ಕೊರೋನಾಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಲಿ.. ಪ್ರಧಾನಿ, ಸಿಎಂ ಸಂತಾಪ

masthmagaa.com:

ಕೊರೋನಾ ತಗುಲಿ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಸುರೇಶ್ ಅಂಗಡಿ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದರು. ಅವರು 2004ರಿಂದ ಸತತ 4 ಬಾರಿ  ಸಂಸದರಾಗಿ ಆಯ್ಕೆಯಾಗಿದ್ದರು. ಕೊರೋನಾ ಸೋಂಕಿಗೆ ಬಲಿಯಾದ ಕೇಂದ್ರದ ಮೊದಲ ಸಚಿವ ಇವರಾಗಿದ್ದಾರೆ. ಸೆಪ್ಟೆಂಬರ್ 11ರಂದು ಸುರೇಶ್ ಅಂಗಡಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು.

ಸುರೇಶ್ ಅಂಗಡಿ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ‘ಪಕ್ಷದ ಅಸಾಧಾರಣ ಕಾರ್ಯಕರ್ತರಾಗಿದ್ದ ಸುರೇಶ್ ಅಂಗಡಿ ಕರ್ನಾಟಕದಲ್ಲಿ ಪಕ್ಷ ಬಲಪಡಿಸಲು ಶ್ರಮಿಸಿದ್ದರು. ಅವರು ಸಮರ್ಪಿತ ಸಂಸದರು ಮತ್ತು ಪರಿಣಾಮಕಾರಿ ಸಚಿವರಾಗಿದ್ದರು. ಅವರ ನಿಧನ ನನಗೆ ನೋವು ತಂದಿದೆ. ಓಂ ಶಾಂತಿ’ ಎಂದಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಕೂಡ ಸಂತಾಪ ಸೂಚಿಸಿದ್ದಾರೆ. ‘ಹಿರಿಯ ನಾಯಕರು, ಕೇಂದ್ರ ರೈಲ್ವೆ ರಾಜ್ಯ ಸಚಿವ ಶ್ರೀ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಇದನ್ನು ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಸಭ್ಯ, ಸೌಮ್ಯ ಸ್ವಭಾವದವರಾಗಿ, ಜನಪ್ರಿಯ ನಾಯಕರಾಗಿದ್ದ ಸುರೇಶ್ ಅಂಗಡಿಯವಾರ ನಿಧನ, ಪಕ್ಷಕ್ಕೆ, ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಬಹುದೊಡ್ಡ ನಷ್ಟವಾಗಿದೆ. ಅವರ ಹಠಾತ್ ಅಗಲಿಕೆಗೆ ಅತೀವ ಸಂತಾಪವನ್ನು ವ್ಯಕ್ತಪಡಿಸುತ್ತಾ, ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ, ಅವರ ಕುಟುಂಬದವರಿಗೆ, ಬಂಧು ವರ್ಗದವರಿಗೆ, ಅಪಾರ ಅಭಿಮಾನಿಗಳಿಗೆ ಮತ್ತು ಕಾರ್ಯಕರ್ತರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ’ ಅಂತ ಸಿಎಂ ಬಿಎಸ್​ವೈ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply