಾಫ್ಟ್​​ವೇರ್ ಬಳಸಿಕೊಂಡು ಜಗತ್ತಿನಾದ್ಯಂತ ಸಾವಿರಾರು ಪತ್ರಕರ್ತರು, ವಕೀಲರು, ರಾಜಕೀಯ ನಾಯಕರು, ಸರ್ಕಾರದ ಸಚಿವರು, ಮಾನವ ಹಕ್ಕುಗಳ ಹೋರಾಟಗಾರರು, ಅರಬ್​ ರಾಯಲ್ ಫ್ಯಾಮಿಲಿ ಸದಸ್ಯರ ಫೋನ್​ಗಳನ್ನ ಹ್ಯಾಕ್ ಮಾಡಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಭಾರತ ಸೇರಿದಂತೆ ಜಗತ್ತಿನ 50ಕ್ಕೂ ಹೆಚ್ಚು ದೇಶಗಳ 600 ರಾಜಕಾರಣಿಗಳು, 189 ಪತ್ರಕರ್ತರು, 85 ಮಾನವ ಹಕ್ಕು ಹೋರಾಟಗಾರರು, 65 ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳ ಫೋನ್​ಗಳನ್ನ ಹ್ಯಾಕ್ ಮಾಡಿ ಅವರ ಮೇಲೆ ಕದ್ದುಮುಚ್ಚಿ ನಿಗಾ ಇಡಲಾಗಿತ್ತು ಅನ್ನೋದು ಗೊತ್ತಾಗಿದೆ. ಅಂದ್ಹಾಗೆ ಹ್ಯಾಕ್​ ಆಗಿರಬಹುದಾದ 50,000 ಜನರ ಫೋನ್​ ನಂಬರ್​ಗಳ ಡೇಟಾಬೇಸ್​ವೊಂದು​ ಪ್ಯಾರಿಸ್​​ನ ಫಾರ್ಬಿಡನ್ ಸ್ಟೋರಿಸ್ ಅನ್ನೋ ಎನ್​ಜಿಒ ಮತ್ತು ಅಮ್ನೆಸ್ಟಿ ಇಂಟರ್​ನ್ಯಾಷನಲ್ ಅನ್ನೋ ಮಾನವ ಹಕ್ಕುಗಳ ಸಂಸ್ಥೆಗೆ ಸಿಕ್ಕಿದೆ. ಅದನ್ನ ಅವರು ವಾಷಿಂಗ್ಟನ್​ ಪೋಸ್ಟ್​, ದಿ ಗಾರ್ಡಿಯನ್, ದಿ ವೈರ್​ನಂತಹ 17 ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಜೊತೆ ಹಂಚಿಕೊಂಡಿದ್ದಾರೆ. ಈ ಸಂಸ್ಥೆಗಳು, ಡೇಟಾಬೇಸ್​ನಲ್ಲಿದ್ದ 50 ಸಾವಿರ ಜನರ ಪೈಕಿ 67 ಪತ್ರಕರ್ತರ ಫೋನ್​ಗಳನ್ನ ಫಾರೆನ್ಸಿಕ್​ ಅನಾಲಿಸಿಸ್​ಗೆ ಒಳಪಡಿಸಿದ್ದಾರೆ. ಈ ವೇಳೆ 23 ಫೋನ್​​ಗಳು ಹ್ಯಾಕ್​ ಆಗಿರೋದು ಗೊತ್ತಾಗಿದೆ. 14 ಫೋನ್​​ಗಳನ್ನ ಹ್ಯಾಕ್​ ಮಾಡಲು ಪ್ರಯತ್ನ ನಡೆದಿರೋದು ಕಂಡುಬಂದಿದೆ. 