masthmagaa.com:

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮತದಾನ ಮುಗಿದು 4 ದಿನವಾದ್ರೂ ರಿಸಲ್ಟ್ ಹೊರಬಿದ್ದಿಲ್ಲ. ಇವತ್ತು ರಿಸಲ್ಟ್ ಅನೌನ್ಸ್ ಆಗುತ್ತೆ, ನಾಳೆ ಅನೌನ್ಸ್ ಆಗುತ್ತೆ ಅಂತ ಅಮೆರಿಕನ್ನರು ಸೇರಿದಂತೆ ಇಡೀ ಜಗತ್ತೇ ಕಾತರದಿಂದ ಕಾಯ್ತಿದೆ. ಆದ್ರೆ ನಿಮಗೆ ಗೊತ್ತಾ..? 2000ನೇ ಇಸವಿಯಲ್ಲಿ ನಡೆದ ಅಮೆರಿಕ ಚುನಾವಣೆಯ ಫಲಿತಾಂಶ ಪ್ರಕಟವಾಗಲು ಬರೋಬ್ಬರಿ 36 ದಿನಗಳು ತೆಗೆದುಕೊಂಡಿತ್ತು. ಹಾಗಂತ ಪ್ರತಿ ಬಾರಿಯೂ ಹೀಗೇ ಆಗುತ್ತೆ ಅಂತಲ್ಲ. 2008, 2012 ಮತ್ತು 2016ರಲ್ಲಿ ಮತದಾನ ನಡೆದ ದಿನವೇ ಮಧ್ಯರಾತ್ರಿ ಫಲಿತಾಂಶ ಪ್ರಕಟವಾಗಿತ್ತು. ಆದ್ರೆ ಈ ಸಲ ಹಾಗೆ ಆಗಿಲ್ಲ. ಮತದಾನ ಮುಗಿದು 4 ದಿನ ಕಳೆದ್ರೂ 6 ರಾಜ್ಯಗಳ ಮತ ಎಣಿಕೆ ಕಾರ್ಯ ಪೂರ್ಣಗೊಂಡಿಲ್ಲ. ಅದು ಪೂರ್ಣಗೊಂಡು ರಿಸಲ್ಟ್ ಅನೌನ್ಸ್ ಆಗಲು ಇನ್ನೆಷ್ಟು ದಿನ ತೆಗೆದುಕೊಳ್ಳುತ್ತೋ ಗೊತ್ತಿಲ್ಲ.

ಇನ್ನೊಂದು ವಿಚಾರ ಅಂದ್ರೆ ಈ ಬಾರಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್​ ಟ್ರಂಪ್ ಮತ್ತು ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋ. ಬೈಡೆನ್ ನಡುವೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದೆ. ಯಾರೂ ಗೆದ್ದರೂ ಕಡಿಮೆ ಅಂತರದ ಗೆಲುವು ಅಂತ ಹೇಳಲಾಗ್ತಿದೆ. ಹಾಗಿದ್ರೆ ಅಮೆರಿಕದಲ್ಲಿ 1964ರ ನಂತರ (538 ಎಲೆಕ್ಟೊರಲ್ ಸೀಟ್​ಗಳಿಗೆ ನಡೆದ ಮೊದಲ ಚುನಾವಣೆ) ನಡೆದ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದ ಗೆಲುವು ದಾಖಲಿಸಿದ್ದು ಯಾರು, ದೊಡ್ಡ ಅಂತರದಿಂದ ಜಯಭೇರಿ ಬಾರಿಸಿದ್ದು ಯಾರು ಅನ್ನೋದನ್ನ ನೋಡೋದಾದ್ರೆ…

ಕಡಿಮೆ ಅಂತರದ ಗೆಲುವು:

5 ಮತಗಳ ಗೆಲುವು: 2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಲ್ ಗೋರ್ ವಿರುದ್ಧ ರಿಪಬ್ಲಿಕನ್ ಪಕ್ಷದ ಜಾರ್ಜ್ ಡಬ್ಲ್ಯೂ. ಬುಷ್ ಕೇವಲ 5 ಎಲೆಕ್ಟೊರಲ್ ವೋಟ್​ಗಳಿಂದ ಗೆದ್ದಿದ್ದರು.

35 ಮತಗಳ ಗೆಲುವು: 2004ರಲ್ಲಿ ನಡೆದ ಚುನಾವಣೆಯಲ್ಲಿ ಜಾರ್ಜ್ ಡಬ್ಲ್ಯೂ. ಬುಷ್ ಪುನರಾಯ್ಕೆ ಆಗಿದ್ದರು. ಆದ್ರೆ ಮತ್ತೊಮ್ಮೆ ಕಡಿಮೆ ಅಂತರದ ಗೆಲುವು. ಈ ಚುನಾವಣೆಯಲ್ಲಿ ಜಾನ್ ಕೆರಿ ವಿರುದ್ಧ ಬುಷ್ 35 ಎಲೆಕ್ಟೊರಲ್ ವೋಟ್​ಗಳ ಗೆಲುವು ಸಾಧಿಸಿದ್ದರು.

 

ಹೆಚ್ಚು ಅಂತರದ ಗೆಲುವು: 

512 ಮತಗಳ ಗೆಲುವು: 1984ರಲ್ಲಿ ನಡೆದ ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ರೊನಾಲ್ಡ್ ರೀಗನ್ ಬರೋಬ್ಬರಿ 512 ಮತಗಳ ಅಂತರದಿಂದ ಎದುರಾಳಿಯನ್ನ ಸೋಲಿಸಿದ್ರು.

503 ಮತಗಳ ಗೆಲುವು: 1972ರಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ರಿಚರ್ಡ್ ನಿಕ್ಸನ್ 503 ಮತಗಳ ಗೆಲುವು ಸಾಧಿಸಿದ್ದರು. ಇದನ್ನ ನೋಡಿದ್ರೆ ಕಡಿಮೆ ಅಂತರದ ಗೆಲುವು ಮತ್ತು ಹೆಚ್ಚು ಅಂತರದ ಗೆಲುವಿನಲ್ಲಿ ರಿಪಬ್ಲಿಕನ್ ಪಕ್ಷವೇ ದಾಖಲೆ ಬರೆದಿದೆ.

-masthmagaa.com

Contact Us for Advertisement

Leave a Reply