ಟಾಪ್‌ 10 ಕನ್ನಡ ಮೇಲ್‌ ಆಕ್ಟರ್ಸ್‌

masthmagaa.com:

ಸ್ನೇಹಿತರೇ, ನಾವು ಒಂದು ಸಿನಿಮಾನ ಯಾವ ಕಾರಣಕ್ಕಾಗಿ ನೋಡ್ತೀವಿ? ಒಂದು ಎಂಟರ್ಟೈನ್ ಮೆಂಟ್ ಗೆ ಇನ್ನೊಂದು ಟೈಂ ಪಾಸ್ ಗೆ, ಒಟ್ನಲ್ಲಿ ನಮ್ಮ ಬಿಡುವಿನ ಸಮಯವನ್ನ ರಿಫ್ರೆಶಿಂಗ್ ಆಗಿ ಕಳೆಯೋಕೆ ನಮ್ಮಲ್ಲಿ ಬಹುತೇಕ ಮಂದಿ ಸಿನಿಮಾನ ಆಯ್ಕೆ ಮಾಡ್ಕೊಳ್ತಿವಿ ಅಂದ್ರೆ ಅದು ಅತಿಷಯೋಕ್ತಿ ಅಲ್ಲವೇ ಅಲ್ಲ. ಸಿನಿಮಾ ಅನ್ನೋದು ನೋಡುಗರಾದ ನಮಗೆ ಮನರಂಜನೆಯ ಮಾರ್ಗ, ಆದರೆ ಕಲಾವಿದರಿಗೆ ಅದೇ ಜೀವನ ಮಾರ್ಗ. ಅಕಸ್ಮಾತ್ ನಮ್ಮನ್ನ ರಂಜಿಸಿ ನಮ್ಮ ಬದುಕನ್ನ ಸುಲಭಗೊಳಿಸುವ ಕಲಾವಿದರೇ ಇಲ್ಲದೆ ಹೋದರೆ ನಮ್ಮ ಬದುಕೆಷ್ಟು ದುರ್ಲಭ ಆಗಬಹುದು ಅಂತ ಇಮ್ಯಾಜಿನ್ ಮಾಡಿಕೊಂಡಿದ್ದೀರ?
ಸ್ನೇಹಿತರೇ, ಸಿನಿಮಾ ಮಂದಿಯ ಬದುಕು ಒಂದು ರೀತಿ ಗಾಜಿನ ಮನೆ ಇದ್ದ ಹಾಗೆ, ಆವರು ಯಾವಾಗ್ಲೂ ಸಾಫ್ಟ್ ಟಾರ್ಗೆಟ್ ಗಳೇ, ಆದ್ರೆ ಕೇವಲ ನಮ್ಮನ್ನ ರಂಜಿಸಲಿಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿ ಇಡುವ ಕಲಾವಿದರಿಗೆ ಸಮಾಜದಲ್ಲಿ ಸಿಗಬೇಕಾದ ಮನ್ನಣೆ ಸಿಕ್ಕಿದ್ಯ ಅನ್ನೋದು debatable. 89 ವರ್ಷಗಳ ಇತಿಹಾಸ ಇರುವ ಕನ್ನಡ ಚಿತ್ರರಂಗದಲ್ಲಿ ಹಲವಾರು ನಾಯಕ ನಟರುಗಳು ಚಿತ್ರರಂಗಕ್ಕೆ ಏಳಿಗೆಗಾಗಿ ತಮ್ಮದೇ ರೀತಿಯ ಛಾಪನ್ನು ಒತ್ತಿದ್ದಾರೆ. ಚಿತ್ರರಂಗದ ಫೇಸ್ ವ್ಯಾಲ್ಯೂ ಆಗಿ ಸಾಕಷ್ಟು ದುಡಿದಿದ್ದಾರೆ. ಸಿನಿಮಾ, ಯಾರೋ ಒಬ್ಬ ವ್ಯಕ್ತಿಯಿಂದ ಸೃಷ್ಠಿಯಾಗುವ ಕಲೆ ಅಲ್ಲ, ಅದಕ್ಕೆ ನಿರ್ದೇಶಕ, ನಿರ್ಮಾಪಕ, ನಾಯಕ, ನಾಯಕಿ, ಸಹಕಲಾವಿದರು, ತಂತ್ರಜ್ಞರು, ಹೀಗೆ ಪ್ರತಿಯೊಬ್ಬರೂ ಸೇರಿಕೊಂಡರೆ ಒಂದೊಳ್ಳೆ ರುಚಿಕಟ್ಟಾದ ಸಿನಿಮಾ ತಯಾರಾಗುತ್ತದೆ. ಆದ್ರೂ ಫೇಸ್ ಆಫ್ ದಿ ಸಿನಿಮಾ ಅಂತ ಹೆಚ್ಚಾಗಿ ಗುರುತಿಸಿಕೊಳ್ಳುವವರು ಸಿನಿಮಾದ ನಾಯಕ ಮತ್ತು ನಾಯಕಿ, ಕಲಾವಿದರುಗಳು ಮಾತ್ರ. ಸೋ, ಸ್ನೇಹಿತರೇ ಈ ಒಂದು ವರದಿಯಲ್ಲಿ ನಮ್ಮಲ್ಲಿ ಈಗ ನಾಯಕ ನಟರುಗಳಾಗಿ ಸಾಕಷ್ಟು ಹೆಸರು ಮಾಡಿರುವ, ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿರುವ, ಕನ್ನಡ ಸಿನಿಮಾದ ಹಿರಿಮೆಯನ್ನು ವಿಶ್ವದಾದ್ಯಂತ ಪಸರಿಸಿ ಪಾನ್ ಇಂಡಿಯಾ ಸ್ಟಾರ್ ಅಂತ ಎನಿಸಿಕೊಂಡಿರುವ ಟಾಪ್ 10 ನಾಯಕ ನಟರುಗಳ ಅಥವಾ ಹೀರೋಗಳ ಹಿನ್ನೆಲೆ ಬಗ್ಗೆ, ಅವರ ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುವ ಪ್ರಯತ್ನವನ್ನು ಮಾಡ್ತಾ ಇದ್ದೇವೆ. ಸಿನಿಮಾದ ಸಕ್ಸೆಸ್ ರೇಟ್, popularity ಅನ್ನ ತಲೇಲಿ ಇಟ್ಟುಕೊಂಡು ಸಿದ್ಧಪಡಿಸಿರುವ ಒಂದು ಪಟ್ಟಿ ಇದು. ಈ ಪಟ್ಟಿಯ ಹೊರತಾಗಿ ಕೂಡ ಕನ್ನಡ ಸಿನಿಮಾದ ಎಲ್ಲ ನಾಯಕ ನಟರುಗಳು ನಮ್ಮ ಚಿತ್ರರಂಗದ ಏಳಿಗೆಗೆ ಶ್ರಮವಹಿಸಿದವರೇನೆ ಅನ್ನೋದರಲ್ಲಿ ಎರಡು ಮಾತಿಲ್ಲ.

