ಉತ್ತರ ಪ್ರದೇಶದಲ್ಲಿ ಹೊಸ ಜನಸಂಖ್ಯಾ ನೀತಿ!

masthmagaa.com:

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜನಸಂಖ್ಯಾ ದಿನಾಚರಣೆಯಾದ ಇವತ್ತು ರಾಜ್ಯದ ಜನಸಂಖ್ಯಾ ನೀತಿ 2021-30 ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಮಾತನಾಡಿದ ಯೋಗಿ ಆದಿತ್ಯನಾಥ್​​, ಜನಸಂಖ್ಯೆ ನಿಯಂತ್ರಣ ಅನಿವಾರ್ಯವಾಗಿದ್ದು, 2026ರ ವೇಳೆಗೆ ಜನಸಂಖ್ಯೆ ದರವನ್ನು 2.6ಕ್ಕೆ ತರೋ ಗುರಿಯನ್ನು ಹಾಕ್ಕೊಂಡಿದ್ದೀವಿ ಅಂದ್ರು. ಹೊಸ ನೀತಿಯಲ್ಲಿ ಜನಸಂಖ್ಯೆ ಕಂಟ್ರೋಲ್ ಮಾಡೋ ನಿಟ್ಟಿನಲ್ಲಿ ಯಾರೆಲ್ಲಾ ಸರ್ಕಾರಕ್ಕೆ ಸಹಕರಿಸುತ್ತಾರೋ ಅಂಥವರಿಗೆ ಭರ್ಜರಿ ಸೌಲಭ್ಯಗಳನ್ನು ಘೋಷಿಸಿಲಾಗಿದೆ. ಒಂದೇ ಒಂದು ಮಗು ಹೊಂದಿದ್ರೆ 20 ವರ್ಷದವರೆಗೆ ಆರೋಗ್ಯಸೌಲಭ್ಯ.. ಆ ಒಂದೇ ಮಗು ಹುಡುಗ ಆದ್ರೆ 80 ಸಾವಿರ, ಹುಡುಗಿಯಾದ್ರೆ 1 ಲಕ್ಷ ರೂಪಾಯಿ ನೀಡಲಾಗುತ್ತೆ. ಸರ್ಕಾರಿ ಉದ್ಯೋಗಗಳಲ್ಲೂ ಆದ್ಯತೆ ನೀಡಲಾಗುತ್ತೆ ಅಂತ ನೀತಿಯಲ್ಲಿ ಹೇಳಲಾಗಿದೆ. ದೇಶದಲ್ಲಿ ಒಟ್ಟು 137 ಕೋಟಿ ಜನರಿದ್ದು, ಅವರ ಪೈಕಿ 23.78 ಕೋಟಿ ಜನ ಉತ್ತರ ಪ್ರದೇಶದಲ್ಲೇ ಇದ್ದಾರೆ. ಜನಸಂಖ್ಯೆ ಹೆಚ್ಚಾದಂತೆ ಆಹಾರದ ಕೊರತೆ ಎದುರಾಗುತ್ತೆ. ಕುಡಿಯೋ ನೀರಿನ ಸಮಸ್ಯೆ ಶುರುವಾಗುತ್ತೆ. ಸಬ್ಸಿಡಿ ಮೇಲೆ ಜಾಸ್ತಿ ಖರ್ಚಾಗುತ್ತೆ. ದೇಶದ ಅಭಿವೃದ್ಧಿ ದರ ಕಡಿಮೆಯಾಗುತ್ತೆ ಅಂತ ನೀತಿಯಲ್ಲಿ ಹೇಳಲಾಗಿದೆ. ಇನ್ನು ಈಗಾಗಲೇ ಉತ್ತರಪ್ರದೇಶ ಜನಸಂಖ್ಯಾ ಮಸೂದೆಯ ಕರಡು ಕೂಡ ಸಿದ್ಧಪಡಿಸಲಾಗಿದ್ದು, ಸರ್ಕಾರದ ವೆಬ್​ಸೈಟ್​​ನಲ್ಲಿ ಅಪ್​ಲೋಡ್ ಮಾಡಲಾಗಿದೆ. ಈ ಬಗ್ಗೆ ಸಲಹೆಗಳನ್ನು ನೀಡಲು ಜುಲೈ 19ರವರೆಗೆ ಕಾಲಾವಕಾಶ ನೀಡಲಾಗಿದೆ. ಆದ್ರೆ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಕಾಂಗ್ರೆಸ್ ಇದನ್ನು ರಾಜಕೀಯ ಅಜೆಂಡಾ ಅಂತ ಕರೆದ್ರೆ, ಸಮಾಜವಾದಿ ಪಕ್ಷ ಪ್ರಜಾಪ್ರಭುತ್ವದ ಕೊಲೆ ಅಂತ ಟೀಕಿಸಿದೆ. ಇನ್ನು ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೀತಿದ್ದು, ಅದ್ರಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಎಲ್ಲಾ ಲಕ್ಷಣ ಕಾಣಿಸ್ತಿದೆ.

-masthmagaa.com

Contact Us for Advertisement

Leave a Reply