50 ಸಾವಿರ ಜನ ಪಟ್ಟಿಯಲ್ಲಿ ಭಾರತದ 40 ಪತ್ರಕರ್ತರು, ಮೂವರು ವಿರೋಧ ಪಕ್ಷದ ನಾಯಕರು, ಕೇಂದ್ರ ಸರ್ಕಾರದ ಇಬ್ಬರು ಸಚಿವರು, ಸುಪ್ರೀಂಕೋರ್ಟ್ ಜಡ್ಜ್​, ಧಾರ್ಮಿಕ ನಾಯಕರು ಸೇರಿದಂತೆ 300ಕ್ಕೂ ಹೆಚ್ಚು ಭಾರತೀಯರು ಇದ್ದಾರೆ ಅಂತ ಹೇಳಲಾಗ್ತಿದೆ. ಇದರಲ್ಲಿ ದಿ ವೈರ್​ ಸಂಸ್ಥೆಯ ಫೌಂಡಿಂಗ್ ಎಡಿಟರ್​​ಗಳಾದ ಸಿದ್ಧಾರ್ಥ್​ ವರದರಾಜನ್ ಮತ್ತು ಎಂ.ಕೆ. ವೇಣು, ಎಕನಾಮಿಕ್ ಅಂಡ್​ ಪೊಲಿಟಿಕಲ್​ ವೀಕ್ಲಿಯ ಮಾಜಿ ಸಂಪಾದಕ ಪರಂಜೋಯ್ ಗುಹಾ ಥಾಕುರ್ತಾ, ಇಂಡಿಯನ್​ ಎಕ್ಸ್​ಪ್ರೆಸ್​​ನ ಮಾಜಿ ಪತ್ರಕರ್ತ ಸುಶಾಂತ್ ಸಿಂಗ್, ಔಟ್​​ಲುಕ್​ನ ಮಾಜಿ ಪತ್ರಕರ್ತ ಎಸ್​.ಎನ್​.ಎಂ. ಅಬ್ದಿ ಮುಂತಾದವರ ಫೋನ್​ ನಂಬರ್​ ಇದೆ ಅಂತ ಹೇಳಲಾಗ್ತಿದೆ. ಆದ್ರೆ ವಿರೋಧ ಪಕ್ಷದ ನಾಯಕರು ಯಾರು, ಹಾಲಿ ಸಚಿವರು ಯಾರು ಅನ್ನೋದು ಇನ್ನೂ ಬಹಿರಂಗವಾಗಿಲ್ಲ. 2018ರಲ್ಲಿ ಟರ್ಕಿಯ ಸೌದಿ ರಾಯಭಾರ ಕಚೇರಿಯಲ್ಲಿ ಹತ್ಯೆಯಾದ ಸೌದಿ ಪತ್ರಕರ್ತ ಜಮಾಲ್ ಖಷೋಗಿ ಸಂಪರ್ಕದಲ್ಲಿದ್ದ ಇಬ್ಬರು ಮಹಿಳೆಯರ ಫೋನ್​ಗಳನ್ನ ಹ್ಯಾಕ್ ಮಾಡಲು ಕೂಡ ಈ ಪೆಗಾಸಸ್​ ಸ್ಪೈವೇರ್ ಸಾಫ್ಟ್​ವೇರ್ ಬಳಸಲಾಗಿತ್ತು ಅಂತ ಹೇಳಲಾಗ್ತಿದೆ. ಲಿಸ್ಟ್​ನಲ್ಲಿರೋ ಎಲ್ಲಾ 50 ಸಾವಿರ ಜನರ ಮೊಬೈಲ್​ಗೂ ಪೆಗಸಸ್​ ಸೀಕ್ರೆಟ್​​ ಆಗಿ ಇನ್​ಸ್ಟಾಲ್ ಆಗಿದೆ ಅಂತಲ್ಲ. ಕೆಲವರದ್ದು ಹ್ಯಾಕ್​ ಆಗಿರಬಹುದು, ಇನ್ನೂ ಕೆಲವರದ್ದು ಹ್ಯಾಕ್ ಆಗೋ ಲಿಸ್ಟ್​ನಲ್ಲಿರಬಹುದು ಅಂತ ದಿ ಗಾರ್ಡಿಯನ್​ ವರದಿ ಮಾಡಿದೆ.

ಏನಿದು ಪೆಗಸಸ್​?