1. ದರ್ಶನ್‌ : ನಟ, ನಿರ್ಮಾಪಕ ಆದಂತ ದರ್ಶನ್‌ ಅವರು ಕೊಡಗಿನವರು. ಇವರ ಮೊದಲ ಹೆಸರು ಹೇಮಂತ್‌ ಕುಮಾರ್‌. 1977, ಫೆಬ್ರವರಿ 16 ಶಿವರಾತ್ರಿಯ ದಿನದಂದು ತೂಗುದೀಪ ಶ್ರೀನಿವಾಸ್ ಮತ್ತು ಮೀನಾ ದಂಪತಿಗಳ ಹಿರಿಯ ಪುತ್ರನಾಗಿ ಜನಿಸಿದರು. ಚಾಲೆಂಜಿಂಗ್‌ ಸ್ಟಾರ್‌, ಅಭಿಮಾನಿಗಳ ದಾಸ, ಡಿ ಬಾಸ್‌ ಅಂತಾನೆ ಫೇಮಸ್‌ ಆಗಿರುವ ದರ್ಶನ್‌, ಮೊದಲು ಜನುಮದ ಜೋಡಿ ಮೂವಿಯಲ್ಲಿ ಲೈಟ್ ಬಾಯ್ ಆಗಿ ಸಿನಿ ಇಂಡಸ್ಟ್ರಿಯಲ್ಲಿ ಪಯಣ ಆರಂಭಿಸಿದರು. ಹಲವು ಅಪಮಾನಗಳನ್ನು ಎದುರಿಸಿ ನಂತರ ನಾಯಕಿ ರಕ್ಷಿತಾ ಅವರ ತಂದೆ ಗೌರಿಶಂಕರ್ ಅವರ ಸಹಾಯಕರಾಗಿ ಅಸಿಸ್ಟಂಟ್ ಕ್ಯಾಮೆರಾಮೆನ್ ಆಗಿ ಕೆಲಸ ಮಾಡಿದರು.ಮೂರು ಕಾರ್ಟೂನ್‌ಗಳಲ್ಲಿ ಕೆಲವು ಪಾತ್ರಗಳಿಗೆ ಧ್ವನಿ ನೀಡಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಕೆಲಸ ಮಾಡಿದ್ದಾರೆ. ಆದರೆ ದರ್ಶನ್‌ರವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಎಸ್ ನಾರಾಯಣ್‌ರವರ `ಅಂಬಿಕಾ’ ಧಾರಾವಾಹಿಯಲ್ಲಿ ನಟಿಸಿದ ಮೇಲೆ, ಇವರು ತಮ್ಮ ಸಿನಿಮಾ ಜರ್ನಿಯನ್ನ ಮೆಜೆಸ್ಟಿಕ್‌ ಮೂವಿಯಿಂದ ಸ್ಟಾರ್ಟ್‌ ಮಾಡಿದ್ರು. ಈ ಮೆಜೆಸ್ಟಿಕ್‌ ಮೂವಿ ಅವರ ಜೀವನದ ದಿಕ್ಕನ್ನೇ ಬದಲಿಸಿ ಬಿಟ್ಟಿತು. ಈ ಚಿತ್ರ ಅದ್ಭುತ ಪ್ರತಿಕ್ರಿಯೆ ಪಡೆದು ಕರ್ನಾಟಕದ ಹಲವು ಸಿನಿಮಾ ಮಂದಿರಗಳಲ್ಲಿ ಶತದಿನ ಪೂರೈಸಿತು, 2003 ರಲ್ಲಿ ತೆರೆಕಂಡ ಪ್ರೇಮ್ ನಿರ್ದೇಶನದ `ಕರಿಯ’ ಚಿತ್ರ ಕೂಡ ಉತ್ತಮ ಪ್ರತಿಕ್ರಿಯೆ ಪಡೆದು ಕರ್ನಾಟಕದಲ್ಲಿ ಸುಮಾರು 800 ದಿನಗಳಿಗೂ ಹೆಚ್ಚು ದಿನ ಪ್ರದರ್ಶನ ಕಂಡು ದಾಖಲೆ ಬರೆಯಿತು. 55 ಸಿನಿಮಾಗಳಲ್ಲಿ ನಟಿಸಿದ್ದಾರೆ. 56ನೇ ಚಿತ್ರ “ಕಾಟೇರ” ಇದು ಆಲ್‌ರೆಡಿ ಅನೌನ್ಸ್‌ ಆಗಿದೆ. ತರುಣ ಕಿಶೋರ್‌ ಸುಧೀರ್‌ ಇದರ ಡೈರೆಕ್ಟರ್‌, ತರುಣ್‌ಕಿಶೋರ್‌ ಸುಧೀರ್‌ ಮತ್ತು ದರ್ಶನ್‌ ಕಾಂಬಿನೇಷನ್‌ನಲ್ಲಿ ಬರ್ತಾ ಇರುವಂತ 2ನೆ ಸಿನಿಮಾ ಇದಾಗಿದೆ. ಇವಾಗಿನ ಜನರೇಷನ್‌ನಲ್ಲಿ ಪೌರಾಣಿಕ ಪಾತ್ರಕ್ಕೆ ಹೇಳ್‌ ಮಾಡಿಸಿದ ಹಾಗೇ ಇರುವ ನಟ ಅಂದ್ರೆ ಅದು ದರ್ಶನ್‌. ಇವರ ಸಂಗೊಳ್ಳಿ ರಾಯಣ್ಣ ಚಿತ್ರದ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರಿಗೆ ಜ಼ೀ ಕನ್ನಡ ಇನೋವೇಟಿವ್ ಫ಼ಿಲ್ಮ್ ಅವಾರ್ಡ್ಸ್,ಟೇವಿ9 ಅವಾರ್ಡ್ಸ್, ಸುವರ್ಣ ಫಿಲ್ಮ್ ಅವರ್ಡ್ಸ್, ಸುವರ್ಣ ಫಿಲ್ಮ್ ಅವರ್ಡ್ಸ್, ಸುವರ್ಣ ಫಿಲ್ಮ್ ಅವರ್ಡ್ಸ್ ಹೀಗೆ ಹಲವಾರು ಪ್ರಶಸ್ತಿಗಳು ಬಂದಿದೆ. ತೂಗುದೀಪ ಪ್ರೂಡಕ್ಷನ್ಸ್ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಇಷ್ಟೆ ಅಲ್ಲದೇ “ನನ್ನ ಸೆಲೆಬ್ರಿಟೀಸ್‌ ” ಅಂತ ಅಭಿಮಾನಿಗಳಿಗೊಸ್ಕರ ಅಚ್ಚೆಯನ್ನೂ ಕೂಡ ಹಾಕಿಸಿಕೊಂಡಿದ್ದಾರೆ. ಅಭಿಮಾನಿಗಳು ಅಚ್ಚೆ ಹಾಕಿಸಿದ್ದನ್ನ ಬೇಕಾದಷ್ಟು ನೋಡಿದ್ದೀವಿ ಆದರೆ ಅಭಿಮಾನಿಗಳಿಗೋಸ್ಕರ ಅಚ್ಚೆ ಹಾಕ್ಸಿದ್ದನ್ನ ಫಸ್ಟ್‌ ಟೈಮ್‌ ನೋಡತಾ ಇರೋದು.

2. ಸುದೀಪ್‌ : ಬಾದ್‌ಷಾ , ಅಭಿನಯ ಚಕ್ರವರ್ತಿ ಅಂತಾನೆ ಫೇಮಸ್‌ ಆಗಿರುವ ಕಿಚ್ಚ ಸುದೀಪ್‌ ಅವರು ಮೂಲತಃ ಶಿವಮೊಗ್ಗದವ್ರು. ಇವರು ಕೇವಲ ನಟ ಮಾತ್ರ ಅಲ್ಲ. ನಿರ್ಮಾಪಕ, ಹಿನ್ನಲೆ ಗಾಯಕ, ಕಥೆಗಾರ, ನಿರ್ದೇಶಕ, ನಿರೂಪಕ ಕೂಡ ಹೌದು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದನಿರ್ದೇಶಕ ಅನೂಪ್‌ ಭಂಡಾರಿಯವರ ತಂದೆ ಸುಧಾಕರ್ ಭಂಡಾರಿ ನಿರ್ದೇಶನದ ‘ಪ್ರೇಮದ ಕಾದಂಬರಿ’ ಮೂಲಕ ಕಿರುತೆರೆಗೆ ಸುದೀಪ್ ಪದಾರ್ಪಣೆ ಮಾಡಿದರು. ‘ತಾಯವ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಸುದೀಪ್ ಪ್ರವೇಶಿಸಿದರು. ತದನಂತರ ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದಲ್ಲಿ ಮೂಡಿ ಬಂದ ಸ್ಪರ್ಶ ಚಿತ್ರಕ್ಕಾಗಿ ಬಣ್ಣ ಹಚ್ಚಿದರು. 2001ರಲ್ಲಿ ತೆರೆಗೆ ಬಂದ ‘ಹುಚ್ಚ’ ಸಿನಿಮಾ ಸುದೀಪ್ ಗೆ ಬಿಗ್ ಬ್ರೇಕ್ ನೀಡಿತು. ಹುಚ್ಚ ಸಿನಿಮಾದ ಮೂಲಕ ಇವರು “ಕಿಚ್ಚ” ಅಂತ ಫೇಮಸ್‌ ಆದ್ರು. ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್’ ಕಾರ್ಯಕ್ರಮದ ನಿರೂಪಕರಾಗಿಯೂ ಸುದೀಪ್ ಸಕ್ರಿಯರಾಗಿದ್ದಾರೆ. ಸುದೀಪ್ ಅವರು ರಾಮ್ ಗೋಪಾಲ್ ವರ್ಮಾ ಅವರ ನಿರ್ದೇಶನದ ರಣ್‌ ಸಿನಿಮಾದ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದರು. ಕನ್ನಡ ಚಿತ್ರಗಳಾದ ಸ್ಪರ್ಶ, ಹುಚ್ಚ , ನಂದಿ , ಕಿಚ್ಚ , ಸ್ವಾತಿ ಮುತ್ತು, ಮೈ ಆಟೋಗ್ರಾಫ್, ನಂ 73 ಶಾಂತಿ ನಿವಾಸ , ಮುಸ್ಸಂಜೆ ಮಾತು, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ , ತೆಲುಗು-ತಮಿಳು ದ್ವಿಭಾಷಾ ಚಿತ್ರ ಈಗ ಮತ್ತು ಹಿಂದಿ ಚಲನಚಿತ್ರ ದಬಾಂಗ್ 3 ಇವರ ಪ್ರಮುಖ ಚಿತ್ರಗಳು. ಸದ್ಯಕ್ಕೆ ಅನೂಪ್‌ ಭಂಡಾರಿ ಮತ್ತು ಸುದೀಪ್‌ ಅವರ ಕಾಂಬಿನೇಷನ್‌ಲ್ಲಿ ” ಬಿಲ್ಲ ರಂಗ ಭಾಷಾ” ಚಿತ್ರ ರೆಡಿ ಆಗ್ತಾ ಇದೆ. ಈ ಟಾಪ್‌ ಟೆನ್‌ ಆಕ್ಟರ್ಸ್‌ಗಳಲ್ಲಿ ಕನ್ನಡದ ಜೊತೆಗೆ ಬೇರೆ ಭಾಷೆಯಲ್ಲೂ ನಟಿಸಿ ಸೈ ಎನಿಸಿ ಕೊಂಡವರು ಸುದೀಪ್‌ ಮಾತ್ರ. 44 ಸಿನಿಮಾಗಳಲ್ಲಿ ನಟಿಸಿದ ಇವರಿಗೆ “ಈಗ” ಮೂವಿಯ ನೆಗೇಟಿವ್‌ ರೋಲ್‌ ಗೆ “ಎರಡನೇ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್” ದೊರೆತಿದೆ. 3 ಫಿಲ್ಮ್‌ ಫೇರ್‌ ಅವಾರ್ಡ್ಸ್‌ಗಳು ದೊರೆತಿದೆ.