ಪೆಗಸಸ್ ಅನ್ನೋದು ಸ್ಪೈವೇರ್​​​​​ ಸಾಫ್ಟ್​ವೇರ್ ಆಗಿದೆ. ಇದನ್ನ ಇಸ್ರೇಲ್​ನ ಎನ್​ಎಸ್​ಒ ಗ್ರೂಪ್​ ಅಭಿವೃದ್ಧಿಪಡಿಸಿದೆ. ಅಪರಾಧಿಗಳು ಮತ್ತು ಉಗ್ರರ ಫೋನ್​ಗಳನ್ನ ಹ್ಯಾಕ್ ಮಾಡಿ ಅವರ ಚಲನವಲನಗಳ ಮೇಲೆ ನಿಗಾ ಇಡಲು ಈ ಸಾಫ್ಟ್​ವೇರ್​ ಬಳಸಲಾಗುತ್ತೆ. ವಿವಿಧ ದೇಶಗಳ ಸರ್ಕಾರ ಮತ್ತು ಸರ್ಕಾರದ ಏಜೆನ್ಸಿಗಳು ಎನ್​ಎಸ್​​ಒ ಗ್ರೂಪ್​ನಿಂದ ಈ ಸಾಫ್ಟ್​ವೇರ್ ಅನ್ನ ಪರ್ಚೇಸ್ ಮಾಡ್ತವೆ. ಬಳಿಕ ಯಾರನ್ನ ಟಾರ್ಗೆಟ್​ ಮಾಡಬೇಕು ಅಂದುಕೊಂಡಿರ್ತಾರೋ ಅವರ ಮೊಬೈಲ್​ನಲ್ಲಿ ಸೀಕ್ರೆಟ್​​ ಆಗಿ ಇನ್​ಸ್ಟಾಲ್ ಮಾಡಲಾಗುತ್ತೆ. ಇದರ ಬಗ್ಗೆ ಮೊಬೈಲ್​​ ಬಳಕೆದಾರರಿಗೆ ಗೊತ್ತೇ ಇರಲ್ಲ. ನಂತ್ರ ತನ್ನ ಕೆಲಸ ಶುರುಮಾಡೋ ಈ ಪೆಗಸಸ್​​, ಮೊಬೈಲ್​ನಲ್ಲಿರೋ ಫೋಟೋ, ಮೆಸೇಜ್​, ಇ-ಮೇಲ್​ಗಳನ್ನ ಕದಿಯುತ್ತೆ. ಫೋನ್​ ಕಾಲ್​ಗಳನ್ನ ರೆಕಾರ್ಡ್ ಮಾಡುತ್ತೆ. ಮೊಬೈಲ್​ನಲ್ಲಿನ ಮೈಕ್ರೋಫೋನ್​ ಅನ್ನ ರಹಸ್ಯವಾಗಿ ಆ್ಯಕ್ಟಿವ್ ಮಾಡುತ್ತೆ. ಇದರಿಂದ ಆಯಾ ದೇಶಗಳ ಗುಪ್ತಚರ ಸಂಸ್ಥೆಗಳು ಅಥವಾ ಭದ್ರತಾಪಡೆಗಳಿಗೆ ಉಗ್ರರ ವಿರುದ್ಧ, ಅಪರಾಧಿಗಳ ವಿರುದ್ಧ ಕೆಲಸ ಮಾಡೋದು ಈಸಿ ಆಗುತ್ತೆ ಅನ್ನೋದು ಈ ಪೆಗಸಸ್​ ಸಾಫ್ಟ್​ವೇರ್​ನ ಕಾನ್ಸೆಪ್ಟ್​. ಆದ್ರೀಗ ಇದೇ ಸಾಫ್ಟ್​​ವೇರ್​ನಿಂದ ಪತ್ರಕರ್ತರು, ರಾಜಕಾರಣಿಗಳು, ಮಾನವ ಹಕ್ಕು ಹೋರಾಟಗಾರರ ಫೋನ್​ಗಳನ್ನ ಹ್ಯಾಕ್ ಮಾಡಲಾಗಿದೆ, ಮಾಹಿತಿಯನ್ನ ಕದಿಯಲಾಗಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇಷ್ಟುದೊಡ್ಡ ಆರೋಪ ಕೇಳಿ ಬಂದ ಬೆನ್ನಲ್ಲೇ ಎನ್​ಎಸ್​​ಒ ಕಂಪನಿ ತನ್ನ ವೆಬ್​ಸೈಟ್​​ನಲ್ಲಿ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ಎಲ್ಲಾ ಆರೋಪಗಳನ್ನ ತಳ್ಳಿಹಾಕಿದೆ. ಜೊತೆಗೆ ಫಾರ್ಬಿಡನ್ ಸ್ಟೋರಿಸ್​ ಜೊತೆ ಸೇರಿಕೊಂಡು 17 ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ನಡೆಸಿದ ತನಿಖೆ ಕಟ್ಟುಕಥೆಗಳಿಂದ ಕೂಡಿದೆ ಅಂತ ಹೇಳಿದೆ. ಆದ್ರೆ ಈ ಸಾಫ್ಟ್​ವೇರ್​ನಿಂದ ಮಾನವ ಹಕ್ಕುಗಳ ರಕ್ಷಣೆಗೆ ಯಾವುದೇ ಧಕ್ಕೆ ಇಲ್ಲ ಅನ್ನೋದು ಸಾಬೀತು ಆಗೋವರೆಗೂ ಪೆಗಸಸ್​ನ ಮೇಲೆ ಮೋರಟೋರಿಯಂ ಹೇರಬೇಕು. ಅದರ ಎಕ್ಸ್​ಪೋರ್ಟ್​, ಸೇಲ್​, ಟ್ರಾನ್ಸ್​ಫರ್ ಮತ್ತು ಅದರ ಬಳಕೆಯನ್ನ ಸ್ಥಗಿತಗೊಳಿಸಬೇಕು ಅಂತ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಆಗ್ರಹಿಸಿದೆ.

-masthmagaa.com

Contact Us for Advertisement

Leave a Reply