3. ಯಶ್‌ : ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಅಗಿ ಗುರುತಿಸಿಕೊಂಡಿದ್ದಾರೆ. ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ.. 1986 ಜನವರಿ 8ರಂದು ಹಾಸನದಲ್ಲಿ ನವೀನ್ ಕುಮಾರ್ ಗೌಡನಾಗಿ ಜನಿಸಿದರು. ಕಿರುತೆರೆಯಿಂದ ತಮ್ಮ ಜರ್ನಿಯನ್ನ ಸ್ಟಾರ್ಟ್‌ ಮಾಡಿದ್ರು. ನಂದ ಗೋಕುಲ, ಮಳೆಬಿಲ್ಲು, ಉತ್ತರಾಯಣ , ಪ್ರೀತಿ ಇಲ್ಲದ ಮೇಲೆ , ಶಿವ ಧಾರವಾಹಿಗಳಲ್ಲಿ ನಟಿಸಿದ್ರು. 2007ರಲ್ಲಿ ತೆರೆಗೆ ಬಂದ ‘ಜಂಬದ ಹುಡುಗಿ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಯಶ್ 2008ರಲ್ಲಿ ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದ ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಈ ಚಿತ್ರದಲ್ಲಿನ ಅಭಿನಯಕ್ಕೋಸ್ಕರ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಪಡೆದರು. ತಾವು ಮೊದಲ ಬಾರಿ ನಾಯಕನಾಗಿ ನಟಿಸಿದ ಚಿತ್ರದಲ್ಲೂ ನಾಯಕಿಯಾಗಿ ನಟಿಸಿದ್ದು ರಾಧಿಕಾ ಪಂಡಿತ್.2011ರಲ್ಲಿ ತೆರೆಗೆ ಬಂದ ‘ಕಿರಾತಕ’ ಚಿತ್ರ ಯಶ್ ಗೆ ಬಿಗ್ ಬ್ರೇಕ್ ನೀಡಿತು. ನಂತರ ತೆರೆಗೆ ಬಂದ ‘ಲಕ್ಕಿ’, ‘ಡ್ರಾಮಾ’ ,’ಗೂಗ್ಲಿ’, ‘ರಾಜಾಹುಲಿ’, ‘ಗಜಕೇಸರಿ’ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು. ‘Mr & Mrs ರಾಮಾಚಾರಿ’ ಬಾಕ್ಸಾಫೀಸ್ ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ಬರೆಯಿತು. . 18 ಮೂವಿಗಳಲ್ಲಿ ನಟಿಸಿದಂತ ಯಶ್‌, ಇವರು ಮೊದಲು ಹೀರೊ ಆಗಿ ಕಾಣಿಸಿದಂತ ಚಿತ್ರ ಮೊಗ್ಗಿನ ಮನಸು ಈ ಚಿತ್ರ ಅವರಿಗೆ ಒಳ್ಳೆಯ ಹೆಸರು ಕೊಟ್ಟಿತು. ಯಶ್ ಸಿನಿಜೀವನದ ಕಳಸಪ್ರಾಯ ಚಿತ್ರ ಕೆಜಿಎಫ್. 2018 ಡಿಸೆಂಬರ್‌ನಲ್ಲಿ ತೆರೆಕಂಡ ಈ ಚಿತ್ರ ಬಿಡುಗಡೆಯಾದ ಐದು ದಿನಗಳಲ್ಲಿ 100 ಕೋಟಿ ಗಳಿಕೆ ಕಂಡು ಕನ್ನಡ ಚಿತ್ರರಂಗದಲ್ಲಿ ಹೊಸಪರ್ವಕ್ಕೆ ನಾಂದಿ ಹಾಡಿತು. ಈ ಚಿತ್ರ ಸುಮಾರು 250 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಕೆಜಿಎಫ್ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿದೆ. 2022 ಏಪ್ರಿಲ್ 14ರಂದು ಬಿಡುಗಡೆಯಾದ ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. 100 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಕೆಜಿಎಫ್‌ ಚಾಪ್ಟರ್‌- 2 ಸಿನಿಮಾ 1250 ಕೋಟಿ ಗಳಿಕೆ ಮಾಡಿ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಇಂಡಿಯನ್ ಬಾಕ್ಸ್ ಆಫೀಸ್ ನಡುಗುವಂತೆ ಮಾಡಿತ್ತು. ಬಾಲಿವುಡ್ ಅಲ್ಲೂ ಸಖತ್ ಸೌಂಡ್ ಮಾಡಿತ್ತು. ಇವರಿಗೆ ಸೈಮಾ ಅವಾರ್ಡ್‌, ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಒಟ್ಟು 3 ಫಿಲ್ಮ ಫೇರ್‌ ಅವಾರ್ಡ್ಸ್‌, ಫೀಲ್ಮಿ ಬೀಟ್‌ ಅವಾರ್ಡ್‌ ಹೀಗೆ ಮುಂತಾದ ಪ್ರಶಸ್ತಿಗಳು ದೊರೆತಿದೆ. ಯಶ್‌ ಅವರ 19ನೇ ಸಿನಿಮಾಗೆ ಇಡೀ ದೇಶವೆ ಎದುರು ನೋಡ್ತಾ ಇದೆ.

4. ಪುನೀತ್‌ ರಾಜ್‌ಕುಮಾರ್‌ : ಅಪ್ಪು, ರಾಜರತ್ನ, ಯುವರತ್ನ, ಅಂತೆಲ್ಲಾ ಕರೆಸಿಕೊಳ್ಳುವ ಪುನೀತ್‌ ರಾಜ್‌ಕುಮಾರ್‌ ಅವರು ಮಾರ್ಚ್‌ 17ರಂದು 1975ರಲ್ಲಿ ಕನ್ನಡ ಕಂಠೀರವ, ನಟ ಸಾರ್ವಭೌಮ ಡಾಕ್ಟರ್‌ ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಮಗನಾಗಿ ಜನಿಸ್ತಾರೆ. ಇವರ ಮೊದಲ ಹೆಸರು ಲೋಹಿತ್‌. ನಟ, ಗಾಯಕ, ನಿರ್ಮಾಪಕ, ನಿರೂಪಕರಾದಂತ ಅಪ್ಪು ತಮ್ಮ6ನೇ ತಿಂಗಳ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಬಾಲನಟನಾಗಿ ಪ್ರೇಮದ ಕಾಣಿಕೆ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಂಡಿದ್ರು. ನಾಯಕ ನಟನಾಗಿ ಮೊದಲು ಅಪ್ಪು ಚಿತ್ರದ ಮೂಲಕ ಪ್ರವೇಶಿಸ್ತಾರೆ. “ಅಪ್ಪು” ಚಿತ್ರದ ಮೂಲಕವೇ ಇವರಿಗೆ ಅಪ್ಪು ಅಂತ ಹೆಸರು ಬಂದಿದ್ದು. ಅವರು ಕಲರ್ಸ್ ಕನ್ನಡದ ರಿಯಾಲಿಟಿ ಶೋ ಫ್ಯಾಮಿಲಿ ಪವರ್‌ನಲ್ಲಿ ಮತ್ತು ಕನ್ನಡದ ಕೋಟ್ಯಾಧಿಪತಿಯಲ್ಲಿ ನಿರೂಪಕ ಸಹ ಆಗಿದ್ದರು. ಉದಯ ಟಿವಿಯಲ್ಲಿ ನೇತ್ರಾವತಿ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರು. ಇವರು ಒಟ್ಟು 47 ಸಿನಿಮಾಗಳಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ರು. ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿ, 3 ಬಾರಿ ಬೆಸ್ಟ್‌ ಚೈಲ್ಡ್‌ ಆಕ್ಟರ್‌ ಅವಾರ್ಡ್‌, 14 ಬಾರಿ ಬೆಸ್ಟ್‌ ಆಕ್ಟರ್‌ ಅವಾರ್ಡ್‌, ಫೀಲ್ಮ್‌ ಫೇರ್‌ ಲೈಫ್‌ ಟೈಮ್‌ ಅಚೀವ್‌ಮಂಟ್‌ ಅವಾರ್ಡ್‌, 2 ಬಾರಿ ಬೆಸ್ಟ್‌ ಮೇಲ್‌ ಪ್ಲೇಬಾಕ್‌ ಸಿಂಗರ್‌ ಅವಾರ್ಡ್‌ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ. ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಇವರು ಹಲವಾರು ಸಾಮಾಜಿಕ ಕೆಲಸಗಳಲ್ಲೂ ಭಾಗಿಯಾಗಿದ್ರು. ಇಷ್ಟೇಲ್ಲಾ ಸಾಧನೆ, ಜನರ ಪ್ರೀತಿ ಗಳಿಸಿದ ಅಪ್ಪು ಅಕ್ಟೋಬರ್‌ 29, 2021ರಂದು ನಮ್ಮನ್ನೆಲ್ಲಾ ಅಗಲಿದರು.

5. ಶಿವರಾಜ್‌ಕುಮಾರ್‌: ಹ್ಯಾಟ್ರಿಕ್‌ ಹೀರೋ ಶಿವಣ್ಣ ಅಂತಾನೆ ಫೇಮಸ್‌ ಆಗಿರುವ ಶಿವರಾಜ್‌ಕುಮಾರ್‌ ಅವರು ಜುಲೈ 12, 1962ರಲ್ಲಿ ಜನಿಸ್ತಾರೆ. ಇವರು ನಟ, ಹಿನ್ನಲೆ ಗಾಯಕ, ನೃತ್ಯಗಾರ ಕೂಡ ಹೌದು. ಮುಂಬೈನಲ್ಲಿ ಅಭಿನಯ ತರಬೇತಿ ಪಡೆದ ಇವರು ಆನಂದ್‌ ಚಿತ್ರ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ರು. ಅವರ ಮುಂದಿನ ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಚಿತ್ರ 100 ದಿನಗಳ ಪ್ರದರ್ಶನ ಕಂಡಿತು. ಹಾಗಾಗಿ ಶಿವಣ್ಣ ಅವರಿಗೆ ಹ್ಯಾಟ್ರಿಕ್‌ ಹೀರೋ ಅಂತ ಹೆಸರು ಬಂದಿದೆ. ಇವರು ಒಟ್ಟು125 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ನಟಿಸಿದ್ದಾರೆ. ನೂರಾರು ಬಗೆಯ ಪಾತ್ರಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಇಷ್ಟು ವರ್ಷಗಳು ಉರುಳಿದರೂ ಅವರ ಎನರ್ಜಿ ಕಡಿಮೆ ಆಗಿಲ್ಲ. ಹದಿಹರೆಯದ ಹುಡುಗರನ್ನೂ ನಾಚಿಸುವಂತೆ ಅವರು ಡ್ಯಾನ್ಸ್​ ಮತ್ತು ಫೈಟಿಂಗ್​ ಮಾಡುತ್ತಾರೆ. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 37 ವರ್ಷಗಳು ಕಳೆದಿವೆ. ‘ಆನಂದ್​’, ‘ಓಂ’, ‘ಎಕೆ 47’, ‘ನಮ್ಮೂರ ಮಂದಾರ ಹೂವೇ’, ‘ಜನುಮದ ಜೋಡಿ’, ‘ಜೋಗಿ’, ‘ಟಗರು’ ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಅವರು ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇವರಿಗೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ, 3 ಬಾರಿ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ, 2 ಬಾರಿ ಉಜ್ವಲ ಪ್ರಶಸ್ತಿ, 3 ಬಾರಿ ಚಿತ್ರ ರಸಿಕರ ಸಂಘ ಪ್ರಶಸ್ತಿ, 5 ಬಾರಿ ಫಿಲ್ಮ್‌ಫೇರ್‌ ಪ್ರಶಸ್ತಿ ಅಲ್ಲದೇ ಡಾಕ್ಟರೇಟ್‌ ಪ್ರಶಸ್ತಿ, ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ. ಸದ್ಯ ಇವರು ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಅಭಿನಯಿಸ್ತಾ ಇದಾರೆ. ಇನ್ನು ಶಿವರಾಜ್‌ಕುಮಾರ್‌ ಅವರ ವಯಸ್ಸಿನ ಬಗ್ಗೆ ಮಾತಾಡೋಣ. ಶಿವರಾಜ್‌ಕುಮಾರ್‌ ಅವರಿಗೆ 60 ವರ್ಷ, ಈ ವಯಸ್ಸಲ್ಲೂ “ವೇದ” ಚಿತ್ರದಲ್ಲಿ ಎಂತಹ ಆಕ್ಟಿಂಗ್‌, ಸೂಪರ್‌ ಡೂಪರ್‌ ಫೈಟಿಂಗ್‌. ಇಷ್ಟೆಲ್ಲಾ ಏಜ್‌ ಆಗಿದ್ರು ತೆರೆ ಮೇಲೆ 20ರ ಹುಡುಗರಂತೆ ಕಾಣುವ ಇವರ ಬ್ಯೂಟಿ ಸಿಕ್ರೇಟ್‌ ಏನು?
ಒಂದು ಮೇಕಪ್‌ ಆಗಿರತ್ತೆ, ಆದರೆ ಮುಖಕ್ಕೆ ಮಾತ್ರ ಮೇಕಪ್‌ ಮಾಡಬಹುದು ಅಲ್ಲವಾ ಅವರ ಎನರ್ಜಿಗೆ ಮೇಕಪ್‌ ಮಾಡೊಕೆ ಸಾಧ್ಯ ಇಲ್ಲ. ಇನ್ನೋಂದು ಇವರ ಫಿಟ್‌ನೆಸ್‌. ಶೂಟಿಂಗ್​ ಇರಲಿ -ಬಿಡಲಿ ಇವರ ವರ್ಕ್‌ಔಟ್‌ ಯಾವತ್ತೂ ಸ್ಟಾಪ್‌ ಆಗಲ್ಲ.ಸೈಕ್ಲಿಂಗ್‌, ಯೋಗ, ಧ್ಯಾನ, ಜಾಗಿಂಗ್‌, ಹೆಲ್ದಿ ಫುಡ್‌, ನೋ ಜಂಕ್‌ ಫುಡ್‌ ಇದೆಲ್ಲಾ ಅವ್ರ ಎನರ್ಜಿ ಮತ್ತು ಬ್ಯೂಟಿಯ ಸಿಕ್ರೇಟ್‌.

6. ಉಪೇಂದ್ರ: ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಸ್ಯಾಂಡಲ್ ವುಡ್ ಮಾಸ್ಟರ್ ಮೈಂಡ್ ಎಂದೆಲ್ಲಾ ಹೆಸರಿರುವ ಉಪೇಂದ್ರ ಅವರು ಸೆಪ್ಟೆಂಬರ್‌ 9ರಂದು 1968ರಲ್ಲಿ ಜನಿಸ್ತಾರೆ. ಇವರ ಹುಟ್ಟಿದ ಊರು ಕುಂದಾಪುರ. ನಿರ್ದೇಶನದ ಗೀಳನ್ನು ಅಂಟಿಸಿಕೊಂಡ ಉಪ್ಪಿ ಕನ್ನಡದ ಹೆಸರಾಂತ ನಿರ್ದೇಶಕ ‘ಕಾಶಿನಾಥ’ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದರು.1992ರಲ್ಲಿ ತೆರೆಗೆ ಬಂದ ‘ತರ್ಲೆನನ್ಮಗ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ ‘ಶ್’ ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಿರ್ದೇಶಕರಾಗಿ, ನಟನಾಗಿ ಪ್ರಸಿದ್ಧಿ ಪಡೆದ ಕೆಲವೇ ಕೆಲವು ಆರ್ಟಿಸ್ಟ್‌ಗಳಲ್ಲಿ ಉಪೇಂದ್ರ ಕೂಡ ಒಬ್ಬರು. ಉಪೇಂದ್ರ ಅವರು ನಿರ್ದೇಶನ ಮಾಡ್ತಾರೆ ಅಂದ್ರೆ ಕನ್ನಡ ಸಿನಿ ಪ್ರೇಮಿಗಳು ಕಾತರದಿಂದ ಕಾಯ್ತಾರೆ, ಅಂತಹ ಒಂದು ಛಾಪನ್ನ ಇವರು ಮೂಡಿಸಿದ್ದಾರೆ. IMDB ಸಮೀಕ್ಷೆಯ ಪ್ರಕಾರ ವರ್ಲ್ಡ್ಸ್‌ ಬೆಸ್ಟ್‌ ಡೈರೆಕ್ಟರ್‌ ಲಿಸ್ಟ್‌ನಲ್ಲಿ ಇವರು 17ನೇ ಸ್ಥಾನದಲ್ಲಿದ್ದಾರೆ . 1998ರಲ್ಲಿ ತೆರೆಗೆ ಬಂದ ‘ಎ’ ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ ‘ಉಪೇಂದ್ರ’ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು. ಒಟ್ಟು 59 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಕ್ಷೇತ್ರ ಮಾತ್ರವಲ್ಲದೇ ಪ್ರಜಾಕೀಯದ ಮೂಲಕ ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಇವರಿಗೆ ಅತ್ಯುತ್ತಮ ನಟ, ಫಿಲಂ ಫೇರ್ ಅವಾರ್ಡ್, ಅತ್ಯುತ್ತಮ ನಿರ್ದೇಶಕ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ.

7. ರಿಷಬ್‌ ಶೆಟ್ಟಿ : ಸದ್ಯ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇಡೀ ಭಾರತದಲ್ಲಿ, ಅದರಲ್ಲೂ ಚಿತ್ರರಂಗದಲ್ಲಿ ಗಟ್ಟಿಯಾಗಿ ಕೇಳಿ ಬರುತ್ತಿರುವ ಹೆಸರು ರಿಷಬ್‌ ಶೆಟ್ಟಿ. ಉಡುಪಿಯ ಕುಂದಾಪುರದವ್ರ ಆದಂತ ರಿಷಬ್‌ ಶೆಟ್ಟಿಯವರು ಜುಲೈ 7, 1983ರಲ್ಲಿ ಜನಿಸ್ತಾರೆ. ಇವರ ಮೊದಲ ಹೆಸರು ಪ್ರಶಾಂತ್‌ ಶೆಟ್ಟಿ. ತುಗ್ಲಕ್‌ ಹಾಗೂ ಪವನ್ ಕುಮಾರ್ ಅವರ ಲೂಸಿಯಾ ಚಲನಚಿತ್ರದಲ್ಲಿ ಸಣ್ಣಪುಟ್ಟ ಪಾತ್ರದಲ್ಲಿಅಭಿನಯಿಸಿದ್ದ ರಿಷಬ್‌ ಶೆಟ್ಟಿ ರಕ್ಷಿತ್ ಶೆಟ್ಟಿ ನಿರ್ದೇಶನದ ಚಿತ್ರವಾದ ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. 2016ರಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಕಾಂಬಿನೇಷನ್‌ನಲ್ಲಿ ರಿಕ್ಕಿ ಎಂಬ ಸಿನಿಮಾಕ್ಕೆ ರಿಷಬ್ ಶೆಟ್ಟಿಯವರೇ ಆ್ಯಕ್ಷನ್ ಕಟ್ ಹೇಳ್ತಾರೆ. ಆದರೆ ವಿಮರ್ಷಕರಿಂದ ಉತ್ತಮ ಪ್ರಶಂಸೆ ಗಳಿಸಿದರೂ ರಿಕ್ಕಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಲೇ ಇಲ್ಲ. ಅದಾದ ಬಳಿಕ ರಿಷಬ್-ರಕ್ಷಿತ್ ಕಾಂಬಿನೇಷನ್‌ನಲ್ಲಿ ಬಂದಿದ್ದೇ ಕಿರಿಕ್ ಪಾರ್ಟಿ. ಇದಾದ ಮೇಲೆ ರಿಷಬ್ ತಿರುಗಿ ನೋಡಿದ್ದೇ ಇಲ್ಲ. ಇವರು ಒಟ್ಟು 16 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಕ್ಕಳನ್ನ ಇಟ್ಟುಕೊಂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಸಿನಿಮಾ ಮಾಡಿ, ನ್ಯಾಷನಲ್ ಅವಾರ್ಡ್ ಪಡೆದರು. ಬೆಲ್ ಬಾಟಂ ಎಂಬ ಸಿನಿಮಾದಲ್ಲಿಮೊದಲ ಬಾರಿಗೆ ನಟಿಸಿ, ನಾಯಕನಾಗೂ ಗಟ್ಟಿಯಾಗಿ ನೆಲೆಯೂರಿದರು.ಇದೀಗ ಕಾಂತಾರ ಸಿನಿಮಾ ಮೂಲಕ ರಿಷಬ್ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿರುವ ಕಾಂತಾರ ಸಿನಿಮಾಗೆ ಇಡೀ ವಿಶ್ವದ ಸಿನಿ ಪ್ರೇಕ್ಷಕರು ಬೆರಗಾಗಿದ್ದಾರೆ. ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಕಾಂತಾರ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ 420 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿದೆ.. ಕಾಂತಾರದ ಮೂಲಕ ದಾಖಲೆಗಳನ್ನು ಧೂಳಿಪಟ ಮಾಡಿದ್ದ ಇವರು ಸದ್ಯ “ಕಾಂತಾರ- 2” ಮಾಡೊದ್ರಲ್ಲಿ ಬ್ಯುಸಿ ಆಗಿದ್ದಾರೆ. ಡಿವೈನ್‌ ಸ್ಟಾರ್‌ ಅಂತಾನೆ ಫೇಮಸ್‌ ಆಗಿರುವ ರಿಷಬ್‌ ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್, ಬೆಸ್ಟ್‌ ಫ್ಯಾಮಿಲಿ ಎಂಟಟೇನರ್‌ ಅವಾರ್ಡ್‌, ಬೆಸ್ಟ್‌ ಡೈರೆಕ್ಟರ್‌ ಅವಾರ್ಡ್‌, ಬೆಸ್ಟ್‌ ಚಿಲ್ಡ್ರನ್‌ ಫಿಲ್ಮ್‌ ಅವಾರ್ಡ್‌ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ.

8. ರಕ್ಷಿತ್‌ ಶೆಟ್ಟಿ: ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ, ಬರಹಗಾರ ಮತ್ತು ಯುವ ನಿರ್ದೇಶಕ. ಇವರು 6 ಜೂನ್ 1983 ರಂದು ಉಡುಪಿಯಲ್ಲಿ ಜನಿಸಿದರು. ಚಿತ್ರರಂಗಕ್ಕೂ ಬರುವ ಮುನ್ನ ಎರಡು ವರ್ಷ ಸಾಫ್ಟವೇರ್ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. 2010 ರಲ್ಲಿ ತೆರೆಕಂಡ `ನಮ್ ಏರಿಯಾದಲ್ಲೊಂದು ದಿನ’ ಚಿತ್ರದ ಮೂಲಕ ಸಿನಿಪ್ರವೇಶ ಮಾಡಿದರು. ಆದರೆ ರಕ್ಷಿತ್ ಗೆ ಬ್ರೇಕ್ ನೀಡಿದ ಚಿತ್ರ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಕಡಿಮೆ ಬಜೆಟ್ಟಿನಿಲ್ಲಿ ಉತ್ತಮ ಕತೆಯೊಂದಿಗೆ ತಯಾರಾದ ಈ ಚಿತ್ರ ರಕ್ಷಿತ್ ಸಿನಿಜೀವನಕ್ಕೆ ಉತ್ತಮ ಅಡಿಪಾಯ ಹಾಕಿತು.ನಂತರ `ಉಳಿದವರು ಕಂಡಂತೆ ಚಿತ್ರದ ಮೂಲಕ ನಿರ್ದೇಶಕರಾದರು. ನಿರ್ಮಾಪಕನಾಗಿಯೂ ಸಕ್ರಿಯವಾಗಿರುವ ಇವರು `ಕಿರಿಕ್ ಪಾರ್ಟಿ’, `ಹಂಬಲ್ ಪೊಲಿಟಿಶನ್ ನೊಗರಾಜ್’, `777 ಚಾರ್ಲಿ’ ಚಿತ್ರಗಳನ್ನು ನಿರ್ಮಿಸಿದ್ದಾರೆ.. “ಕಿರಿಕ್‌ ಪಾರ್ಟಿ” ಚಿತ್ರ ಎಲ್ಲೆಡೆ ಸದ್ದು ಮಾಡಿ, ಇವರಿಗೆ ಒಳ್ಳೆ ನೇಮ್‌ ಆಂಡ್‌ ಫೇಮ್‌ನ್ನು ತಂದು ಕೊಟ್ಟಿತು. ಇನ್ನೂ “777ಚಾರ್ಲಿ”ದಲ್ಲಿ ನಾಯಿಯನ್ನ ಇಟ್ಕೊಂಡು ಸಿನಿಮಾ ಮಾಡಿ, ಸೆಂಟಿಮೆಂಟ್‌ ಮೂಲಕವೇ ಪ್ರೇಕ್ಷಕರ ಮನಸಲ್ಲಿ ಸ್ಥಾನವನ್ನ ಗಟ್ಟಿಮಾಡ್ಕೊಂಡ್ರು. ಕನ್ನಡದ ಪ್ರಖ್ಯಾತ ಪ್ರೊಡಕ್ಷನ್‌ ಹೌಸ್‌ ಆಗಿರುವ ಹೊಂಬಾಳೆ ಫಿಲ್ಮಸ್‌ನ “ರಿಚರ್ಡ್‌ ಆಂಥೋನಿ” ಸಿನಿಮಾವನ್ನ ರಕ್ಷಿತ್‌ ಅವರು ನಿರ್ದೇಶಿಸ್ತಾ ಇದಾರೆ. ಅಲ್ಲದೇ ಇವರ ನಟನೆಯ “ಸಪ್ತ ಸಾಗರದಾಚೆ ಎಲ್ಲೋʼ ಮೂವಿ ರಿಲೀಸ್‌ಗೆ ರೆಡಿ ಇದೆ. 13 ಚಿತ್ರಗಳಲ್ಲಿ ನಟಿಸಿದ ಇವರಿಗೆ ಫಿಲಂಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಹೀಗೆ ಮುಂತಾದ ಪ್ರಶಸ್ತಿಗಳು ದೊರೆತಿದೆ.

9.ಧ್ರುವ ಸರ್ಜಾ : ಆಕ್ಷನ್‌ ಪ್ರಿನ್ಸ್‌ ಅಂತಾನೆ ಕರೆಸಿಕೊಳ್ಳುವ .ಧ್ರುವ ಸರ್ಜಾ ಅವರು ಅಕ್ಟೋಬರ್‌ 6, 1984ರಂದು ಜನಿಸ್ತಾರೆ. ಅರ್ಜುನ್ ಸರ್ಜಾ ಸಲಹೆಯಂತೆ ನಟನೆ ತರಬೇತಿ ಪಡೆದ ಧ್ರುವ, ನಿರ್ದೇಶಕ A.P ಅರ್ಜುನ್ ಅವರ ‘ಅದ್ಧೂರಿ’ ಚಿತ್ರಕ್ಕಾಗಿ ನಡೆಸಿದ ಆಡಿಷನ್ ನಲ್ಲಿ ಆಯ್ಕೆಯಾದರು. ಅದ್ದೂರಿ ಚಿತ್ರದ ಮೂಲಕ ರಾಧಿಕಾ ಪಂಡಿತ್‌ ಅವರ ಜೊತೆ ನಟಿಸಿ ದೊಡ್ಡ ಯಶಸ್ಸು ಪಡೆದುಕೊಂಡರು. ನಂತರ 2013 ರಲ್ಲಿ ಬಿಡುಗಡೆಗೊಂಡ ‘ಬಹುದ್ಧೂರ್’ ಚಿತ್ರದಲ್ಲಿ ರಾಧಿಕಾ ಪಂಡಿತ್ ಜೊತೆಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡು ಯಶಸ್ಸು ಕಂಡರು. 2017ರಲ್ಲಿ ತೆರೆಗೆ ಬಂದ ‘ಭರ್ಜರಿ’ ಚಿತ್ರ ಕೂಡ ಶತದಿನ ಪೂರೈಸಿತು. ಧ್ರುವ ಸರ್ಜಾ ನಟಿಸಿದ ಮೊದಲ ಮೂರು ಚಿತ್ರಗಳು ಮೆಗಾಹಿಟ್ ಆಗಿವೆ. ಇವರು ಒಟ್ಟು 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೇಮ್‌ ಮತ್ತು ದೃವ ಅವರ ಕಾಂಬಿನೇಷನ್‌ನಲ್ಲಿ ಕೆಡಿ ಚಿತ್ರ ಬರೋಕೆ ರೆಡಿ ಆಗ್ತಿದೆ. ಸದ್ಯ ಇವರ ಮಾರ್ಟಿನ್‌ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಜಾಸ್ತಿ ಆಗಿದೆ. ಇವರು 4 ರಿಂದ 5 ಸಿನಿಮಾ ಅಷ್ಟೆ ಮಾಡಿದ್ರು ಇವರ ಅಭಿಮಾನಿಗಳು ಮಾತ್ರ ಲೆಕ್ಕಕ್ಕೆ ಸಿಗದಷ್ಟು ಜನ ಇದಾರೆ. ಇವರಿಗೆ ಉದಯ ಚಲನಚಿತ್ರ ಪ್ರಶಸ್ತಿ, ಸೈಮಾ ಅವಾರ್ಡ್‌, ಲವ್ ಲವಿಕೆ ರೀಡರ್ಸ್ ಚಾಯ್ಸ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ.

10. ಶ್ರೀಮುರುಳಿ : ಕನ್ನಡ ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಶ್ರೀಮುರಳಿ ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟ. 1981 ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ಮುರಳಿ ಜನಿಸಿದರು. ತುಂಬು ಕಲಾ ಕುಟುಂಬದಲ್ಲಿ ಜನಿಸಿದ ಮುರಳಿಗೆ ಬಾಲ್ಯದಿಂದಲೂ ಚಿತ್ರರಂಗದ ಪರಿಚಯವಿತ್ತು. ಶ್ರೀಮುರುಳಿಯವರು ಪಾರ್ವತಮ್ಮ ರಾಜ್‌ಕುಮಾರ್‌ ಅವರ ಸಹೋದರ ಎಸ್‌.ಎ. ಚಿನ್ನೇಗೌಡ ಅವರ ಮಗ. 2003ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ನಿರ್ಮಾಣದ ಹಾಗೂ ಎಸ್.ನಾರಾಯಣ ನಿರ್ದೇಶನದ `ಚಂದ್ರ ಚಕೋರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.ಈ ಚಿತ್ರ 500ದಿನಕ್ಕೂ ಹೆಚ್ಚು ಓಡಿ ಕನ್ನಡ ಸಿನಿ ಇತಿಹಾಸದಲ್ಲಿ ದಾಖಲೆ ಬರೆಯಿತು. ನಂತರ ಬಂದ `ಕಂಠಿ’ ಚಿತ್ರವೂ ಬ್ಲಾಕ್ ಬಸ್ಟರ್ ಆಯಿತು. ನಂತರ ಬಂದ ಚಿತ್ರಗಳು ಬಾಕ್ಸಾಫೀಸಿನಲ್ಲಿ ಅಷ್ಟಾಗಿ ಯಶಸ್ಸು ಕಾಣಲಿಲ್ಲ. 2008ರಲ್ಲಿ ಸಹೋದರ ವಿಜಯ್ ಜೊತೆ `ಮಿಂಚಿನ ಓಟ’ ಚಿತ್ರದಲ್ಲಿ ನಟಿಸಿದರು. ಈ ನಡುವೆ ತಮ್ಮ ಹೋಮ್ ಬ್ಯಾನರ್ ಜವಾಬ್ದಾರಿ ಕೂಡ ನಿಭಾಯಿಸುತ್ತಿದ್ದರು.2014ರಲ್ಲಿ ತೆರೆಕಂಡ `ಉಗ್ರಂ’ ಚಿತ್ರ ಮುರಳಿ ಸಿನಿಜೀವನದ ಕಳಸಪ್ರಾಯ ಚಿತ್ರ. ಈ ಚಿತ್ರದ ನಂತರ ಮುರಳಿ ಸುಮಾರು 67 ಚಿತ್ರದ ಆಫರ್ ಗಳನ್ನು ನಿರಾಕರಿಸಿದರು. ನಂತರ `ರಥಾವರ’ ಮತ್ತು `ಮಫ್ತಿ’ ಚಿತ್ರ ಮಾಡಿದರು. ಈ ಎರಡು ಚಿತ್ರಗಳು ಕೂಡ ಬಾಕ್ಸಾಫೀಸಿನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದವು. ಇಬರು ಒಟ್ಟು 24 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಸೈಮಾ ಪ್ರಶಸ್ತಿ ದೊರೆತಿದೆ. ಸದ್ಯ 3 ರಿಂದ 4 ಚಿತ್ರಗಳು ಇವರ ಕೈಯಲ್ಲಿದೆ..

-masthmagaa.com

Contact Us for Advertisement

Leave a Reply